ನೀರು ಕೇಳಿಕೊಂಡು ಬಂದ ರೈತರನ್ನು ಅಟ್ಟಾಡಿಸಿ ಬಡಿದಿರುವ ಪೊಲೀಸರು ಸರ್ಕಾರದ ಹತಾಶ ಮನಸ್ಥಿತಿಯ ಸಂಕೇತವೇ..?

ಡಿಜಿಟಲ್ ಕನ್ನಡ ಟೀಮ್

ನೀರು ಕೇಳಿಕೊಂಡು ನಗರಕ್ಕೆ ಬಂದ ರೈತರನ್ನು ಪೊಲೀಸರು ಅಟ್ಟಾಡಿಸಿಕೊಂಡು ಬಡಿದಿದ್ದಾರೆ. ಅವರು ಅಯ್ಯೋ ಎಂದರು ಬಿಟ್ಟಿಲ್ಲ, ಅಮ್ಮ ಎಂದರೂ ಬಿಟ್ಟಿಲ್ಲ. ಸಿಕ್ಕಸಿಕ್ಕವರನ್ನು ಲಾಠಿಯಿಂದ ಮನಸೋ ಇಚ್ಛೆ ಥಳಿಸಿದ್ದರಲ್ಲಿ ಅವರ ವಿಕೃತಿ ವಿಜೃಂಭಿಸಿದೆ.

ಸರಕಾರ ಮತ್ತು ಅದರದೇ ಭಾಗವಾದ ಪೊಲೀಸರ ತಲೆಯಲ್ಲಿ ಮಿದುಳಿಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಈ ಹೇಯಕೃತ್ಯ ಒಂದು ಸಾಕ್ಷಿ. ವಿಧಾನ ಮಂಡಲ ಅಧಿವೇಶನ ನಡೆಯುವಾಗ ರಾಜಧಾನಿಯಲ್ಲಿ ಪ್ರದರ್ಶನ ನಡೆಸಿದರೆ ಸಮಸ್ಯೆಯ ತೀವ್ರತೆ ಸರಕಾರದ ಮನಕ್ಕಿಳಿಯುತ್ತದೆ ಎಂಬುದು ಚಳವಳಿಗಾರರ ಪಾರಂಪರಿಕ ನಂಬಿಕೆ. ಆದರೆ ಆ ನಂಬಿಕೆ ಕುರುಡು ಎಂಬುದು ದನದಂತೆ ಬಡಿಸಿಕೊಂಡಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ರೈತರಿಗೆ ಮನವರಿಕೆ ಆಗಿದೆ. ಅಲ್ಲದೇ, ರಾಜ್ಯದ ಉಳಿದ ರೈತರಿಗೂ ಇದು ಎಚ್ಚರಿಕೆಯ ಸಂದೇಶವಾಗಿದೆ.

ಈ ಹಿಂದೆ ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬಂದ ಹೊಸತರಲ್ಲಿ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ನಡೆದಾಗ ಸದನದ ಒಳಗೆ ಮತ್ತು ಹೊರಗೆ ರೌದ್ರಾವತಾರ ತಾಳಿದ್ದ ಸಿದ್ದರಾಮಯ್ಯನವರು ಈಗ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ. ಅವರು ವಿಧಾನಸಭೆಯಲ್ಲಿ ಇರುವಾಗಲೇ ಈ ಹೇಯಕೃತ್ಯ ನಡೆದಿದೆ. ಪಾಪ, ವಾಚು, ಕನ್ನಡಕ ಅಂತ ತಲೆ ಕೆಡಿಸಿಕೊಂಡಿರುವ ಅವರಿಗಾಗಲಿ, ಅವರ ಕುರ್ಚಿ ಮೇಲೆ ನೆಟ್ಟ ಕಣ್ಣು ಬಿಟ್ಟಂತೆಯೇ ಇರುವ ಗೃಹ ಸಚಿವ ಪರಮೇಶ್ವರ್ ಅವರಿಗಾಗಲಿ ಪೊಲೀಸರ ರೌದ್ರವತಾರ ಕಾಣಲು ಪುರಸೊತ್ತು ಸಿಕ್ಕಿರಲಿಕ್ಕಿಲ್ಲ!

Police lottycharge and 2 Buses damaged during the Chikkaballapur Farmers arrives with their Tractor to protest and demanding to Permanent Water Irrigation for the Chikkaballapur District held at Makri Circle in Bengaluru on Thursday.

ಕೋಲಾರ ಮತ್ತು ಚಿಕ್ಕಬಳ್ಳಾಪುರ ರೈತರು ಮೊದಲಿಂದಲೂ ತೋಟಗಾರಿಕೆ ಬೆಳೆಗಳ ಮೇಲೆ ಅವಲಂಬಿತ. ಬೆಂಗಳೂರಲ್ಲಿ ಪೂರೈಕೆ ಆಗುವ ಸೊಪ್ಪು, ತರಕಾರಿಗಳಲ್ಲಿ ಬಹುತೇಕ ಈ ಭಾಗಗಳಲ್ಲಿ ಬೆಳೆದದ್ದೇ ಆಗಿರುತ್ತದೆ. ಬೆಳೆಗಿರಲಿ, ಕುಡಿಯೋದಿಕ್ಕೂ ನೀರಿಲ್ಲ, ಈ ಸಮಸ್ಯೆಗೆ ಪರಿಹಾರ ಕೊಡಿ ಅಂತ ಕೇಳಿಕೊಂಡು ರೈತರು ಗುರುವಾರ ಟ್ರಾಕ್ಟರ್ ಗಳಲ್ಲಿ ಬೆಂಗಳೂರಿಗೆ ಗುರುವಾರ ಮಧ್ಯಾಹ್ನ ಬಂದಿದ್ದಾರೆ. ಮಹಾರಾಣಿ ಕಾಲೇಜು ಸಮೀಪ ಫ್ರೀಡಂ ಪಾರ್ಕ್ ಬಳಿ ಪ್ರದರ್ಶನ ಮಾಡಿ ಮರಳುವುದು ಅವರ ಇಂಗಿತ ಆಗಿತ್ತು.

ಕೋಲಾರ, ಚಿಕ್ಕಬಳ್ಳಾಪುರದಿಂದ 70 ಕಿ.ಮೀ. ಕ್ರಮಿಸಿ, ಮೇಖ್ರಿ ಸರ್ಕಲ್ ದಾಟಿಕೊಂಡು ವಿಂಡ್ಸರ್ ಮ್ಯಾನರ್ ಸೇತುವೆಗುಂಟ ಏರ್ ಪೋರ್ಟ್ ರಸ್ತೆಯಲ್ಲೇ ರೈತರು ಬರುವವರೆಗೂ ಈ ಪೊಲೀಸರ ತಲೆಗೆ ಟ್ರಾಫಿಕ್ ಜಾಮ್ ಆಗುತ್ತದೆ ಅನ್ನೋದು ಹೊಳದೇ ಇಲ್ಲ. ಅಲ್ಲಿಂದ ಇಲ್ಲಿವರೆಗೂ ಬರಲು ಬಿಟ್ಟು, ವಿಂಡ್ಸರ್ ಮ್ಯಾನರ್ ಬಳಿ ರೈತರನ್ನು ಟ್ರಾಕ್ಟರ್ ಗಳಿಂದ ಕೆಳಗಿಳಿಸಿ ಓಡಾಡಿಸಿಕೊಂಡು ಬಡಿದಿದ್ದಾರೆ. ಕೈ, ಕಾಲು, ತಲೆಗೆ ಪೆಟ್ಟು ಬಿದ್ದು ರಕ್ತ ಸುರಿದರೂ ಬಿಟ್ಟಿಲ್ಲ. ಇಲ್ಲಿ ಇನ್ನೂ ವಿಚಿತ್ರ ಎಂದರೆ ಟ್ರಾಕ್ಟರ್ ಗಳಿಂದ ಕೆಳಗಿಳಿಸಿ ಬಡಿದೋಡಿಸಿದರೆ, ಆ ಟ್ರಾಕ್ಟರ್ ಗಳನ್ನು ಯಾರು ತೆಗೆದುಕೊಂಡು ಹೋಗುತ್ತಾರೆ, ಹಾಗೇ ಟ್ರಾಕ್ಟರ್ ಗಳು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಂತರೆ ಅದರಿಂದ ಟ್ರಾಫಿಕ್ ಜಾಮ್ ಆಗುತ್ತದೆ ಎಂಬ ಕನಿಷ್ಟ ಪ್ರಜ್ಞೆಯೂ ಪೊಲೀಸರಲ್ಲಿ ಕೆಲಸ ಮಾಡದೇ ಹೋದದ್ದು.

farmer protest2

ನಿಜಕ್ಕೂ ಪೊಲೀಸರಿಗೆ ಏನಾದರೂ ಬುದ್ಧಿ ಇದ್ದಿದ್ದರೆ ಹೆಬ್ಬಾಳ, ಮೇಖ್ರಿ ವೃತ್ತದ ಬಳಿಯೇ ರೈತರು ಮತ್ತು ಅವರು ಬಂದಿದ್ದ ವಾಹನಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬಹುದಿತ್ತು. ಜನಸಾಮಾನ್ಯರ ವಾಹನ ಸಂಚಾರಕ್ಕೆ ತೊಂದರೆ ಆಗದಂತೆ, ಟ್ರಾಫಿಕ್ ಜಾಮ್ ಉಂಟಾಗದಂತೆ ರೈತರ ವಾಹನಗಳು ರಸ್ತೆಯ ಒಂದು ಬದಿ ಸರತಿ ಸಾಲಿನಲ್ಲಿ ಸಾಗಿ, ಫ್ರೀಡಂ ಪಾರ್ಕ್ ತಲುಪುವಂತೆ ನೋಡಿಕೊಳ್ಳಬಹುದಿತ್ತು. ಅದೂ ಆಗದಿದ್ದರೆ ಹೆಬ್ಬಾಳ ತಲುಪುವ ಮೊದಲೇ ರೈತ ಮುಖಂಡರ ಜತೆ ಮಾತುಕತೆ ನಡೆಸಿ ಪರಿಹಾರ ಕೊಂಡುಕೊಳ್ಳಬಹುದಿತ್ತು. ಪೊಲೀಸರು ಲಾಠಿ ಬೀಸಿ, ರೈತರು ಆಸ್ಪತ್ರೆ ದಾರಿ ಹಿಡಿದ ಮೇಲೆ ಸ್ಥಳಕ್ಕೆ ಬಂದ ಸಚಿವರು, ಅಧಿಕಾರಿಗಳು ಆ ಕೆಲಸವನ್ನು ಮೊದಲೇ ಮಾಡಬಹುದಿತ್ತಲ್ಲವೇ..? ಪೊಲೀಸರ ವಿವೇಕದ ಕೊರತೆಯಿಂದ ಟ್ರಾಫಿಕ್ ಜಾಮೂ ತಪ್ಪಲಿಲ್ಲ, ಇದರ ಫಲಾನುಭವಿ ಜನ ಹಾಗೂ ಲಾಠಿಪೆಟ್ಟು ತಿಂದ ರೈತರು ಸರಕಾರಕ್ಕೆ ಹಿಡಿಶಾಪ ಹಾಕೋದು ತಪ್ಪಲಿಲ್ಲ.

ಏನು ಮಾಡೋಕಾಗುತ್ತೆ, ಸರಕಾರ, ಅದರ ಚುಕ್ಕಾಣಿ ಹಿಡಿದಿರುವ ಸಿಎಂ ಸಿದ್ದರಾಮಯ್ಯನವರ ಹಣೆಬರಹ ಸರಿ ಇಲ್ಲದೇ ಹೋಗಿರುವಾಗ..!

4 COMMENTS

  1. E sarkarakke mana maryade idre e Tara raitara mele dourjanya madta irlilla ivarugalige personal matter aropa pratyaropa matadoke namma rajyada vidana sabha ne beka? Raitarannu ninvu ivaga ulisalilla Andre nimmanu yava naayinu care madolla dayavittu swalpa manushyarante vartisi ….raitaru bele beladarene Anna illa Andre nammellara bayigu bilutte bari mannu artha madkoli

Leave a Reply