ಪರಮವೀರತೆಯ ಜೀವಂತ ಸ್ಮಾರಕ ನಾ. ಸುಭೇದಾರ್ ಸಂಜಯ್ ಕುಮಾರ್

ನೆಲ್ಚಿ ಅಪ್ಪಣ್ಣ, ಕೊಡಗು

ಆ ಪ್ರಶಸ್ತಿಗೆ ರಾಜಕಾರಣಿಗಳ ಲಾಬಿ ನಡೆಯುವುದಿಲ್ಲ, ಮಂತ್ರಿಗಳ ಶಿಫಾರಸ್ಸುಗಳಿಗೆ ಬಗ್ಗುವುದಿಲ್ಲ, ಜಾತಿ ಕೆಲಸ ಮಾಡುವುದಿಲ್ಲ, ಮೇಲಾಗಿ ಅದಕ್ಕೆ ಯಾರೂ ಅರ್ಜಿ ಸಲ್ಲಿಸುವುದಿಲ್ಲ. ಅದನ್ನು ಪಡೆದವರಿಗೂ ಇಂಥದ್ದೊಂದು ಗೌರವ ತಮ್ಮದಾಗಬಹುದು ಎಂಬ ಸಣ್ಣ ಕಲ್ಪನೆ ಕೂಡಾ ಇರುವುದಿಲ್ಲ. ಹಾಗಾಗಿ ಆ ಪ್ರಶಸ್ತಿ ಉಳಿದ ಪ್ರಶಸ್ತಿಗಳಂತೆ ಉಳಿದಿಲ್ಲ. ಅದನ್ನು ಯಾರೂ ಹಿಂತಿರುಗಿಸುವ ಮನಸ್ಸು ಮಾಡುವುದಿಲ್ಲ. ಭಾರತದಲ್ಲಿ ತೂಕಕ್ಕಿಟ್ಟು, ಅಳೆದುತೂಗಿ ನೀಡುವ ಕೆಲವೇ ಕೆಲವು ಪ್ರಶಸ್ತಿಗಳಲ್ಲಿ ಅದೂ ಒಂದು. ಅದು ಒಬ್ಬ ಯೋಧನ ವೀರತೆಯ ಪರಾಕಾಷ್ಠೆಗೆ ನೀಡುವ ಪರಮೋಚ್ಛ ಗೌರವ. ಪರಮವೀರಚಕ್ರ.

ಅದಕ್ಕೆ ಅಧಿಕಾರಿ, ಸಿಪಾಯಿ ಎಂಬ ಬೇಧವಿಲ್ಲ. ಆ ಪ್ರಶಸ್ತಿಯಿಂದ ಆತನ ಆರ್ಥಿಕ ಸ್ಥಿತಿಯೇನೂ ಉನ್ನತಿಗೆ ಏರಿಬಿಡುವುದೂ ಇಲ್ಲ. ಅದರ ಸ್ಮರಣಿಕೆಯೇನೂ ಚಿನ್ನದ ತಗಡೂ ಅಲ್ಲ. ಅದೊಂದು ಲೋಹದ ಬಿಲ್ಲೆ. ನಾಲ್ಕು ಶೂಲಗಳ ಒಂದು ಪದಕವಷ್ಟೆ, ನಡುವೊಂದು ಅಶೋಕ ಲಾಂಚನ. ಆದರೆ ಅದು ನೀಡುವ ಪ್ರೇರಣೆ ಇಡೀ ದೇಶವನ್ನು ಪ್ರಭಾವಿಸುತ್ತದೆ. ದೇಶದ ಘನತೆ, ಗೌರವಗಳನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಪ್ರಶಸ್ತಿಗಳು ಅವುಗಳನ್ನು ಪಡೆದಿರುವ ಸಂಖ್ಯೆಯಿಂದಲೂ ಮಹತ್ತ್ವ ಕಳೆದುಕೊಳ್ಳುತ್ತದೆ ಎಂಬುದಕ್ಕೋ ಏನೋ ಇದುವರೆಗೆ 21 ಪರಮವೀರಚಕ್ರಗಳು ಮಾತ್ರ ಪ್ರದಾನವಾಗಿವೆ. ಯುದ್ಧಗಳ ಕಾರ್ಯಾಚರಣೆಗಳಲ್ಲಿ ಪ್ರದರ್ಶನವಾಗುವ ಮಹಾ ಶೌರ್ಯಕ್ಕೆ ನೀಡುವ ಪರಮವೀರ ಚಕ್ರ ಪಡೆದ ಬಹುತೇಕ ವೀರರು ಬಲಿದಾನಿಗಳು. ಆದರೆ ಇಂದಿಗೂ ಮೂವರು ಪರಮವೀರತೆಯ ಜೀವಂತ ಸ್ಮಾರಕಗಳು ನಮ್ಮ ನಡುವೆ ಇದ್ದಾರೆ ಎಂಬುದು ಭಾರತೀಯ ಸೇನೆಯ ಹೆಮ್ಮೆ. ಆ ಮೂವರಲ್ಲಿ ಒಬ್ಬ ವೀರನ ಜನ್ಮದಿನ ಇಂದು. ಅವರೇ ನಾಯಕ್ ಸುಭೇದಾರ್ ಸಂಜಯ್ ಕುಮಾರ್.

ಕಾರ್ಗಿಲ್ ಯುದ್ಧದ ಹೀರೋ ಈ ಸಂಜಯ್ ಕುಮಾರ್. ಆಗ ಅವರಿಗೆ ಕೇವಲ 23 ವರ್ಷ. 1999ರ ಜುಲೈ 4ರಂದು ನಡೆದ ಕಾರ್ಯಾಚರಣೆ ಯುದ್ಧದ ಇತಿಹಾಸದಲ್ಲಿ ಮಹತ್ವಪೂರ್ಣ ಘಟನೆಯೊಂದು ನಡೆಯುವುದಿತ್ತು. ಏಕೆಂದರೆ ಭಾರತೀಯ ಪಡೆಗಳು ಅಂದು ಪಾಯಿಂಟ್ 4875 ಅನ್ನು ವಶಮಾಡಿಕೊಳ್ಳಲು ಹೊರಟಿದ್ದವು. 70 ಡಿಗ್ರಿಯಂತೆ ಬೆಟ್ಟವನ್ನು ಭಾರತೀಯ ಪಡೆಗಳು ಏರಬೇಕಿತ್ತು. ಕೊರೆಯುವ ಚಳಿ ಮತ್ತು ಹಗಲು ರಾತ್ರಿಯೆನ್ನದೆ ಅದನ್ನು ಹತ್ತಬೇಕಿತ್ತು. ಶತ್ರುಗಳೊಡನೆ ಮುಖಾಮುಖಿಯಾಗುವ ಅರಿವಿದ್ದರೂ ಪಡೆಗಳು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದವು. ಶತ್ರು ಸಂಖ್ಯೆಯ ಬಲದ ಅರಿವಿಲ್ಲ. ಭಾರತೀಯ ಪಡೆಯ 13ನೇ ಜಮ್ಮು ಮತ್ತು ಕಾಶ್ಮೀರ ರೈಫಲ್ಸಿನ ಚಾರ್ಲಿ ಕಂಪನಿಯ ಹತ್ತು ಜನ ಯೋಧರ ತಂಡ ಅದರ ಉಸ್ತುವಾರಿಯನ್ನು ಹೊತ್ತು ಬೆಟ್ಟ ಏರುತ್ತಿತ್ತು. ರೈಫಲ್ ಮ್ಯಾನ್ ಗಳ ಈ ತಂಡದಲ್ಲಿದ್ದ ಸಂಜಯ್ ಕುಮಾರ್ ನಿದ್ರೆ ಮಾಡದೆ ಬರೋಬ್ಬರಿ 30 ಗಂಟೆಗಳಾಗಿತ್ತು. ಅಷ್ಟರಲ್ಲಿ ಶತ್ರುಗಳಿಂದ ಗುಂಡಿನ ದಾಳಿ, ಭಾರತೀಯ ಯೋಧರಿಂದ ಪಾಕ್ ಬಂಕರುಗಳತ್ತ ಗ್ರೆನೇಡ್ ಎಸೆತ. ಆದರೂ ನಾನಾ ಕಡೆಗಳಿಂದ ಗುಂಡುಗಳು ಹಾರಿ ಬರುತ್ತಲೇ ಇದ್ದವು. ಸಂಜಯ್ ಕುಮಾರ್ ಗೆಳೆಯರು ಒಬ್ಬೊಬ್ಬರಾಗಿ ಉರುಳುತ್ತಿದ್ದರು. ಆದರೆ ಗಾಯಗೊಂಡ ಸಂಜಯ್ ಕುಮಾರ್ ಗುಂಡಿನ ದಾಳಿಯನ್ನು ನಿಲ್ಲಿಸಲಿಲ್ಲ. ಕೊನೆಗೆ ಅಧಿಕಾರಿಗಳಿಂದ ಶತ್ರು ಸೈನಿಕರಾರೂ ಉಳಿದಿಲ್ಲ ಎಂದು ಮನವರಿಕೆ ಮಾಡುವವರೆಗೆ ಸಂಜಯ್ ಕುಮಾರ್ ಗುಂಡು ಹಾರಿಸುತ್ತಲೇ ಇದ್ದರು. ಆದಾಗಲೇ ಅವರ ಕೈ ಜರ್ಜರಿತವಾಗಿತ್ತು. ಪಾಯಿಂಟ್ 4875 ಭಾರತೀಯರ ವಶವಾಗಿತ್ತು. ಅಸಾಧಾರಣ ಪರಾಕ್ರಮದಿಂದ ಶತ್ರುಗಳಿಗೆ ಮುಖಾಮುಖಿಯಾಗಿ ಮುನ್ನುಗ್ಗಿದ ಸಂಜಯ್ ಕುಮಾರ್ ತನ್ನ ದೇಹವನ್ನು ಲೆಕ್ಕಿಸದೆ ಪಾಕ್ ಬಂಕರಿನ ಅತೀ ಸಮೀಪಕ್ಕೆ ಸಾಗಿ ಅದನ್ನು ವಶ ಮಾಡಿದ್ದರು. ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ವಶವಾಗಿತ್ತು. ಸಂಜೆ ಐದೂವರೆ ಗಂಟೆಗೆ ಪಾಯಿಂಟ್ 4875 ವಶವಾಗಿತ್ತಾದರೂ ಸಂಜಯ್ ಕುಮಾರರು ಕೇಂದ್ರದಿಂದ ಸಂದೇಶ ಬಂದಿರಲಿಲ್ಲ. ಸ್ವತಃ ಪ್ರಥಮ ಚಿಕಿತ್ಸೆಗಳನ್ನು ಮಾಡಿಕೊಂಡರು, ಪೈನ್ ಕಿಲ್ಲರ್ ಗಳನ್ನು ತಿಂದರು. ಅಂಥ ಜಾಗಕ್ಕೆ ಸ್ಟ್ರೆಕ್ಛರ್ ಗಳನ್ನು ಕೊಂಡೊಯ್ಯುವುದೂ ಸುಲಭವಿರಲಿಲ್ಲ. ಮರುದಿನ ಬೆಳಗ್ಗೆ 9.30ಕ್ಕೆ ಗುಮ್ರಿಯ ಆಸ್ಪತ್ರೆಗೆ ಸಂಜಯ್ ಕುಮಾರರನ್ನು ಸಾಗಿಸಲಾಯಿತು. ಅವರ ದೇಹದಲ್ಲಿ ಇನ್ನೂ ಐದು ಬುಲೆಟ್ ಗಳಿದ್ದವು. ಐದು ಬುಲೆಟ್ ಗಳನ್ನು ದೇಹದಲ್ಲಿಟ್ಟುಕೊಂಡೇ ಸಂಜಯ್ ಕುಮಾರ್ ಪಾಯಿಂಟ್ 4875 ವಶಕ್ಕೆ ಸೆಣಸುತ್ತಿದ್ದರು.

ಅಂಥ ಮಹಾಯೋಧನ ಜನ್ಮದಿನ ಇಂದು.

ಕೆಲವರು ಮಿಲಿಟರಿಯ ಬಗ್ಗೆ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿರುವ ಹೊತ್ತಿನಲ್ಲಿ ಸಂಜಯ್ ಕುಮಾರ್ ಅವರಂಥವರನ್ನು ನೆನೆವುದು ಪ್ರೇರಣಾದಾಯಕ. ಅಷ್ಟಕ್ಕೂ ಇವರೇನೂ ಊಟಕ್ಕಿಲ್ಲದೆ ಮಿಲಿಟರಿಗೆ ಹೋಗಿರಲಿಲ್ಲ. ಅವರ ಚಿಕ್ಕಪ್ಪ ಮತ್ತು ಅಣ್ಣ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದರು. ಸಂಜಯ್ ಕುಮಾರ್ ಕೂಡಾ ದೆಹಲಿಯಲ್ಲಿ ಟ್ಯಾಕ್ಸ್ ಓಡಿಸುತ್ತಿದ್ದರು. ಕೈತುಂಬ ಆದಾಯವೂ ಇತ್ತು. ಸೈನ್ಯದ ಎಲ್ಲಾ ಸಂಗತಿಗಳನ್ನು ತಿಳಿದಿದ್ದರೂ ಅವರು ಸೈನ್ಯಕ್ಕೆ ನೇಮಕವಾದರು. ಪ್ರಾಣಕ್ಕೆ ಅಪಾಯವಿದೆಯೆಂದು ಗೊತ್ತಿದ್ದರೂ ನೇರಾನೇರ ಮುನ್ನುಗ್ಗಿದರು.

ಅಂಥ ಯೋಧನ ಪರಾಕ್ರಮಕ್ಕೆ ಪರಮವೀರಚಕ್ರದ ಗರಿ ಮೂಡಿಸಿ ಭಾರತೀಯ ಸೇನೆ ನಮ್ಮ ಹೆಮ್ಮೆ ಎಂದು ಘೋಷಿಸಿತು. ಪರಮವೀರತೆಯ ಜೀವಂತಿಕೆಗೆ ಸಂಜಯ್ ಕುಮಾರ್ ಪ್ರತ್ಯಕ್ಷ ಸಾಕ್ಷಿಯಾದರು. ಆರ್ಮಿಯ ಜನರಲ್ ಕೂಡಾ ಸೈಲ್ಯೂಟ್ ಹೊಡೆಯುವಂಥ ಗೌರವವನ್ನು ಸಂಜಯ್ ಕುಮಾರ್ ಗಳಿಸಿದರು. ಯೋಧನೊಬ್ಬನಿಗೆ ಸಿಗುವ ಅಪರೂಪದ ಗೌರವದೊಂದಿಗೆ ನಾಯಕ್ ಸುಬೇದಾರ್ ಸಂಜಯ್ ಕುಮಾರ್ ಇಂದಿಗೂ ಭಾರತೀಯ ಸೈನ್ಯದಲ್ಲಿದ್ದಾರೆ.

ಮಹಾ ಯೋಧತನದ ನಮನ ಜೀವಂತ ಸ್ಮಾರಕಕ್ಕೂ ಸಲ್ಲಲಿ.

1 COMMENT

  1. ನಿಜಕ್ಕೂ ಇಂದಿನ ಯುವಕರಿಗೆ ಪ್ರೇರಣೆಯಾಗಬೇಕಾದವರು ಇಂಥವರು. ಆದರೆ ದುರದೃಷ್ಟವಶಾತ್ ಇಂದಿನ ಯುವ ಪೀಳಿಗೆಗೆ ಇಂಥವರ ಸಾಧನೆಗಳು ಓದಲಿಕ್ಕೆ ಸಿಗುತ್ತಿಲ್ಲ. ಆ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ ಶ್ಲಾಘನೀಯ. 🙂

Leave a Reply