ಇಂಜಿನಿಯರ್ ಕೆಲಸ ಬಿಟ್ಟು ಕಾರ್ಟೂನ್ ಕಡೆ ಗಮನ ಹರಿಸಿದವ.. ಆಸ್ಕರ್ ಗೆದ್ದ ಇನ್ ಸೈಡ್ ಔಟ್ ಚಿತ್ರದ ಕಲಾವಿದ!

ಡಿಜಿಟಲ್ ಕನ್ನಡ ಟೀಮ್

ಕೆಲ ದಿನಗಳ ಹಿಂದೆ ನಡೆದ 88ನೇ ಅಕಾಡೆಮಿ ಅವಾರ್ಡ್ ಸಮಾರಂಭದಲ್ಲಿ ಹೆಚ್ಚು ಸದ್ದು ಮಾಡಿದ ಭಾರತೀಯ ಎಂದರೆ ಪ್ರಿಯಾಂಕ ಚೋಪ್ರಾ. ಶ್ವೇತ ವರ್ಣದ ಪೋಷಾಕಿನಲ್ಲಿ ಕಂಗೊಳಿಸಿ, ಗೂಗಲ್ ನಲ್ಲಿ ಅತಿ ಹೆಚ್ಚು ಶೋಧ ಮಾಡಲಾದ ಎರಡನೇ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ್ದರು. ಆದರೆ, ಅದೇ ಪ್ರಶಸ್ತಿ ಸಮಾರಂಭದಲ್ಲಿ ಮತ್ತೊಬ್ಬ ಭಾರತೀಯ ಆಸ್ಕರ್ ಪ್ರಶಸ್ತಿಯ ಭಾಗವಾಗಿದ್ದ ಎಂಬುದು ಎಷ್ಟೋ ಜನಕ್ಕೆ ತಿಳಿಯದೇ ಹೋಯಿತು.

ಅರೆ, ಭಾರತೀಯನಿಗೆ ಆಸ್ಕರ್ ಪ್ರಶಸ್ತಿ ಬಂತೇ ಎಂದು ನೀವು ಪ್ರಶ್ನಿಸಬಹುದು? ಇಲ್ಲ, ಭಾರತೀಯನಿಗೆ ಈ ಪ್ರಶಸ್ತಿ ಬರಲಿಲ್ಲ. ಆದರೆ, ಪ್ರಶಸ್ತಿ ಗೆದ್ದ ಸಿನಿಮಾವೊಂದರಲ್ಲಿ ಭಾರತೀಯ ಕಲಾವಿದನ ಪಾತ್ರವಿರುವುದು ವಿಶೇಷ. ಯಾರು ಈ ಕಲಾವಿದ? ಏನು ಆತನ ಪಾತ್ರ ಏನು ಎಂಬ ಮಾಹಿತಿ ಇಲ್ಲಿದೆ.

ಇನ್ ಸೈಡ್ ಔಟ್.. ಈ ಬಾರಿ ಆಸ್ಕರ್ ನಲ್ಲಿ ಅತ್ಯುತ್ತಮ ಅನಿಮೇಷನ್ ಪ್ರಶಸ್ತಿ ಪಡೆದ ಚಿತ್ರ. ಈ ಚಿತ್ರದಲ್ಲಿ ಕೇರಳ ಮೂಲದ ಸಾಜನ್ ಸ್ಕರಿಯಾ ಎಂಬ ಕಲಾವಿದ ಚಿತ್ರ ನಿರ್ಮಾಣದ ಭಾಗವಾಗಿದ್ದರು. ಈ ಚಿತ್ರ ನಿರ್ಮಿಸಿದ ಪಿಕ್ಸರ್ ಅನಿಮೇಷನ್ ಸ್ಟುಡಿಯೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಸಾಜನ್. ಅಲ್ಲದೆ ಇನ್ ಸೈಡ್ ಔಟ್ ಚಿತ್ರದ ಪಾತ್ರಗಳ ಮೇಲುಸ್ತುವಾರಿಯನ್ನು ವಹಿಸಿದ್ದರು. ಈತ ಮೂಲತಃ ಇಂಜಿನಿಯರ್. ಆದರೆ ಈತ ಅನಿಮೇಷನ್ ಕಡೆಗೆ ಬಂದ ಹಾದಿಯೇ ವಿಭಿನ್ನ.

ಹೌದು.. ಸಾಜನ್ ಹಾದಿ ನೋಡಿದರೆ, ನಮಗೆ ನೆನಪಾಗೋದು 3 ಈಡಿಯಟ್ಸ್ ಚಿತ್ರದಲ್ಲಿ ಮಾಧವನ್ ಪಾತ್ರ. ಕಾರಣ, ಚಿಕ್ಕ ವಯಸ್ಸಿನಿಂದಲೇ ಕಾರ್ಟೂನ್ ಎಂಬುದು ಸಾಜನ್ ಕನಸಾಗಿತ್ತು. ಕಲ್ಲಿಕೋಟೆಯ ರೀಜನಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದ ಸಾಜನ್, ನಂತರ ಇಂಜಿನಿಯರ್ ಆಗಿ ಸೇರಿದ್ದು ಸಿಮೆನ್ಸ್ ಎಂಬ ಕಂಪನಿಗೆ. ಆದರೆ ಜರ್ಮನ್ ಮೂಲದ ತನ್ನ ಬಾಸ್ ಜತೆಗಿನ ಒಂದೇ ಒಂದು ಮಾತುಕತೆ ಈತನ ಜೀವನದ ಹಾದಿಗೆ ಹೊಸ ದಿಕ್ಕು ತೋರಿತು.

ಒಂದು ದಿನ ಸಾಜನ್ ಬರೆದ ಕಾರ್ಟೂನ್ ನೋಡಿ ಮನಸೋತ ಬಾಸ್ ಹೇಳಿದ್ದು, ‘ಅತ್ಯುತ್ತಮ ಕಲೆ. ನೀನು ಇಂಜಿನಿಯರ್ ಆಗಿ ಸಮಯ ವ್ಯರ್ಥ ಮಾಡಬೇಡ’ ಎಂದು.

ಈ ಮಾತು ಸಾಜನ್ ಮನಸ್ಸಿನಲ್ಲಿ ಹೆಚ್ಚು ಕಾಡಲಾರಂಭಿಸಿತು. ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಸಾಜನ್, ತನ್ನ ಜೀವನದ ಗತಿಯನ್ನೇ ಬದಲಿಸಿಕೊಂಡು, ಅನಿಮೇಷನ್ ನತ್ತ ಗಮನ ಹರಿಸಿದರು. ನಂತರ ಸಾಜನ್ ಹಿಂತಿರುಗಿ ನೋಡಿದ್ದೇ ಇಲ್ಲ. ಈಗ ಸಾಜನ್ ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದಾರೆ.

ನಮ್ಮಲ್ಲಿ ಅದೆಷ್ಟೋ ಜನ ಯಾರದೋ ಒತ್ತಡಕ್ಕೊ, ಅಥವಾ ಪ್ರತಿಷ್ಠೆಗಾಗಿ ತಮ್ಮ ಆಸಕ್ತಿಗೆ ವಿರುದ್ಧವಾಗಿ ಇಂಜಿನಿಯರಿಂಗ್ ಹಾಗೂ ಇತರೆ ವಿದ್ಯಾಭ್ಯಾಸ ಮಾಡಿ ಅದೇ ಕೆಲಸದಲ್ಲಿ ಮನಸ್ಸಿಲ್ಲದಿದ್ದರೂ ನರಳಾಡುತ್ತಿದ್ದಾರೆ. ತಮ್ಮ ಆಸಕ್ತಿಯ ಹಾದಿಯನ್ನು ಹಿಡಿದ ಸಾಜನ್, ಇತರರಿಗೂ ಸ್ಫೂರ್ತಿ.

Leave a Reply