ಅಸಹಿಷ್ಣುತೆ ಡಿಬೇಟ್ ನಲ್ಲಿ ಅನುಪಮ್ ಖೇರ್ ಮಿಂಚು, ಸಂಡೇ ಟ್ರೆಂಡ್ ಆದ ಭಾಷಣ ಇಲ್ಲಿ ಓದಿಕೊಳ್ಳಿ

(ಚಿತ್ರಕೃಪೆ- ಟೆಲಿಗ್ರಾಫ್)

ಡಿಜಿಟಲ್ ಕನ್ನಡ ಟೀಮ್

ಕೋಲ್ಕತಾದ ಟೆಲಿಗ್ರಾಫ್ ಪತ್ರಿಕೆ ಶನಿವಾರ ‘ಸಹಿಷ್ಣುತೆ ಈಗ ಹೊಸ ಅಸಹಿಷ್ಣುತೆ’ ಎಂಬ ಚರ್ಚೆಯನ್ನು ಆಯೋಜಿಸಿತ್ತು. ಸಹಿಷ್ಣು ಭಾರತದ ಪರ ಅನುಪಮ್ ಖೇರ್, ಸುಹೇಲ್ ಸೇಠ್, ಕಾಜಲ್ ಬ್ಯಾಟಿಂಗ್. ಅಸಹಿಷ್ಣು ಪಂಗಡದಲ್ಲಿ ನ್ಯಾ. ಅಶೋಕ್ ಗಂಗೂಲಿ, ಬರ್ಖಾ ದತ್, ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಆಟ. ಈ ಪೈಕಿ ಅನುಪಮ್ ಖೇರ್ ಆಕ್ರೋಶದ ಭಾಷಣ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್. ಬರ್ಖಾ ದತ್ ಮಾತಿನಲ್ಲಿ ಅವರು ಉಳಿದೆಲ್ಲ ಅಸಹಿಷ್ಣುತೆಗಳನ್ನು ಸದ್ಯಕ್ಕೆ ಮರೆತು, ಪ್ರತಿಸ್ಪರ್ಧಿ ಅರ್ನಾಬ್ ಗೋಸ್ವಾಮಿ ಬಗ್ಗೆ ಮಾತ್ರ ಅಸಹಿಷ್ಣುತೆ ಉಳಿಸಿಕೊಂಡಿರೋದು ನಿಚ್ಚಳವಾಯ್ತು. ಸುಹೇಲ್ ಸೇಠ್ ರಕ್ಷಣಾತ್ಮಕ ಭಾಷಣ ಬಿಗಿದು, ಮಾತಿನ ಓಘದಲ್ಲಿ ಸಹಿಷ್ಣುತೆ ಪ್ರತಿಪಾದಿಸಿದರೋ- ಅಸಹಿಷ್ಣುತೆ ಎಚ್ಚರಿಸಿದರೋ ಅಂತ ಗೊತ್ತಾಗದಂತೆ ಜಾಣತನ ಮೆರೆದರು. ಗ್ಲಾಮರ್ ಗೆ ಇರಲಿ ಅಂತ ಕಾಜೋಲ್ ರನ್ನು ವೇದಿಕೆ ಮೇಲೆ ಇರಿಸಿದಂತಿತ್ತು. ಉಳಿದವರನ್ನು ಕಟಕಟೆಯಲ್ಲಿ ನಿಲ್ಲಿಸುತ್ತಿದ್ದ ನಿವೃತ್ತ ನ್ಯಾಯಮೂರ್ತಿ ಗಂಗೂಲಿ ಅವತ್ತಿನಮಟ್ಟಿಗೆ ತಾವು ಜಾಡಿಸಿಕೊಳ್ಳುವ ಸೌಭಾಗ್ಯಕ್ಕೆಂದೇ ಬಂದಂತಿತ್ತು. ಈ ವಾಗ್ಯುದ್ಧಗಳ ಮುಖ್ಯಾಂಶ ನಿಮ್ಮ ಓದಿಗೆ..

ಅಶೋಕ್ ಗಂಗೂಲಿ: ಅಫ್ಜಲ್ ಗುರು ಕ್ಷಮಾದಾನ ಅರ್ಜಿ ವಿಚಾರಣೆ ಸರಿಯಾದ ರೀತಿಯಲ್ಲಿ ನಡೆಯಲಿಲ್ಲ. ಅವರ ಅರ್ಜಿಯನ್ನು ಫೆ.3ರಂದು ತಿರಸ್ಕರಿಸಲಾಯಿತು. ನಂತರ ವಿಚಾರಣೆ ಫೆ.9ರಂದು ನಡೆಯಿತು. ಇದು ತಪ್ಪು. ಆತನಿಗೆ ಮೇಲ್ಮನವಿ ಸಲ್ಲಿಸುವ ಅಧಿಕಾರವಿತ್ತು. ಇದರ ಬಗ್ಗೆ ಆತನ ಕುಟುಂಬಕ್ಕೆ ಮಾಹಿತಿ ನೀಡಬೇಕಿತ್ತು.

ಅನುಪಮ್ ಖೇರ್: ಸನ್ಮಾನ್ಯ ಗಂಗೂಲಿ ಅವರೇ ನೀವು ಒಬ್ಬ ನ್ಯಾಯಾಧೀಶರಾಗಿ ಸುಪ್ರೀಂ ಕೋರ್ಟ್ ತೀರ್ಪು ತಪ್ಪು ಎಂದು ಹೇಳಿದ ಮಾತು ಕೇಳಿ ಅಘಾತವಾಗಿದೆ. ಅಲ್ಲದೆ ನಾಚಿಕೆಯೂ ಆಗುತ್ತಿದೆ. ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದ್ದಾಗ ಮಾಧ್ಯಮದವರ ದಾಳಿಗೆ ಸಿಲುಕಿದ್ದಿರಿ. ಆದರೆ, ಇವತ್ತು ಜೆಎನ್ ಯು ಪ್ರಕರಣ ಸರಿ ಎಂದು ಹೇಳುತ್ತೀರಾ. ದಯವಿಟ್ಟು ಕ್ಷಮಿಸಿ. ನಿಮಗೆ ಒಂದು ಪ್ರಶ್ನೆ ಕೇಳುತ್ತೇನೆ. ಫೆ.9ರ ಪ್ರಕರಣದಲ್ಲಿ ಭಾಗಿಯಾಗಿದ್ದ ಹುಡುಗನನ್ನು ಹಿರೋ ಆಗಿ ಬಿಂಬಿಸಲಾಗುತ್ತಿದೆ. ಅಲ್ಲಿ ನಡೆದಿದ್ದಾದರು ಏನು? ಭಾರತವನ್ನು ಬರ್ಬಾದ್ ಮಾಡುತ್ತೇವೆ, ತುಂಡು ತುಂಡು ಮಾಡುತ್ತೇವೆ ಎಂಬ ಕೂಗು. ಅಫ್ಜಲ್ ಗುರು ಪರವಾಗಿ ಘೋಷಣೆಗಳು. ಇದನ್ನು ವಿರೋಧಿಸುವ ಬದಲು, ಸುಪ್ರೀಂ ಕೋರ್ಟ್ ಅಫ್ಜಲ್ ಗುರುಗೆ ಶಿಕ್ಷೆ ನೀಡಿದ್ದು ತಪ್ಪು ಎಂದು ಹೇಳುತ್ತೀರಾ?

ಇನ್ನು ಸುರ್ಜೇವಾಲ ಅವರು, ಈವರೆಗೂ ಬಿಜೆಪಿಯವರು ಏನು ಮಾತನಾಡಿದ್ದಾರೆ ಎಂದು ಪಟ್ಟಿ ಮಾಡಿದ್ದೀರಿ. ಆದರೆ, 1984ರಲ್ಲಿ ನಿಮ್ಮ ನಾಯಕಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಜಾರಿ ಮಾಡಿದ್ದನ್ನು ಮರೆತುಬಿಟ್ರಾ? ಈವರೆಗಿನ ದೇಶದ ಅತಿ ದೊಡ್ಡ ಅಸಹಿಷ್ಣುತೆ ಎಂದರೆ ತುರ್ತು ಪರಿಸ್ಥಿತಿ. ಸರ್ಕಾರದ ಬಗ್ಗೆ ಮಾತನಾಡಿದವರನ್ನೇಲ್ಲಾ ಜೈಲಿಗೆ ಹಾಕಲಾಯ್ತು. ಮುಗ್ಧರನ್ನು, ಮಾಧ್ಯಮದವರನ್ನೂ ಸಹ ಬಿಡಲಿಲ್ಲ. ಅದರಲ್ಲಿ ನನ್ನ ಅಜ್ಜ ಸಹ ಒಬ್ಬರು.

ಈ ದೇಶದಲ್ಲಿ ನಿಜವಾದ ಸಹಿಷ್ಮುಗಳೆಂದರೆ ಯಾರು ಗೋತ್ತೇ? ಅದು ಕಾಂಗ್ರೆಸ್ ನವರೇ. ನೀವು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಲು ಮುಂದಾಗುತ್ತಿರುವ ವ್ಯಕ್ತಿಯನ್ನು ಸಹಿಸಿಕೊಳ್ಳೋದೇ ದೊಡ್ಡ ಸಹಿಷ್ಣು ವಿಚಾರ. ನಿಮ್ಮ ಪಕ್ಷದವರೇ ಇದು ತಪ್ಪು ಎಂದು ಒಬ್ಬರಿಗೊಬ್ಬರು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾವು ಎಂಥಾ ಪರಿಸ್ಥಿತಿಯಲ್ಲಿ ಸಿಲುಕಿದ್ದೇವೆ ಎಂದು ಪೇಚಿಗೀಡಾಗಿದ್ದಾರೆ. ಇದು ಆ ವ್ಯಕ್ತಿ ಬಗ್ಗೆ ನೀವು ತೋರುತ್ತಿರುವ ಸಹಿಷ್ಣುತೆ. ಇದೇ ಸಹಿಷ್ಣುತೆಯನ್ನು ಸಂಸತ್ತಿನಲ್ಲೂ ತೋರಿ, ಕಾರ್ಯನಿರ್ವಹಿಸಲು ಬಿಡಿ. ನೀವು ಆ ವ್ಯಕ್ತಿಯನ್ನು ಸಹಿಸಿಕೊಳ್ಳುವುದಾದರೆ, ವಿಶ್ವದ ಯಾವುದೇ ವಿಷಯವನ್ನು ಬೇಕಾದರೂ ಸಹಿಸಿಕೊಳ್ಳಬಹುದು.

8 ತಿಂಗಳಿಗೂ ಹಿಂದೆ ಅಸಹಿಷ್ಣುತೆ ಎಂಬ ಪದ ಕೇಳಿದ್ದೀರಾ? ಕೇಳಿರಲಿಲ್ಲ. ಕಾರಣ, ಈಗ ಇದನ್ನು ಮಾರ್ಕೆಟಿಂಗ್ ಮಾಡಲಾಗಿದೆ. ಪ್ರಧಾನಿ ಪೂರ್ಣ ಬೆಂಬಲದೊಂದಿಗೆ ಗೆದ್ದಿದ್ದಾರೆ. ಒಬ್ಬ ಚಹಾ ಮಾರುತ್ತಿದ್ದವ ಹೇಗೆ ಪ್ರಧಾನಿಯಾದ ಎಂಬುದು ನಿಮ್ಮನ್ನು ಕಾಡುತ್ತಿದೆ. ನಾನು, ಮೋದಿ ಪರವಾಗಿ ಮಾತನಾಡುತ್ತಿಲ್ಲ. ದೇಶದ ಪ್ರಜೆಯಾಗಿ ಹೇಳುತ್ತಿದ್ದೇನೆ. ನನ್ನ ಪತ್ನಿ ಬಿಜೆಪಿ ಸದಸ್ಯೆಯಾದ್ದರಿಂದ ಮೋದಿ ಪರವಾಗಿ ಮಾತನಾಡುತ್ತೇನೆ ಎಂದು ಕೆಲವರು ಹೇಳುತ್ತಾರೆ. 30 ವರ್ಷದ ಹಿಂದೆಯೇ ಪತ್ನಿ ಕಿರಣ್ ಳನ್ನು ಮದುವೆಯಾದೆ. ಆಕೆಯ ಮೇಲಿನ ಪ್ರೀತಿಯನ್ನು ಬಿಜೆಪಿ ಪರ ಮಾತನಾಡುವ ಮೂಲಕ ತೋರುವ ಅಗತ್ಯ ನನಗಿಲ್ಲ.

ಕಳೆದ 10 ವರ್ಷ ನಮ್ಮ ಪ್ರಧಾನಿ ಮೌನ ವಹಿಸಿದ್ದರು. ಆದರೆ, ಈಗಿನ ಪ್ರಧಾನಿ ವಿದೇಶಗಳಲ್ಲಿ ಭಾರತ ದೇಶದ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಧಾನಿ ಕಳೆದ ಎರಡು ವರ್ಷಗಳಲ್ಲಿ ಒಂದೇ ಒಂದು ದಿನ ರಜೆ ತೆಗೆದುಕೊಂಡಿಲ್ಲ. ದೀಪಾವಳಿ ಹಬ್ಬದಂದೂ ಕಾಶ್ಮೀರದಲ್ಲಿ ಭಾಗಿಯಾಗಿ ಆಚರಿಸುತ್ತಾರೆ. ಯುಪಿಎ ಸರ್ಕಾರದ 10 ವರ್ಷಗಳ ಕಾಲ ಬರೀ ಭ್ರಷ್ಟಾಚಾರದ ಬಗ್ಗೆ ಚರ್ಚೆಯಾಗುತ್ತಿತ್ತು. ಕಳೆದ ಎರಡು ವರ್ಷದಲ್ಲಿ ಭ್ರಷ್ಟಾಚಾರದ ಬಗ್ಗೆ ಚರ್ಚೆ ಎದ್ದಿದೆಯೇ? ಈಗ ಅದಕ್ಕೆ ಆಸ್ಪದವಿಲ್ಲ. ಈ ಎಲ್ಲ ಕಾರ್ಯವೈಖರಿ ನಿಮಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮೋದಿಯನ್ನು ನಿಯಂತ್ರಿಸಲು ಏನಾದರು ಮಾಡಬೇಕು ಎಂದು ಹೊಂಚು ಹಾಕಿದಿರಿ. ಆಗ ನಿಮಗೆ ಸಿಕ್ಕಿದ್ದು ಈ ಅಸಹಿಷ್ಣು ಪದ. ಪ್ರಧಾನಿಯನ್ನು ಅಸಹಿಷ್ಣು ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದೀರಿ.

ಈ ಅಸಹಿಷ್ಣು ಬಗ್ಗೆ ಮಾತನಾಡುವವರಾರು ಗೊತ್ತೆ? ಬುದ್ಧಿಜೀವಿಗಳು, ಖ್ಯಾತನಾಮರು, 8-10 ಮಂದಿ ಭದ್ರತಾ ಸಿಬ್ಬಂದಿ ಹೊಂದಿರುವವರು, ಪಂಚತಾರಾ ಹೊಟೇಲ್ ಗಳಲ್ಲಿ ಶಾಂಪೆನ್ ಕುಡಿಯುತ್ತಾ ಮಾತನಾಡುವವರು ಮಾತ್ರ. ಅದೇ ಸಾಮಾನ್ಯ ಜನರನ್ನು ಅಸಹಿಷ್ಣು ಬಗ್ಗೆ ಕೇಳಿದರೆ, ಹಾಗೆಂದರೇನು ಎಂದು ಕೇಳುತ್ತಾರೆ. ನಮಗೆ ದಿನಕ್ಕೆ ಎರಡು ಹೊತ್ತು ಊಟ ಸಿಕ್ಕರೆ ಸಾಕು. ಈ ಬಗ್ಗೆ ಎಲ್ಲ ಮಾತನಾಡುವ ಅಗತ್ಯವಿಲ್ಲ ಎನ್ನುತ್ತಾರೆ. ಅಮೆರಿಕದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅಭ್ಯರ್ಥಿ, ಮುಸಲ್ಮಾನರನ್ನು ದೇಶದಿಂದ ಹೊರ ಹಾಕಬೇಕು ಎಂದು ಹೇಳುತ್ತಿದ್ದಾನೆ. ಅದು ಅಸಹಿಷ್ಣುತೆ.

ರಾಹುಲ್ ಗಾಂಧಿ, ಮೋದಿಯವರ ಒಂದು ಭಾಗದಷ್ಟು ಸಮರ್ಥರಾಗಲಿ, ಅಂದೇ ನನ್ನ ಮತವನ್ನು ರಾಹುಲ್ ಗಾಂಧಿಗೆ ಹಾಕುತ್ತೇನೆ. ಈ ಸರ್ಕಾರಕ್ಕೆ ಕೆಲಸ ಮಾಡಲು ಐದು ವರ್ಷ ಕಾಲಾವಕಾಶ ನೀಡಿ. ಐದು ವರ್ಷ ಮುಗಿದ ನಂತರವೂ ನಿಮಗೆ ಮೋದಿ ಅಸಹಿಷ್ಣು ಎನಿಸಿದರೆ, ಸರ್ಕಾರವನ್ನು ಕಿತ್ತು ಹಾಕಿ. ಕೋಲ್ಕತ್ತಾದಲ್ಲಿ ಇಂದು ನಮ್ಮೆಲ್ಲರ ಮಾತನ್ನು ಸುಮ್ಮನೆ ಕೇಳುತ್ತಿದ್ದಾರಲ್ಲ ಇದು ನಿಜವಾದ ಸಹಿಷ್ಣುತೆ. ಗಂಗೂಲಿ ಅವರೇ, ನಿಮ್ಮ ವಿರುದ್ಧ ಪ್ರಕರಣ ದಾಖಲಾದಾಗ ಮಾಧ್ಯಮದವರು ಎದುರಾದಾಗ, ಕ್ಯಾಮೆರವನ್ನು ತಳ್ಳುತ್ತಿದ್ದಿರಲ್ಲ ಅದು ಅಸಹಿಷ್ಣುತೆ. ಸ್ನೇಹಿತರೆ, ಇದು ಅತ್ಯುತ್ತಮ ದೇಶ. ಈ ರೀತಿಯ ಅಸಹಿಷ್ಣುಗಳ ವಾದವನ್ನು ನಾವು ಸಹಿಸಿಕೊಂಡು ಹೋಗೋಣ. ಧನ್ಯವಾದಗಳು.

ಬರ್ಖಾ ದತ್: ಸಹಿಷ್ಣುತೆ ಮತ್ತು ಅಸಹಿಷ್ಣುತೆ ವಿಷಯವನ್ನು ಇಂದು ರಾಜಕೀಯ, ರಾಷ್ಟ್ರಾಭಿಮಾನ ಪಕ್ಕಕ್ಕಿಟ್ಟು ಚರ್ಚಿಸಬೇಕು. ಇಂದು ಈ ವಿಷಯ ಮೋದಿ ಮತ್ತು ಕಾಂಗ್ರೆಸ್ ಗೆ ಸಂಬಂಧಿಸಿದ ವಿಷಯ ಹೇಗಾಯ್ತು? ನಾನು ಇಲ್ಲಿ ಮೋದಿ ವಿರುದ್ಧವಾಗಿ ಅಥವಾ ಕಾಂಗ್ರೆಸ್ ಪರವಾಗಿ ಮಾತನಾಡಲು ಬಂದಿಲ್ಲ. ಭಾರತದ ಪ್ರಜೆಯಾಗಿ ಇಲ್ಲಿ ನಿಂತಿದ್ದೇನೆ. ಇಲ್ಲಿ ಈ ವಾತಾವರಣ ನಿರ್ಮಾಣವಾದ ಬಗ್ಗೆ ಮಾತನಾಡೋಣ. ಇದನ್ನು ರಾಜಕಾರಣಿಗಳು ನಿರ್ಮಿಸಿದರೆ, ಅಥವಾ ನಾವು ಸೃಷ್ಟಿಸಿಕೊಂಡಿರುವುದೇ? ನಾನು ಪತ್ರಕರ್ತೆಯಾಗಿ, ನನ್ನ ಪ್ರತಿಸ್ಪರ್ಧಿ ಸುದ್ದಿಯನ್ನು ಎಂಟು ಬಾಕ್ಸ್ ನಲ್ಲಿ ವಿಂಗಡಿಸಿ, ಜೋರಾಗಿ ಕಿರುಚುವ ಮೂಲಕ ಪತ್ರಿಕೋದ್ಯಮವನ್ನು ನಡೆಸುತ್ತಿರುವುದಕ್ಕೆ ಬೇಸರವಾಗುತ್ತಿದೆ. ಈ ಪರಿಸ್ಥಿತಿಗೆ ನನ್ನ ಮಾಧ್ಯಮ ಕ್ಷೇತ್ರವೂ ಸಹ ಕಾರಣ. ಸುದ್ದಿಯನ್ನು ನಾಟಕವನ್ನಾಗಿ ಮಾಡಿದ್ದೇವೆ. ಈ ಮಾಧ್ಯಮಗಳಲ್ಲಿ ಕೆಲವರು ರಾಷ್ಟ್ರೀಯತೆ ಮತ್ತು ರಾಷ್ಟ್ರ ವಿರೋಧಿ ಬಗ್ಗೆ ಚರ್ಚಿಸುವ ಮೂಲಕ ನಾವು ಹಿಂದೆ ಬೀಳುವಂತೆ ಮಾಡುತ್ತಿದ್ದಾರೆ. ನಾವು ಭಾರತದ ಹೆಮ್ಮೆಯ ಪ್ರಜೆಗಳು. ನಮ್ಮ ರಾಷ್ಟ್ರಭಕ್ತಿ ಬಗ್ಗೆ ಯಾರೂ ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ. ಜೆಎನ್ ಯು ಪ್ರಕರಣ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕಾರಣ, ಬಂಧನವಾದ ಹುಡುಗ ಸರಿಯಾದ ಆರೋಪಿಯಲ್ಲ. ಈ ಪ್ರಕರಣದಲ್ಲಿ ನಕಲಿ ವಿಡಿಯೋಗಳನ್ನು ಮೂರು ರಾಷ್ಟ್ರೀಯ ವಾಹಿನಿಗಳು ಪದೇ ಪದೇ ತೋರಿಸಿದ್ದು, ಪತ್ರಿಕೋದ್ಯಮ ನೈತಿಕತೆಗೆ ಧಕ್ಕೆ ತಂದಿದೆ. ಅಲ್ಲದೆ ನಾಚಿಕೆಗೇಡಿನ ಕೆಲಸವಾಗಿದೆ.

ಸುಹೇಲ್ ಸೇಠ್: ನಾವೆಲ್ಲರೂ ಸಾಕಷ್ಟು ವಿಷಯಗಳಲ್ಲಿ ಸಹಿಷ್ಣುಗಳಾಗಿದ್ದೇವೆ. ಇದು ಸಹಿಷ್ಣು ದೇವಾಲಯವಿದ್ದಂತೆ. ನಾವು ಕಮ್ಯುನಿಸ್ಟ್ ಗಳನ್ನು ಸಹಿಸಿಕೊಂಡಿದ್ದೇವೆ, ಸರಿಯಾದ ರಸ್ತೆ ಇಲ್ಲದಿರುವುದನ್ನು ಸಹಿಸಿಕೊಂಡಿದ್ದೇವೆ. ನಾವು ಅಸಹಿಷ್ಣುತೆ ಬಗ್ಗೆಯೇ ಅಸಹಿಷ್ಣುಗಳಾಗಬೇಕು. ಬಡತನ, ಅವಕಾಶಕೊರತೆ ಬಗ್ಗೆ ಅಸಹಿಷ್ಣುಗಳಾಗಬೇಕು. ಎಲ್ಲ ಪಕ್ಷದಲ್ಲೂ ಮುರ್ಖರಿದ್ದಾರೆ. ಮೂರ್ಖರಂತೆ ಹೇಳಿಕೆ ಕೋಡುತ್ತಾರೆ. ಈಗ ಮಾಧ್ಯಮಗಳು ಸರ್ಕಸ್ ಗಳಂತಾಗಿವೆ. ಈ ಮೂರ್ಖರ ಹೇಳಿಕೆಗಳನ್ನು ಮಾಧ್ಯಮಗಳು ರಾಷ್ಟ್ರ ಮಟ್ಟದ ಸುದ್ದಿ ಮಾಡುತ್ತಿವೆ. ಅವರ ಮಾತನ್ನು ಪರಿಗಣಿಸಿ ಈಡೀ ದೇಶವೇ ಹಾಗೆ ಇದೆ ಎಂದು ಬಣ್ಣಿಸುವುದು ಸರಿಯಲ್ಲ. ಈ ಮಾಧ್ಯಮಗಳು ಪ್ರತಿ ದಿನ ಸಂಜೆ ತಮ್ಮ ಸರ್ಕಸ್ ನಲ್ಲಿ ದೇಶದ ಸಿದ್ಧಾಂತ ನೆಲಕಚ್ಚಿದೆ, ಅಥವಾ ಹಾದಿ ತಪ್ಪಿದೆ ಎಂಬಂತೆ ಬಿಂಬಿಸುತ್ತಿವೆ. ಈಶಾನ್ಯ ಭಾರತದವರನ್ನು ಚಿಂಕಿ, ದಕ್ಷಿಣ ಭಾರತದವರನ್ನು ಮದ್ರಾಸಿ ಎಂದು ಕರೆಯುತ್ತೇವೆ. ಅದು ಅಸಹಿಷ್ಣುತೆಯಾಗುತ್ತದೆ. ಜೆಎನ್ ಯು ಪ್ರಕರಣದಲ್ಲಿ ಆ ಹುಡುಗ ಏಕೆ ಬಂಧನವಾದ, ಅದು ಕಾನೂನು ಸಹಜ ಪ್ರಕ್ರಿಯೆ. ಮಾಧ್ಯಮಗಳು ಅದನ್ನು ನಿರ್ಧರಿಸಬಾರದು. ನ್ಯಾಯಾಲಯ ನಿರ್ಧರಿಸಲಿದೆ. ಇಡೀ ದೇಶವನ್ನು ಅಸಹಿಷ್ಣುತೆ ಎಂದು ಬಿಂಬಿಸಿ ರಾಜಕೀಯ ಉದ್ದೇಶ ಈಡೇರಿಸಿಕೊಳ್ಳುವುದು ಮೂರ್ಖತನ.

Leave a Reply