ಬಿಚ್ಚಿಕೊಳ್ಳಲಿದೆ ಶ್ರೀನಿವಾಸ ರಾಮಾನುಜಂ ಜೀವನಗಾಥೆ, ಸದ್ಯಕ್ಕಿಲ್ಲಿದೆ ಈ ಭರವಸೆಯ ಟ್ರೈಲರ್

ಡಿಜಿಟಲ್ ಕನ್ನಡ ಟೀಮ್

ಭಾರತದ ವೈಭೋಗವನ್ನು ಸಾಬೀತುಪಡಿಸುವ ಸಂದರ್ಭದಲ್ಲೆಲ್ಲ ಮಹಾನುಭಾವರ ಹೆಸರುಗಳನ್ನು ಹುಡುಕಿ ನಮ್ಮವರೆನ್ನುತ್ತೇವೆ. ನಂತರ ಆ ಬಗ್ಗೆ ಏನೂ ಮಾಡದೇ ಸುಮ್ಮನಾಗುವುದು ನಮ್ಮ ಜಾಯಮಾನವಿರಬೇಕು.

ಭಾರತದ ಗಣಿತಜ್ಞ ಶ್ರೀನಿವಾಸ ರಾಮಾನುಜಂ ಕುರಿತು ಹಾಲಿವುಡ್ ನಲ್ಲಿ ತಯಾರಾಗಿರುವ ಚಿತ್ರದ ವಿವರಗಳನ್ನು ಓದುತ್ತಿದ್ದರೆ ಹಾಗೊಂದು ಪಶ್ಚಾತ್ತಾಪ ಕಾಡದಿರದು. ಅವರು ಗತಿಸಿ 9 ದಶಕಗಳೇ ಉರುಳಿದ ನಂತರ ಅವರ ಬಗ್ಗೆ ಸಿನಿಮಾ ಒಂದು ತಯಾರಾಗಿದೆ. ಏಪ್ರಿಲ್ 29ಕ್ಕೆ ಬಿಡುಗಡೆ ದಿನಾಂಕ ನಿಗದಿಯಾಗಿರುವ ಈ ಚಿತ್ರದ ಟ್ರೈಲರ್ ವೀಕ್ಷಣೆಗೆ ಲಭ್ಯವಿದೆ.

ಕೌತುಕದ ವಿಷಯ ಏನೆಂದರೆ ರಾಮಾನುಜಂ ಬದುಕಿನ ಸಿನಿಮಾಕ್ಕೆ ನಿರ್ಮಾಪಕರಲ್ಲೊಬ್ಬರಾಗಿರುವವರು ನಮ್ಮ ಹೆಮ್ಮೆಯ ಮಂಜುಲ್ ಭಾರ್ಗವರು. ಗಣಿತದ ನೊಬೆಲ್ ಎಂದೇ ಪರಿಗಣಿಸಲಾಗುವ ಫೀಲ್ಡ್ ಮೆಡಲ್ ಪಡೆದ ನಂತರ ಭಾರತದಲ್ಲಿ ಇವರು ಜನಪ್ರಿಯರಾದರು. ಗಣಿತಜ್ಞರಾದರೂ ಸಂಗೀತ, ಕಲೆ, ಸಂಸ್ಕೃತ ಅಧ್ಯಯನ ಇತ್ಯಾದಿಗಳಲ್ಲಿ ಇವರು ತೊಡಗಿಸಿಕೊಂಡಿರುವ ಮಂಜುಲ್ ವ್ಯಕ್ತಿತ್ವವೇ ಸೋಜಿಗದ್ದು. ಹೀಗಾಗಿ ಚಿತ್ರದಲ್ಲಿ ರಾಮಾನುಜಂ ಪಾತ್ರ ನಮಗೆ ಕ್ಲಿಷ್ಟವೆನಿಸುವ ಗಣಿತದ ಥಿಯರಿಗಳನ್ನು ಹೇಳುವುದಕ್ಕೆ ಸೀಮಿತವಾಗದೇ ಕಲಾತ್ಮಕ ಅನುಭವವೊಂದನ್ನು ನೀಡುವ ನಿರೀಕ್ಷೆ ದಟ್ಟವಾಗಿದೆ. ಟ್ರೈಲರ್ ನಲ್ಲೂ ರಾಮಾನುಜಂ ಅವರ ಸಾಮಾನ್ಯ ಬದುಕು, ಹೋರಾಟ, ಅವಮಾನ ಎದುರಿಸಿದ ಪರಿ, ವೈಯಕ್ತಿಕ ಭಾವನಾ ಸಾಮ್ರಾಜ್ಯ ಹಾಗೂ ಇವನ್ನೆಲ್ಲ ಸೂತ್ರದಂತೆ ಬೆಸೆದಿರುವ ಗಣಿತದ ಕಣ್ಣುಗಳು… ಇಂಥ ಬಿಂಬಗಳೇ ನಮಗೆದುರಾಗಿ ಅನನ್ಯ ಕತೆಯೊಂದರ ಪುಳಕ ಕಟ್ಟಿಕೊಡುವಂತಿದೆ. 1991ರಲ್ಲಿ ರಾಬರ್ಟ್ ಕಾನಿಗೆಲ್ ಬರೆದ ‘ದ ಮ್ಯಾನ್ ಹು ನ್ಯೂ ಇನ್ ಫಿನಿಟಿ’ ಕೃತಿ ಆಧಾರದಲ್ಲೇ ಅದೇ ಹೆಸರಿನ ಸಿನಿಮಾ ಸಿದ್ಧವಾಗುತ್ತಿದೆ. ಸ್ಲಮ್ ಡಾಗ್ ಮಿಲಿಯನೇರ್ ನಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದ ದೇವ್ ಪಟೇಲ್ ಇಲ್ಲಿ ಶ್ರೀನಿವಾಸ ರಾಮಾನುಜಂ ಪಾತ್ರ ನಿರ್ವಹಿಸಲಿದ್ದಾರೆ.

ಸಿನಿಮಾ ತನ್ನ ಕತೆಯ ವ್ಯಾಪ್ತಿಯನ್ನು ಹೀಗೆ ಬಿಚ್ಚಿಟ್ಟಿದೆ… 1913ರ ವಸಾಹತುಶಾಹಿ ಅಧೀನ ಭಾರತದಲ್ಲಿ ಹಡಗುಗಳ ವಿಭಾಗದ ಗುಮಾಸ್ತನೊಬ್ಬನಿದ್ದ. ಆತ ಸ್ವಯಂ ಶಿಕ್ಷಿತ ಪ್ರಚಂಡ ಪ್ರತಿಭೆ. ಗಣಿತವೊಂದರ ಮೇಲೆಯೇ ಅತಿ ವ್ಯಾಮೋಹದ ಕಾರಣದಿಂದ ಆತ ಅರ್ಧದಲ್ಲೇ ಕಾಲೇಜು ಬಿಡಬೇಕಾಗುತ್ತದೆ. ತನ್ನ ಹಿರಿಕರಿಂದ ಉತ್ತೇಜನ ಸಿಗದಿದ್ದಾಗ ಆತ ತನ್ನ ಗಣಿತ ಸಿದ್ಧಾಂತಗಳನ್ನು ವಿವರಿಸುತ್ತ ಇಂಗ್ಲೆಂಡ್ ನ ಟ್ರಿನಿಟಿ ಕಾಲೇಜಿನ ಗಣಿತಜ್ಞ ಜಿ. ಎಚ್ ಹಾರ್ಡಿಗೆ ಪತ್ರ ಬರೆಯುತ್ತಾರೆ. ಹಾರ್ಡಿ ಇವರ ಪ್ರತಿಭೆ ಗುರುತಿಸಿ, ಕ್ಯಾಬ್ರಿಡ್ಜ್ ಗೆ ಕರೆಸಿಕೊಂಡು ಸಿದ್ಧಾಂತ ಮಂಡನೆಗೆ ಸಹಕರಿಸುತ್ತಾರೆ.

ನಮ್ಮ ಹೆಮ್ಮೆಯ ಗಣಿತಜ್ಞ ಶ್ರೀನಿವಾಸ ರಾಮಾನುಜಂ ಬದುಕನ್ನು ತೆರೆಯ ಮೇಲೆ ಕಾಣುವುದಕ್ಕೆ ಅಭಿಮಾನ- ಕಾತುರಗಳಿರಲಿ.

Leave a Reply