ಮೊನ್ನೆ ಪತ್ತೆಯಾದ ಗುರುತ್ವದ ಅಲೆಗಳಿಗೂ ಕನ್ನಡಿಗ ವಿಜ್ಞಾನಿ ಸಿ. ವಿ. ವಿಶ್ವೇಶ್ವರರಿಗೂ ಇರುವ ನಂಟೇನು? ನೋಡಿ ಈ ವಿಡಿಯೋ ಸಂದರ್ಶನ

ಡಿಜಿಟಲ್ ಕನ್ನಡ ಟೀಮ್

ಮೊನ್ನೆ ಫೆಬ್ರವರಿ 11ರಂದು ಇಡೀ ಜಗತ್ತು ವೈಜ್ಞಾನಿಕ ಬೆಳವಣಿಗೆಯೊಂದನ್ನು ಸಂಭ್ರಮಿಸಿತು. ಎಷ್ಟೋ ವರ್ಷಗಳ ಹಿಂದೆ ಆಲ್ಬರ್ಟ್ ಐನ್ ಸ್ಟೀನ್ ಪ್ರತಿಪಾದಿಸಿದ್ದ ಗುರುತ್ವ ಅಲೆಗಳು ಪ್ರಾಯೋಗಿಕವಾಗಿಯೂ ದೃಢಪಟ್ಟ ದಿನ ಅದು.

ಅಂದು ಪ್ರಯೋಗದ ಪರಿಣಾಮವು ವೈಜ್ಞಾನಿಕ ಸಮುದಾಯದ ನಡುವೆ ಹಲವು ಅಜ್ಞಾತ ಸ್ಥಳಗಳಲ್ಲಿ ಭಿತ್ತರಗೊಳ್ಳುತ್ತಿತ್ತು. ಪುಣೆಯ ಇಂಥದೇ ಒಂದು ಕೇಂದ್ರದಲ್ಲಿ ಹಿರಿಜೀವವೊಂದು ಈ ತಲೆಮಾರಿನ ಹಲವು ವಿಜ್ಞಾನಿಗಳ ಜತೆಗಿತ್ತು. ಗುರುತ್ವದ ಅಲೆಗಳು ಲೈಗೊ(Laser Interferometric Gravitational wave observatory) ಸಾಧನದಲ್ಲಿ ಪತ್ತೆಯಾಗಿದ್ದನ್ನು ಕಂಪ್ಯೂಟರ್ ಪರದೆಯ ಮೇಲೆ ಫ್ರೀಜ್ ಮಾಡುತ್ತಲೇ ಅಲ್ಲಿನ ವಿಜ್ಞಾನಿಗಳ ಗಣದಿಂದ ಈ ಹಿರಿಜೀವಕ್ಕೆ ಶುಭಾಶಯ, ಅಭಿನಂದನೆಗಳ ಮಳೆ! ಇವರು ಹಿತವಾಗಿ ಕಂಪಿಸಿದರು. ಅನಿರ್ವಚನೀಯವಾದ ಆನಂದವೊಂದಕ್ಕೆ ಒಡ್ಡಿಕೊಂಡರು. ಏಕೆಂದರೆ 35 ವರ್ಷಗಳ ಹಿಂದೆಯೇ ಗುರುತ್ವ ಅಲೆಗಳಿಗೆ ಸಂಬಂಧಿಸಿದಂತೆ ‘ಕ್ವಾಸಿ ನಾರ್ಮಲ್ ಮೋಡ್’ ಸಿದ್ಧಾಂತವನ್ನು ಗಣಿತದ ಚೌಕಟ್ಟಿನಲ್ಲಿ ಪ್ರತಿಪಾದಿಸಿದ್ದ ವಿಜ್ಞಾನಿ ಇವರಾಗಿದ್ದರು. ಆಗ ಅವರು ಥಿಯರಿ ಕಟ್ಟಿಕೊಡುವಾಗ ಯಾವ ಲೆಕ್ಕಾಚಾರದ ಗ್ರಾಫ್ ಗಳನ್ನು ಹಾಕಿ ಕ್ವಾಸಿ ನಾರ್ಮಲ್ ಮೋಡ್ ಚಿತ್ರಣ ಕೊಟ್ಟಿದ್ದರೋ, ಮೊನ್ನೆಯ ಫಲಿತಾಂಶದ ಗ್ರಾಫ್ ಸಹ ಅದಕ್ಕೆ ಸರಿಹೊಂದುವಂತಿತ್ತು. ಅರ್ಥಾತ್ ಥಿಯರೆಟಿಕ್ ಆಗಿದ್ದದ್ದೇ ಪ್ರಯೋಗಾತ್ಮಕವಾಗಿ ಸಹ ನಿಜ ಎಂದಾದ ದಿನ.

ಹೀಗೆ ತಾವು ಮಂಡಿಸಿದ್ದ ಸೂತ್ರ ಕಣ್ಣೆದುರೇ ನಿಜವಾದ ಅಪೂರ್ವ ವಿದ್ಯಮಾನಕ್ಕೆ ಸಾರ್ಥಕ ಸಾಕ್ಷಿಯಾದವರು ನಾವು ಹೆಮ್ಮೆ ಪಡಬೇಕಾದ ಕನ್ನಡಿಗ, ಅಂತಾರಾಷ್ಟ್ರೀಯ ಖ್ಯಾತಿಯ ಭೌತವಿಜ್ಞಾನಿ ಸಿ. ವಿ. ವಿಶ್ವೇಶ್ವರ ಅವರು!

ನಿಜ. ಗುರುತ್ವದ ಅಲೆಗಳು ಎಂಬುದನ್ನು ಸೈದ್ಧಾಂತಿಕವಾಗಿ ಊಹಿಸಿದ್ದು ಆಲ್ಬರ್ಟ್ ಐನ್ ಸ್ಟೀನರೇ. ಆದರೆ ಕಪ್ಪುಕುಳಿಗಳನ್ನು ಕೇಂದ್ರವಾಗಿರಿಸಿಕೊಂಡು ಗುರುತ್ವದ ಅಲೆಗಳ ಬಗ್ಗೆ ಸಿದ್ಧಾಂತ ನೀಡಿದ ಶ್ರೇಯಸ್ಸು ಸಿ. ವಿ. ವಿಶ್ವೇಶ್ವರ ಅವರಿಗೆ ಸಲ್ಲುತ್ತದೆ. ಕಪ್ಪುಕುಳಿಗಳ ಬಗ್ಗೆ ಅಂತಾರಾಷ್ಟ್ರೀಯವಾಗಿ ಅಧಿಕೃತವಾಗಿ ಮಾತನಾಡಬಲ್ಲಿ ವಿಜ್ಞಾನಿಗಳಲ್ಲಿ ವಿಶ್ವೇಶ್ವರ ಅಗ್ರಗಣ್ಯರು. ಇವರ ಸಂಶೋಧನೆಯ ಸಾರವನ್ನು, ಟಿ. ಆರ್. ಅನಂತರಾಮು ಸಂಪಾದಕತ್ವದಲ್ಲಿ ಬಂದ ‘ತ್ರಿವಿಕ್ರಮ ಹೆಜ್ಜೆಗಳು’ ಎಂಬ ಪುಸ್ತಕ ಹೀಗೆ ಹರವಿಡುತ್ತದೆ-

‘ಕಪ್ಪುಕುಳಿಗಳು ಚದುರಿಸುವ ಗುರುತ್ವ ತರಂಗಗಳ ಬಗ್ಗೆ ಆಳವಾದ ಅಧ್ಯಯನವನ್ನು ವಿಶ್ವೇಶ್ವರ ನಡೆಸಿದರು. ಅವರು ತೋರಿಸಿಕೊಟ್ಟ ಫಲಿತಾಂಶಗಳು ಬಹಳ ವಿಶೇಷವಾದವು ಎನ್ನಬಹುದು. ಏಕೈಕ ತರಂಗದ ಬದಲು ನಿಬಿಡವಾದ ತರಂಗಗಳ ಗುಂಪನ್ನು (wave packets) ಕಪ್ಪುಕುಳಿಯೊಂದರ ಕಡೆಗೆ ಕಳುಹಿಸಿದೆವೆಂದುಕೊಳ್ಳೋಣ. ಹೊರಬರುವ ತರಂಗಗಳು ಬಹಳ ಕೌತುಕಮಯವಾಗಿರುತ್ತವೆ. ಅವುಗಳ ಕಂಪನಾಂಕವು (frequency) ನಿರ್ದಿಷ್ಟವಾಗಿದ್ದರೂ ಅವುಗಳ ಪಾರ (amplitude) ಕ್ರಮೇಣವಾಗಿ ಕುಗ್ಗುತ್ತಾ ಹೋಗುತ್ತದೆ. ಗಂಟೆಯಿಂದ ಹೊರಟಿರುವ ಧ್ವನಿ ತರಂಗಗಳೂ ಹೀಗೆಯೇ ಇರುತ್ತವೆ. ಆದ್ದರಿಂದ ಕಪ್ಪುಕುಳಿಯು ಗಂಟೆಯಂತೆಯೇ ಕಂಪಿಸಿ ತರಂಗಗಳನ್ನು ಸೃಷ್ಟಿಸುತ್ತವೆ ಎನ್ನಬಹುದು. ಇವುಗಳಿಗೆ ಕ್ವಾಸಿನಾರ್ಮಲ್ ಮೋಡ್ಸ್ (Quasinormal Modes)ಎಂದು ಹೆಸರಿಸಲಾಗಿದೆ.’

ಇವತ್ತು ಜಗತ್ತು ಗುರುತ್ವದ ಅಲೆಗಳನ್ನು ಅರ್ಥಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ, ಐನ್ ಸ್ಟೀನ್ ಮೂಲಸಿದ್ಧಾಂತದ ಜತೆಯಲ್ಲಿ ಸಿ. ವಿ. ವಿಶ್ವೇಶ್ವರ ಅವರಂಥ ಸಂಶೋಧಕರು ನಡೆಸಿದ ಸಂಶೋಧನೆಗಳೂ ತುಂಬ ಸಹಾಯ ಮಾಡುತ್ತಿವೆ. ಅವೆಷ್ಟೋ ಬಿಲಿಯನ್ ವರ್ಷಗಳ ಹಿಂದೆ ಬಾಹ್ಯಾಕಾಶದಲ್ಲಿ ನಡೆದ ಘಟನೆಯನ್ನು ಈಗಿಲ್ಲಿ ವೀಕ್ಷಿಸಿ, ಗುರುತ್ವದ ಅಲೆಗಳಿದ್ದಾವೆ ಎಂಬುದನ್ನು ಪ್ರಾಯೋಗಿಕವಾಗಿ ದೃಢಪಡಿಸಿಕೊಳ್ಳಲಾಗುತ್ತಿದೆ. ವಿಜ್ಞಾನದ ಕೌತುಕವಿದು. ಇಂಥ ಸಂದರ್ಭದಲ್ಲಿ ಇಂಥದ್ದನ್ನೆಲ್ಲ ಅಚ್ಚ ಕನ್ನಡದಲ್ಲಿ ಸಾಮಾನ್ಯನಿಗೂ ಅರ್ಥವಾಗುವಂತೆ ವಿವರಿಸಬಲ್ಲ ಸಿ. ವಿ. ವಿಶ್ವೇಶ್ವರರಂಥ ವಿಜ್ಞಾನಿಗಳನ್ನು ನಮ್ಮ ನಾಡು ಹೊಂದಿದೆ ಎಂಬುದೂ ಕಡಿಮೆ ಕೌತುಕದ ವಿಷಯವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಗುರುತ್ವದ ಅಲೆಗಳು, ಈ ನಿಟ್ಟಿನಲ್ಲಿ ಅವರು ಮಾಡಿದ ಸಂಶೋಧನೆ, ಈ ಬಗ್ಗೆ ಒಟ್ಟಾರೆ ಶೋಧಗಳು ಬೆಳೆದುಬಂದ ಮಾರ್ಗ ಇವನ್ನೆಲ್ಲ ವಿಶ್ವೇಶ್ವರರಿಂದಲೇ ವೀಕ್ಷಕರಿಗೆ ತಿಳಿಪಡಿಸುವ ಪ್ರಯತ್ನ ಡಿಜಿಟಲ್ ಕನ್ನಡದ್ದು. ಹಾಗೆಂದೇ ನಿಮ್ಮ ಮುಂದೆ ಈ ವಿಡಿಯೋ ಸಂದರ್ಶನ.

Leave a Reply