ಕನ್ಹಯ್ಯ ಕುಮಾರ್ ಎಂಬ ಹೊಸ ಹೀರೋ, ‘ಬಡತನದಿಂದ ಆಜಾದಿ’ ಇದು ಗರೀಬಿ ಹಠಾವೋ ರಿಮೇಕ್, ಮೋದಿದ್ವೇಷದ ಆಕ್ಷನ್ ಪ್ಯಾಕ್, ಬಂದುಹೋಗುವ ಪಾತ್ರಕ್ಕಷ್ಟೇ ಅಫ್ಜಲ್ ಸೀಮಿತ!

ಚೈತನ್ಯ ಹೆಗಡೆ

ಜೆ ಎನ್ ಯು ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಜಾಮೀನಿನ ಮೇಲೆ ಬಿಡುಗಡೆ ಆಗುತ್ತಲೇ ತಡರಾತ್ರಿ ಕ್ಯಾಂಪಸ್ಸಿನಲ್ಲೊಂದು ಭಾಷಣ, ಶುಕ್ರವಾರದ ಪತ್ರಿಕಾಗೋಷ್ಠಿ ಮೂಲಕ ಪ್ರಸಿದ್ಧರಾಗಿದ್ದಾರೆ. ಅದಕ್ಕಾಗಿ ಅವರಿಗೊಂದು ಅಭಿನಂದನೆ ಹೇಳಲೇಬೇಕು.

ಬಿಜೆಪಿಯೇತರ ಪಕ್ಷಗಳು ಹಾಗೂ ಕೆಲವು ಆಂಗ್ಲ ಮಾಧ್ಯಮಗಳ ವಿಶ್ಲೇಷಣೆ ಪ್ರಕಾರ ಭಾರತಕ್ಕೆ, ಭಾರತದ ರಾಜಕಾರಣಕ್ಕೆ ಒಬ್ಬ ಹೊಸ ಹೀರೋ ಸಿಕ್ಕಿದ್ದಾನೆ. ಜೀವನದಲ್ಲಿ ತನ್ನದೇ ಗೊಂದಲಗಳ ಹೊರತಾಗಿ ಮತ್ತೇನನ್ನೂ ಕಡಿದು ಕಟ್ಟೆ ಹಾಕದಿದ್ದರೂ ತಿಂಗಳುಗಳ ಕಾಲ ಕನ್ನಡದ ಸುದ್ದಿವಾಹಿನಿಗಳಲ್ಲಿ ಸಾಮ್ರಾಜ್ಯಾಧಿಪತಿಯಾಗಿ ಮೆರೆದ ಹುಚ್ಚ ವೆಂಕಟ್ ಹೀರೋ ಸಾಲಿನಲ್ಲಿ ನಿಲ್ಲುವುದಾದರೆ, ಸದ್ಯಕ್ಕೆ ಡೈಲಾಗ್ ಡೆಲಿವರಿಗಳ ಮೂಲಕ ಟಿವಿ ಚಾನೆಲ್ ಗಳ ಪ್ರಸ್ತುತಿಯ ಸರಕಾಗಿರುವ ಕನ್ಹಯ್ಯ ಕುಮಾರ್ ಸಹ ದೆಹಲಿ ಮಟ್ಟಿಗೆ ಹೀರೋ.

ಕೆಲ ಮಾಧ್ಯಮಗಳು ಕೊಂಡಾಡುತ್ತಿರುವಷ್ಟರಮಟ್ಟಿಗಲ್ಲದಿದ್ದರೂ ಕನ್ಹಯ್ಯ ಭಾಷಣ ವೈಖರಿ ಒಂದಿಷ್ಟು ಅಂಕಗಳನ್ನು ಪಡೆಯುವಂಥದ್ದೇ. ತಿರುಚೋದಕ್ಕೆ ಸಂವಿಧಾನವೇನು ವಿಡಿಯೋ ಅಲ್ಲ, ಸರ್ಕಾರದ ವಿರುದ್ಧ ಮಾತನಾಡಿದರೆ ಅದು ಪೋಲೀಸರನ್ನು ಕಳುಹಿಸುತ್ತೆ ಹಾಗೂ ಅಧಿಕಾರದಲ್ಲಿರುವವರು ನಿಮ್ಮ ಡಸ್ಟ್ ಬಿನ್ ನಲ್ಲಿರೋ ಕಾಂಡೋಮ್ ಲೆಕ್ಕ ಹಾಕ್ತಾರೆ, ನಾನು ನೇತಾ ಅಲ್ಲ, ವಿದ್ಯಾರ್ಥಿ- ನಿಮ್ಮ ಪ್ರಶ್ನೆಗಳಿಂದ ದೂರ ಓಡಲ್ಲ…. ಹೀಗೆ ಚುರುಕು ಮಾತುಗಳೆಲ್ಲ ಕನ್ಹಯ್ಯ ಬಳಿ ಇದ್ದವು. ಯಾವ ಹಿಂಜರಿಕೆ ಇಲ್ಲದೇ, ಹಾಸ್ಯಲೇಪದೊಂದಿಗೆ ಮಾಧ್ಯಮವನ್ನು ಎದುರಿಸಿದ್ದು, ಮಾಧ್ಯಮವನ್ನೇ ಪ್ರಶ್ನಿಸಿದ್ದು ಇಂಥದ್ದೆಲ್ಲ ಶಹಭಾಸ್ ಗಿರಿಗೆ ಅರ್ಹ.

ಈ ಅಂಶಗಳಲ್ಲೇ ಕಳೆದುಹೋಗುವುದಕ್ಕೆ ಮುಂಚೆ ಎಲ್ಲರೂ ನೆನಪಿಸಿಕೊಳ್ಳಬೇಕಾದ ಪ್ರಶ್ನೆ ಎಂದರೆ ಇವೆಲ್ಲ ಶುರುವಾಗಿದ್ದು ಎಲ್ಲಿಂದ ಎಂಬುದನ್ನು. ಫೆ. 9ರಂದು ಜೆ ಎನ್ ಯು ಕ್ಯಾಂಪಸ್ಸಿನಲ್ಲಿ ಅಫ್ಜಲ್ ಗುರು ಆರಾಧನೆ ಇಟ್ಟುಕೊಂಡಿದ್ದೇ ವಿವಾದಕ್ಕೆ ಮೂಲ ಕಾರಣ. ಈಗ ಆ ಬಗ್ಗೆ ಕನ್ಹಯ್ಯ ಕುಮಾರ್ ಹೇಳುತ್ತಿರುವುದೇನು? ತಮ್ಮ ಐಕಾನ್ ರೋಹಿತ್ ವೇಮುಲನೇ ಹೊರತು ಅಫ್ಜಲ್ ಅಲ್ಲ. ಫೆ. 9ರಂದು ಜೆ ಎನ್ ಯು ಕ್ಯಾಂಪಸ್ಸಿನಲ್ಲಿ ನಡೆದಿದ್ದಕ್ಕೆ ತನ್ನದೂ ವಿರೋಧವಿದೆ. ಆದರೆ ಅದು ರಾಷ್ಟ್ರದ್ರೋಹವೋ ಅಲ್ಲವೋ ಅಂತ ನ್ಯಾಯಾಲಯ ನಿರ್ಧರಿಸಲಿ ಅಂತ.

ಅಲ್ಲಿಗೆ… ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಯಾವ ಘೋಷಣೆಯನ್ನಾದರೂ ಸಮರ್ಥಿಸಿಕೊಳ್ಳಬಹುದು ಅಂತ ಹಾರಾಡಿಕೊಂಡಿದ್ದವರು ನಿಧಾನಕ್ಕೆ ಖಂಡನೆಯ ಮಾತಾಡುತ್ತಿದ್ದಾರೆ. ಅಫ್ಜಲ್ ನನ್ನು ನ್ಯಾಯಾಂಗವೇ ಕೊಲೆ ಮಾಡಿತು ಅಂತ ಹಾರಾಡಿದವರು ಈಗ ನ್ಯಾಯಾಲಯವೇ ನಿರ್ಧರಿಸಲಿ ಅಂತ ವಿಧೇಯರಾಗಿದ್ದಾರೆ. ಜಮ್ಮು-ಕಾಶ್ಮೀರದ ಆಜಾದಿ ಚರ್ಚೆ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುತ್ತಿದ್ದವರು ಈಗ, ‘ಜಮ್ಮು-ಕಾಶ್ಮೀರ ಅಖಂಡ ಭಾರತದ ಅಂಗ. ಅಫ್ಜಲ್ ಸಹ ಈ ಅಖಂಡ ಭಾರತದ ಪ್ರಜೆಯೇ ಆಗಿದ್ದ’ ಅಂತ ಮಾತು ಹೊಸೆಯುತ್ತಿದ್ದಾರೆ.

ಸಂವಿಧಾನದ ನಿಜ ತಾಕತ್ತು ಇದೇ ನೋಡಿ! ಕಾನೂನಿನ ಕಟಕಟೆಯಲ್ಲಿ ನಿಲ್ಲುತ್ತಲೇ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇರೆ ಎಲ್ಲಿಗೆ ಕೊನೆಯಾಗುತ್ತದೆ ಅಂತ ಚೆನ್ನಾಗಿ ಮನವರಿಕೆಯಾಗುತ್ತದೆ. ಭಾರತದ ವಿರುದ್ಧ ಮಾತನಾಡುವುದು, ಘೋಷಣೆ ಕೂಗುವುದು, ಅಫ್ಜಲ್ ಆರಾಧನೆಗೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುವುದು ಮಾಡಿಕೊಂಡಿದ್ದವರಿಗೆ ಇನ್ನು ನರೇಂದ್ರ ಮೋದಿ, ಸ್ಮೃತಿ ಇರಾನಿ, ಎಬಿವಿಪಿ, ಬಿಜೆಪಿಗಳನ್ನಷ್ಟೇ ಬಯ್ದುಕೊಂಡಿರುವ ಆಯ್ಕೆ ಎದುರಾಗಿರುವುದರಲ್ಲೇ ಸಂವಿಧಾನ- ಈ ನೆಲದ ಕಾನೂನಿನ ಹೀರೋಗಿರಿಯಿದೆ. ಮುಂದಿನ ವರ್ಷದಿಂದ ಅಫ್ಜಲ್ ಆರಾಧನೆ ಆಯೋಜನೆಗೆ ಮೊದಲು, ‘ವಿಡಿಯೋದಂತೆ ತಿರುಚಲಾಗದ ಕಾನೂನು’ ಈ ಹೀರೋಗಳನ್ನೆಲ್ಲ ಕಾಡಲಿದೆ.

ಹೀಗಾಗಿ ಭಾರತ ವಿರೋಧಿಗಳನ್ನು ಕೇವಲ ಮೋದಿ ವಿರೋಧಿಗಳ ಮಟ್ಟಕ್ಕೆ ಇಳಿಸಿದ್ದರಲ್ಲೇ ಜೆ ಎನ್ ಯು ವಿದ್ಯಮಾನದ ಸಾರವಿದೆ. ಉಳಿದಂತೆ ಕನ್ಹಯ್ಯ ಕುಮಾರ್ ಮತ್ತವರ ಸಾಥಿಗಳ ಮಾತು- ಘೋಷಣೆಗಳೆಲ್ಲ ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲ್, ಲಾಲು, ಮುಲಾಯಂರ ಸ್ಪೇಸ್ ಮತ್ತು ಬೈಟ್ ಗಳಿಗೆ ಸ್ಪರ್ಧೆ ಒಡ್ಡುವಂಥವು. ಬ್ರಾಹ್ಮಣವಾದ- ಬಡತನಗಳನ್ನು ಕಿತ್ತೊಗೆಯುವುದಕ್ಕೆ ಅವತರಿಸಿರುವ ಕನ್ಹಯ್ಯ ಎಂಬ ಕಿಡಿ ದೊಡ್ಡದಾಗಿ ಬೆಳೆದು ಕ್ರಾಂತಿಯಾಗಬೇಕಾದರೆ ಸದ್ಯಕ್ಕಿರುವ ಮಾರ್ಗವೆಂದರೆ ಸೀತಾರಾಂ ಯೆಚೂರಿ ಎಂಬ ಬ್ರಾಹ್ಮಣ ತನ್ನ ಎಡ ಸಾಮ್ರಾಜ್ಯದ ನೇತಾರಿಕೆಯ ಸೀಟು ಖಾಲಿಮಾಡಿ ಈ ಹೊಸಹೀರೋವಿಗೆ ಕೊಡಬೇಕಷ್ಟೆ!

ಇಷ್ಟಕ್ಕೂ ಈ ಹೊಸಹೀರೋ ಹೇಳುತ್ತಿರುವುದು ಮೇಲೆ ಉಲ್ಲೇಖಿಸಿರುವ ಹಳೆಹೀರೋಗಳು ಆಡಿ ಆಡಿ ಸವಕಲಾಗಿರುವ ಸ್ಕ್ರಿಪ್ಟನ್ನೇ ಅಲ್ಲವೇ? ‘ನಾನು ಸ್ವಾತಂತ್ರ್ಯ ಬಯಸಿದ್ದು ಭಾರತದಿಂದ ಅಲ್ಲ, ಭಾರತದಲ್ಲಿ’ ಎಂಬುದು ಥೇಟು ಕಮ್ಯುನಿಸ್ಟ್ ದುರಿತ ಕವಿಗಳ ಕೆಟ್ಟ ಕವಿತಾ ಸರ್ಕಸ್ಸಿನಂತೆಯೇ ಇದೆ.

ಸರಿಯಪ್ಪಾ ಮಹಾನುಭಾವ… ಈ ಗರೀಬಿ ಹಠಾವೋ ಕಾರ್ಯಕ್ರಮಕ್ಕೂ ಅಫ್ಜಲ್ ಗುರುವಿನ ಆರಾಧನೆಗೂ ಏನು ಸಂಬಂಧ? ನೀನು ದ್ವೇಷಿಸುವ ಬಿಜೆಪಿಯೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳೂ ಬಡತನ ನಿರ್ಮೂಲನೆ ಆಗಬೇಕು, ರೈತರ ಬಾಳು ಬೆಳಗಬೇಕು ಅಂತ ಹೇಳ್ತಿರೋರೇ… ಬಡತನ ನಿರ್ಮೂಲನೆಗೆ ತಮ್ಮಿಂದ ಒಣ ಭಾಷಣವಲ್ಲದೇ ಏನಾದ್ರೂ ಬೇರೆ ಪಾಯಿಂಟ್ ಇದ್ರೆ ಹೇಳುವಂಥವರಾಗಿ. ಪಶ್ಚಿಮ ಬಂಗಾಳದಲ್ಲಿ ತಮ್ಮ ಕಾಮ್ರೆಡ್ ಗಳು ಕೃಷಿಯನ್ನೂ ಕೈಗಾರಿಕೆಯನ್ನೂ ಒಟ್ಟೊಟ್ಟಿಗೇ ಹದಗೆಡಿಸಿದ್ದಾರಲ್ಲ ಅದುವೇ ಬಡತನ ನಿರ್ಮೂಲನೆಯ ಮಹಾ ಮಾದರಿಯೋ ಅನ್ನೋದನ್ನಾದ್ರೂ ಹೇಳಬಾರದಾ? ತಾವು ಉಲ್ಲೇಖಿಸುತ್ತಿರುವ ರೈತರ ಆತ್ಮಹತ್ಯೆ, ಬಡತನ ಇವೆಲ್ಲ ನರೇಂದ್ರ ಮೋದಿ, ಸ್ಮೃತಿ ಇರಾನಿ ಅಧಿಕಾರಕ್ಕೆ ಬಂದ ನಂತರವಷ್ಟೇ ಪ್ರಾರಂಭವಾಗಿರೋದು ಎಂಬ ಅನ್ವೇಷಣೆಗಳೇನಾದ್ರೂ ಇದ್ರೆ ಅದನ್ನೂ ಒಗಾಯ್ಸಿ. ಓದಿ- ಕೇಳಿ ಪಾವನರಾಗ್ತೇವೆ. ‘ಹಿಂದು- ಮುಸ್ಲಿಮರು ಪರಸ್ಪರ ಹೊಡೆದಾಡುವುದರಲ್ಲಿ ಅರ್ಥವಿಲ್ಲ. ಇಬ್ಬರೂ ಒಂದಾಗಿ ಬಡತನದ ವಿರುದ್ಧ ಸಂಘರ್ಷಕ್ಕಿಳಿಯಬೇಕು’ ಅಂತ ನರೇಂದ್ರ ಮೋದಿ ಹೇಳಿದ್ದಾಗಿದೆ. ಕೇವಲ ಡೈಲಾಗು ಅಂತಲೇ ನೋಡೋದಾದ್ರೂ ತಮ್ಮ ‘ಭಾರತದಿಂದಲ್ಲ, ಭಾರತದಲ್ಲಿ’ ಎಂಬ ಡೈಲಾಗ್ ಗಿಂತ ಚೆನ್ನಾಗಿದೆ. ಅಂದಹಾಗೆ, ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಕ್ರಾಂತಿಕಾರಿ ಕೇಜ್ರಿವಾಲರು ಪುಕ್ಕಟೆ ವೈಫೈ ಕೊಟ್ಟು, ಪಾಲಿಕೆಯ ನೌಕರರಿಗೆಲ್ಲ ಅದ್ಭುತ ಸಂಬಳ ಕೊಟ್ಟು ಭಯಂಕರವಾಗಿ ಬಡತನ ನಿರ್ಮೂಲನೆ ಮಾಡಿದಂತಿದೆ. ಅಲ್ಲದೇ ಅವರು ಬಡತನ ನಿರ್ಮೂಲನೆಗೆ- ಅಸಮಾನತೆ ತೊಲಗಿಸುವುದಕ್ಕೆ ಅತ್ಯಂತ ಕ್ರಾಂತಿಕಾರಿ ಮಾರ್ಗವೊಂದನ್ನು ಆವಿಷ್ಕರಿಸಿದ್ದಾರೆ. ಲೋಪಗಳಿಗೆಲ್ಲ ಕೇಂದ್ರ ಸರ್ಕಾರವನ್ನು ಬಯ್ಯುವುದು, ಅನಿಷ್ಟಕ್ಕೆಲ್ಲ ಅಂಬಾನಿಯೇ ಕಾರಣ ಅನ್ನೋದು ಇಂಥ ನಿರಂತರ ಹೋರಾಟಗಳಿಂದ ದೆಹಲಿಯಲ್ಲಿ ಬಡತನ- ಅಸಮಾನತೆ ಎಂಬ ಪದಗಳನ್ನೇ ನಾಮಾವಶೇಷ ಮಾಡಿದ್ದಾರೆ. ಹೀಗಿರುವಾಗ ಹೊಸಹೀರೋ ಆಗಿ ಉದಯಿಸುತ್ತಿರುವ ಕನ್ಹಯ್ಯ ಕುಮಾರ್ ಎಂಬ ಹೆಸರಿನವರಾದ ತಾವು, ಕೇವಲ ಬಡತನದಿಂದ ಆಜಾದಿ ಬೇಕು ಅಂತಂದುಬಿಟ್ಟರೆ ಆಯ್ತೆ? ತಮ್ಮ ಬಳಿಯೂ ಪುಗ್ಸಟ್ಟೆ ಕ್ರಾಂತಿಕಾರಕ ಐಡಿಯಾಗಳಿರುತ್ತವಲ್ಲ…ಹಂಗೆ ಒಂದಿಷ್ಟು ಬಿಡಿ ಸ್ವಾಮಿ ಚೆನ್ನಾಗಿರುತ್ತೆ.

ಗುರುವಾರ ರಾತ್ರಿ ಭಾಷಣದಲ್ಲಿ ನಮ್ಮ ಈ ಹೊಸಹೀರೋ ಪ್ರತಿಪಾದಿಸಿದ್ದೂ ಲಾಗಾಯ್ತಿನ ಕ್ಲೀಷೆಗಳನ್ನೇ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಶೇ. 31 ಮತಗಳನ್ನು ಪಡೆದಿದೆ ಅಷ್ಟೆ. ಹೀಗಾಗಿ ಅದು ಭಾರತೀಯರ ಪ್ರತಿನಿಧಿ ಅಂತ ಹೇಳೋಕಾಗಲ್ಲ ಎಂಬ ‘ಕ್ರಾಂತಿಕಾರಿ’ ತರ್ಕವನ್ನು ಈ ಹಿಂದಿನ ಯಾವ ಸರ್ಕಾರಗಳಿಗೂ ಅನ್ವಯಿಸದೇ ಬಿಜೆಪಿಗೆ ಮಾತ್ರ ಆರೋಪಿಸುತ್ತಿರುವವರಲ್ಲಿ ಕನ್ಹಯ್ಯ ಮೊದಲಿಗರೇನಲ್ಲ. ಸಧ್ಯ.. ನರೇಂದ್ರ ಮೋದಿಯವರನ್ನು ಗೆಲ್ಲಿಸಿಬಿಟ್ಟಿರುವ ಈ ಪ್ರಜಾಪ್ರಭುತ್ವ ಪದ್ಧತಿಗೆ ಪರ್ಯಾಯ ಏನು ಅಂತ ಕನ್ಹಯ್ಯ ಕುಮಾರರನ್ನು ಯಾರೂ ಕೇಳಿದಂತಿಲ್ಲ. ಸರ್ಕಾರ ರಚಿಸುವ ಅಧಿಕಾರವಿರುವುದು ಮನುವಾದಿ ಬಿಜೆಪಿಗಲ್ಲ, ಬಡವರು- ರೈತರು-ಆದಿವಾಸಿಗಳು- ದಲಿತರು- ಸೈನಿಕರು (ಲೇಟೆಸ್ಟ್ ಎಂಟ್ರಿ) ಇವರ ಪರವಾಗಿರುವ ಜೆ ಎನ್ ಯುವೇ ಅಧಿಕಾರ ನಡೆಸಬೇಕು ಅಂತ ಪ್ರತಿಪಾದಿಸಿ ಆಜಾದಿ ಪೋಸಲ್ಲಿ ಆಕಾಶ ನೋಡಿ ಚೀರಾಡುತ್ತಾ ಕುಣಿದುಬಿಡ್ತಿದ್ರೇನೋ ಅವತಾರ ಪುರುಷ ಕನ್ಹಯ್ಯ!

ಇನ್ನು ಕನ್ಹಯ್ಯ ಕುಮಾರ್ ಮೋದಿದ್ವೇಷದ ಬಗೆಯೂ ಭಿನ್ನವೇನಲ್ಲ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ ಫ್ಯಾಸಿಸಂ ಶುರುವಾಗುತ್ತೆ, ಹಿಂದುಗಳನ್ನು ಬಿಟ್ಟು ಉಳಿದವರನ್ನೆಲ್ಲ ಗ್ಯಾಸ್ ಚೇಂಬರ್ ಗೆ ತಳ್ತಾರೆ ಅಂತಲೇ ಬಿಜೆಪಿಯೇತರ ಸಮಸ್ತರೂ ಬೊಂಬ್ಡಾ ಬಜಾಯಿಸಿದ್ದಾಯ್ತು, ಅವೆಲ್ಲದರ ನಡುವೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿದ್ದೂ ಆಯ್ತು. ಇದೀಗ ಕನ್ಹಯ್ಯದ್ದೂ ಅದೇ ಸವಕಲು ಹಿಟ್ಲರ್ ಸೂತ್ರ. ‘ಲೋಕಸಭೆಯಲ್ಲಿ ಮಾತಾಡ್ತಾ ಮೋದಿ ಸ್ಟಾಲಿನ್ ಬಗ್ಗೆ ಹೇಳ್ತಿದ್ರು. ನಂಗೆ ಅವರ ಅಂಗಿಜಗ್ಗಿ ಕೇಳೋಣ ಅನ್ನಿಸ್ತು.. ಹಿಟ್ಲರ್ ಬಗ್ಗೆ ಏನಂತೀರಿ? ಗೋಳ್ವಾಲ್ಕರ್ ಭೇಟಿ ಮಾಡಿದ್ದ ಮುಸಲೊನಿ ಬಗ್ಗೆ ಏನಂತೀರಿ..’

ಪ್ರಜಾಪ್ರಭುತ್ವದಲ್ಲಿ ಆಯ್ಕೆಯಾಗಿಬಂದ ಪ್ರಧಾನಿಯನ್ನು ಹಿಟ್ಲರ್ ಗೆ ಸಮೀಕರಿಸಿ ಆಡಿಕೊಳ್ಳಬಹುದು.. ಕನ್ಹಯ್ಯಗೆ ಇದಕ್ಕೂ ಮೀರಿದ ಆಜಾದಿ ಇನ್ನೆಲ್ಲಿ ಸಿಗುತ್ತದೆ? ನಿಮ್ಮ ಮುಖ್ಯಸ್ಥ ಮುಸಲೊನಿಯನ್ನು ಭೇಟಿಯಾಗಿದ್ರು ಅಂತ ಆರೋಪಿಸ್ತೇನೆ ಉತ್ತರ ಕೊಡಿ ಅಂತ ಆರೆಸ್ಸೆಸ್ ನವರನ್ನು ಕೇಳಿದರೇನು ಬಂತು? ಸರ್ವಾಧಿಕಾರಿ ಮುಸಲೊನಿ ಬಗ್ಗೆ ಯಾರಾದರೂ ಇಟಲಿ ಮೂಲದವರನ್ನು ಕೇಳಿಕೊಳ್ಳಿ ಅಂತ ಉತ್ತರ ಬಂದೀತಷ್ಟೆ!

ರೋಹಿತ್ ವೇಮುಲ ಐಕಾನ್ ಎಂಬ ಆದರ್ಶವಾದಿ ಮಾತಿನ ಮೂಲಕ ಸಾಧಿಸುತ್ತಿರುವುದೇನು? ಈ ವಿದ್ಯಾರ್ಥಿ ಸಂಘಟನೆಗಳೆಲ್ಲ ಇರೋದೇ ತಮ್ಮ ಸ್ವಾರ್ಥ ಸಾಧನೆಗೆ ಅಂತ ಹತಾಶೆಗೆ ಬಿದ್ದ ರೋಹಿತ್ ವೇಮುಲನಲ್ಲಿ ಕಸುವು ತುಂಬಬೇಕಿದ್ದಾಗ ಸುಮ್ಮನಿದ್ದು, ಈಗ ಆತನ ಆತ್ಮಹತ್ಯೆಯನ್ನು ಬಂಡವಾಳ ಮಾಡಿಕೊಳ್ಳುತ್ತಿರುವ ಎಡಪಂಥದಲ್ಲಿ ತಾನೂ ಅಗ್ರಸಾಲಿನಲ್ಲಿದ್ದೇನೆ ಎಂದಷ್ಟೇ ಕನ್ಹಯ್ಯ ಖಾತ್ರಿಪಡಿಸಿದಂತಾಗಿದೆ.

ನಮಗೊಬ್ಬ ಹೊಸ ಹೀರೋ ಸಿಕ್ಕ ಅಂತ ಸಂಭ್ರಮಿಸುತ್ತಿರುವವರು ಉತ್ತರಿಸಬೇಕಿರುವ ಪ್ರಶ್ನೆ- ಡೈಲಾಗ್ ಡೆಲಿವರಿ ಸಮಯದಲ್ಲಿ ರಾಹುಲ್ ಥರ ಮುಗ್ಗರಿಸೋಲ್ಲ, ಕೇಜ್ರಿವಾಲ್ ಗಿರುವ ಕೆಮ್ಮಿನ ಕಾಟವಿಲ್ಲ ಅನ್ನೋದು ಬಿಟ್ಟರೆ ಕನ್ಹಯ್ಯನಲ್ಲಿ ಹೊಸತು ಕಾಣಲಿಕ್ಕೇನಿದೆ?

4 COMMENTS

  1. Please can you stop writing these non sense article. Kannaiah speaks about current situations. BJP making small things are big and made him as hero. Use less HRD minister cause for every thing.

Leave a Reply