ಸುದ್ದಿಸಂತೆ: ಸಂಗ್ಮಾ ನಿಧನ, ವಿಧಾನಸಭೆ ಚುನಾವಣೆಗಳು… ನೀವು ತಿಳಿಯಬೇಕಾದ ಚುಟುಕು ಸುದ್ದಿಗಳು

ಲೋಕಸಭಾ ಮಾಜಿ ಸ್ಪೀಕರ್ ಪಿ ಎ ಸಂಗ್ಮಾ ನಿಧನ

ಲೋಕಸಭೆಯ ಮಾಜಿ ಸ್ಪೀಕರ್, ಮೇಘಾಲದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಸಂಸ್ಥಾಪಕ, ಪಿ. ಎ ಸಂಗ್ಮಾ(68) ಅವರು ತೀವ್ರ ಹೃದಯಾಘಾತದಿಂದ ಶುಕ್ರವಾರ ಬೆಳಿಗ್ಗೆ ನಿಧನರಾದರು.

ಮೇಘಾಲಯದ ವೆಸ್ಟ್ ಗಾರೋ ಹಿಲ್ಸ್ ಜಿಲ್ಲೆಯ ಚಪಹತಿ ಗ್ರಾಮದಲ್ಲಿ 1 ನೇ ಸೆಪ್ಟಂಬರ್ 1947 ರಲ್ಲಿ ಸಣ್ಣ ಬುಡಕಟ್ಟು ಸಮುದಾಯದಲ್ಲಿ ಜನಿಸಿದ ಇವರು ಹೋರಾಟಗಳ ಮೂಲಕವೇ ರಾಜಕೀಯವಾಗಿ ಬೆಳೆದರು.

1996 ರಿಂದ 1998ರ ಅವಧಿಯಲ್ಲಿ ಲೋಕಸಭಾ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ್ದರು. 1988 ರಿಂದ 1990 ರವರೆಗೆ ಮೇಘಾಲಯದ ಮುಖ್ಯಮಂತ್ರಿಯಾಗಿ ಮತ್ತು 1990 ರಿಂದ 1991ರ ವರೆಗೆ ವಿರೋಧ ಪಕ್ಷದ ನಾಯಕರಾಗಿದ್ದರು. 2012ರಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರಣಬ್ ಮುಖರ್ಜಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಕಳೆದ ಬಾರಿ ವೆಸ್ಟ್ ಗಾರೋ ಹಿಲ್ಸ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಇವರು ಒಟ್ಟು ಒಂಬತ್ತು ಸಲ ಲೋಕಸಭಾ ಸದಸ್ಯರಾಗಿದ್ದರು.

ಸಂಗ್ಮಾ ಅವರ ನಿಧನಕ್ಕೆ ಲೋಕಸಭೆಯಲ್ಲಿ ಸಂತಾಪ ಸೂಚಿಸಿ ಉಭಯ ಸದನಗಳ ಕಲಾಪವನ್ನು ನಾಳೆಯವರೆಗೂ ಮುಂದೂಡಲಾಗಿದೆ.

ಪಂಚರಾಜ್ಯಗಳ ಚುನಾವಣೆಗೆ ದಿನಾಂಕ ಫಿಕ್ಸ್

ಮುಂಬರುವ 5 ರಾಜ್ಯಗಳ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ಘೋಷಿಸಿದೆ. ಏಪ್ರಿಲ್ 4 ರಿಂದ ಮೇ 16 ರ ವರೆಗೆ 42 ದಿನಗಳ ಧೀರ್ಘಾವಧಿ ಚುನಾವಣೆ ನಡೆಯಲಿದ್ದು ಎಲ್ಲಾ ರಾಜ್ಯಗಳ ಫಲಿತಾಂಶ ಮೇ 19 ರಂದು ಪ್ರಕಟವಾಗಲಿದೆ.

ಪಶ್ಚಿಮ ಬಂಗಾಳದ 294 ಸ್ಥಾನಗಳಿಗೆ ಏಪ್ರಿಲ್ 4 ರಿಂದ ಮೇ 5ರ ವರೆಗೆ 6 ಹಂತಗಳಲ್ಲಿ, ತಮಿಳುನಾಡಿನ 234, ಕೇರಳದ 140, ಕೇಂದ್ರಾಡಳಿತ ಪ್ರದೇಶ ಪುದುಚರಿಯ 30 ಸ್ಥಾನಗಳಿಗೆ ಮೇ 16 ರಂದು ಒಂದೇ ಹಂತದಲ್ಲಿ ಮತ್ತು ಅಸ್ಸಾಂನ 126 ಸ್ಥಾನಗಳಿಗೆ ಏಪ್ರಿಲ್ 4 ಮತ್ತು 11 ರಂದು 2 ಹಂತದಲ್ಲಿ ಚುನಾವಣೆ ನಡೆಯಲಿದೆ. ಒಟ್ಟು 824 ಸ್ಥಾನಗಳಿಗೆ 17 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

ಚಿನ್ನ ಗೆದ್ದ ಜೀತು

ಭಾರತದ ಪ್ರಮುಖ ಶೂಟರ್ ಆಗಿರುವ ಜಿತು ರೈ ಶುಕ್ರವಾರ ಐಎಸ್ಎಸ್ಎಫ್ ವಿಶ್ವಕಪ್ ಶೂಟಿಂಗ್ ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. 50 ಮೀ. ಪಿಸ್ತೂಲ್ ವಿಭಾಗದಲ್ಲಿ ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಪೆಂಗ್ ವೀ ಸೇರಿದಂತೆ ಪ್ರಬಲ ಶೂಟರ್ ಗಳನ್ನು ಹಿಂದಿಕ್ಕಿದ ಜೀತು, 191.3 ಅಂಕಗಳನ್ನು ಕಲೆ ಹಾಕಿದರು. ನಂತರದ ಸ್ಥಾನದಲ್ಲಿ ಪೆಂಗ್ (186.5), ವಾಂಗ್ (165.8) ಕಾಣಿಸಿಕೊಂಡರು. ಇನ್ನು ಕರ್ನಾಟಕದ ಪ್ರಕಾಶ್ ನಂಜಪ್ಪ ಅರ್ಹತಾ ಸುತ್ತಿನಲ್ಲಿ 549 ಅಂಕಗಳನ್ನು ಪಡೆದು 17ನೇ ಸ್ಥಾನ ಪಡೆದಿದ್ದಾರೆ. ಶನಿವಾರ ಪುರುಷರ 50 ಮೀ. ಪ್ರೋನ್ ಮತ್ತು 10 ಮೀ. ಏರ್ ಪಿಸ್ತೂಲ್ ವಿಭಾಗದ ಫೈನಲ್ ಸುತ್ತಿನಲ್ಲಿ ಜೀತು ಭಾಗವಹಿಸಲಿದ್ದು, ಪದಕದ ಭೇಟೆ ಮುಂದುವರಿಸುವ ನಿರೀಕ್ಷೆ ಇದೆ. ಇನ್ನು ರೈಫಲ್ ವಿಭಾಗದಲ್ಲಿ ಗಗನ್ ನಾರಂಗ್ ಮತ್ತು ಚೈನ್ ಸಿಂಗ್ ಭಾರತದ ಹೋರಾಟ ನಡೆಸಲಿದ್ದಾರೆ.

 

ಮನೋಜ್ ಕುಮಾರ್ ಗೆ ಫಾಲ್ಕೆ ಪ್ರಶಸ್ತಿ

ಬಾಲಿವುಡ್ ನ ಹಿರಿಯ ನಟ ಮನೋಜ್ ಕುಮಾರ್ ಅವರಿಗೆ 2015ನೇ ಸಾಲಿನ ಪ್ರತಿಷ್ಠಿತ ದಾದಾ ಸಾಹೆಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ. ದೇಶಭಕ್ತಿ ಚಲನಚಿತ್ರಗಳಾದ ಪೌರಭ್ ಅರ್ ಪಶ್ಚಿಮ್, ಉಪಕಾರ್ ಮತ್ತು ಕ್ರಾಂತಿ ಚಿತ್ರಗಳು ಚಿತ್ರರಂಗಕ್ಕೆ ನೀಡಿರುವ ಕೊಡುಗೆಗೆ ಪ್ರಶಸ್ತಿ ಸಿಕ್ಕಿದೆ. 1992ರಲ್ಲಿ ಉಪಕಾರ್ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಮತ್ತು ಪದ್ಮಶ್ರೀ ಗೌರವ ದೊರೆತಿತ್ತು.

ವಿಶ್ವಕಪ್ ನಂತರ ಟೀಂ ಇಂಡಿಯಾಗೆ ಹೊಸ ಕೋಚ್?

ಮುಂಬರುವ ಟಿ20 ವಿಶ್ವಕಪ್ ನಂತರ ಟೀಂ ಇಂಡಿಯಾಗೆ ನೂತನ ಕೋಚ್ ಆಯ್ಕೆ ಮಾಡಲು ಬಿಸಿಸಿಐ ಮನಸ್ಸು ಮಾಡಿದೆ. ಕಳೆದ ವರ್ಷ ಏಕದಿನ ವಿಶ್ವಕಪ್ ನಂತರ ಡಂಕನ್ ಫ್ಲೆಚರ್ ಕೋಚ್ ಸ್ಥಾನದಿಂದ ತೆರವಾದರು. ಆಗಿನಿಂದ ಟೀಂ ಇಂಡಿಯಾ ನಿರ್ದೇಶಕ ರವಿಶಾಸ್ತ್ರಿ ಮತ್ತು ಸಹಾಯಕ ಕೋಚ್ ಗಳಾದಿ ಸಂಜಯ್ ಬಂಗಾರ್, ಭರತ್ ಅರುಣ್ ಮತ್ತು ಆರ್.ಶ್ರೀಧರ್ ಟೀಂ ಇಂಡಿಯಾ ಮಾರ್ಗದರ್ಶಕರಾಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ಟಿ20 ವಿಶ್ವಕಪ್ ನಂತರ ಏಪ್ರಿಲ್ ಮತ್ತು ಮೇನಲ್ಲಿ ಐಪಿಎಲ್ ನಡೆಯಲಿದೆ. ಈ ಎರಡು ತಿಂಗಳ ಕಾಲಾವಧಿಯಲ್ಲಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡ ಸಲಹಾ ಸಮಿತಿ ನೂತನ ಕೋಚ್ ಆಯ್ಕೆ ಮಾಡಲಿದೆ ಎಂದಿದ್ದಾರೆ.

Leave a Reply