ಸುದ್ದಿಸಂತೆ: ಕ್ರಿಕೆಟ್ ವಿಜಯ, ಬಿಸಿಸಿಐಗೆ ಸುಪ್ರೀಂ ಬಿಸಿ, ಮಲ್ಯ ಬಂಧನಕ್ಕೆ ಎಸ್ ಬಿ ಐ ಕೋರಿಕೆ

ಭಾರತಕ್ಕೆ ಯುಎಇ ಸುಲಭ ತುತ್ತು

ದುರ್ಬಲ ಯುಎಇ ವಿರುದ್ಧ ಪರಿಣಾಮಕಾರಿ ಆಟ ಪ್ರದರ್ಶಿಸಿದ ಟೀಂ ಇಂಡಿಯಾ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಸುಲಭ ಜಯ ಸಾಧಿಸಿದೆ. ಗುರುವಾರ ಶೇರ್ ಇ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 9 ವಿಕೆಟ್ ಅಂತರದಲ್ಲಿ ಜಯ ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಯುಎಇ ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಲಷ್ಟೇ ಶಕ್ತವಾಯ್ತು. ಈ ಸುಲಭ ಗುರಿ ಬೆನ್ನಟ್ಟಿದ ಭಾರತ 10.1 ಓವರ್ ಗಳಲ್ಲಿ 1 ವಿಕೆಟ್ ಗೆ 82 ರನ್ ಕಲೆ ಹಾಕಿ ಜಯ ದಾಖಲಿಸಿತು. ಭಾರತದ ಪರ ರೋಹಿತ್ 39 (26), ಧವನ್ ಅಜೇಯ 25 (14), ಯುವರಾಜ್ ಅಜೇಯ 16 (20) ರನ್ ಗಳಿಸಿದರೆ, ಬೌಲಿಂಗ್ ನಲ್ಲಿ ಭುವನೇಶ್ವರ್ 2, ಬುಮ್ರಾ, ಪಾಂಡ್ಯ, ಹರ್ಭಜನ್, ನೇಗಿ ಮತ್ತು ಯುವರಾಜ್ ತಲಾ 1 ವಿಕೆಟ್ ಪಡೆದರು. ಯುಎಇ ಪರ ಶೈಮನ್ ಅನ್ವರ್ 43 (48) ರನ್ ಗಳಿಸಿದರು. ಬೌಲಿಂಗ್ ನಲ್ಲಿ ಖಾದಿರ್ 1 ವಿಕೆಟ್ ಪಡೆದರು. ಭಾರತ ತಂಡ ಮಾ.6ರಂದು ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ.

 ಬಿಸಿಸಿಐಗೆ ಸುಪ್ರೀಂ ತರಾಟೆ

ಕ್ರಿಕೆಟ್ ಆಡಳಿತ ಮಂಡಳಿಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನೇಮಿತ ನ್ಯಾ. ಆರ್.ಎಂ ಲೋಧ ಸಮಿತಿ ಶಿಫಾರಸ್ಸು ಅನುಷ್ಠಾನಗೊಳಿಸಲು ತಕರಾರು ಎತ್ತಿರುವ ಬಿಸಿಸಿಐಗೆ ಸುಪ್ರೀಂ ಕೋರ್ಟ್ ಗುರುವಾರ ಛೀಮಾರಿ ಹಾಕಿದೆ. ಬಿಸಿಸಿಐ ಮತ್ತು ರಾಜ್ಯ ಸಂಸ್ಥೆಗಳಲ್ಲಿ ಸಚಿವರು ಮತ್ತು ರಾಜಕೀಯ ವ್ಯಕ್ತಿಗಳು ಏಕಿರಬೇಕು? ಎಂದು ಪ್ರಶ್ನಿಸಿದೆ.

ಗುರುವಾರ ನಡೆದ ವಿಚಾರಣೆಯಲ್ಲಿ ಮುಖ್ಯ ನ್ಯಾಯಮೂರ್ತಿ ಟಿ.ಎಸ್ ಠಾಕೂರ್ ಮತ್ತು ನ್ಯಾ. ಇಬ್ರಾಹಿಂ ಖಲೀಫುಲ್ಲಾ ನೇತೃತ್ವದ ದ್ವಿಸದಸ್ಯ ಪೀಠ, ಬಿಸಿಸಿಐ ವಿರುದ್ಧ ಗರಂ ಆಗಿತ್ತು. ಲೋಧಾ ಸಮಿತಿಯಲ್ಲಿನ ಶಿಫಾರಸ್ಸು ಅನುಷ್ಠಾನಗೊಳಿಸುವುದು ಕಷ್ಟ ಎಂಬ ಬಿಸಿಸಿಐ ಪರ ವಕೀಲರ ವಾದವನ್ನೂ ನಿರಾಕರಿಸಿತು.

ಮಹಾಲೇಕಪಾಲರಿಗೆ ಮತ ಚಲಾಯಿಸುವ ಹಕ್ಕು ನೀಡಲು ನಿಮಗೆ ಮನಸ್ಸಿಲ್ಲ. ಕೋಟ್ಯಾಂತರ ರುಪಾಯಿ ಡೀಲ್ ಮಾಡಲು ನೆರವಾಗುವಂತೆ, ಮಹಾಲೇಕಪಾಲರನ್ನು ಕೇವಲ ಸಲಹೆಗಾರರಾಗಿಟ್ಟುಕೊಳ್ಳಲಷ್ಟೇ ಇಚ್ಛಿಸುತ್ತೀರಿ. ಹಾಗಾಗಿ ಈ ಶಿಫಾರಸ್ಸನ್ನು ವಿರೋಧಿಸುತ್ತಿದ್ದಿರಾ ಅಲ್ಲವೇ ಎಂದು ಕೇಳಿತು.

ಈ ವರದಿಯಲ್ಲಿ ಕೆಲ ಅಂಶಗಳನ್ನು ಪುನರ್ ಪರಿಶೀಲಿಸುವಂತೆ ಲೋಧಾ ಸಮಿತಿಗೆ ಸೂಚನೆ ನೀಡಲಾಗುವುದು. ಆದರೆ, ಶಿಫಾರಸ್ಸನ್ನು ಪೂರ್ಣವಾಗಿ ನಿರಾಕರಿಸಲು ಸಾಧ್ಯವೇ ಇಲ್ಲ ಎಂದು ಕೋರ್ಟ್ ಬಿಸಿಸಿಐಗೆ ಖಡಕ್ ಎಚ್ಚರಿಕೆ ನೀಡಿದೆ. ಈ ವಿಚಾರದಲ್ಲಿ ರಾಜ್ಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಬಿಷನ್ ಸಿಂಗ್ ಬೇಡಿ ಮತ್ತು ಕೀರ್ತಿ ಅಜಾದ್ ರಂತಹ ಮಾಜಿ ಆಟಗಾರರ ವಾದ ಮಂಡಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದ್ದು, ಮಾ.18ರಂದು ಮುಂದಿನ ವಿಚಾರಣೆ ವೇಳೆ ಈ ಬಗ್ಗೆ ಚರ್ಚಿಸಲು ನಿರ್ಧರಿಸಿದೆ.

ಕೌಶಲ್ಯ ಭಾರತ ರೇಡಿಯೊ ನಾಟಕ ಆರಂಭ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಮೇಕ್ ಇನ್ ಇಂಡಿಯಾದ ಪ್ರಚಾರ ಆಂದೋಲನದ ಅಂಗವಾಗಿ ಬೆಂಗಳೂರು ಆಕಾಶವಾಣಿ ಕೇಂದ್ರ ಗುರುವಾರದಿಂದ ಕೌಶಲ್ಯ ಭಾರತ ಎಂಬ ರೇಡಿಯೊ ನಾಟಕ ಆರಂಭಿಸಿದೆ. ಪ್ರತಿ ಗುರುವಾರ ಬೆಳಗ್ಗೆ 8.35 ರಿಂದ 15 ನಿಮಿಷಗಳ ಕಾಲ ಈ ನಾಟಕ ಪ್ರಸಾರವಾಗಲಿದ್ದು, 26 ಕಂತುಗಳನ್ನು ಹೊಂದಿದೆ. ಈ ನಾಟಕದ ಮೂಲಕ ಯೋಜನೆಯಲ್ಲಿ ಯುವ ಉದ್ಯಮಿಗಳಿಗೆ, ಹೊಸ ಉದ್ಯಮ ಸ್ಥಾಪಿಸಲು ಇರುವ ಅವಕಾಶ ಮತ್ತು ಸವಲತ್ತುಗಳ ಬಗ್ಗೆ ಅರಿವು ಮೂಡಿಸುವುದು ಮೂಲ ಉದ್ದೇಶವಾಗಿದೆ. ಈ ನಾಟಕ ಸರಣಿ ರಾಜ್ಯದ ಇತರೆ ಆಕಾಶವಾಣಿ ಕೇಂದ್ರಗಳಲ್ಲಿ ಪ್ರಸಾರವಾಗಲಿದೆ.

 

ವಿಜಯ್ ಮಲ್ಯ ಬಂಧನಕ್ಕೆ, ಪಾಸ್ ಪೋರ್ಟ್ ವಶಕ್ಕೆ ಡಿಆರ್ ಟಿ ಮೊರೆ ಹೋದ ಎಸ್ ಬಿಐ

ಮದ್ಯದ ದೊರೆ ವಿಜಯ್ ಮಲ್ಯ ಸಾಮ್ರಾಜ್ಯ ಪತನದ ಹಾದಿ ಹಿಡಿದಿದೆ. ಬ್ಯಾಂಕ್ ಗಳಲ್ಲಿ ಪಡೆದಿರುವ ಸಾವಿರಾರು ಕೋಟಿ ಸಾಲ ಮರುಪಾವತಿ ಮಾಡದ ಮಲ್ಯರನ್ನು ಬಂಧಿಸುವಂತೆ ಕೋರಿ ಎಸ್ ಬಿಐ ಕೋರ್ಟ್ ಮೆಟ್ಟಿಲೇರಿದೆ. ಮತ್ತೊಂದೆಡೆ ಹಠಮಾರಿ ಸುಸ್ತಿದಾರ ಪಟ್ಟಿಯಿಂದ ತಮ್ಮ ಹೆಸರನ್ನು ಕೈ ಬಿಡುವಂತೆ ದೆಹಲಿ ಕೋರ್ಟ್ ಗೆ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದೆ.

ಸುಮಾರು ₹7 ಸಾವಿರ ಕೋಟಿಗೂ ಹೆಚ್ಚು ಸಾಲ ಉಳಿಸಿಕೊಂಡಿರುವ ಮಲ್ಯರನ್ನು ಬಂಧಿಸಿ, ಪಾಸ್ ಪೋರ್ಟ್ ವಶಕ್ಕೆ ಪಡೆಯುವಂತೆ ಬೆಂಗಳೂರಿನ ಸಾಲ ವಸೂಲಾತಿ ನ್ಯಾಯಾಧಿಕರಣ (ಡಿಆರ್ ಟಿ)ಕ್ಕೆ ಅರ್ಜಿ ಸಲ್ಲಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ನೇತೃತ್ವದ 17 ಬ್ಯಾಂಕ್ ಗಳಿಂದ ಪಡೆದಿರುವ ಸಾಲ ಮರುಪಾವತಿಸುವಂತೆ ಸಾಕಷ್ಟು ಬಾರಿ ನೋಟಿಸ್ ಕೊಟ್ಟರು ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಡಿಆರ್ ಟಿ ಮೊರೆ ಹೋಗಿದೆ.

ಕೆಲವು ದಿನಗಳ ಹಿಂದೆ ಕೇಂದ್ರ ಸರ್ಕಾರ ₹ 500 ಕೋಟಿಗಿಂತ ಹೆಚ್ಚು ಸಾಲ ಉಳಿಸಿಕೊಂಡಿರುವ ಸಾಲಗಾರರ ಕಪ್ಪು ಪಟ್ಟಿ ಬಿಡುಗಡೆಗೊಳಿಸಿತ್ತು. ಇದರಲ್ಲಿ ವಿಜಯ್ ಮಲ್ಯ ಹೆಸರನ್ನು ಸೇರಿಸಲಾಗಿತ್ತು.

ಕಾಶ್ಮೀರಿ ಪಂಡಿತರ ಪುನರ್ವಸತಿಗೆ ಸಮಿತಿ ನೇಮಕದ ಪ್ರಸ್ತಾಪ

ವಲಸಿಗರ ಶಿಬಿರದಲ್ಲಿ ವಾಸಿಸುತ್ತಿರುವ ಕಾಶ್ಮೀರಿ ಪಂಡಿತರಿಗೆ ಕೇಂದ್ರ ಸರ್ಕಾರ ಘೋಷಿಸಿರುವ ₹580 ಕೋಟಿಯ ಪುನರ್ವಸತಿ ಪಾಕೇಜ್ ಅನುಷ್ಠಾನಗೊಳಿಸಲು 10 ಮಂದಿಯ ಕಾಶ್ಮೀರಿ ಪಂಡಿತರ ಸಮಿತಿ ನೇಮಕದ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಕಳುಹಿಸಿದೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ 2014 ರಲ್ಲಿ ವಲಸೆ ಹೋಗಿದ್ದ ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸಲು ₹580 ಕೋಟಿಯ ಪ್ಯಾಕೇಜ್ ಘೋಷಿಸಿತ್ತು.

ಎಸ್ ಸಿ ಎಸ್ ಟಿ ವಿದ್ಯಾರ್ಥಿ ವೇತನ ಡಿಬಿಪಿ ವ್ಯಾಪ್ತಿಗೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್ ಸಿ ಎಸ್ ಟಿ) ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುತ್ತಿರುವ ವಿದ್ಯಾರ್ಥಿವೇತನ ವಿತರಣೆ ಇನ್ನು ಮುಂದೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ ಫರ್ (ಡಿಬಿಟಿ) ಯೋಜನೆಯ ವ್ಯಾಪಿಗೆ ಬರಲಿದೆ ಎಂದು ಬುಡಕಟ್ಟು ವ್ಯವಹಾರಗಳ ಸಚಿವ ಜೌಲ್ ವರಂ ತಿಳಿಸಿದ್ದಾರೆ.

Leave a Reply