ಮಕ್ಕಳನ್ನು ಬರೀ ನೋಡಿಕೊಂಡರಷ್ಟೇ ಸಾಲದು, ಎಳವೆಯಿಂದಲೇ ಉತ್ತೇಜನ ತುಂಬಬೇಕು…

author-shamaಶಿಕ್ಷಣದ ಮೌಲ್ಯ ಹೆಚ್ಚುತ್ತಿದ್ದಂತೆ ಅದರ ವ್ಯಾಪ್ತಿ, ಪರಿಭಾಷೆಗಳು ಬದಲಾಗುತ್ತ ಹೋಗುತ್ತಿವೆ. ಗರ್ಭಧಾರಣೆ ಆದ ಕೂಡಲೇ ಒಳಗಿರುವ ಕೂಸಿಗೆ ಶಿಕ್ಷಣ ನೀಡುವ ಪರಿಪಾಠ ಹೆಚ್ಚುತ್ತಿದೆ. ವಿಜ್ಞಾನದ ಸಂಶೋಧನೆಗಳು ಇದಕ್ಕೆ ಇಂಬು ಕೊಡುತ್ತಿರುವುದು ಬೆರಗಿನ ಜತೆ ಹಲವು ಹೊಸ ದಾರಿಗಳನ್ನೂ ತೆರೆದಿಟ್ಟಿದೆ.  ಗರ್ಭಧಾರಣೆ ಆಗುತ್ತಿದ್ದ ಕ್ಷಣದಿಂದಲೇ ಮೆದುಳಿನ ನರಕೋಶಗಳು ಉಳಿದೆಲ್ಲ ನರಕೋಶಗಳಿಗಿಂತ ವೇಗವಾಗಿ ವೃದ್ಧಿಯಾಗುತ್ತವೆ ಮತ್ತು ಆವಾಗ ಉತ್ತೇಜಿಸಿದಷ್ಟೂ ಅವು ಹೆಚ್ಚೆಚ್ಚು ಚುರುಕಾಗುತ್ತವೆ ಅಂತಾವೆ ಸಂಶೋಧನೆಗಳು.

ಹುಟ್ಟಿನಲ್ಲಿ ಮಗುವಿನ ಮೆದುಳಿನ ತೂಕವು ವಯಸ್ಕರ ಮೆದುಳಿನ 25 % ಇದ್ದರೆ, ಒಂದನೇ ವರ್ಷದ ಹೊತ್ತಿಗೆ 50 %, ಎರಡನೇ ವರ್ಷಕ್ಕೆ 75 % ಮತ್ತು ಮೂರಕ್ಕೆ ಸರಿ ಸುಮಾರು 90 % ಬೆಳೆದಿರುತ್ತದೆ. ನಂತರ ಪ್ರೌಢಾವಸ್ಥೆಗೆ ಬರೋವರೆಗೂ ಬೆಳವಣಿಗೆಯಾಗುವುದು ಕೇವಲ 10 % ಮಾತ್ರ. ಅಂದರೆ ಮಗು ಮೂರು ವರ್ಷ ತಲುಪುವುದರೊಳಗೆ ಮೆದುಳಿನ ಚುರುಕುತನ ಎಷ್ಟು ವೃದ್ಧಿಯಾಗುತ್ತದೋ ಅದೇ ಮುಂದಿನ ಭವಿಷ್ಯಕ್ಕೆ ಅಡಿಗಲ್ಲು. ವಯಸ್ಕರ ಮೆದುಳಿನಲ್ಲಿ ಸಂದೇಶ ವಾಹಕಗಳಾಗಿ ಕೆಲಸ ಮಾಡುವ ಸುಮಾರು ನೂರು ಬಿಲಿಯನ್ ನ್ಯೂರಾನ್ ಗಳಲ್ಲಿ ಬಹಳಷ್ಟು ಈ ಎಳೆ ವಯಸ್ಸಿನಲ್ಲಿ ಹುಟ್ಟಿದವೇ ಆಗಿರುತ್ತದೆ.

ನಮ್ಮ ದೇಹದ ಅಷ್ಟೂ ಚಟ್ಟುವಟಿಕೆಗಳ ಲಗಾಮು ಹಿಡಿದಿರುವ ಈ ಮೆದುಳೆಂಬ ಸಿ.ಪಿ.ಯು ವಿಸ್ಮಯಗಳ ಆಗರ. ಮೆದುಳಿಗೆ ಯಾವುದೇ ಪ್ರಚೋದನೆ ಸಿಗಲಿ ಇಲ್ಲಿರುವ ನ್ಯೂರಾನುಗಳ ಮಧ್ಯೆ ಸಂಬಂಧಗಳ ಕವಲೊಂದು ಚಾಚುತ್ತದೆ. ಈ ಮೂಲಕ ಬೇರೆ ಬೇರೆ ನ್ಯೂರಾನುಗಳು ಒಂದಕ್ಕೊಂದು ಬೆಸೆದುಕೊಳ್ಳುತ್ತವೆ. ಈ ಪ್ರಕ್ರಿಯೆಯೇ ಸಿನಾಪ್ಟಿಕ್ ಕನೆಕ್ಷನ್. ಬೆಳವಣಿಗೆಯ ಹಂತದಲ್ಲಿ ಎಷ್ಟು ಹೆಚ್ಚು ಸಿನಾಪ್ಟಿಕ್ ಕನೆಕ್ಷನ್ ಗಳು ವೃದ್ಧಿಯಾಗುತ್ತವೋ ಮಗು ಅಷ್ಟು ಹೆಚ್ಚು ಚುರುಕಾಗುತ್ತದೆ. ಈ ಪ್ರಕ್ರಿಯೆಯು ಸಂಪೂರ್ಣವಾಗಿ “ಬಳಸಿ ಅಥವಾ ಅಳಿಸಿ” (Use it or Lose it) ಥರದಲ್ಲಿ ಕಾರ್ಯ ನಿರ್ವಹಿಸುತ್ತವೆ. ಬಳಸಿದಷ್ಟೂ ಬೆಳೆಯುವ ಇವು  ಬಳಕೆಯಾಗದಿದ್ದಲ್ಲಿ ತಂತಾನೆ ನಶಿಸಿ ಹೋಗುತ್ತವೆ. ಈ ನಶಿಸುವ ಕ್ರಿಯೆಯೇ ಪ್ರೂನಿಂಗ್. ಮೆದುಳು ತೀವ್ರಗತಿಯ ಬೆಳವಣಿಗೆಯ ಹಂತವನ್ನು ದಾಟಿದ ಮೇಲೆ ಪ್ರೂನಿಂಗ್ ಶುರುವಾಗುತ್ತದೆ. ಅಂದರೆ ಈ ಪ್ರಕ್ರಿಯೆ ಶುರುವಾಗುವವ ಮೊದಲೇ ತಾಯ್ತಂದೆಯರು ಮಗುವಿನ ಭವಿಷ್ಯದ ತಳಹದಿಯನ್ನು ನಿರ್ಮಾಣ ಮಾಡುವಲ್ಲಿ ಕಾಳಜಿಯಿಂದ ಶ್ರಮಿಸಬೇಕಿದೆ.

ಇಂದು ಅಪ್ಪ ಅಮ್ಮ ಇಬ್ಬರೂ ದುಡಿಮೆಯ ಅನಿವಾರ್ಯತೆಯೆಡೆಗೆ ಹೆಜ್ಜೆಯಿಟ್ಟು ನಿಂತಾಗ ಅವರ ಅನುಪಸ್ಥಿತಿಯಲ್ಲಿ ಮಗುವನ್ನು ಪಾಲನೆ ಮಾಡುವವರ ಪಾತ್ರ ಮಹತ್ತರವಾದ್ದು. ಕೂಡು ಕುಟುಂಬಗಳ ವಿಭಜನೆ ಮತ್ತು ವಿಭಕ್ತ ಕುಟುಂಬಗಳ ಹೆಚ್ಚಳವೂ ಗಣನೀಯವಾಗಿರುವ ಹಿನ್ನೆಲೆಯಲ್ಲಿ ಇಂದು ಪೂರ್ವ ಬಾಲ್ಯಾವಧಿ ಶಿಕ್ಷಕರ ಅಗತ್ಯ ದಿನೇ ದಿನೇ ಹೆಚ್ಚುತ್ತಿದೆ. ಪೂರ್ವ ಬಾಲ್ಯಾವಧಿ ಶಿಕ್ಷಕರು ಎಂದರೆ ಅವರು ತರಬೇತಿ ಪಡೆದ ಬೋಧಕರು ಮಾತ್ರ ಅಂತಲ್ಲ. ಹುಟ್ಟಿನಿಂದ ಐದು ವರ್ಷಗಳವರೆಗೆ ಮನೆ, ನರ್ಸರಿ, ಕಿಂಡರ್ ಗಾರ್ಡನ್ ಮತ್ತು ಪ್ಲೇ ಹೋಂಗಳಲ್ಲಿ ಮಕ್ಕಳಿಗೆ ಕಲಿಸುವ ಮತ್ತು ಅವರ ಸರ್ವತೋಮುಖ ಬೆಳವಣಿಗೆಯನ್ನು ಪೋಷಿಸುವವರೆಲ್ಲರೂ ಪೂರ್ವ ಬಾಲ್ಯಾವಧಿ ಶಿಕ್ಷಕರು ಎನಿಸಿಕೊಳ್ಳುತ್ತಾರೆ. ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಇವರು ಮಕ್ಕಳ ಮೂಲಭೂತ ಅವಶ್ಯಕತೆಗಳನ್ನು ನೋಡಿಕೊಳ್ಳುವುದರ ಜತೆಗೇ ಮಕ್ಕಳ ದೈಹಿಕ, ಮಾನಸಿಕ, ಶೈಕ್ಷಣಿಕ ಮತ್ತು ಬೌದ್ಧಿಕ ಬೆಳವಣಿಗೆಯನ್ನೂ ಉತ್ತೇಜಿಸುತ್ತಾರೆ. ಅಲ್ಲದೇ ಮಕ್ಕಳಲ್ಲಿನ ಸಂಶೋಧನಾ ಮನೋಭಾವಕ್ಕೆ ಬೆಂಬಲವಿತ್ತು ಪ್ರತಿಭೆ ಮತ್ತು ಸ್ವಾವಲಂಬನೆಯ ಬೆಳವಣಿಗೆ, ಸ್ವಗೌರವ ಮತ್ತು ಸಾಮಾಜಿಕ ಶಿಷ್ಟಾಚಾರಗಳ ಕಲಿಕೆಗೆ ಸಹಕರಿಸುತ್ತಾರೆ.

ಇಷ್ಟು ಚಿಕ್ಕ ಮಕ್ಕಳಿಗೆ ಕಲಿಸುವ ಭರದಲ್ಲಿ ಅವರನ್ನು ಶಿಸ್ತಿನ ಸರಪಳಿಯಲ್ಲಿ ಬಂಧಿಸಿ ಬುದ್ಧಿ ಬೆಳೆಸುತ್ತೇವೆಂದರೆ ಅದು ಅಸಾಧ್ಯ. ಅವರಿಗೆ ಆಟದ ಜತೆಗೇ ಪಾಠವಾಗಬೇಕು; ಖುಷಿಯ ಜತೆಗೇ ಹೊಸದೂ ಸಿಗಬೇಕು. ಇವೆಲ್ಲವನ್ನು ನಮ್ಮಿಷ್ಟ ಬಂದಂತೆ ಬೇಕಾದಂತೆ ಮಾಡುವುದು ಸಾಧ್ಯವೂ ಇಲ್ಲ; ಸಾದುವೂ ಅಲ್ಲ. ಅದಕ್ಕೆ ಅದರದೇ ಆದ ಕ್ರಮ ನಿಯಮಗಳಿವೆ. ವರ್ಷಗಟ್ಟಲೇ ಮಾಡಿದ ಸಂಶೋಧನೆಗಳ ಫಲವಾಗಿ ದೊರಕಿದ ರೀತಿ ನೀತಿಗಳಿವೆ. ಅಪಾರ ಸಾಮರ್ಥ್ಯವಿರುವ ಮೆದುಳಿಗೆ ಜ್ಞಾನಾರ್ಜನೆಯೆಂಬುದು ಸುಲಲಿತ ಪ್ರಕ್ರಿಯೆಯಾದಾಗಷ್ಟೆ ಅದ್ಭುತ ಫಲ ನಿರೀಕ್ಷೆ ಸಾಧ್ಯ. ಸಮಯಕ್ಕೆ ಸರಿಯಾಗಿ ಮತ್ತು ಬೆಳವಣಿಗೆಯ ಹಂತಗಳಿಗೆ ಪೂರಕವಾಗಿ ಸಿಗಬೇಕಾದ ಉತ್ತೇಜನದ ಕೊರತೆಯಿಂದಾಗಿ ಮೆದುಳಿನ ಸಾಮರ್ಥ್ಯ ನಶಿಸುವುದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ ಎನ್ನುತ್ತಾರೆ ಬಹಳಷ್ಟು ಶಿಕ್ಷಣ ತಜ್ಞರು.

ಮಕ್ಕಳನ್ನು ನೋಡಿಕೊಳ್ಳುತ್ತೇವೆ ಮತ್ತು ಶಿಕ್ಷಣವನ್ನೂ ಜತೆಗೇ ನೀಡುತ್ತೇವೆ ಎನ್ನುವ ಚೈಲ್ಡ್ ಕೇರ್ ಸಂಸ್ಥೆಗಳು ಅಣಬೆಗಳಂತೆ ಎದ್ದು ನಿಲ್ಲುತ್ತಿವೆಯಾದರೂ ಅಲ್ಲಿನ ಶಿಕ್ಷಕರಾಗಲೀ ಬಹುತೇಕ ಸಿಬ್ಬಂದಿ ವರ್ಗದವರಾಗಲೀ ಈ ಕ್ಷೇತ್ರದಲ್ಲಿ ನೈಪುಣ್ಯತೆ, ಪ್ರಾವೀಣ್ಯತೆ, ಕ್ರಮಬದ್ಧ ಶಿಕ್ಷಣ ಪಡೆದವರಾಗಿರುವುದಿಲ್ಲ. ಇಂಥವರು ಮಕ್ಕಳನ್ನು ಕೇವಲ “ನೋಡಿಕೊಳ್ಳುತ್ತಾರಷ್ಟೆ” ಹೊರತು ಸರ್ವತೋಮುಖ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದು ಕಷ್ಟ. ಇವರಿಗೆ ಮಗುವಿನ ಮೆದುಳು ಮತ್ತು ಇತರ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಜ್ಞಾನವಿರದ ಕಾರಣ ಮಕ್ಕಳಿಗೆ ಬಹುಮುಖ್ಯವಾದ ವಯಸ್ಸಿಗನುಗುಣವಾದ (Age Appropriate) ಕಲಿಕೆಯನ್ನು ಕೊಡಮಾಡುವುದೂ ಸಾಧ್ಯವಾಗದು. ಬೆಂಗಳೂರು ವಿಶ್ವ ವಿದ್ಯಾಲಯದ ವ್ಯಾಪ್ತಿಯಲ್ಲಿರುವ ಶ್ರೀಮತಿ ವಿ.ಹೆಚ್.ಡಿ. ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಹೋಮ್ ಸೈನ್ಸ್ ನಲ್ಲಿನ ಪರಿಣಿತ ಶಿಕ್ಷಕರು ಈ ರೀತಿಯ ಸಮಸ್ಯೆಗಳನ್ನು ಮನಗಂಡು ಪೂರ್ವ ಬಾಲ್ಯಾವಧಿ ಶಿಕ್ಷಣ ಮತ್ತು ನಿರ್ವಹಣೆ (M.Sc. in Early Childhood Education and Administration (ECEA)) ಎಂಬ ವಿಶಿಷ್ಟ ಸ್ನಾತಕೋತ್ತರ ಪದವಿಯನ್ನು ಮಾನವ ವಿಕಾಸ ವಿಭಾಗದಲ್ಲಿ ಪರಿಚಯಿಸಿದೆ.

ಹೀಗಾದಾಗ ಪೋಷಕರ ಜವಾಬ್ದಾರಿ ಹೆಚ್ಚುತ್ತದೆ. ಎಳವೆಯಲ್ಲೇ ಸಾಧ್ಯವಾದಷ್ಟು ವಿಭಿನ್ನ ಅನುಭವಗಳಿಗೆ ಮಗುವನ್ನು ತೆರೆಯುವುದು, ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ಯುವುದು ಮುಂತಾದುವುಗಳಿಂದ ಇವನ್ನ ಸಾಧಿಸುವುದು ಕಷ್ಟವೇನಲ್ಲ. ಮಗುವಿನ ಬಗ್ಗೆ ಕನಸು ಕಂಡರೆ ಸಾಲದು; ನನಸಾಗಬೆಕಾದರೆ ಕೆಲಸವನ್ನೂ ಮಾಡಬೇಕು. ಮತ್ತು ಇಂದಿನ ಪುರುಸೊತ್ತಿಲ್ಲದ ಜಮಾನಾದಲ್ಲೂ ಪುರುಸೊತ್ತು ಮಾಡಿಕೊಳ್ಳಬೇಕು.

 

2 COMMENTS

  1. ಮಗುವಿನ ಮೆದುಳಿನ ಶಕ್ತಿ ಎರಡನೇ ವರ್ಷದ ವೇಳೆಗಾಗಲೇ ಶೇಕಡಾ ೯೦ ಅಭಿವೃದ್ಧಿಯಾಗಿರುತ್ತದೆ ಹಾಗಾಗಿ ಬೆಳೆಯುವ ಸಮಯದಲ್ಲೇ ಸೂಕ್ತ ರೀತಿಯಲ್ಲಿ ಮಕ್ಕಳಿಗೆ ಇಷ್ಟವಾಗುವಂತೆ ಅವರ ಗ್ರಹಣ ಶಕ್ತಿಯನ್ನು ಬೆಳೆಸಬೇಕೆಂಬ ಚಿಂತನೆಯನ್ನು ಸಮರ್ಪಕವಾಗಿ ತಿಳಿಸಿದ್ದೀರಿ. ಉತ್ತಮ ಮತ್ತು ಉಪಯುಕ್ತ ಲೇಖನ.

Leave a Reply