ಕೋಟಿ, ಕೋಟಿ ಸುರಿದ ಮಾತ್ರಕ್ಕೆ ಸಿನಿಮಾ ಸುಪರ್ ಹಿಟ್ ಆಗುತ್ತದೆ ಎಂಬುದು ಸೂಪರ್ ಸುಳ್ಳು..!

sridharamurthyಎನ್.ಎಸ್.ಶ್ರೀಧರ ಮೂರ್ತಿ

ಕೋಟ್ಯಂತರ ರುಪಾಯಿ ಬಜೆಟ್ ಇದ್ದರೆ ಮಾತ್ರ ಸಿನಿಮಾ, ನೀರಿನಂತೆ ದುಡ್ಡು ಖರ್ಚು ಮಾಡಿದ ತಕ್ಷಣ ಪ್ರೇಕ್ಷಕ ಚಿತ್ರಮಂದಿರಕ್ಕೆ ಎಡತಾಕುತ್ತಾನೆ, ಚಿತ್ರ ಸುಪರ್ ಹಿಟ್ ಆಗುತ್ತದೆ ಎಂಬ ಹುಸಿಭಾವ ಬಿತ್ತಲಾಗುತ್ತಿದೆ. ಅದನ್ನು ಪ್ರೇಕ್ಷಕರನ್ನು ಸೆಳೆಯುವ ತಂತ್ರಗಾರಿಕೆ ಆಗಿಯೂ ಬಳಸಲಾಗುತ್ತಿದೆ. ಆದರೆ ಇದೊಂದು ವಿಫಲ ಯತ್ನವೇ ಸರಿ. ಏಕೆಂದರೆ ವೈಭವ ಇದ್ದ ಮಾತ್ರಕ್ಕೆ ಚಿತ್ರ ಹಿಟ್ ಆಗುವುದಿಲ್ಲ, ಅದರಲ್ಲಿ ಸತ್ವ ಇರಬೇಕು, ಮನಕ್ಕಿಳಿಯುವ ತಿರುಳು ಇರಬೇಕು ಎಂಬುದು ಹಲವು ನಿದರ್ಶನಗಳೊಂದಿಗೆ ಈಗಾಗಲೇ ಸಾಬೀತಾಗಿದೆ. ಹೀಗೆ ಹುಸಿ ಮತ್ತ ಸತ್ಯಭಾವದ ನಡುವೆ ಸಂಘರ್ಷ ನಡೆದಿರುವ ಸಂದರ್ಭದಲ್ಲಿ ನಮ್ಮ ನೆನಪನ್ನು ಹಿಂದಕ್ಕೊಯ್ಯುವುದು ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’.

ಹಾಗೆ ‘ಸತಿ ಸುಲೋಚನ’ ನೆನಪಿನಂಗಳಕ್ಕೆ ಇಳಿಯಲು ಕಾರಣಗಳು ಇಲ್ಲದಿಲ್ಲ. ಕನ್ನಡ ಚಿತ್ರರಂಗದ ಹುಟ್ಟುಹಬ್ಬ ಎನಿಸಿದ ಮಾರ್ಚ್ ಮೂರು ಈ ಚಿತ್ರ ಬಿಡುಗಡೆ ಆದ ದಿನ. ಬರೀ ಮೂವತ್ತು ಸಾವಿರ ರುಪಾಯಿಯಲ್ಲಿ ಚಿತ್ರ ನಿರ್ಮಿಸಿದವರು ಷಾ ಚಮನ್‍ ಲಾಬ್ ಡುಂಗಾಜಿಯವರು . ಅವರೇನು ಕನ್ನಡಿಗರಲ್ಲ ಮೂಲತ: ರಾಜಾಸ್ಥಾನದವರಾದ ಇವರು ಬೆಂಗಳೂರಿಗೆ ಬಂದಿದ್ದು ಪಾತ್ರೆ ವ್ಯಾಪಾರಕ್ಕೆ. ಬೆಂಗಳೂರಿನ ಚಿಕ್ಕ ಪೇಟೆಯಲ್ಲಿ ಅಂಗಡಿ ಇಟ್ಟುಕೊಂಡಿದ್ದ ಅವರಿಗೆ ವ್ಯವಹಾರದ ಜೊತೆಗೆ ಸಾಮಾಜಿಕ ಕಾಳಜಿ ಕೂಡ ಇತ್ತು. ಆಗಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಡುಂಗಾಜಿಯವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾಮಸ್‍  ವಿಭಾಗ ಶುರುವಾಗೋದಕ್ಕೆ ಕಾರಣಕರ್ತರಾಗಿದ್ದರು. 1929ರಲ್ಲಿ ಸೌತ್ ಇಂಡಿಯನ್ ಫಿಲಂ ಕಂಪನಿ ಆರಂಭಿಸಿ ಮೂಕಿ ಚಿತ್ರಗಳ ವಿತರಣೆ ನಡೆಸುತ್ತಿದ್ದ ಅವರಿಗೆ ಎಲ್ಲಾ ಭಾಷೆಗಳಲ್ಲೂ ವಾಕ್ಚಿತ್ರಗಳು ಬರುತ್ತಿದ್ದದ್ದುನ್ನು ನೋಡಿ ಕನ್ನಡದಲ್ಲಿ ಏಕೆ ಬರಬಾರದು ಎನ್ನಿಸಿತು. ಅವರಿಗೆ ಜೊತೆ ನೀಡಿದವರು ಆರ್.ನಾಗೇಂದ್ರ ರಾಯರು. ಅವರು ಭಾರತದ ಮೊದಲ ವಾಕ್ಚಿತ್ರ ನಿಮಿಸಿದ್ದ ‘ಇಂಪೀರಿಯಲ್ ಕಂಪನಿ’ಯಲ್ಲಿ ಕೆಲಸ ಮಾಡಿದ್ದರು. ತಮಿಳಿನ ಪಾರಿಜಾತ ಪುಷ್ಪಹರಣಂ ಮತ್ತು ತೆಲುಗಿನ ಭಕ್ತ ರಾಮದಾಸ, ನವೀನ ಸದಾರಮೆ ವಾಕ್ಚಿತ್ರಗಳಲ್ಲಿ ಅಭಿನಯಿಸಿದ್ದರು, ಡುಂಗಾಜಿಯವರ ಬಳಿ ಬಂಡವಾಳ ಇದ್ದರೆ ನಾಗೇಂದ್ರ ರಾಯರ ಬಳಿ ಅನುಭವ ಇಬ್ಬರೂ ಸಾಧಕರು ಸೇರಿ ಮೂವತ್ತು ಸಾವಿರ ರೂಪಾಯಿಗಳ ಬಂಡವಾಳದಲ್ಲಿ ‘ಸತಿ ಸುಲೋಚನ’ಚಿತ್ರ ನಿರ್ಮಿಸಿದರು. 1934ರ ಮಾರ್ಚಿ 3ರಂದು ಬೆಂಗಳೂರಿನ ಪ್ಯಾರಾಮೌಂಟ್‍ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಯಾಗಿ ಆರು ವಾರಗಳ ಪ್ರದರ್ಶನ ಕಂಡಿತು. ಇಲ್ಲಿಂದ ಕನ್ನಡ ಚಿತ್ರರಂಗದ  ಇತಿಹಾಸ ಆರಂಭವಾಯಿತು.

ಈಗೊಂದು ಸರಳ ಪ್ರಶ್ನೆ, 82 ವರ್ಷಗಳನ್ನು  ಕಳೆದ ನಂತರ ಕನ್ನಡ ಚಿತ್ರವೊಂದರ ಸರಾಸರಿ ಬಜೆಟ್ ಎಷ್ಟು? ಇದಕ್ಕೆ ಉತ್ತರಿಸುವುದೇ ಕಷ್ಟ.ಏಕೆಂದರೆ ಕಳೆದ ಐದು ವರ್ಷಗಳಲ್ಲಿ ಒಂದು ಅಂದಾಜಿನ ಪ್ರಕಾರ ಕನ್ನಡ ಚಿತ್ರರಂಗದಲ್ಲಿ ಕನಿಷ್ಠ ಹದಿನೈದು ಕೋಟಿ ರೂಪಾಯಿಗಳಷ್ಟು ಕಪ್ಟು ಹಣ ಹರಿಯುತ್ತಿದೆ. ಹೀಗಿರುವಲ್ಲಿ ಯಾರು ನಿಜವಾದ ಬಜೆಟ್‍ ಹೇಳುತ್ತಾರೆ. ಹೀಗಿದ್ದರೂ ನಿರ್ಮಾಪಕರು ನಮ್ಮದು ಬಿಗ್ ಬಜೆಟ್ ಸಿನಿಮಾ ಎಂದೇ ಹೇಳುತ್ತಾರೆ. ಕೋಟಿಗಳಲ್ಲೆ ಮಾತನ್ನಾಡುತ್ತಾರೆ, ಇಂದು ಚಿತ್ರರಂಗ ಎಂದರೆ   ಈ ಕೋಟಿಗಳ ಲೆಕ್ಕದ ಅಂಕಿ-ಸಂಖ್ಯೆಗಳೇ ಆಗಿ ಬಿಟ್ಟಿವೆ. ಅಷ್ಟೇ ಅಲ್ಲ ಅವರು ಏನೇ ಹೇಳಿದರೂ ಕನ್ನಡ ಚಿತ್ರರಂಗ ತಮಿಳು, ತೆಲುಗು, ಹಿಂದಿಗಳಷ್ಟು ದೊಡ್ಡ ಬಂಡವಾಳವನ್ನು ಪಡೆಯಲಾರದು. ಈ ಕೀಳರಮೆಯಲ್ಲೇ ನಾವು ನರಳುತ್ತಿದ್ದೇವೆ.  ಸತಿ ಸುಲೋಚನದ ಉದಾಹರಣೆಯಿಂದ  ಕಲಿಯಬೇಕಾಗಿದ್ದ ಕೇವಲ ಬಂಡವಾಳ ಇದ್ದರೆ, ಇಲ್ಲವೆ ಪ್ರತಿಭೆ  ಇದ್ದರೆ ಸಾಕಾಗುವುದಿಲ್ಲ, ಎರಡೂ ಸೇರಬೇಕು. ಆದರೆ ಕನ್ನಡ ಚಿತ್ರರಂಗದಲ್ಲಿ ಎರಡೂ ಬೇರೆ ಬೇರೆ ಕಡೆ ಮುಖ ತಿರುಗಿಸಿಕೊಂಡು ನಿಂತಿದೆ. ಹಣದ ಪ್ರವಾಹ ಇರುವ ಕಡೆ ಸಿನಿಮಾ ಗುಣಗಲೇ ಮಾಯವಾಗಿದ್ದರೆ, ಸಿನಿಮಾ ಗುಣಗಳಿರುವ ಚಿತ್ರಗಳು ಪ್ರಯೋಗಳಿಗೇ ಮೀಸಲಾಗಿ ಜನರಿಗೇ ನೋಡಲು ಸಿಕ್ಕುತ್ತಿಲ್ಲ. ಈ ಅಂತರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಕನ್ನಡ ಚಿತ್ರರಂಗದಲ್ಲಿ ಯಾವಾಗಲೂ ಈ ಕೋಟಿ ಲೆಕ್ಕಾಚಾರವೇ ಇರಲಿಲ್ಲ. 1970ರವರೆಗೂ ಇಲ್ಲಿ ಹಣದ ಹರಿವು ಇರಲೇ ಇಲ್ಲ. ರಾಜ್ ಕುಮಾರ್ ಅವರು ಹತ್ತು ಸಾವಿರ ರೂಪಾಯಿಗಳ ಸಂಭಾವನೆಯನ್ನು ಕಂಡಿದ್ದು ತಮ್ಮ 101ನೇ ಚಿತ್ರಕ್ಕೆ . ನಂತರ ಹಣದ ಹರಿವು ಬಂದರೂ ಅದೇ ಮುಖ್ಯ ಪ್ರಶ್ನೆಯಾಗಿರಲಿಲ್ಲ. ಆದರೆ 1990ರ ನಂತರ ಪರಿಸ್ಥಿತಿ ಪೂರ್ತಿ ಬದಲಾಯಿತು. ನಿರ್ಮಾಪಕರು ತಮ್ಮದು ಬಿಗ್ ಬಜೆಟ್ ಸಿನಿಮಾ ಎನ್ನುವುದು. ಅದರ ಲಾಭ ನಷ್ಟಗಳ ಲೆಕ್ಕಚಾರವೇ ವಿಶ್ಲೇಷಣೆಯಾಗುವುದು ಮುಂದುವರೆದುಕೊಂಡು ಬಂದು ಇತ್ತೀಚಿನ ದಿನಗಳಲ್ಲಂತೂ ಸಿನಿಮಾ ಎಂದರೆ ಕೋಟಿಗಳ ಲೆಕ್ಕಾಚಾರ ಎನ್ನುವಂತಾಗಿದೆ.

ಬಿಗ್ ಬಜೆಟ್‍ ಎಂದರೇ ಸಿನಿಮಾ ಎನ್ನುವುದು ಮೂಲತ: ಹಾಲಿವುಡ್ ಹುಟ್ಟಿಸಿದ ಸುಳ್ಳು, ಅದನ್ನು ಹುಟ್ಟಿಸಿದ ಕಾರಣವೂ ಜಗತ್ತನ್ನು ಆಕ್ರಮಿಸುವುದೇ ಆಗಿತ್ತು. ಯೂರೋಪ್, ಆಫ್ರಿಕಾ, ಲ್ಯಾಟಿನ್ ಅಮೇರಿಕಾಗಳಲ್ಲಿ  1960ರ ಸುಮಾರಿಗೆ ಕಡಿಮೆ ಬಜೆಟ್‍ನ ಉತ್ತಮ ಚಿತ್ರಗಳು ಬರುತ್ತಿದ್ದವು. ಈ ಸುಳ್ಳಿನಿಂದ ಅವುಗಳನ್ನು ವ್ಯವಸ್ಥಿತವಾಗಿ ನಾಶ ಪಡಿಸಲಾಯಿತು. ಹಾಲಿವುಡ್‍ಗೆ ಇದ್ದ ಶಕ್ತಿ ಅದರ ಬಂಡವಾಳ. ಅದನ್ನೇ ಆಯುಧವಾಗಿ ಬಳಸಿತು. ಅದನ್ನು ಬಾಲಿವುಡ್‍ ಅನುಕರಿಸಿತು. ತಮಿಳು-ತೆಲುಗು ಚಿತ್ರರಂಗಗಳು ಅದನ್ನು ಹಿಂಬಾಲಿಸಿದವು. ಕನ್ನಡ ಚಿತ್ರರಂಗವೂ ಅದೇ ಮಾದರಿಯನ್ನು ಹಿಡಿದು ಹೊರಟಿತು. ಇದರಿಂದ ಕಳೆದ ಕೆಲವು ವರ್ಷಗಳಲ್ಲಿ ಕಡಿಮೆ ಬಜೆಟ್‍ನಲ್ಲಿ ಸ್ಟಾರ್‍ಗಳ ಚಮಕ್ ಇಲ್ಲದೆ ಗೆದ್ದ ಸಿಂಪಲ್ ಆಗಿ ಒಂದು ಲವ್‍ ಸ್ಟೋರಿ, ರಂಗಿತರಂಗ, ಫಸ್ಟ್‍ ರಾಂಕ್ ರಾಜು ಮೊದಲಾದ ಚಿತ್ರಗಳ ಕುರಿತು ಚರ್ಚೆಗಳೇ ನಡೆಯುತ್ತಿಲ್ಲ. ಈಗ ಹೊಸ ಪ್ರತಿಭೆಗಳು ಬಂದಿವೆ, ಹೊಸತನದ ಚಿತ್ರಗಳೂ ಬರುತ್ತಿವೆ. ಬಜೆಟ್‍ನ ಮಾನದಂಡದಲ್ಲಿ ಅವರನ್ನು ಗಮನಿಸದೆ ಹೋದರೆ ನಷ್ಟವಾಗುವುದು ಕನ್ನಡ ಚಿತ್ರರಂಗಕ್ಕೇ, ಇತಿಹಾಸದಿಂದ ಪಾಠ ಕಲಿಯ ಬೇಕಾಗಿರುವುದು ಇಂತಹ ನೆಲೆಗಳಲ್ಲೇ.

ಬಾಹುಬಲಿಯಂತಹ ಬಿಗ್ ಬಜೆಟ್‍ ಸಿನಿಮಾ ಬರದಿದ್ದರೆ ಕನ್ನಡ ಚಿತ್ರರಂಗಕ್ಕೆ ಯಾವ ನಷ್ಟವೂ ಇಲ್ಲ. ಆದರೆ ಕನ್ನಡತನ ಹೊಂದಿದ ಚಿತ್ರ ಬರದಿದ್ದರೆ ನಮಗೆ ನಾಳೆಗಳು ಇರುವುದಿಲ್ಲ ಎನ್ನುವುದು ಗಾಂಧಿನಗರ ನೆನಪಿಟ್ಟು ಕೊಳ್ಳ ಬೇಕಾದ ಸತ್ಯ.

Leave a Reply