ಸುದ್ದಿಸಂತೆ: ಮುಖ್ಯಮಂತ್ರಿ ಸಾಂತ್ವನ ಯೋಜನೆಗೆ ಹರೀಶ್ ಹೆಸರು?, ಕನ್ಹಯ್ಯ ಪ್ರಕರಣದಲ್ಲಿ ಬಿಜೆಪಿಗ ಅಮಾನತು….

ಹೊಸ ಯೋಜನೆಗೆ ಹರೀಶ್ ಹೆಸರು ಶಿಫಾರಸು

ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದಲ್ಲಿ ಮಡಿದ ಹರೀಶ್, ತನ್ನ ಕಣ್ಣುಗಳನ್ನು ದಾನ ಮಾಡಿ ಇತರರಿಗೂ ಸ್ಫೂರ್ತಿಯಾಗಿದ್ದರು. ಈಗ ರಾಜ್ಯ ಸರ್ಕಾರ ಹರೀಶ್ ಸ್ಮರಾಣಾರ್ಥ ಮುಖ್ಯಮಂತ್ರಿ ಸಾಂತ್ವನ ಯೋಜನೆಗೆ “ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ” ಎಂದು ಮರು ನಾಮಕರಣ ಮಾಡಲು ಚಿಂತಿಸುತ್ತಿದೆ. ಇದು ಅಪಘಾತದ ಸಂದರ್ಭದಲ್ಲಿ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡುವ ಯೋಜನೆ ಆಗಿದ್ದು ಆರೋಗ್ಯ ಸಚಿವ ಯುಟಿ ಖಾದರ್ ಅವರು ಈ ಪ್ರಸ್ತಾಪವನ್ನು ಮುಖ್ಯಮಂತ್ರಿಗಳ ಮುಂದಿಟ್ಟಿದ್ದಾರೆ.

ಕನ್ಹಯ್ಯ ನಾಲಿಗೆ ಕತ್ತರಿಸಿದರೆ 5 ಲಕ್ಷ ಇನಾಮು ಘೋಷಿಸಿದ್ದಬಿಜೆಪಿಗ ಸಸ್ಪೆಂಡ್

ಜೆಎನ್ ಯು ಎಸ್ ಯುನ ಅಧ್ಯಕ್ಷ ಕನ್ಹಯ್ಯ ಕುಮಾರ್ ನಾಲಿಗೆ ಕತ್ತಿರಿಸಿ ಕೊಟ್ಟವರಿಗೆ 5 ಲಕ್ಷ ಇನಾಮು ಘೋಷಿಸಿದ್ದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಲ್ ದೀಪ್ ವರ್ಶಣ್ಯಾ ಅವರನ್ನು 6 ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸ್ಥಾನದಿಂದ ಅಮಾನತು ಮಾಡಲಾಗಿದೆ. ಗುರುವಾರ ಬೇಲ್ ಪಡೆದು ಹೊರ ಬಂದ ಕನ್ಹಯ್ಯ ಅಂದು ರಾತ್ರಿ ವಿವಿಯ ಕ್ಯಾಂಪಸ್ ನಲ್ಲಿ ಬಿಜೆಪಿ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕೀಳಾಗಿ ಮಾತನಾಡಿದರೆಂದು ಆಕ್ರೋಶ ವ್ಯಕ್ತಪಡಿಸಿ ಕುಲ್ ದೀಪ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಜಮ್ಮುಕಾಶ್ಮೀರ: ಬಿಜೆಪಿಯೊಂದಿಗೆ ಮತ್ತೆ ಪಿಡಿಪಿ ಒಲವು

ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚನೆಯ ಚಟುವಟಿಕೆಗಳು ಗರಿಗೆದರಿದಂತಿದೆ. ಇದಕ್ಕೆ ಪುಷ್ಠಿ ನೀಡಿರುವುದು ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಶನಿವಾರ ರಾಜ್ಯಪಾಲ ಎನ್ ಎನ್ ವೋಹ್ರಾ ಅವರನ್ನು ಭೇಟಿಯಾಗಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿರುವುದು.

ಮುಫ್ತಿ ಮಹಮ್ಮದ್ ಸೈಯಿದ್ ನಿಧನದಿಂದ ತೆರವಾಗಿದ್ದ ಪಿಡಿಪಿ ಶಾಸಕಾಂಗ ನಾಯಕ ಸ್ಥಾನಕ್ಕೆ ಪುತ್ರಿ, ಸಂಸದೆ ಮೆಹಬೂಬ ಮುಫ್ತಿ ಆಯ್ಕೆಯಾಗಿದ್ದರು. ಆದರೆ ಬಿಜೆಪಿಯೊಂದಿಗಿನ ಸಮ್ಮಿಶ್ರ ಸರ್ಕಾರವನ್ನು ಮುಂದುವರೆಸಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಜನವರಿ 7 ರಿಂದ ರಾಜ್ಯಪಾಲರ ಆಳ್ವಿಕೆ ಜಾರಿಮಾಡಲಾಗಿದೆ. 2 ತಿಂಗಳಿಂದ ಸಾಕಷ್ಟು ಲೆಕ್ಕಾಚಾರ ಹಾಕಿರುವ ಮುಫ್ತಿ ಅವರು ಕೊನೆಗೂ ಸರ್ಕಾರ ರಚನೆಗೆ ಮುಂದಾದಂತಿದೆ.

ಕಾರುಗಳ ಬೆಲೆ ಏರಿಕೆ

ಕೇಂದ್ರ ಬಜೆಟ್ ನಂತರ ಕೆಲವು ಕಾರುಗಳ ಬೆಲೆ 83 ಸಾವಿರದಷ್ಟು ಹೆಚ್ಚಳವಾಗಿದೆ. ಪ್ರಮುಖ ಕಾರು ಉತ್ಪಾದಕ ಕಂಪನಿಗಳಾದ ಹುಂಡೈ, ಮಹಿಂದ್ರ ಮತ್ತು ಹೊಂಡ ಕಂಪನಿಗಳು ಬೆಲೆ ಏರಿಕೆ ಬಗ್ಗೆ ಶನಿವಾರ ಆಧಿಕೃತವಾಗಿ ಘೋಷಿಸಿವೆ. ಪರಿಷ್ಕೃತ ದರ ಮಾರ್ಚ್ 1 ರಿಂದಲೇ ಜಾರಿಗೆ ತಂದಿರುವುದಾಗಿ ತಿಳಿಸಿವೆ.

ಥಾಣಾ ಹತ್ಯಕಾಂಡಕ್ಕೆ ಕಾರಣ 67 ಲಕ್ಷ ಸಾಲ!

ಮಹಾರಾಷ್ಟ್ರದ ಥಾಣಾ ಹತ್ಯಾಕಾಂಡದ ಕರಾಳ ಸತ್ಯ ಬಹಿರಂಗವಾಗಿದೆ. ಪ್ರಕರಣದ ಆರೋಪಿಯು ವ್ಯವಹಾರ ಮತ್ತು ಕುಟುಂಬದ ಹಲವು ಸಮಾರಂಭಗಳ ನೆಪದಲ್ಲಿ ಬಂಧುಗಳಿಂದ ಮತ್ತು ಸ್ನೇಹಿತರಿಂದ 67 ಲಕ್ಷದಷ್ಟು ಬೃಹತ್ ಮೊತ್ತದ ಸಾಲ ಪಡೆದಿದ್ದ ಎಂಬ ವಿಷಯ ತನಿಖೆಯಿಂದ ತಿಳಿದಿದೆ.

ಫೆ.27ರಂದು ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ಹಸ್ನಾಯಿನ್ ವಾರೆಕರ್ ಎಂಬಾತ ತನ್ನ ಕುಂಟಂಬದ 14 ಮಂದಿಯ ಕತ್ತು ಕುಯ್ದು ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದನು. ಈ ವೇಳೆ ಪವಾಡದಂತೆ ಬದುಕುಳಿದ ಮೃತ ಆರೋಪಿಯ ಸಹೋದರಿ ಸುಬಿಯಾ ಆಸ್ಪತ್ರೆಯಲ್ಲಿ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ.

ಉಳಿದಂತೆ…….

ಉದ್ಯಮಿಗಳು ಬಾಕಿ ಉಳಿಸಿಕೊಂಡಿರುವ ಸಾಲವನ್ನು ಮನ್ನಾ ಮಾಡುವ ಪ್ರಶ್ನೆ ಇಲ್ಲ ಹಾಗೂ ಸುಸ್ತಿದಾರರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಹಿಂಜರಿಯುವುದಿಲ್ಲ ಅಂತ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಉದ್ಯಮಿ ವಿಜಯ್ ಮಲ್ಯರಿಗೆ ಕಾನೂನು ಹಿಡಿತ ಬಿಗಿಯಾದಂತಾಗಿದೆ.

Leave a Reply