ಅಪ್ಪ ಮಗನ ಜೋಡಿ ಸೃಷ್ಟಿಸಿದೆ ನೋಡಿ ಜಗತ್ತಿನ ಮೊದಲ ಬಯೋಸೂಪರ್ ಕಂಪ್ಯೂಟರ್

ANANTHA PHOTOಟಿ.ಆರ್. ಅನಂತರಾಮು
ಸೂಪರ್ ಅನ್ನೋ ಪದ ಎಷ್ಟು ಸವಕಲಾಗಿಬಿಟ್ಟಿದೆ. ಸೂಪರ್ ಪವರ್, ಸೂಪರ್ ಸ್ಟಾರ್, ಸೂಪರ್ ಮಾರ್ಕೆಟ್, ಸೂಪರ್ ಕಂಡೆಕ್ಟಿವಿಟಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ. ಇನ್ನು ಈ ಲಿಸ್ಟ್‍ಗೆ ನಿಮಗೆ ನೆನಪು ಬಂದದ್ದನ್ನೆಲ್ಲ ಸೇರಿಸಬಹುದು. ಸದ್ಯದ ಕುತೂಹಲ ಇವ್ಯಾವೂ ಅಲ್ಲ. ಸುಮಾರು ಹತ್ತು ವರ್ಷದಿಂದ ಕೆನಡದ ಮಾಂಟ್ರಿಯಲ್‍ನಲ್ಲಿರುವ ಮ್ಯಾಕ್‍ಗಿಲ್ ಯೂನಿವರ್ಸಿಟಿಯ ಬಯೋ ಎಂಜಿನಿಯರಿಂಗ್ ವಿಭಾಗದ ಕಂಪ್ಯೂಟರ್ ಎಕ್ಸ್‍ಪರ್ಟ್ ಡ್ಯಾನ್ ನಿಕೋಲಾಸ್ ಮತ್ತು ಅವನ ಮಗ ನಿಕೋಲಾಸ್ ಜ್ಯೂನಿಯರ್‍ಗೆ ಕೂತಲ್ಲಿ ನಿಂತಲ್ಲಿ ಅದೇ ಧ್ಯಾನವಾಗಿತ್ತಂತೆ. ಏನಾದರೂ ಮಾಡಿ ಬಯೋಸೂಪರ್ ಕಂಪ್ಯೂಟರ್‍ನ ಸಾಕ್ಷಾತ್ಕಾರಿಸಿಕೊಳ್ಳಬೇಕು ಅಂತ. ಇಬ್ಬರೂ ಸೇರಿ ಒಂದಷ್ಟು ಸ್ಕೆಚ್ ಹಾಕಿಕೊಂಡರು. ಇನ್ನಷ್ಟು ಎಕ್ಸ್‍ಪರ್ಟ್‍ಗಳನ್ನು ಸೇರಿಸಿಕೊಂಡರೆ ಕೆಲಸ ಬೇಗ ಮಾಡಬಹುದು ಅನ್ನಿಸಿತು. ಇವರ ಕನಸನ್ನ ಬಿಚ್ಚಿಡುತ್ತಲೇ ಕೈಜೋಡಿಸಲು ಅಮೆರಿಕ, ಜರ್ಮನಿ, ಸ್ವೀಡನ್, ನಾರ್ವೆ, ಕೆನಡದ ಕಂಪ್ಯೂಟರ್ ಕನಸಿಗರು ಮುಂದಾದರು. ಏಳು ವರ್ಷ ತಪಸ್ಸು. ಅಂತೂ ಜಗತ್ತೇ ಅಚ್ಚರಿಗೊಳ್ಳುವ ಮೊದಲ ಬಯೋಸೂಪರ್ ಕಂಪ್ಯೂಟರ್‍ನ ಸಾಕ್ಷಾತ್ಕಾರ ಆಗಿದೆ ಎಂದು ಅನೌನ್ಸ್ ಮಾಡಿದ್ದಾರೆ.
ಇದರ ವಿಶೇಷ ಏನಪ್ಪಾ ಅಂದ್ರೆ ಎಲೆಕ್ಟ್ರಾನಿಕ್ ಸೂಪರ್ ಕಂಪ್ಯೂಟರ್ ತರಾ ಮೈಕ್ರೋ ಚಿಪ್ ಮೇಲೆ ಸಿಂಥೆಟಿಕ್ ಸೆಮಿಕಂಡೆಕ್ಟರ್ ಸಕ್ರ್ಯೂಟ್ ಬಳಸೋದಿಲ್ಲ. ಆ ಜಾಗ್‍ದಲ್ಲಿ ಪುಟಾಣಿ ಪ್ರೊಟೀನ್ ಎಳೆಗಳನ್ನು ಬಳಸಿ, ಅದಕ್ಕೆ ಎ.ಟಿ.ಪಿ. ಯಿಂದ ಪವರ್ ಕೊಡೋದು. ಏನಿದು ಎ.ಟಿ.ಪಿ.? ಬಯಾಲಜಿ ತಿಳಿದುಕೊಂಡಿರೋÀರಿಗೆ ಚೆನ್ನಾಗಿ ಗೊತ್ತು. ಜನಸಾಮಾನ್ಯರಿಗೆ ಇದು ಗೊತ್ತಾಗೋದಕ್ಕೆ ಸಾಧ್ಯ ಇಲ್ಲ. ಶ್ರೀಕೃಷ್ಣ ಗೋವರ್ಧನ ಗಿರಿಯನ್ನ ಎತ್ತೋದಕ್ಕೆ ಎಲ್ಲಿಂದ ಬಂದು ತಾಕತ್ತು? ಆಂಜನೇಯ ಸಂಜೀವಿನಿ ಪರ್ವತ ಹೊತ್ತು ತರೋದಕ್ಕೆ ಎಲ್ಲಿತ್ತು ಎನರ್ಜಿ? ಅರಗಿನ ಅರಮನೆ ಸುಡುತ್ತಿರುವಾಗ ಭೀಮ ತನ್ನ ಸಹೋದರರನ್ನ ಏಕ್‍ದಂ ಹೆಗಲ ಮೇಲೆ ಕೂಡಿಸಿಕೊಂಡು ನಡೆದೇಬಿಟ್ಟನಲ್ಲ, ಎಲ್ಲಿತ್ತು ಈ ಶಕ್ತಿ? ಈಗಿನ ಶಾಲಾಮಕ್ಕಳನ್ನು ಕೇಳಿದ್ದರೆ, `ನಮ್ಮ ಬಯಾಲಜಿ ಪಾಠದಲ್ಲೇ ಇದೆ ಸಾರ್, ನಮ್ಮ ಎಲ್ಲ ಶಕ್ತಿಯನ್ನ ಕೊಡೋದು ಎ.ಟಿ.ಪಿ.’ ಅಂತಾರೆ. ಪುರಾಣದ ಮಾತು ಬಿಡಿ, ನಾವೂ ನೀವೂ ಒಂದು ಪೆನ್ನನ್ನೋ, ಪಿನ್ನನ್ನೋ ಆ ಕಡೆಯಿಂದ ಈ ಕಡೆಗೆ ಎತ್ತಿಡೋದಕ್ಕೂ ಶಕ್ತಿ ಬೇಕು ತಾನೆ? ಅದೆಲ್ಲ ಬರುವುದು ನಮ್ಮ ಜೀವಕೋಶದ ಒಳಗೇ ಇರುವ ಅಡಿನೋಸಿನ್ ಟ್ರೈ ಫಾಸ್ಪೇಟ್ ಅನ್ನೋ ಅಣುಗಳಿಂದ. ಇವು ಬ್ಯಾಟರಿ ಇದ್ದಹಾಗೆ. ಶಕ್ತೀನ ಸ್ಟೋರ್ ಮಾಡಿಕೊಂಡಿರುತ್ವೆ, ಹಾಗೇನೇ ಪಕ್ಕದ ಕೋಶಕ್ಕೂ ಶಕ್ತಿಯನ್ನ ವರ್ಗಾಯಿಸುತ್ವೆ. ಅದಕ್ಕೇ ತಂತ್ರಜ್ಞರು ಹೇಳುತ್ತಾರೆ `ಮಾಲಿಕ್ಯುಲಾರ್ ಯುನಿಟ್ ರೂಪದ ಕರೆನ್ಸಿ’ಯಂತೆ ಅದು. ನಮ್ಮ ಶರೀರದಲ್ಲಿ ಎಷ್ಟು ಜೀವಕೋಶ ಇದೆ ಅಂತ ಕೇಳಿದ್ರೆ ಸರಿಯಗಿ ಉತ್ತರ ಸಿಕ್ಕಲ್ಲ. 10 ಟ್ರಿಲಿಯನ್! 37ಟ್ರಲಿಯನ್!(ಒಂದು ಟ್ರಿಲಿಯನ್ ಅಂದ್ರೆ 1ರ ಮುಂದೆ 12 ಸೊನ್ನೆ). ಜೀವಕೋಶಗಳು ಇವೆಯಂತೆ. ಪ್ರತಿ ಜೀವಕೋಶ ಚಟುವಟಿಕೆಯಾಗಿರಬೇಕಾದ್ರೆ ಒಂದು ಶತಕೋಟಿ ಎ.ಟಿ.ಪಿ. ಅಣು ಬೇಕಂತೆ. ಈ ಸೊನ್ನೆಗಳ ಲೆಕ್ಕಾಚಾರದಲ್ಲಿ ನಾವು ಕಳೆದೇಹೋಗ್ತೀವಿ.
ಡ್ಯಾನ್ ನಿಕೋಲಾಸ್, ಅವನ ಮಗ ಮತ್ತು ಉಳಿದ ತಜ್ಞರು ಸೃಷ್ಟಿಸಿರೋ ಸಕ್ರ್ಯೂಟ್ ಹೇಗಿದೆಯಪ್ಪಾ ಅಂದ್ರೆ ಯಾವುದಾದರೂ ನಗರದಲ್ಲಿ ನೂರಾರು ರಸ್ತೆಯಲ್ಲಿ ಏಕಕಾಲಕ್ಕೆ ವಾಹನಗಳು ಓಡೋದಕ್ಕೆ ರಸ್ತೆಗಳಿವೆಯಲ್ಲಾ ಹಾಗೆ. ಇದರ ಒಟ್ಟು ವಿಸ್ತೀರ್ಣ ಒಂದೂವರೆ ಚದರ ಸೆಂಟಿಮೀಟರ್ ಅಷ್ಟೇ, ಸುಮಾರು ಸ್ಟಾಂಪ್ ಗಾತ್ರ ಅಂತ ಇಟ್ಕೊಳ್ಳಿ. ಪ್ರತಿ ರಸ್ತೆಯಲ್ಲೂ ಬೇರೆ ಬೇರೆ ಮೋಟಾರಿನ ವಾಹನಗಳು ಸಾಲುಗಟ್ಟಿ ಹೋಗುತ್ವಲ್ಲಾ ಹಾಗೆ. ಸೂಪರ್ ಕಂಪ್ಯೂಟರ್ ಅಂದ್ರೆ ಒಂದು ದೊಡ್ಡ ರೂಂ ತುಂಬುವ ದಢೂತಿಯದು ಅಂತ ನಿಮಗೆ ಗೊತ್ತಲ್ಲ. ಸದ್ಯ ಚೀನದ ಗುಯಾಂಗ್‍ಹೋ ನ್ಯಾಷನಲ್ ಸೆಂಟರ್ ಆಫ್ ಕಂಪ್ಯೂಟರ್‍ನಲ್ಲಿ ಸ್ಥಾಪಿಸಿರುವ ಟಿಯಾನ್ಹೇ ಸೂಪರ್ ಕಂಪ್ಯೂಟರ್‍ಗೆ ಜಗತ್ತಿನಲ್ಲಿ ಮೊದಲ ಸ್ಥಾನ ಇದೆ. ಅದರ ವೇಗ ಸೆಕೆಂಡಿಗೆ 33.86 ಪೆಟಾ ಫ್ಲಾಪ್ (ಪೆಟಾ ಎಂದರೆ ಒಂದರ ಮುಂದೆ 15 ಸೊನ್ನೆ). ಈಗ ಸೃಷ್ಟಿಸಿರೋ ಬಯೋಸೂಪರ್ ಕಂಪ್ಯೂಟರ್ ಗಾತ್ರ ಎಷ್ಟು ಗೊತ್ತೆ? ಒಂದು ಸಾಧಾರಣ ಪುಸ್ತಕದಷ್ಟು. ಇಂಥ ಸೃಷ್ಟಿಯಿಂದ ಏನು ಪ್ರಯೋಜನ? ಮೊದಲನೆಯದಾಗಿ ಇಲ್ಲಿ ಬಳಸುವ ಅಣುಗಳು ಸುಲಭ ಲಭ್ಯ. ಭಾರಿ ಚೀಪ್ ಕೂಡ. ಎರಡನೆಯದು ಎಲೆಕ್ಟ್ರಾನಿಕ್ ಸೂಪರ್ ಕಂಪ್ಯೂಟರ್‍ಗಳು ಕೆಲಸ ಮಾಡ್ತಾ ಮಾಡ್ತಾ ಬಿಸಿಯಾಗುತ್ವೆ. ಆ ತಾಪತ್ರಯ ಇದರಲ್ಲಿಲ್ಲ. ಅಲ್ದೆ ಬಯೋ ಕಂಪ್ಯೂಟರ್‍ಗೆ ಜಾಸ್ತಿ ಪವರ್ ಬೇಕಾಗಿಲ್ಲ. ಸಾಲ್ದೆ ಇಷ್ಟೆಲ್ಲಾ ಅನುಕೂಲಗಳು.
ಹಾಗಾದ್ರೆ ಈ ಬಯೋಸೂಪರ್ ಕಂಪ್ಯೂಟರ್‍ಗಳು ಇಷ್ಟರಲ್ಲೇ ಮಾರ್ಕೆಟ್ಟಿಗೆ ಲಗ್ಗೆ ಹಾಕಿ, ಎಲೆಕ್ಟ್ರಾನಿಕ್ ಸೂಪರ್ ಕಂಪ್ಯೂಟರ್‍ಗಳನ್ನ ಗುಜರಿಗೆ ಸೇರಿಸುತ್ವಾ? ಅಂಥದ್ದೇನಿಲ್ಲ. ಇನ್ನೂ ಸ್ವಲ್ಪ ಟೈಂ ಬೇಕು ಇದರ ಪೂರ್ಣ ಸ್ವರೂಪದ ಸಾಕ್ಷಾತ್ಕಾರಕ್ಕೆ. ಜಗತ್ತಿನ ತಂತ್ರಜ್ಞಾನದ ಪಂಡಿತರೆಲ್ಲ ಈಗ ನಾವು ನ್ಯಾನೋ ಯುಗದಲ್ಲಿದ್ದೇವೆ ಅಂಥ ಕೋರಸ್‍ನಲ್ಲಿ ಹೇಳ್ತಾ ಇದ್ದಾರೆ. ವಿಜ್ಞಾನ, ತಂತ್ರಜ್ಞಾನದಲ್ಲಿ ದೊಡ್ಡ ಬ್ರೇಕ್ ಥ್ರೂ ಮಾಡೋದಕ್ಕೆ ಶತಮಾನಗಳು ಬೇಕಾಗಿಲ್ಲ. ಒಂದು ವರ್ಷ, ಎರಡು ವರ್ಷದಲ್ಲಿ ಇದು ಸಾಧ್ಯ ಆಗ್ತಾ ಇದೆ. ನಾವೇ ನೋಡ್ತಾ ಇದ್ದೀವಲ್ಲ ಟಚ್ ಸ್ಕ್ರೀನ್ ಮೊಬೈಲ್‍ಗಳು ಬಂದು ಐದು ವರ್ಷ ಕೂಡ ಆಗಿಲ್ಲ. ಆದ್ರೆ ಅದು ಮಾಡಿರೋ ಕ್ರಾಂತಿ?

(ಲೇಖಕರು ಭೂವಿಜ್ಞಾನಿ, ಕನ್ನಡದ ಜನಪ್ರಿಯ ವಿಜ್ಞಾನ ಬರಹಗಾರರು. ಐವತ್ತಕ್ಕೂ ಹೆಚ್ಚು ಪುಸ್ತಕಗಳ ಕೃತಿಕಾರರು)

2 COMMENTS

  1. ಕರ್ನಾಟಕ ಸಂಗಾತಿ ಹೊತ್ತಗೆಯಲ್ಲಿರುವ ನೀವು ಬರೆದ ಲೇಕನವೂ ಚೆನ್ನಾಗಿದೆ. ಈ ಲೇಕನವೂ ಕೂಡ ತುಂಬ ಚೆನ್ನಾಗಿದೆ –ನನ್ನಿಗಳು ನಿಮಗೆ

Leave a Reply