ಜ್ವರ ಬಂದವರಿಗೇ ಮತ್ತೆ ಬರೆ, ಇಪಿಎಫ್ ಮೇಲೆ ಮೋದಿ ಸರ್ಕಾರದ ತೆರಿಗೆ ಹೊರೆ

ಡಿಜಿಟಲ್ ಕನ್ನಡ ಟೀಮ್

ನೌಕರರ ಭವಿಷ್ಯ ನಿಧಿಗೆ ನೌಕರರು ತೊಡಗಿಸಿದ ಹಣದ 60 ಭಾಗದ ಮೇಲೆ ತೆರಿಗೆ ಹಾಕುವುದಕ್ಕೆ ಮೋದಿ ಸರಕಾರ ಮುಂದಾಗಿದೆ. ಇದೇ ವರ್ಷ ಏಪ್ರಿಲ್ ಒಂದರಿಂದ ಇದು ಜಾರಿಗೆ ಬರಲಿದೆ. ಇದಕ್ಕೂ ಮುಂಚೆ ನೀವು ತಡೆ (ವಿಥೌಟ್ ಬ್ರೇಕ್ )ಯಿಲ್ಲದೆ ಐದು ವರ್ಷಕ್ಕೂ ಹೆಚ್ಚು ಹಣ ಈ ಖಾತೆಯಲ್ಲಿ ತೊಡಗಿಸಿದ್ದೆ ಆಗಿದ್ದರೆ ನಂತರ ನೀವು ಅಲ್ಲಿಂದ ಹಣವನ್ನು ವಾಪಸ್ಸು ತೆಗೆದರೆ ಅದು ಪೂರ್ಣ ತೆರಿಗೆ ವಿನಾಯ್ತಿ ಹೊಂದಿತ್ತು.
ನ್ಯಾಷನಲ್ ಪೆನ್ಷನ್ ಸ್ಕಿಮ್ ನಲ್ಲಿ ಕೂಡ 40 ಭಾಗ ತೆರಿಗೆ ವಿನಾಯತಿ ಇದೆ. ಅಂದರೆ ಉಳಿದ 60 ಭಾಗ ಅಲ್ಲಿಯೂ ತೆರಿಗೆ ಕಟ್ಟಬೇಕು. ಸರಕಾರದ ಉಳಿತಾಯ ಯೋಜನೆಗಳಲ್ಲಿ ಏಕರೂಪ ಕಾಯ್ದುಕೊಳ್ಳುವ ಸಲುವಾಗಿ EPF (ನೌಕರರ ಭವಿಷ್ಯ ನಿಧಿ) ಮೇಲೆ ತೆರಿಗೆ ಹಾಕುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನುವುದು ವಿತ್ತ ಮಂತ್ರಿಗಳು ಕೊಡುವ ಕಾರಣ.
ಏನಿದು ನೌಕರರ ಭವಿಷ್ಯ ನಿಧಿ?
ವೇತನಕ್ಕೆ ದುಡಿಯುವ ಪ್ರತಿಯೊಬ್ಬ ನೌಕರನಿಗೂ ನಿವೃತ್ತಿ ನಂತರ ಒಂದಷ್ಟು ಹಣ ಸಿಗಲಿ ಎನ್ನುವ ಕಾರಣದಿಂದ ಭಾರತ ಸರಕಾರ ಈ ಯೋಜನೆಯನ್ನು ಮಾರ್ಚ್ ನಾಲ್ಕು 1952 ರಲ್ಲಿ ಪ್ರಾರಂಭ ಮಾಡಿತು. ಇದರ ಅಡಿಯಲ್ಲಿ ಕೆಲಸಗಾರ ಹಾಗು ಮಾಲಿಕ ಇಬ್ಬರೂ ಸಮನಾಗಿ ಒಂದಷ್ಟು ಹಣವನ್ನು ಈ ಖಾತೆಗೆ ಜಮಾ ಮಾಡಬೇಕು. ಇಪ್ಪತಕ್ಕೂ ಹೆಚ್ಚು ನೌಕರರಿರುವ ಸಂಸ್ಥೆಗಳಿಗೆ ಇದು ಕಡ್ಡಾಯ. ಕೆಲಸ ಮಾಡುತಿದ್ದ ಸಂಸ್ಥೆ ತೊರೆದು ಬೇರೆಡೆ ಹೋದರೆ ಖಾತೆಯಲ್ಲಿ ಜಮಾ ಆಗಿದ್ದ ಹಣ ನೌಕರರಿಗೆ ಸಿಗುತಿತ್ತು.
ಅಕ್ಟೋಬರ್ ಒಂದು 2014ರಂದು ಮೋದಿ ಸರಕಾರ ಯೂನಿವರ್ಸಲ್ ಅಕೌಂಟ್ ನಂಬರ್  (UAN ) ಪ್ರತಿ ನೌಕರರಿಗೆ ನೀಡುವುದರ ಮೂಲಕ , ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ಸೇರಿದರೂ ಭವಿಷ್ಯ ನಿಧಿ ಜಮಾ ಪ್ರಕ್ರಿಯೆ ವಿಚ್ಚೇದವಿಲ್ಲದೆ ನಡೆಯಲು ಸಹಾಯಕವಾಯಿತು. ಇದು ನಮ್ಮ ಮೊಬೈಲ್ ಪೋರ್ಟಬಿಲಿಟಿಯಂತೆ ಕಾರ್ಯ ನಿರ್ವಹಿಸುತ್ತದೆ.
ಇದರಿಂದ ಹಣ ಒಂದು ಕಡೆ ಜಮಾ ಆಗಿ ನಿವೃತ್ತಿ ಸಮಯದಲ್ಲಿ ನಿಜಕ್ಕೂ ಅವರಿಗೆ ಸಹಾಯ ಆಗಲು ಅನುವಾಯಿತು. ನಿಜ ಹೇಳಬೇಕೆಂದರೆ ಭವಿಷ್ಯ ನಿಧಿಯ ಮೂಲ ಉದ್ದೇಶ ಈಡೇರಿಕೆ ಆದದ್ದು ಮೋದಿ ಸರಕಾರದ ಈ ಕಾರ್ಯದಿಂದ. ಇಂಥ ಮೋದಿ ಸರಕಾರ EPF ಮೇಲೆ ತೆರಿಗೆ ಹಾಕುವ ನಿರ್ಧಾರ ನಿಜಕ್ಕೂ ಖೇದಕರ. ಹಾಗೆ ನೋಡಿದರೆ ಎಲ್ಲಾ ರೀತಿಯ ತೆರಿಗೆಗೆ ತುತ್ತಾಗುವುದು ವೇತನಕ್ಕೆ ದುಡಿಯುವ ಮಂದಿ ಮಾತ್ರ. ಇತರರು ನೂರಾರು ದಾರಿ ಹುಡುಕಿ ಕಡಿಮೆ ತೆರಿಗೆ ನೀಡಲು ಸಾಧ್ಯವಿದೆ. ಆದರೆ ಸಂಬಳಕ್ಕೆ ದುಡಿಯುವರಿಗೆ ಯಾವುದೇ ಮಾರ್ಗವಿಲ್ಲ! ಮೋದಿ ಸರಕಾರ ‘ಜ್ವರ ಬಂದವರಿಗೆ ಬರೆ’ ಹಾಕುವ ಕೆಲಸ ಮಾಡಿದೆ.
ನೆನಪಿಡಿ , 60 ಭಾಗ ತೆರಿಗೆ ನೌಕರರ ಹೂಡಿಕೆ ಮೇಲೆ ಮಾತ್ರ. ಮಾಲೀಕ ಮಾಡಿದ ಹೂಡಿಕೆ ಮೇಲೆ ಯಾವುದೇ ತೆರನಾದ ತೆರಿಗೆ ಇಲ್ಲ.
ಮತ್ತೊಂದು ವಿಷಯ. ಪಬ್ಲಿಕ್ ಪ್ರಾವಿಡೆಂಟ್ ಫಂಡ್(PPF ) ಮೇಲೆ ಯಾವುದೇ ವಿಧವಾದ ತೆರಿಗೆ ಇಲ್ಲ ಹಿಂದಿನಂತೆ ಮುಂದುವರಿದಿದೆ. ಈ ಬಗ್ಗೆ ಗೊಂದಲ ಬೇಕಿಲ್ಲ.

Leave a Reply