ಈ ‘ಅಮ್ಮ’ನ ಮೇಲಿನ ಅಂಧಾಭಿಮಾನ ಯುವತಿಯ ರಕ್ತ ಹೀರುವ ಮಟ್ಟಕ್ಕೂ ಬಂತಾ?

(ಚಿತ್ರಕೃಪೆ- ಲೈವ್ ಮಿಂಟ್)

ಡಿಜಿಟಲ್ ಕನ್ನಡ ಟೀಮ್

ಮೋದಿಭಕ್ತರು, ಸೋನಿಯಾ- ರಾಹುಲ್ ಭಟ್ಟಂಗಿಗಳು ಇಂಥ ಮಾದರಿಗಳನ್ನೆಲ್ಲ ನೋಡಿದ್ದಾಗಿದೆ. ತಮ್ಮ ಲೀಡರು ಮಾಡಿದ್ದೆಲ್ಲ ಸರಿ ಎಂಬ ಭಾವಾವೇಶ ಯಾರಿಗಿದ್ದರೂ ಅದು ತಪ್ಪೇ. ಅತಿರೇಕಗಳನ್ನೇ ಸೃಷ್ಟಿಸುವ ಭಾವನೆ ಅದು.

ಆದರೆ ಮೇಲೆ ಉದಾಹರಿಸಿದ ಎರಡೂ ವರ್ಗಗಳೂ ಒಬ್ಬರನ್ನೊಬ್ಬರು ಕೌಂಟರ್ ಮಾಡಿಕೊಂಡಿರುತ್ತಾರಾದ್ದರಿಂದ ಅಷ್ಟರಮಟ್ಟಿಗೆ ಅಲ್ಲೊಂದು ಪ್ರಜಾಪ್ರಭುತ್ವದ ತತ್ವ ಸಕ್ರಿಯವಾಗಿದೆ. ಆದರೆ ಭಾರತ ನಿಜಕ್ಕೂ ಅಂಜಬೇಕಿರುವುದು ತಮಿಳುನಾಡಿನ ಅಮ್ಮನ ಭಕ್ತರ ಬಗ್ಗೆ. ಇಂಥದೊಂದು ಅತಿರೇಕದ ಬಗ್ಗೆ ತಮಾಷೆ, ವ್ಯಂಗ್ಯಗಳು ಪ್ರತಿಕ್ರಿಯೆಯಾಗಿ ಬರುತ್ತಿದ್ದರೂ ಜಯಲಲಿತಾ ಬೆಂಬಲಿಗರನ್ನು ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸುವ ಕಾರ್ಯ ಇನ್ನಷ್ಟೇ ಆಗಬೇಕಿದೆ. ಇಷ್ಟುದಿನ ಪೋಸ್ಟರುಗಳಿಗೆ ಸೀಮಿತವಾಗಿದ್ದ ಅತಿರೇಕ ಇದೀಗ ಬೇರೆಯವರಿಗೆ ದೈಹಿಕ ನೋವುಂಟು ಮಾಡುವ ಮಟ್ಟಕ್ಕೂ ಬಂದಿದೆ. ಫೆಬ್ರವರಿ 23ರಂದು ಜಯಲಲಿತಾ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿಗಳಿಗೆ ಹುಚ್ಚು ಹೆಚ್ಚಾಗಿತ್ತು. ಬೆಂಬಲಿಗರೊಂದಷ್ಟು ಮಂದಿ ತೋಳಿನ ಮೇಲೆ ಜಯಾ ಚಿತ್ರ ಹಚ್ಚೆ ಹಾಕಿಸಿಕೊಂಡರು. ಅವರ ಕರ್ಮ, ಏನಾದ್ರೂ ಮಾಡ್ಕೊಳ್ಳಿ ಅಂತಂದ್ರೆ ಯುವತಿಯೊಬ್ಬಳು ಹಚ್ಚೆ ಹಾಕಿಸಿಕೊಳ್ಳುತ್ತ ದೀನಳಾಗಿ ಕೂಗುತ್ತಿರುವ ದೃಶ್ಯ, ಅಮ್ಮಾಭಿಮಾನವನ್ನು ಜನರ ಮೇಲೆ ಹೇರುತ್ತಿರುವ ಸಂಶಯಕ್ಕೆ ನೀರೆರೆಯುತ್ತಿದೆ. ಈ ಯುವತಿಗೆ ಬಲವಂತವಾಗಿ ಹಚ್ಚೆ ಹಾಕಿಸಲಾಗಿದೆ ಎಂಬ ಆರೋಪದ ಮೇಲೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತನಿಖೆಗೆ ಮುಂದಾಗಿದೆ.

ಇದೇನು ಉತ್ತರ ಕೋರಿಯಾದ ಕಿಮ್ ಜಾಂಗ್ ಆಡಳಿತವಾಗಿಹೋಯ್ತಾ? ಆ ಸರ್ವಾಧಿಕಾರಿ ರಾಷ್ಟ್ರದಲ್ಲಿ ಕಿಮ್ ಜಾಂಗೇ ದೇವ್ರು ಅಂತ ನಂಬಿಸಿ, ಹೊರಜಗತ್ತಿನ ಸಂಪರ್ಕವನ್ನೇ ತಪ್ಪಿಸಿ, ಅಲ್ಲಿನ ಜನರೆಲ್ಲ ಕಡ್ಡಾಯವಾಗಿ ಆತನ ಚಿತ್ರ ಇಟ್ಟುಕೊಂಡು ಪೂಜಿಸುವಂತೆ ಮಾಡಲಾಗಿದೆ. ಅದಕ್ಕೆ ಹೋಲಿಸುವಷ್ಟಲ್ಲದಿದ್ದರೂ ಈ ಜಯಲಲಿತಾ ಸಾಗುತ್ತಿರುವ ಹಾದಿ ಭಯಾನಕವಾಗಿದೆ.

ಸರ್ಕಾರದ ಯೋಜನೆಗಳಿಗೆಲ್ಲ ಅಮ್ಮಾ ಹೆಸರು ಅಂಟಿಸಿದ್ದಾಗಿದೆ. ಡಿಸೆಂಬರ್ ನಲ್ಲಿ ಚೆನ್ನೈ ಭೀಕರ ಪ್ರವಾಹಕ್ಕೆ ಸಿಲುಕಿದಾಗ ಅಲ್ಲಿ ತಮಿಳುನಾಡು ಸರ್ಕಾರದ ವತಿಯಿಂದ ವಿತರಣೆಯಾದ ಪರಿಹಾರದ ಪ್ಯಾಕೆಟ್ಟುಗಳ ಮೇಲೂ ಜಯಲಲಿತಾ ಫೋಟೋಗಳಿದ್ದವು. ದುಃಖ ಮಡುಗಟ್ಟಿದಾಗಲೂ ಬ್ರಾಂಡ್ ಪ್ರಮೋಷನ್ ಆಗಲೇಬೇಕು.

ಮೊನ್ನೆ ಸಿಯಾಚಿನ್ ನಲ್ಲಿ ಪ್ರಾಣ ಕಳೆದುಕೊಂಡ ತಮಿಳುನಾಡು ಯೋಧ ಗಣೇಶನ್ ಅಂತ್ಯಕ್ರಿಯೆಯಾಗುತ್ತಿದ್ದರೆ, ಅಲ್ಲಿಗೆ ಹೋದ ಜಯಾ ಸಂಪುಟದ ಮಂತ್ರಿ ಸೆಲ್ಲೂರು ರಾಜು, ಶವಪೆಟ್ಟಿಗೆ ಎದುರು ಜಯಲಲಿತಾ ಫೋಟೋವನ್ನು ಹಿಡಿದು ನಿಂತರು. ರಾಜ್ಯ ಸರ್ಕಾರ 10 ಲಕ್ಷ ರುಪಾಯಿಗಳ ಸಾಂತ್ವನ ಮೊತ್ತವನ್ನು ನೀಡಿದ್ದು ಹೌದು. ಆ ಬಗ್ಗೆ ಯೋಧನ ಕುಟುಂಬ ಯಾರಿಗೆ ಕೃತಜ್ಞರಾಗಿರಬೇಕು ಅಂತ ಒತ್ತಾಯಿಸುವಂತಿತ್ತು ಆ ಅಸಹ್ಯ ಫೋಟೋ ಪ್ರದರ್ಶನ.

amma1

ಅಂಧಾಭಿಮಾನಕ್ಕೆ ಅತ್ಯುನ್ನತ ಮಾದರಿ ತಮಿಳುನಾಡಿನ ಜಯಲಲಿತಾ ಆರಾಧನೆಯೇ. ಅದನ್ನು ಬಹುಶಃ ಇನ್ಯಾವ ನೇತಾರರ ಭಕ್ತರೂ ಮೀರಿಸಲಾಗುವುದಿಲ್ಲ. ಫೆಬ್ರವರಿ ಪ್ರಾರಂಭದಿಂದಲೇ ಜಯಲಲಿತಾ ಜನ್ಮದಿನ ಆಚರಣೆಯ ನಾನಾ ಅವತಾರಗಳು ಪ್ರಕಟವಾಗಲಾರಂಭಿಸುತ್ತವೆ. ಈ ಬಾರಿ ಆಗಿದ್ದು ಜಯಲಲಿತಾರ 68ನೇ ಹುಟ್ಟುಹಬ್ಬ. ಹೀಗಾಗಿ ಫೆಬ್ರವರಿ ಪ್ರಾರಂಭದಲ್ಲೇ 68 ಸಾಮೂಹಿಕ ವಿವಾಹಗಳನ್ನು ಅಮ್ಮನ ಪ್ರಾಯೋಜಕತ್ವದಲ್ಲಿ ಮಾಡಿಸಲಾಯಿತು. ಜಯಾ ಭಕ್ತರ ದುಡ್ಡು ಹೇಗಾದರೂ ಖಾಲಿಮಾಡಿಕೊಳ್ಳಲಿ ಎಂಬ ವಾದ ಇರಲಿ. ಆದರೆ ಮದುವೆ ಬಾಸಿಂಗದ ಅಗ್ರಭಾಗದಲ್ಲೇ ಜಯಲಲಿತಾ ಫೋಟೋ ಛಾಪಿಸುವಮಟ್ಟಿಗಿನ ಪ್ರಚಾರ ಹಪಾಹಪಿ ಬೇಕಾ?

Jayalalithaa's 68th birthday

ಉಳಿದಂತೆ ಜಯಾ ಬೆಂಬಲಿಗರು ಹಮ್ಮಿಕೊಂಡ ಕಾರ್ಯಕ್ರಮ ಹೀಗಿತ್ತು.122 ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಕೆಲವು ಅಮ್ಮ ಕ್ಯಾಂಟೀನ್ ಗಳಲ್ಲಿ ಉಚಿತ ಊಟ, ಆ ದಿನ ಹುಟ್ಟಿದ ಹೆಣ್ಣು ಮಕ್ಕಳ ಹೆಸರಿನಲ್ಲಿ 10 ಸಾವಿರ ಹಣ ನೀಡಿದ ಪಾಲಿಕೆ, ಮತ್ತೆ ಕೆಲ ನಾಯಕರಿಂದ ಈ ದಿನ ಹುಟ್ಟಿದ ಮಕ್ಕಳಿಗೆ ಚಿನ್ನದ ಉಂಗುರ ಉಡುಗೊರೆ, ನೀರಿನಲ್ಲಿ ಸುದೀರ್ಘವಾಗಿ ತೇಲುತ್ತಾ ದೇವರಲ್ಲಿ ಪ್ರಾರ್ಥನೆ…

ಜಯಾ ಮರುಳೋ, ತಮಿಳುನಾಡಿನ ಜನ ಮರುಳೋ ಅರ್ಥವಾಗುತ್ತಿಲ್ಲ!

Leave a Reply