ಕಾಂಗ್ರೆಸ್ ಮೇಲೆ ಮೋದಿ ವಾಗ್ ಕ್ಷಿಪಣಿಗಳಲ್ಲಿ ಗುರಿ ಮುಟ್ಟಿದವೆಷ್ಟು, ಸುಮ್ಮನೇ ಮನರಂಜಿಸಿದವೆಷ್ಟು?

ಡಿಜಿಟಲ್ ಕನ್ನಡ ಟೀಮ್

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಲೋಕಸಭೆಯಲ್ಲಿರಾಷ್ಟ್ರಪತಿಗಳ ಭಾಷಣದ ಮೇಲೆ ಆಡಿದ ಮಾತುಗಳು ಮಾಧ್ಯಮದಲ್ಲಿ ಕಿಚ್ಚಿನಂತೆ ಹಬ್ಬಿತು. ಟ್ವಿಟ್ಟರ್ ನಲ್ಲಂತೂ ನಮೋಇನ್ ಸಂಸದ್ ಎಂಬ ವಿಷಯ ಟ್ರೆಂಡ್ ಆಗಿ ಚರ್ಚೆಯಾಯಿತು. ‘ಕಾಂಗ್ರೆಸ್ ಅನ್ನು, ರಾಹುಲ್ ಗಾಂಧಿಯನ್ನು ಹಂಗಂಗೇ ಜಾಡಿಸಿಬಿಟ್ಟರು’ ಅನ್ನೋದು ಮೋದಿ ಪ್ರಶಂಸಕರ ಹರ್ಷೋದ್ಗಾರ.

ರಾಹುಲ್ ಗಾಂಧಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದು ಹೇಗೆ, ಖರ್ಗೆಯವರು ಬಾಯಿಗೆ ಕರ್ಚೀಪು ಮುಚ್ಚಿಕೊಂಡಿದ್ದು ನಗೆ ಮುಚ್ಚಿಟ್ಟುಕೊಳ್ಳೋದಕ್ಕಾ, ಮೋದಿ ಮಾತಾಡುವಾಗ ಸೋನಿಯಾ ಮುಖ ಹೆಂಗಿತ್ತು ಗೊತ್ತಾ… ಎಂಬೆಲ್ಲ ವಿಷಯಗಳ ಬಗ್ಗೆ ಒಂದರ ಹಿಂದೊಂದು ಟ್ವೀಟು ಕುಟ್ಟಬಹುದು, ಅವುಗಳಿಂದ ರೋಚಕ ಆನಂದವನ್ನು ಪಡೆಯಬಹುದು. ಆದರೆ ಪ್ರಧಾನಿ ನರೇಂದ್ರ ಮೋದಿಯವರೇ ಅದೇ ಭಾಷಣದಲ್ಲಿ ಎಚ್ಚರಿಸಿದ್ದು ಹೀಗಿತ್ತು- ‘ಈ ನಾನಾ, ನೀನಾ ಎಂಬ ಜಗ್ಗಾಟಗಳೆಲ್ಲ ಇದ್ದಿದ್ದೇ. ಅವು ಮಾಧ್ಯಮದಲ್ಲೂ ಪ್ರಚಾರ ಪಡೆಯುತ್ತವೆ. ಆದರೆ ಆ ಶೀರ್ಷಿಕೆಗಳಲ್ಲೇ ಕಳೆದುಹೋದರೆ ನಾವು ಯಾವ ಕೆಲಸವನ್ನೂ ಮಾಡಲಿಕ್ಕಾಗುವುದಿಲ್ಲ.’

ಇದೇ ಮಾತಿನನ್ವಯ, ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಕ್ರವಾರದ ಪತ್ರಿಕೆಗಳ ಶೀರ್ಷಿಕೆಗಳಲ್ಲಿಸಲ್ಲಬಹುದಾದ ಪ್ರಶಂಸೆಗಳು ಭದ್ರವಾಗಿವೆ. ಖಂಡಿತ ಪ್ರಶಂಸಿಸಬೇಕಾದ ಬಹಳಷ್ಟು ಅಂಶಗಳು ಅವರ ಮಾತಿನಲ್ಲಿವೆ. ಆದರೆ ಮೋದಿ ವರ್ಸಸ್ ರಾಹುಲರ ಈ ಆರ್ಭಟದಲ್ಲಿ ಯಾವುದೇ ಧಿಕ್ಕಾರ- ಜೈಕಾರಗಳ ಸಾಲಲ್ಲಿ ನಿಲ್ಲದೇ ವಿಶ್ಲೇಷಿಸಬೇಕಾದ ಅಗತ್ಯವೂ ಇದೆ. ಮೋದಿ ಸಿಕ್ಸರ್ ಗಳ ಬಗ್ಗೆ ಓತಪ್ರೋತ ಹೊಗಳಿಕೆಗಳು ಸಾಮಾಜಿಕ ತಾಣಗಳಲ್ಲಿ ಸಂದಾಯವಾಗುತ್ತಿವೆ. ನಾವು ಅವರ ಇಂದಿನ ದೇಖಾವೆಯ ಸಿಕ್ಸರ್- ಬೌಂಡರಿಗಳ ಜತೆ ಕೆಲವು ಮಿಸ್ ಆದ ಶಾಟ್ ಗಳನ್ನೂ ಹೈಲೈಟ್ ರೂಪದಲ್ಲಿ ನೋಡೋಣ.

  • ‘ಎಲ್ಲವಕ್ಕೂ ಮೇಕ್ ಇನ್ ಇಂಡಿಯಾದ ಬಬ್ಬರ್ ಶೇರ್ ತೋರಿಸಿಬಿಡುತ್ತೀರಲ್ಲ. ನಿಜಕ್ಕೂ ಎಷ್ಟು ಉದ್ಯೋಗ ಕೊಟ್ಟಿರಿ ಹೇಳಿ’ ಅಂತ ಬುಧವಾರದ ಭಾಷಣದಲ್ಲಿ ರಾಹುಲ್ ಪ್ರಶ್ನಿಸಿದ್ದರು. ರಾಹುಲ್ ಮಾತಲ್ಲಿದ್ದ ವ್ಯಂಗ್ಯಕ್ಕೆ ಪ್ರತಿಯಾಗಿ ನರೇಂದ್ರ ಮೋದಿ ಸಹ ಕುಹಕಾಸ್ತ್ರವನ್ನೇ ಹೂಡಿ, ‘ಕೆಲವರಿಗೆ ವಯಸ್ಸಾಗುತ್ತೆ, ಆದ್ರೆ ಅರ್ಥಮಾಡಿಕೊಳ್ಳೋ ಪ್ರೌಢಿಮೆ ಬರಲ್ಲ’ ಅಂದಿದ್ದನ್ನೆಲ್ಲ ಆಸ್ವಾದಿಸೋಣ. ಆದರೆ ಉದ್ಯೋಗ ನೀಡಿಕೆ ವಿಷಯದಲ್ಲಿ ಆಗಿರುವ ಪ್ರಗತಿಯನ್ನು ಅವರು ಅಂಕಿಅಂಶಗಳಲ್ಲಿ ಬಿಚ್ಚಿಟ್ಟು ಸಮರ್ಥ ಪ್ರತ್ಯುತ್ತರ ಕೊಡಲೇ ಇಲ್ಲ. ‘ಮೇಕ್ ಇನ್ ಇಂಡಿಯಾವನ್ನೂ ಗೇಲಿ ಮಾಡ್ತೀರಲ್ಲಪ್ಪ… ಅದು ಭಾರತದ ಉದ್ಧಾರಕ್ಕೆ ಮಾಡಿದ್ದು’ ಅಂತ ಪ್ರಧಾನಿ ವಿಷಣ್ಣವದನರಾಗಿದ್ದನ್ನೇ, ‘ರಾಹುಲ್ ರಿಗೆ ಸರಿಯಾಗಿ ಜಾಡಿಸಿಬಿಟ್ರು’ ಅಂತ ವ್ಯಾಖ್ಯಾನಿಸೋದು ರಾಜಕೀಯ ವಿಶ್ಲೇಷಣೆಯಾಗುವುದಿಲ್ಲ, ಮೋದಿಭಕ್ತಿಯ ಅಭಿವ್ಯಕ್ತಿಯಾಗುತ್ತದಷ್ಟೆ. ‘ಮೇಕ್ ಇನ್ ಇಂಡಿಯಾ ಸಫಲವಾಗದಿದ್ದರೆ ಅದಕ್ಕೆ ಸುಧಾರಣೆ ಸೂಚಿಸಿ’ ಅಂದಿದ್ದೇನೋ ಹೌದು. ಆದರೆ ಮೇಕ್ ಇನ್ ಇಂಡಿಯಾ ಮೂಲಕ ಈವರೆಗೆ ಇಂತಿಷ್ಟು ಉದ್ಯೋಗ ನೀಡಿದ್ದೇವೆ, ಅದರ ಸಂಪೂರ್ಣ ಪ್ರಯೋಜನಕ್ಕೆ ಇನ್ನೂ ಇಷ್ಟು ದಿನ ಕಾಯಬೇಕಾಗುತ್ತದೆ ಅಂತ ನಿಖರವಾಗಿ ಹೇಳುವ ಧೀಮಂತಿಕೆ ಅವರಲ್ಲಿ ಕಂಡುಬರಲಿಲ್ಲ. ಈ ವಿಷಯದಲ್ಲಿ ಅವರು ಕೊಟ್ಟಿದ್ದು ಮನರಂಜನೆಯನ್ನೇ ಹೊರತು, ಉತ್ತರವನ್ನಲ್ಲ.
  • ಬೇರೆಯವರ ಮಾತು ಕೇಳಲ್ಲ, ಭಾಷಣ ಮಾಡುತ್ತಾರೆ ಎಂಬಿತ್ಯಾದಿಯಾಗಿ ತಮ್ಮ ಮೇಲೆ ಮೂಡಿದ್ದ ಕಟಕಿಗಳಿಗೆ, ವೈಯಕ್ತಿಕ ದಾಳಿಗಳಿಗೆ ನರೇಂದ್ರ ಮೋದಿಯವರು ಮೈಕೊಡವಿಕೊಂಡಿದ್ದು ಚೆನ್ನಾಗಿಯೇ ಇತ್ತು. ’14 ವರ್ಷಗಳಿಂದ ನನಗೆ ಪ್ರಮಾಣಪತ್ರ ಕೊಡುತ್ತಲೇ ಬಂದಿದ್ದೀರಿ, ಇದೂ ಒಂದಿರ್ಲಿ ಬಿಡಿ’ ಎಂಬ ಮಾತಿನ ಮೊನಚು ಟೀಕಾಕಾರರನ್ನು ಇರಿಯುವಂತಿತ್ತು. ಅಲ್ಲದೇ, ಭಾಷಣದ ಪ್ರಾರಂಭದಲ್ಲಿ ಹೇಗೆ ತಮ್ಮ ಸರ್ಕಾರ ಹಿಂದಿನ ಆಡಳಿತ ವ್ಯವಸ್ಥೆ, ಅದೇ ಕಾನೂನುಗಳಲ್ಲಿ ಯುಪಿಎ ಸರ್ಕಾರಕ್ಕಿಂತ ಒಳ್ಳೆ ಕೆಲಸ ಮಾಡುತ್ತಿದೆ ಎಂಬುದನ್ನೂ ಚೆನ್ನಾಗಿಯೇ ಹೇಳಿದರು ಪ್ರಧಾನಿ. 10 ವರ್ಷಗಳ ಯುಪಿಎ ಆಡಳಿತದಲ್ಲಿ ಪ್ರತಿ ವರ್ಷ ರೈಲ್ವೆಗೆ ಸಿಗುತ್ತಿದ್ದದ್ದು 9291 ಕೋಟಿ ರುಪಾಯಿಗಳಾಗಿದ್ದರೆ, ತಮ್ಮ ಸರ್ಕಾರ ಎರಡು ವರ್ಷಗಳಲ್ಲೇ 32,587 ಕೋಟಿ ರುಪಾಯಿಗಳನ್ನು ಖರ್ಚು ಮಾಡಿದೆ ಅಂತ ಲೆಕ್ಕ ಕೊಟ್ಟರು.
  • ಒಂದಿಲ್ಲೊಂದು ವಿವಾಗಳನ್ನು ಎದುರಿಗಿಟ್ಟುಕೊಂಡು ಪ್ರತಿಬಾರಿ ಕಲಾಪ ಹಾಳುಗೆಡವುವ ಪ್ರತಿಪಕ್ಷಗಳಿಗೆ ಬುದ್ಧಿ ಹೇಳುವಲ್ಲಿ ಮಾತ್ರ ಪ್ರಧಾನಿ ಮೋದಿ ಸಿಕ್ಸರ್ ಎತ್ತಿದ್ದು ಖರೆ. ಸಂಸತ್ತಿನಲ್ಲಿ ಕಲಾಪ ಕಡಿಮೆಯಾದಷ್ಟೂ ಪ್ರತಿಪಕ್ಷಗಳಿಗೇ ನಷ್ಟ, ಏಕೆಂದರೆ ಜನರ ವಿಷಯಗಳನ್ನು ಎತ್ತುವುದಕ್ಕೆ ಆಗುವುದಿಲ್ಲ ಎನ್ನುತ್ತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮಾತುಗಳನ್ನು ಉದ್ದರಿಸಿದರು. ಜತೆ-ಜತೆಗೆ ಸಾಗಬೇಕಾದ ಮಾತುಗಳನ್ನಾಡುತ್ತ ಇಂದಿರಾ ಗಾಂಧಿಯವರ ಹೇಳಿಕೆಗಳನ್ನೂ ಓದಿದರು. ಈ ಮೂಲಕ, ಈ ಬಾರಿಯ ಅಧಿವೇಶನವನ್ನು ಹಾಳು ಮಾಡುವುದಕ್ಕೆ ಮುಂಚೆ ನಿಮ್ಮದೇ ಅಗ್ರನೇತಾರರ ನೆನಪಿಗಾದರೂ ಬೆಲೆಕೊಡಿ ಅಂತ ತಿವಿದಂತಿತ್ತು ಮೋದಿ.
  • ಬುಧವಾರದ ಭಾಷಣದುದ್ದಕ್ಕೂ ರಾಹುಲ್ ಗಾಂಧಿ ತಾವು ಎಲ್ಲರ ಮಾತು ಕೇಳುವ ವಿಧೇಯತೆ ಹೊಂದಿರುವವರು ಹಾಗೂ ಇದಕ್ಕೆ ವ್ಯತಿರಿಕ್ತವಾಗಿ ಪ್ರಧಾನಿ ಮೋದಿ ಮತ್ತು ಆರೆಸ್ಸೆಸ್ ಬಳಗ ತಾನು ನಂಬಿಕೊಂಡಿದ್ದೇ ಸರಿ ಎಂಬ ಸರ್ವಾಧಿಕಾರ ಧೋರಣೆ ಹೊಂದಿದ್ದಾರೆ ಅಂತ ಬಿಂಬಿಸಿದ್ದರು. ರಾಹುಲ್ ಗಾಂಧಿಯ ಈ ಒಟ್ಟಾರೆ ಧೋರಣೆಗೆ ಪ್ರಧಾನಿ ಮೋದಿ ವ್ಯಗ್ರವಾಗಿದ್ದು ಹಾಗೂ ತಮ್ಮ ಸಿಟ್ಟನ್ನು ವ್ಯಂಗ್ಯಾಸ್ತ್ರದಲ್ಲೇ ಇಟ್ಟು ಪ್ರಯೋಗಿಸಿದ್ದು ಸ್ಪಷ್ಟ. ‘ಹಿಂದಿನ ಸರ್ಕಾರದಲ್ಲಿ ಹಿರಿಯ ಸಚಿವರೆಲ್ಲ ಅನುಮೋದಿಸಿದ್ದ, ಪ್ರಧಾನಿ ಮನಮೋಹನ ಸಿಂಗರು ಸಹಿ ಮಾಡಿದ್ದ ಸುಗ್ರೀವಾಜ್ಞೆ ಪ್ರತಿಯನ್ನು ಸಾರ್ವಜನಿಕವಾಗಿ ಹರಿದುಹಾಕಲಾಯಿತು. ಅದೂ ನಮ್ಮ ಪ್ರಧಾನಿಗಳು ಹಿಂದುಸ್ಥಾನವನ್ನು ಪ್ರತಿನಿಧಿಸಿ ಅಮೆರಿಕ ಪ್ರವಾಸದಲ್ಲಿದ್ದಾಗ..’ ಎನ್ನುವ ಮೂಲಕ ಪ್ರಧಾನಿ ಮೋದಿ ಪರೋಕ್ಷವಾಗಿ ರಾಹುಲ್ ಗಾಂಧಿಯವರಿಗೆ, ‘ಹಿರಿಯರನ್ನು ಗೌರವಿಸುವುದನ್ನು ನಿನ್ನಂಥವರಿಂದ ಕಲಿಯಬೇಕಿಲ್ಲ’ ಎಂಬ ಬಿಸಿ ಸಂದೇಶ ಮುಟ್ಟಿಸಿದರು.
  • ಒಂದೊಮ್ಮೆ ನರೇಂದ್ರ ಮೋದಿಯವರೇ ಕೆಟ್ಟ ಯೋಜನೆ ಅಂತ ಗೇಲಿ ಮಾಡಿದ್ದ ಮನ್ರೇಗಾವನ್ನು ಅವರ ಸರ್ಕಾರವೇ ಅಪ್ಪಿಕೊಂಡಿದೆ ಅಂತ ರಾಹುಲ್ ತಮ್ಮ ಭಾಷಣದಲ್ಲಿ ಕೆಣಕಿದ್ದರು. ಅದು ಕೆಟ್ಟ ಯೋಜನೆಯೇ ಆಗಿತ್ತು, ಆದರೆ ನಾವದನ್ನು ಸರಿಪಡಿಸುತ್ತಿದ್ದೇವೆ ಎಂದು ಅರ್ಥ ಕೊಡುವ ಮಾತುಗಳ ಮೂಲಕ ಉದ್ಯೋಗ ಖಾತ್ರಿ ಯೋಜನೆಯ ವೈಫಲ್ಯಗಳನ್ನು ಕಾಂಗ್ರೆಸ್ ತಲೆಗೆ ಕಟ್ಟಿದರು ಪ್ರಧಾನಿ. ‘ಹಳೆಯ ಸರ್ಕಾರಗಳು ಬಡತನ ನಿರ್ಮೂಲನೆಯಲ್ಲಿ ಯಶಸ್ವಿಯಾಗಿದ್ದರೆ ಮನ್ರೇಗಾದಂಥ ಯೋಜನೆಗಳ ಅವಶ್ಯವಿರಲಿಲ್ಲ. ಈ ಯೋಜನೆಯಲ್ಲಿ ಭ್ರಷ್ಟಾಚಾರವಾಗುತ್ತಿದೆ ಎಂಬ ಮಲ್ಲಿಕಾರ್ಜುನ ಖರ್ಗೆಯವರ ಮಾತನ್ನು ನಾನು ಒಪ್ಪುತ್ತೇನೆ. ಏಕೆಂದರೆ 2012ರ ಮಹಾಲೇಖಪಾಲರ ವರದಿ ಅದನ್ನೇ ಹೇಳಿದೆ’ ಎನ್ನುವ ಮೂಲಕ ಭ್ರಷ್ಟಾಚಾರವಾಗಿದ್ದು, ಯೋಜನೆ ಹಳ್ಳ ಹಿಡಿದಿದ್ದು ಕಾಂಗ್ರೆಸ್ ಕಾಲದಲ್ಲೇ ಅಂತ ಪ್ರತಿಪಾದಿಸಿದರು. ಇದೊಂದು ಬೌಂಡ್ರಿ ಶಾಟ್ ಎನ್ನಬಹುದು. ಏಕೆಂದರೆ, ಉದ್ಯೋಗ ಖಾತ್ರಿ ಯೋಜನೆ, ಆಧಾರ್ ಇವನ್ನೆಲ್ಲ ಒಂದು ಕಾಲಕ್ಕೆ ಖಂಡಿಸಿ ಈಗ ಮೋದಿ ಸರ್ಕಾರ ಅವಕ್ಕೆ ಅಂಟಿಕೊಂಡಿದೆ. ಇದಕ್ಕೆ ಸಕಾರಣಗಳಿದ್ದಿರಬಹುದು. ಹಾಗಂತ ಯೋಜನೆ ಪ್ರಾರಂಭಕ್ಕೆ (ಅದರ ಅನುಷ್ಠಾನಕ್ಕಲ್ಲದಿದ್ದರೂ) ಹಿಂದಿನ ಸರ್ಕಾರಗಳಿಗೆ ಶ್ರೇಯಸ್ಸು ನೀಡಿದರೆ ತಪ್ಪೇನು. ಎಲ್ಲರೂ ಒಂದಾಗಿ ಹೆಜ್ಜೆ ಹಾಕಬೇಕಿದೆ ಎಂಬ ಮಾತು ಕೇವಲ ಪ್ರತಿಪಕ್ಷಗಳ ಬೆಂಬಲ ತೆಗೆದುಕೊಳ್ಳುವುದಕ್ಕೆ ಮಾತ್ರವೇ ಸೀಮಿತವಾಗಬೇಕೇಕೆ? ನಮ್ಮ ಸರ್ಕಾರ ಪ್ರಸ್ತಾಪಿಸುತ್ತಿರುವ ಯೋಜನೆಗಳು ತಮ್ಮದಾಗಿದ್ದವು ಅಂತೆಲ್ಲ ವಾದ ಮಾಡ್ತಿರೋರು ಜಿಎಸ್ಟಿಯನ್ನೂ ಬೆಂಬಲಿಸಿ ಅಂದ್ರು ಪ್ರಧಾನಿ ಮೋದಿ. ಆಡಳಿತ ಪಕ್ಷದ ಸದಸ್ಯರಿಂದ ಚಪ್ಪಾಳೆಗಳು ಬಿದ್ದವು. ಆದರೆ ಪ್ರತಿಪಕ್ಷಗಳಿಗೆ ‘ಲೀಗಸಿ’ ನೆನಪಿಸುವ ನರೇಂದ್ರ ಮೋದಿಯವರಿಗೆ, ಬಿಜೆಪಿಯೂ ಈ ಹಿಂದೆ ಕಾಂಗ್ರೆಸ್ ಪ್ರಸ್ತಾವಿಸಿದ್ದ ಜಿಎಸ್ಟಿ ವಿಧೇಯಕವನ್ನು ವಿರೋಧಿಸಿತ್ತೆಂಬುದು ನೆನಪಿರಬೇಕಲ್ಲವೇ?
  • ರಾಹುಲ್ ಗಾಂಧಿಯವರಿಗೆ ಇಮ್ಮೆಚ್ಯೂರ್ ಅಂತ ಟಾಂಗ್ ಕೊಟ್ಟು, ಅವರು ಪ್ರಸ್ತಾಪಿಸಿದ್ದ ಹಲವು ವಿಷಯಗಳಿಗೆ ಮನರಂಜನಾತ್ಮಕ ಉತ್ತರ ಕೊಟ್ಟಿದ್ದೇನೋ ಸರಿ. ಆದರೆ ನವಾಜ್ ಶರೀಫರ ಜತೆ ಚಾಯ್ ಪೆ ಚರ್ಚಾ ನಡೆಸಿ ಪ್ರಚಾರ ಪಡೆದ ಬೆನ್ನಲ್ಲೇ ಪಠಾಣ್ ಕೋಟ್ ದಾಳಿಯಾಗಿದ್ದನ್ನು ರಾಹುಲ್ ಪ್ರಶ್ನಿಸಿದ್ದರು. ಬಹಳ ಮುಖ್ಯವಾಗಿ ‘ಫೇರ್ ಆ್ಯಂಡ್ ಲವ್ಲಿ’ ಅಸ್ತ್ರ ಬಿರುಸಾಗಿಯೇ ಇತ್ತು. ರಾಹುಲ್ ಗಾಂಧಿಯವರ ಉಳಿದೆಲ್ಲಕೆಣಕುಗಳಿಗೆ ಮಾರುತ್ತರ ನೀಡಿದ ಮೋದಿಯವರು ತಮ್ಮ ಸರ್ಕಾರದ ಪಾಕ್ ಪಾಲಿಸಿ ಹಾಗೂ ಕಾಳಧನಕ್ಕೆ ತೆರಿಗೆ ವಿಧಿಸಿ ಬಿಳಿ ಮಾಡುವ ನೀತಿಗಳ ಬಗ್ಗೆ ಪ್ರತಿಕ್ರಿಯೆ ದಾಖಲಿಸಲಿಲ್ಲ. ಕಪ್ಪುಹಣ ತಂದೇ ತರುತ್ತೇವೆ ಅಂತ ಎದೆತಟ್ಟಿದ್ದವರು ಈಗ, ತೆರಿಗೆ ವಿಧಿಸಿಯಾದರೂ ಬಿಳಿ ಮಾಡುವ ಸೌಲಭ್ಯ ಕಲ್ಪಿಸೋಣ ಎಂಬ ನಿರ್ಧಾರಕ್ಕೆ ಬಂದಿರುವುದಕ್ಕೆ ಕಾರಣಗಳಿರಬೇಕಲ್ಲ. ರಚನಾತ್ಮಕವಾಗಿ ಟೀಕೆ ಮಾಡಿದರೆ ಸ್ವೀಕರಿಸುತ್ತೇನೆ ಎನ್ನುವವರಿಗೆ ತಾವೇಕೆ ಹೀಗೆ ನೀತಿ ಬದಲಾಯಿಸಬೇಕಾಯ್ತೆಂದು ವಿವರಿಸುವ ಕಾಳಜಿಯೂ ಇರಬೇಕು. ಅಲ್ಲಿ ಡೈಲಾಗ್ಬಾಜಿಗೆ ಅವಕಾಶ ಕಡಿಮೆಯಾಗಿ ಬೀಳುವ ಚಪ್ಪಾಳೆ- ಲೈಕುಗಳ ಸಂಖ್ಯೆ ಕಡಿಮೆ ಆಗಬಹುದು. ಆದರೆ ಉತ್ತರದಾಯಿತ್ವದ ಬಗ್ಗೆ ಮಾತುಗಳನ್ನಾಡುವಾಗ ವಾಸ್ತವ ಒಪ್ಪಿಕೊಳ್ಳುವ ಗುಣವೂ ಇರಬೇಕಾಗುತ್ತದೆಯಲ್ಲವೇ?
  • ಪ್ರಧಾನಿ ಭಾಷಣದ ಬಹುಭಾಗ ರಾಹುಲ್ ಗಾಂಧಿ ಮಾತಿಗೆ ಪ್ರತಿಏಟು ಅಂತಲೇ ಬಿಂಬಿತವಾದರೂ, ಈ ನಡುವೆಯೇ, ಹೊಸ ಪರಿಕಲ್ಪನೆಗಳನ್ನು ಬಿತ್ತುವಲ್ಲಿ ಪ್ರಧಾನಿ ಮೋದಿ ಹಿಂದುಳಿಯಲಿಲ್ಲ. ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಹಿಳಾ ಸಂಸದರಿಗೇ ಮಾತಾಡುವ ಅವಕಾಶ ಸಿಗಲಿ. ಅಧಿವೇಶನದ ಒಂದು ದಿನವನ್ನು ಪ್ರಥಮ ಬಾರಿಗೆ ಸಂಸದರಾದವರ ಮಾತನ್ನು ಕೇಳುವುದಕ್ಕೆಂದೇ ಮೀಸಲಾಗಿಡೋಣ. ಶನಿವಾರ ಹೆಚ್ಚುವರಿಯಾಗಿ ಕೆಲಸ ಮಾಡಿ, ಅದು ಸಂಸತ್ತಿನಲ್ಲಿ ಹವಾಮಾನ ಬದಲಾವಣೆಗೆ ಸ್ಪಂದಿಸುವಲ್ಲಿ ಭಾರತದ ಪಾತ್ರದ ಬಗ್ಗೆ ಚರ್ಚಿಸೋಣ- ಹೀಗೆಲ್ಲ ಹೊಸ ವಿಚಾರಗಳನ್ನು ಹರವಿಡುವುದಕ್ಕೆ ಪ್ರಧಾನಿ ಮರೆಯಲಿಲ್ಲ.

1 COMMENT

  1. ಇದೊಂತರಾ ಹಾವೂ ಸಾಯ್ಬಾರ್ದು ಕೋಲು ಮುರಿಬಾರ್ದು ಅನ್ನೋ ತರ ಇದೆ. 🙂

Leave a Reply