ದುಗುಡ ಕಳೆದುಕೊಳ್ಳಲು ಭಾವನಾತ್ಮಕ ಭಾಷಣದ ಮೊರೆಹೋದ ಸಿದ್ದರಾಮಯ್ಯ

ಡಿಜಿಟಲ್ ಕನ್ನಡ ಟೀಮ್

ವಿಧಾನಸಭೆ ಮರುಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಗುರಿ ಮುಟ್ಟದ ನಿರೀಕ್ಷೆ , ವಾಚ್ ಉಡುಗೊರೆ, ರೈತರ ಮೇಲೆ ಲಾಠಿಚಾರ್ಜ್ ಪ್ರಕರಣಗಳಿಂದ ಹೈರಾಣಾಗಿ ಹೋಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸುವಾಗ ತಮ್ಮನ್ನು ಸಮರ್ಥಿಸಿಕೊಳ್ಳಲು ತಾವು ಪ್ರತಿನಿಧಿಸುವ ಹಿಂದುಳಿದ ವರ್ಗವನ್ನೇ ಮತ್ತೆ ಗುರಾಣಿಯಾಗಿ ಬಳಸಿಕೊಂಡರು.

ಎರಡು ದಿನದ ಚರ್ಚೆಗೆ ವಿಧಾನಸಭೆಯಲ್ಲಿ ಶನಿವಾರ ಎರಡೂವರೆ ತಾಸು ನೀಡಿದ ಸುದೀರ್ಘ ಉತ್ತರದಲ್ಲಿ ಸಿದ್ದರಾಮಯ್ಯನವರು ಜಾತಿ, ವರ್ಗ, ತತ್ವ-ಸಿದ್ಧಾಂತ, ಆತ್ಮಸಾಕ್ಷಿ, ಆಸ್ತಿಕತೆ-ನಾಸ್ತಿಕತೆ, ಹಾಸ್ಯ – ಹೀಗೆ ಹಲವು ಅಂಶಗಳನ್ನು ಭಾವನಾತ್ಮಕವಾಗಿ ಬಳಸಿ, ಸದನವನ್ನು ಕಟ್ಟಿಹಾಕಲು ಯತ್ಮಿಸಿದರು. ಅಧಿವೇಶನ ಆರಂಭದಿಂದಲೂ ತಮ್ಮಲ್ಲಿ ಮಡುಗಟ್ಟಿದ್ದ ದುಗುಡ, ಹತಾಶಭಾವ ಕಳೆದುಕೊಳ್ಳಲು ತಾವು ಹಿಂದುಳಿದ ವರ್ಗಕ್ಕೆ ಸೇರಿದವರೆಂಬ ಅಸ್ತ್ರವನ್ನು ಪದೇ, ಪದೇ ಪ್ರಯೋಗಿಸಿದ್ದು ವಿಶೇಷ.

ಹಿಂದುಳಿದ ವರ್ಗದವರು ಸಿಎಂ ಆಗುವುದು ಎಷ್ಟು ಕಷ್ಟವೋ, ಆದ ನಂತರ ಆ ಪದವಿ ಉಳಿಸಿಕೊಳ್ಳುವುದು ಅಷ್ಟೇ ಕಷ್ಟ. ನಾನು ಹಿಂದುಳಿದ ವರ್ಗಕ್ಕೆ ಸೇರಿದವನು ಎಂಬ ಕಾರಣಕ್ಕೆ ರಾಜಕೀಯವಾಗಿ ತುಳಿಯುವ ಪ್ರಯತ್ನಗಳು ಸಾಗಿವೆ. ಮೂವತ್ತು ವರ್ಷದ ಹಿಂದೆಯೇ ಮಂತ್ರಿ ಪದವಿ ಕಂಡ ತಮಗೆ ರಾಜಕೀಯ ಏಳು-ಬೀಳುಗಳ ಬಗ್ಗೆ ಸ್ಪಷ್ಟ ಪರಿಚಯವಿದೆ. ವಾಚ್ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ. ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಿಲ್ಲ, ಮುಂದೆ ಮಾಡುವುದೂ ಇಲ್ಲ. ಎಂದು ಹೇಳಿದ್ದರಲ್ಲಿ ಪದವಿ ರಕ್ಷಣೆಯ ಆಟವಿತ್ತು.

ತಿರುಪತಿ, ಚಾಮುಂಡೇಶ್ವರಿಗೆ ಹೋಗುತ್ತೇನೆ, ಆದರೆ ಮನೆಯಲ್ಲಿ ದೇವರ ಮನೆಯತ್ತ ತಿರುಗಿ ನೋಡುವುದಿಲ್ಲ ಎಂದು ಹೇಳಿದ ಸಿದ್ದರಾಮಯ್ಯನವರು ತಾವು ಆಸ್ತಿಕರೋ, ನಾಸ್ತಿಕರೋ ಎಂದು ನಿರ್ಧರಿಸುವ ತಲೆನೋವನ್ನು ಜನರಿಗೆ ವರ್ಗಾಯಿಸಿದರು. ಇಷ್ಟಕ್ಕೆ ಬಿಡದೇ, ‘ಎನ್ನ ಕಾಲೇ ಕಂಬ, ದೇಹವೇ ದೇಗುಲ…’ ಎಂಬ ಬಸವಣ್ಣನವರ ವಚನವನ್ನು ಅವರು ಉಲ್ಲೇಖಿಸಿದಾಗ, ಡಿಸಿಎಂ ಆಗಿದ್ದಾಗ ಮೂಢನಂಬಿಕೆಗೆ ಸೆಡ್ಡು ಹೊಡೆದು ಚಾಮರಾಜನಗರಕ್ಕೆ ಭೇಟಿ ಕೊಟ್ಟಿದ್ದರಿಂದಲೇ ಮುಖ್ಯಮಂತ್ರಿ ಆದೆ ಎಂದು ಹೇಳಿದಾಗ ಸದನದಲ್ಲಿದ್ದವರು ಮತ್ತಷ್ಟು ಗೊಂದಲಕ್ಕೆ ಬಿದ್ದರು. ಸಿದ್ದರಾಮಯ್ಯನವರು ಆಸ್ತಿಕರೋ, ನಾಸ್ತಿಕರೋ ಎಂದು..

ಸರಕಾರ ಮೂರು ವರ್ಷದಲ್ಲಿ ಸಾಕಷ್ಟು ಸಾಧಿಸಿದೆ. ಉತ್ತಮ ಕಾರ್ಯಕ್ರಮಗಳನ್ನು ಕೊಟ್ಟಿದೆ. ಆದರೆ ಬಿಜೆಪಿಯವರು ಸರಕಾರ ಇನ್ನೂ ಟೇಕಾಫ್ ಆಗಿಲ್ಲ ಅನ್ನುತ್ತಿದ್ದಾರೆ. ನಾನು ಭೂಮಿ ಮೇಲೆ ಕೆಲಸ ಮಾಡುತ್ತಿರುವಾಗ, ಅವರು ಆಕಾಶ ನೋಡಿಕೊಂಡು ಆ ಮಾತು ಹೇಳಿದರೆ ನಾನೇನು ಮಾಡಕ್ಕಾಗುತ್ತೆ? ಮುಂದಿನ ಚುನಾವಣೆ ಬಗ್ಗೆ ಹುಸಿ ನಿರೀಕ್ಷೆ ಇಟ್ಟುಕೊಂಡು ಬಿಜೆಪಿ-ಜೆಡಿಎಸ್ ಸುಳ್ಳು ಆಪಾದನೆ ಮಾಡ್ತಿವೆ. ಅದರಿಂದ ನಿರಾಸೆಯಷ್ಟೇ ಅವಕ್ಕೆ ಕಟ್ಟಿಟ್ಟ ಬುತ್ತಿ ಎಂದು ಛೇಡಿಸಿದ ಸಿದ್ದರಾಮಯ್ಯನವರು, ತಾವು ಕೊಟ್ಟ ಭರವಸೆ ಈಡೇರಿಸಿರುವುದರ ಬಗ್ಗೆ ಅಂಕಿ-ಅಂಶಗಳನ್ನು ನೀಡಿದರು. ಅಲ್ಲಲ್ಲಿ ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳ ನಡುವೆ ಆಕ್ಷೇಪ, ಸಮರ್ಥನೆ ನಡುವೆ ಭಾಷಣ ಮುಗಿಸಿ ಕುಳಿದ ಸಿದ್ದರಾಮಯ್ಯನವರ ಮೊಗದಲ್ಲಿ ನೆರಿಗೆಗಳು ಸಡಿಲಾದ ಭಾವ ಮನೆ ಮಾಡಿತ್ತು.

Leave a Reply