ಬ್ಯಾಂಕ್ ಸಾಲ ತೀರಿಸದಷ್ಟು ಮಲ್ಯ ದಿವಾಳಿಯಾ? ಇಲ್ಲಿದೆ ಪ್ರಮುಖ ಆಸ್ತಿಗಳ ಪಟ್ಟಿ!

ಡಿಜಿಟಲ್ ಕನ್ನಡ ಟೀಮ್

ಮದ್ಯದ ದೊರೆ.. ಕಿಂಗ್ ಆಫ್ ಗುಡ್ ಟೈಮ್ಸ್.. ಎಂದೇ ಹೆಸರುವಾಸಿಯಾಗಿರುವ ವಿಜಯ್ ಮಲ್ಯ ಈಗ ಸುದ್ದಿಯಲ್ಲಿರುವುದು ಉದ್ದೇಶ ಪೂರ್ವಕ ಸುಸ್ತಿದಾರ ಎಂದು. ಸಾವಿರಾರು ಕೋಟಿ ರುಪಾಯಿಗಳ ಸಾಲ ತೀರಿಸದೇ ಬ್ಯಾಂಕ್ ಗಳ ನಿದ್ದೆ ಕೆಡಿಸಿರುವ ಮಲ್ಯ, ತಮ್ಮನ್ನು ಉದ್ದೇಶಪೂರ್ವಕ ಸುಸ್ತಿದಾರ ಅಂತ ಕರೆಯಬಾರದು ಅಂತ ನ್ಯಾಯಾಲಯದ ಮೆಟ್ಟಿಲೇರುವವರಿದ್ದಾರೆ. ಅಂದ್ರೆ… ಸಾಲ ತೀರಿಸುವ ಉದ್ದೇಶವಿದ್ರೂ ತೀರಿಸಲಾಗದಷ್ಟು ಬರಿದಾಗಿದೆಯಾ ಮಲ್ಯ ಸಾಮ್ರಾಜ್ಯ? ವಿಮಾನಯಾನ ಸಂಸ್ಥೆ ನಷ್ಟ ಅನುಭವಿಸಿದ ಮಾತ್ರಕ್ಕೆ ಮಲ್ಯ ಆಸ್ತಿ ಕರಗಿಹೋಯಿತೇ?

ಈಗಲೂ ತನ್ನ ಶೋಕಿಯನ್ನು ಬಿಡದೇ, ತನ್ನ ಮಟ್ಟಿಗಿನ ರೇಸು-ಕಾಸುಗಳಿಗೆ ಯಾವ ತೊಂದರೆಯನ್ನೂ ಮಾಡಿಕೊಳ್ಳದಿರುವ ವಿಜಯ್ ಮಲ್ಯ ಆಸ್ತಿಯ ಅಂದಾಜನ್ನು ಲೆಕ್ಕಹಾಕೋಣ ಬನ್ನಿ..

ಷೇರುಗಳ ವಿವರ

ಯುನೈಟೆಡ್ ಬ್ರೇವರಿಸ್- 21.3 ಮಿಲಿಯನ್ (ಶೇ.8.08 ರಷ್ಟು), ಇದರ ಮೊತ್ತ ಸುಮಾರು ₹1725 ಕೋಟಿ

ಯುನೈಟೆಡ್ ಬ್ರೇವರಿಸ್ (ಹೊಲ್ಡಿಂಗ್ಸ್) ಲಿ.- 5.28 ಮಿಲಿಯನ್ (ಶೇ.7.91 ರಷ್ಟು), ಇದರ ಮೊತ್ತ ₹ 11 ಕೋಟಿ, ಯುನೈಟೆಡ್ ಸ್ಪಿರಿಟ್ಸ್- 12.5 ಸಾವಿರ, ಇದರ ಮೊತ್ತ ₹3 ಕೋಟಿ.

ರಿಯಲ್ ಎಸ್ಟೇಟ್ ಗಳು

 • 2009ರಲ್ಲಿ ಯುರೋಪ್ ನ ಮಾಂಟೆ ಕಾರ್ಲೊ ದ್ವೀಪವನ್ನು ₹750 ಕೋಟಿಗೆ ಖರೀದಿ.
 • 2008ರಲ್ಲಿ ಲಕ್ಷದ್ವೀಪದ ತಿನ್ನಕರಾ ಪ್ರದೇಶ ಖರೀದಿ
 • ಹಿಮಾಲಯ ಪ್ರವಾಸಿ ತಾಣ ರಿಶಿಕೇಶ ಮತ್ತು ಕೇದಾರನಾಥ ನಡುವೆ 1000 ಎಕರೆ ಖರೀದಿ. ಇದು ಮೂರು ಪರ್ವತ ಪ್ರದೇಶವನ್ನು ಹೊಂದಿದೆ.
 • ದಕ್ಷಿಣ ಆಫ್ರಿಕಾದಲ್ಲಿ ಮಬುಲಾ ಗೇಮ್ ರಿಸರ್ವ್ ಪ್ರದೇಶ ಖರೀದಿ. ಇದರ ವಿಸ್ತೀರ್ಣ 12 ಸಾವಿರ ಹೆಕ್ಟೇರ್ (ಸುಮಾರು 30ಸಾವಿರ ಎಕರೆ). ಇಲ್ಲಿ ವನ್ಯ ಜೀವಿಗಳು, ಪಕ್ಷಿ, ವಿವಿಧ ಬಗೆಯ ವನ್ಯ ಸಂಪತ್ತು ಒಳಗೊಂಡಿದೆ.
 • ಬೆಂಗಳೂರಿನಲ್ಲಿ ಸುಮಾರು 13 ಎಕರೆ ಪ್ರದೇಶದಲ್ಲಿ ಐಶಾರಾಮಿ ಯುಬಿ ಸಿಟಿ.
 • ಸ್ಕಾಟ್ಲೆಂಡ್ ನಲ್ಲಿ ಅರಮನೆ
 • ಲಂಡನ್ ಮತ್ತು ಮಾಂಟೆ ಕಾರ್ಲೊನಲ್ಲಿ ಮನೆಗಳು
 • ನ್ಯೂಯಾರ್ಕ್ ನ ಟ್ರಂಪ್ ಟವರ್ ಮತ್ತು ಮನ್ಹಟ್ಟನ್ ನಲ್ಲಿ ಆಸ್ತಿಗಳು.
 • ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಮನೆಗಳು, ಊಟಿಯಲ್ಲಿ ಬಂಗಲೆಗಳು.
 • ಮುಂಬೈನಲ್ಲಿ ನೀಲಾದ್ರಿ, ಗೋವಾದಲ್ಲಿ ಕಿಂಗ್ ಫಿಶರ್ ವಿಲ್ಲಾಗಳು
 • ಇಂಡಿಯನ್ ಎಂಪ್ರೆಸ್, ಇಂಡಿಯನ್ ಪ್ರಿನ್ಸೆಸ್ ಮತ್ತು ಕಲಿಜ್ಮಾ ಎಂಬ ಮೂರು ಐಶಾರಾಮಿ ಬೋಟ್ ಗಳು.
 • ಫೋರ್ಸ್ ಇಂಡಿಯಾ ಎಫ್1 ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಕ್ರಿಕೆಟ್ ತಂಡ, ಕೆರಿಬಿಯನ್ ಪ್ರಿಮಿಯರ್ ಲೀಗ್ ತಂಡಗಳ ಮಾಲೀಕತ್ವ.

ಇವಿಷ್ಟೂ ಬರೀ ಹೈಲೆಟ್ಸ್ ಅಷ್ಟೇ.. ಕರ್ನಾಟಕದಲ್ಲಿ ವಿವಿದೆಡೆ ಆತನ ಆಸ್ಥಿ, ಫಾರ್ಮ್ ಹೌಸ್, ಒಡವೆ ಹೀಗೆ ಎಲ್ಲವನ್ನೂ ಲೆಕ್ಕ ಹಾಕುತ್ತಾ ಸಾಗಿದರೆ, ಪಟ್ಟಿ ಹನುಮಂತ ಬಾಲದಂತೆ ಬೆಳೆಯುತ್ತಾ ಸಾಗುತ್ತದೆ.

ಮಲ್ಯ ಸಾಮ್ರಾಜ್ಯವನ್ನು ಓದಿನಲ್ಲೇ ಒಮ್ಮೆ ಗಸ್ತು ತಿರುಗಿ ನೀವು ಸುಸ್ತ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಷ್ಟೆಲ್ಲಾ ಇದ್ದರೂ ಮಲ್ಯ, ಸಾರ್ವಜನಿಕರ ತೆರಿಗೆ ಹಣವನ್ನು ಸಾಲವಾಗಿ ಪಡೆದು ಬ್ಯಾಂಕ್ ಗಳಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾರೆ.

ಇದನ್ನೂ ಓದಿ- ಸಾಲ ತೀರ್ಸಲ್ಲ, ಮೋಜು ಬಿಡಲ್ಲ- ಇದು ಮಲ್ಯ ಬ್ರಾಂಡು, ನಮ್ ತೆರಿಗೆ ದುಡ್ಡಲ್ಲಿ ಶೋಕಿ ಫುಲ್ ಗ್ರಾಂಡು!

ಮೇಲಿನ ವಿವರಗಳಲ್ಲಿ ಹೆಚ್ಚಿನವು 2012ರ ನಂತರ ಅಪ್ಡೇಟ್ ಆಗಿಲ್ಲ. ಆದರೆ, ಈಗ ಇವುಗಳಲ್ಲಿ ಹಲವು ಕೈಬಿಟ್ಟಿರಬಹುದಾದರೂ ಅವುಗಳಿಂದ ಬಂದ ಹಣದಿಂದ ಯಾವ ಸಾಲ ತೀರಿಸಿದರು, ಇಲ್ಲದಿದ್ದರೆ ವೈಯಕ್ತಿಕಕ್ಕೆ ಹೇಗೆ ಬಳಸಿಕೊಂಡರು ಎಂಬ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.

ಈಗ ಹೇಳಿ ಮಲ್ಯರನ್ನು ಉದ್ದೇಶಪೂರ್ವ ಸುಸ್ತಿದಾರ ಎಂದು ಪರಿಗಣಿಸಿ ಬಂಧಿಸಬೇಕು ಎಂಬ ಎಸ್ ಬಿಐ ಕೋರಿಕೆ ಸರಿಯಲ್ಲವೇ?

1 COMMENT

 1. ಕೋರಿಕೆಯೇನೋ ಸರಿ, ಆದರೆ ಇಷ್ಟು ದಿನ SBI ಏನು ಮಾಡ್ತಾ ಇತ್ತು ಅನ್ನೋದೇ ಯಕ್ಷ ಪ್ರಶ್ನೆ.. CBI ಎಷ್ಟು ಕೇಳಿದರೂ ಕಂಪ್ಲೇಂಟ್ ದಾಖಲಿಸದ ಈ ಬ್ಯಾಂಕುಗಳಿಗೆ ಮಲ್ಯರನ್ನ ಕಂಡರೆ ಈ ಪಾಟಿ ಪ್ರೀತಿ ಯಾಕೋ ?

Leave a Reply