ಕನ್ಹಯ್ಯ ಜಾಮೀನು: ಹಿನ್ನಡೆ- ಮುನ್ನಡೆಗಳ ಚರ್ಚೆಗೂ ಮೊದಲು ಓದಿಕೊಳ್ಳಬೇಕಿರುವ ಹೈಕೋರ್ಟ್ ಸಮತೋಲಿತ ನಿರ್ದೇಶನ

ಡಿಜಿಟಲ್ ಕನ್ನಡ ಟೀಮ್

ದೇಶದ್ರೋಹ ಆರೋಪದಡಿ ದೆಹಲಿ ಪೊಲೀಸರಿಂದ ಬಂಧಿತನಾಗಿದ್ದ ಜೆಎನ್ ಯು ವಿದ್ಯಾರ್ಥಿ ಸಂಘದ ಮುಖ್ಯಸ್ಥ ಕನ್ಹಯ್ಯ ಕುಮಾರ್ ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ. ಗುರುವಾರ ಸಂಜೆ ತಿಹಾರ ಜೈಲಿನಿಂದ ಬಿಡುಗಡೆಯನ್ನು ಪಡೆದಿದ್ದಾರೆ.

ಕನ್ಹಯ್ಯನನ್ನು ಹೇಗಾದರೂ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಬೇಕು ಅಂತ ಜಿದ್ದಿನಲ್ಲಿರುವವರು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಜೆ ಎನ್ ಯು ವಿದ್ಯಾರ್ಥಿಗಳ ಎಲ್ಲ ನಡೆಗಳನ್ನೂ ಒಪ್ಪಿಕೊಳ್ಳಬೇಕೆಂದು ಪ್ರತಿಪಾದಿಸುತ್ತಿರುವವರು ಇಬ್ಬರೂ ದೆಹಲಿ ಹೈಕೋರ್ಟಿನ ವೀಕ್ಷಣೆಯನ್ನು ಓದಿಕೊಳ್ಳಬೇಕು.

ಕನ್ಹಯ್ಯಗೆ ಜಾಮೀನು ಸಿಕ್ತು ನಿಜ. ಅದರರ್ಥ ಕ್ಲೀನ್ ಚಿಟ್ ಎಂದಲ್ಲ. ಒಂದೊಮ್ಮೆ ದೇಶದ್ರೋಹದ ಘೋಷಣೆ ಕೂಗಿದ್ದು ಸಾಬೀತಾದರೆ ಅದನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಅಂತ ಒಪ್ಪಿಕೊಳ್ಳುವುದಕ್ಕೆ ನ್ಯಾಯಾಲಯ ತಯಾರಿಲ್ಲ ಎಂಬುದೂ ಅದರ ಜಾಮೀನು ಅನುಮೋದನೆ ಪ್ರತಿಯ ಉಲ್ಲೇಖಗಳಿಂದ ಸ್ಪಷ್ಟ.

ಆದರೆ ಇದೇ ವೇಳೆ ಕನ್ಹಯ್ಯ ಕುರಿತು ಕೋರ್ಟ್ ಮೆರೆದಿರುವ ಸಂವೇದನೆಯೂ ಗಮನಾರ್ಹ. ಈವರೆಗೂ ಕನ್ಹಯ್ಯನನ್ನು 3 ಬಾರಿ ಪೊಲೀಸ್ ವಶಕ್ಕೆ ನೀಡಲಾಗಿದೆ. ಈ ವೇಳೆ ಕನ್ಹಯ್ಯ ವಿಚಾರಣೆ ವೇಳೆ ಉತ್ತಮ ಸಹಕಾರ ನೀಡಿದ್ದಾರೆ. ಇನ್ನು ಪೊಲೀಸರ ವಶಕ್ಕೆ ನೀಡುವ ಅಗತ್ಯವಿಲ್ಲ ಎಂಬುದು ಕೋರ್ಟ್ ನಿರ್ಧಾರ. ಈ ಪ್ರಕರಣದಲ್ಲಿ ಕನ್ಹಯ್ಯ ಕೈವಾಡ ಎಷ್ಟರ ಮಟ್ಟಿಗೆ ಇದೆ ಎಂಬುದು ತನಿಖೆ ಹಾಗೂ ವಿಚಾರಣೆ ಮೂಲಕ ಹೊರಬರಬೇಕಿದೆ. ಅಲ್ಲದೆ ವಿಡಿಯೋ ಸಾಕ್ಷ್ಯಗಳಲ್ಲಿ ಕನ್ಹಯ್ಯ ದೇಶ ವಿರೋಧಿ ಕೂಗು ಹೇಳಿರುವುದು ಸಾಬೀತಾಗಿಲ್ಲ. ಕನ್ಹಯ್ಯ ಕುಮಾರ್ ಒಬ್ಬ ಬಡ ಕುಟುಂಬದ ಹಿನ್ನೆಲೆಯನ್ನು ಅರಿತ ಹೈಕೋರ್ಟ್ ಕೇವಲ 10 ಸಾವಿರ ಭದ್ರತೆಯೊಂದಿಗೆ ಜಾಮೀನು ನೀಡಿರುವುದು ಮತ್ತೊಂದು ಪ್ರಮುಖ ಅಂಶ.

ಆದರೆ, ಇದೇ ವೇಳೆ ನ್ಯಾಯಾಲಯವು ಉಲ್ಲೇಖಿಸಿರುವ ಕೆಲಮಾತುಗಳು, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಎಲ್ಲವನ್ನೂ ಸಮರ್ಥಿಸುವುದಕ್ಕೆ ಸಾಧ್ಯವಿಲ್ಲ ಅನ್ನೋದನ್ನೂ ಸ್ಪಷ್ಟವಾಗಿ ಸಾರಿದೆ.

‘ಜೆಎನ್ ಯು ಆವರಣದಲ್ಲಿ ವಿದ್ಯಾರ್ಥಿಗಳು ದೇಶದ್ರೋಹಿ ಕೂಗು ಹಾಗೂ ಹೇಳಿಕೆಗಳನ್ನು ಅಭಿವ್ಯಕ್ತಿ ಸ್ವಾತಂತ್ರದ ಅಡಿಯಲ್ಲಿ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಇದೊಂದು ಸೋಂಕಿನಂತೆ. ಇದು ಹೆಚ್ಚಾಗದಂತೆ ನೋಡಿಕೊಳ್ಳಬೇಕು ಹಾಗೂ ಅದಕ್ಕೆ ಚಿಕಿತ್ಸೆ ನೀಡಬೇಕು.

ಸಾಮಾನ್ಯವಾಗಿ ಕೈಬೆರಳಿಗೆ ಆದ ಸೋಂಕಿನಂತೆ ಸಣ್ಣ ಪ್ರಮಾಣದಲ್ಲಿದ್ದರೆ ಔಷಧ ನೀಡಿ ಗುಣಪಡಿಸಬಹುದು. ಇದು ದೊಡ್ಡ ಪ್ರಮಾಣಕ್ಕೆ ಬೆಳೆಯಲು ಅವಕಾಶ ನೀಡಬಾರದು. ಇಲ್ಲವಾದರೆ ಗ್ಯಾಂಗ್ರಿನ್ ನಂತೆ ಮಾರಕವಾಗುತ್ತದೆ. ಈ ರೀತಿಯಾಗಿ ಸೋಂಕು ದೊಡ್ಡ ಪ್ರಮಾಣದಲ್ಲಿದ್ದರೆ, ಶಸ್ತ್ರಚಿಕಿತ್ಸೆ ಅನಿವಾರ್ಯ.’ ಎಂಬ ಕೋರ್ಟ್ ಹೇಳಿಕೆ ಮಹತ್ವದ್ದಾಗಿದೆ.

‘ಅರ್ಜಿದಾರರು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವುದಕ್ಕೆ ಅನುಕೂಲವಾಗುವಂತೆ ಸೈನಿಕರು ಗಡಿಯಲ್ಲಿ ದೇಶ ಕಾಯುತ್ತಿದ್ದಾರೆ ಎಂಬುದನ್ನು ಮರೆಯಬಾರದು. ಅಫ್ಜಲ್ ಗುರು, ಮತ್ತು ಮಕ್ಬೂಲ್ ಭಟ್ ರಂತಹ ದೇಶದ್ರೋಹಿಗಳ ಭಾವಚಿತ್ರ ಹಿಡಿದು ದೇಶ ವಿರೋಧಿ ಕೂಗು ಹಾಕುವ ಮುನ್ನ ನಮ್ಮನ್ನು ರಕ್ಷಿಸುತ್ತಿರುವ ಯೋಧರ ಬಗ್ಗೆ ಯೋಚಿಸಬೇಕು. ಈ ರೀತಿಯಾದ ಕೂಗುಗಳು ದೇಶಕ್ಕಾಗಿ ಪ್ರಾಣ ಬಿಟ್ಟ ಯೋಧರ ಕುಟುಂಬಕ್ಕೆ ಆಗುವ ನೋವನ್ನು ಪರಿಗಣಿಸಬೇಕು’ ಎಂದು ಕೋರ್ಟ್ ತೀಕ್ಷ್ಣವಾಗಿ ಹೇಳಿದೆ.

ಕನ್ಹಯ್ಯಗೆ ಜಾಮೀನು ನೀಡಿದ ಕೋರ್ಟ್, ಜತೆಗೆ ಕೆಲವು ಸೂಚನೆ ಹಾಗೂ ಜವಾಬ್ದಾರಿಯನ್ನು ನೀಡಿದೆ.

ದೇಶ ವಿರೋಧಿ ಕೂಗು ದೇಶದ ಸಾರ್ವಭೌಮತೆಗೆ ಧಕ್ಕೆಯಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಈ ರೀತಿಯ ಚಟುವಟಿಕೆ ಸಲ್ಲದು. ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ, ಕ್ಯಾಂಪಸ್ ನಲ್ಲಿ ದೇಶ ವಿರೋಧಿ ಕೂಗಿಗೆ ಹಾಗೂ ಕಾರ್ಯಕ್ರಮ ಆಯೋಜನೆಗೆ ಜವಾಬ್ದಾರಿಯಾಗುತ್ತಾರೆ. ಜೆಎನ್ ಯು ಪ್ರಾಧ್ಯಾಪಕರು ವಿದ್ಯಾರ್ಥಿಗಳು ಸರಿಯಾದ ಹಾದಿಯಲ್ಲಿ ಸಾಗುವಂತೆ ಮಾರ್ಗದರ್ಶನ ನೀಡಲು ತಾಕೀತು ಮಾಡಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಆಯೋಜನೆಯಲ್ಲಿ ಪರ- ವಿರೋಧ ಗುಂಪುಗಳಿಂದ ಹಿಂಸಾಚಾರ ಸೃಷ್ಟಿಯಾಗದಂತೆ ನೋಡಿಕೊಳ್ಳುವುದಕ್ಕೆ ಮಾತ್ರವೇ ಜೆ ಎನ್ ಯು ವಿದ್ಯಾರ್ಥಿ ಸಂಘಟನೆ ನಾಯಕನಾಗಿ ಕನ್ಹಯ್ಯ ಅಲ್ಲಿಗೆ ತೆರಳಿದ್ದರು. ದೇಶವಿರೋಧಿ ಘೋಷಣೆಗಳಲ್ಲಿ ಅವರ ಪಾಲಿಲ್ಲ. ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ಅನುಮತಿ ಕೋರಿ ಬರೆದ ಪತ್ರದಲ್ಲೂ ಇವರ ಸಹಿ ಇಲ್ಲ ಎಂದು ಅರ್ಜಿದಾರರ ಪರ ನ್ಯಾಯವಾದಿ ಕಪಿಲ್ ಸಿಬಲ್ ವಾದಿಸಿದ್ದರು.

ಹೀಗಾಗಿ ಇದೇ ವಾದ ಇತರ ಆರೋಪಿಗಳ ವಿಷಯದಲ್ಲೂ ಸಹಾಯಕ್ಕೆ ಬಂದೀತೆಂಬ ನಿರೀಕ್ಷೆ ಇಲ್ಲ. ಏಕೆಂದರೆ ಇತರ ಆರೋಪಿಗಳು ಆಯೋಜನೆಯಲ್ಲಿ ಭಾಗವಹಿಸಿದ ಸನ್ನಿವೇಶಗಳು ಬೇರೆಯಾಗಿವೆ.

ಹೀಗಾಗಿ ಕನ್ಹಯ್ಯರಿಗೆ ಜಾಮೀನು ಸಿಕ್ಕಿದ ವಿದ್ಯಮಾನವನ್ನು ಯಾರದ್ದೇ ವಿಜಯ- ಹಿನ್ನಡೆಗಳೆಂಬ ಸೀಮಿತ ವ್ಯಾಖ್ಯೆಯಲ್ಲಿ ಇಡಲಾಗದು. ಎರಡೂ ಪಾಳೆಯಕ್ಕೆ ಸಲ್ಲುವ ಸಮತೋಲಿತ ನಿರ್ದೇಶನಗಳನ್ನು ನೀಡಿದೆ ನ್ಯಾಯಾಲಯ.

Leave a Reply