ಎರಡೂ ಕೈಗಳಿಲ್ಲ.. ಆದರೂ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ಈ ಪ್ಯಾರಾ ಕ್ರಿಕೆಟರ್!

ಡಿಜಿಟಲ್ ಕನ್ನಡ ಟೀಮ್

ಕೈಗಳಿಲ್ಲದೇ ಕ್ರಿಕೆಟ್ ಆಡಲು ಸಾಧ್ಯವೇ? ಎಂದು ಕೇಳಿದರೆ, ಸಹಜವಾಗಿ ಬರುವ ಉತ್ತರವಾಗಿ ಬರುವುದು ಹೇಗೆ ಸಾಧ್ಯ ಅನ್ನೋ ಪ್ರಶ್ನೆಯೇ? ಹೌದು.. ಕೈಗಳಿಲ್ಲದೇ ಬ್ಯಾಟ್ ಹಿಡಿಯುವುದಾದರೂ ಹೇಗೆ? ಬೌಲಿಂಗ್ ಮಾಡುವುದಾದರು ಹೇಗೆ? ಫೀಲ್ಡಿಂಗ್ ನಲ್ಲಿ ಬಾಲ್ ಎಸೆಯುವುದಾದರೂ ಹೇಗೆ? ಏನೋ ಒಂದು ಕೈಯಿಲ್ಲ ಅಥವಾ ಒಂದು ಕಾಲಿಲ್ಲ ಎಂದರೆ, ಇರೊ ಒಂದು ಕೈನಲ್ಲೇ ಮ್ಯಾನೇಜ್ ಮಾಡಬಹುದು. ಆದರೆ ಎರಡೂ ಕೈಗಳಿಲ್ಲ ಎಂದರೆ, ಕ್ರಿಕೆಟ್ ಆಡೋದಾದ್ರು ಹೆಂಗೆ ಮಾರಯಾ ಎಂದು ಕೇಳುವುದು ಸಹಜ. ಆದರೆ, ನಾವು ಹೇಳಲೋರಟಿರೋದು ಎರಡು ಕೈ ಇಲ್ಲದಿದ್ದರೂ ಕ್ರಿಕೆಟ್ ಆಡುವವನ ಬಗ್ಗೆ.

ಅರೆ.. ಎಂಥಾ.. ಕೈಗಳಿಲ್ಲದೆ ಕ್ರಿಕೆಟ್ ಹೇಗೆ ಆಡುತ್ತಾನೆ ಎಂಬ ಅನುಮಾನ ಸಹಜ. ನಿಜ, ಜಮ್ಮು ಮತ್ತು ಕಾಶ್ಮೀರದ ವಿಕಲಚೇತನರ ಕ್ರಿಕೆಟ್ ತಂಡದ ನಾಯಕ ಅಮೀರ್ ಹುಸೇನ್ ಲೋನ್ ಎಂಬ ಕ್ರಿಕೆಟಿಗ ಎರಡೂ ಕೈಗಳಿಲ್ಲದಿದ್ದರೂ ಕ್ರಿಕೆಟ್ ಆಡುತ್ತಿದ್ದಾನೆ. ಬ್ಯಾಟಿಂಗ್, ಬೌಲಿಂಗ್ ಜತೆಗೆ ಫೀಲ್ಡಿಂಗ್ ಸಹ ಮಾಡುತ್ತಾನೆ. ಆತನ ಕತೆ ಇಲ್ಲಿದೆ ನೋಡಿ.

ಅಮೀರ್ ಹುಟ್ಟುತ್ತಲೇ ಎರಡೂ ಕೈಗಳನ್ನು ಕಳೆದುಕೊಳ್ಳಲಿಲ್ಲ. 8 ವರ್ಷವಿರುವಾಗ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಂದೆಗೆ ಊಟ ತೆಗೆದುಕೊಂಡು ಹೋಗುವಾಗ ಅಪಘಾತಕ್ಕೆ ಸಿಲುಕಿ ಎರಡೂ ಕೈ ಕಳೆದುಕೊಳ್ಳುತ್ತಾನೆ. ಭಾರತದಲ್ಲಿ ಸಾಮಾನ್ಯವಾಗಿ ಇತರ ಯುವಕರಿಗಿರುವಂತೆ ಈತನಿಗೂ ಕ್ರಿಕೆಟ್ ಹುಚ್ಚು. ಕೈಗಳಿಲ್ಲದಿದ್ದರೂ ಕ್ರಿಕೆಟ್ ಆಡಲಾರಂಭಿಸಿದ. ಈಗ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಪ್ರತಿನಿಧಿಸುತ್ತಿದ್ದಾನೆ. ಇಲ್ಲಿ ಏನೇ ಹೇಳಿದರು, ಆತ ಹೇಗೆ ಆಡುತ್ತಾನೆ ಎಂಬ ಕುತೂಹಲ ನಿಮ್ಮನ್ನು ಕಾಡುತ್ತಲೇ ಇರುತ್ತದೆ. ಅದಕ್ಕಾಗಿ ಈ ವಿಡಿಯೋ ನೋಡಿ, ನೀವು ನಿಬ್ಬೆರಗಾಗುವುದರಲ್ಲಿ ಅನುಮಾನವಿಲ್ಲ.

ಈಗ ನಿಮಗನಿಸಬಹುದು, ಹೌದಲ್ಲ ಎರಡೂ ಕೈಗಳಿದ್ದರೂ ಹೇಗೆ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮಾಡುತ್ತಿದ್ದಾನೆ ಎಂದು. ಈ ಎಲ್ಲದರ ಜತೆಗೆ ಆತ ತನ್ನ ದಿನ ನಿತ್ಯ ಕಾರ್ಯಗಳಲ್ಲಿ ಯಾರಿಗೂ ಅವಲಂಬಿತವಾಗದೇ ತನ್ನ ಕೆಲಸ ತಾನೇ ಮಾಡಿಕೊಳ್ಳುತ್ತಿದ್ದಾನೆ.

ಗುರಿ ಸಾಧಿಸುವ ಹಂಬಲ, ಛಲ ಮನಸ್ಸಿನಲ್ಲಿ ಗಟ್ಟಿಯಾಗಿದ್ದರೆ, ಯಾವುದೇ ಅಂಗವೈಕಲ್ಯ ಅಡ್ಡಿಯಾಗದು ಎಂಬುದನ್ನು ಅಮೀರ್ ತೋರಿಸಿಕೊಟ್ಟಿದ್ದಾನೆ.

Leave a Reply