ಈ ಹೊತ್ತಿನ 2 ಸುದ್ದಿ ಹಾಗೂ ಈ ವಾರ ಮಿಸ್ ಮಾಡಿಕೊಂಡಿರಬಹುದಾದ 2 ವಿಕ್ಷಿಪ್ತ ಸುದ್ದಿಗಳು

ಉಗ್ರದಾಳಿ ಸೂಚನೆ, ಕಟ್ಟೆಚ್ಚರ

ಸಮುದ್ರ ಮಾರ್ಗವಾಗಿ ಭಾರತದ ಒಳಗೆ 10 ಉಗ್ರಗಾಮಿಗಳು ಪ್ರವೇಶಿಸಿರುವ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಗುಜರಾತ್ ನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕೇವಲ ಗುಜರಾತ್ ಮಾತ್ರವಲ್ಲದೇ, ದೆಹಲಿ, ಮುಂಬೈ ಹಾಗೂ ಇತರೆ ನಗರಗಳಲ್ಲೂ ಭದ್ರತೆ ಹೆಚ್ಚಿಸಲಾಗಿದೆ. ಬಂದಿರುವ ಮಾಹಿತಿ ಪ್ರಕಾರ ಈ 10 ಉಗ್ರರೂ ಆತ್ಮಹುತಿ ದಾಳಿಕೋರರಾಗಿದ್ದು, ಭಾರತದಲ್ಲಿ ತೀವ್ರ ಸ್ವರೂಪದ ದಾಳಿಗೆ ಸಂಚು ರೂಪಿಸಲಾಗಿದೆ. ಗುಜರಾತ್ ನಲ್ಲಿ 4 ರಾಷ್ಟ್ರೀಯ ಭದ್ರತಾ ದಳದ ತಂಡವನ್ನು ನಿಯೋಜಿಸಲಾಗಿದೆ. ಅಲ್ಲದೆ ಪೊಲೀಸ್ ಅಧಿಕಾರಿಗಳ ತುರ್ತು ಸಭೆ ಸಹ ನಡೆದಿದ್ದು, ಭದ್ರತೆ ಬಗ್ಗೆ ಚರ್ಚಿಸಲಾಗಿದೆ.

ಇನ್ನು ಕೋಲ್ಕತಾದಲ್ಲಿರುವ ನೇತಾಜಿ ಸುಭಾಶ್ ಚಂದ್ರ ಬೋಸ್ ವಿಮಾನ ನಿಲ್ದಾಣವನ್ನು 24 ತಾಸಿನಲ್ಲಿ ಸ್ಫೋಟಿಸುವುದಗಿ ಬೆದರಿಕೆಯ ಇ ಮೇಲ್ ಸಹ ಬಂದಿದೆ. ಭಾನುವಾರ ಬೆಳಗ್ಗೆ ಜರ್ಮನಿಯಿಂದ ಈ ಮೇಲ್ ಬಂದಿದೆ. ಈ ಹಿನ್ನೆಲೆಯಲ್ಲಿ ಕೋಲ್ಕತಾದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

ವಿಶ್ವ ಚಾಂಪಿಯನ್ ಶಿಪ್ ಭಾರತಕ್ಕೆ ಡಬಲ್ ಚಿನ್ನ

ಭಾರತ ಪುರುಷ ಮತ್ತು ಮಹಿಳಾ ಟೇಬಲ್ ಟೆನಿಸ್ ತಂಡ ಆಕರ್ಷಕ ಪ್ರದರ್ಶನ ನೀಡಿದ್ದು, ವಿಶ್ವ ಟೀಮ್ ಚಾಂಪಿಯನ್ ಶಿಪ್ ನಲ್ಲಿ ತಲಾ ಚಿನ್ನದ ಪದಕ ಜಯಿಸಿದೆ. ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯಗಳಲ್ಲಿ ಭಾರತ ಪುರುಷರ ತಂಡ ಬ್ರೆಜಿಲ್ ವಿರುದ್ಧ 3-2 ಅಂತರದಲ್ಲಿ, ಮಹಿಳಾ ತಂಡ ಲುಕ್ಸೆನ್ ಬರ್ಗ್ ವಿರುದ್ಧ 3-1 ಅಂತರದಲ್ಲಿ ಜಯಿಸಿದ್ದಾರೆ. ಪುರುಷರ ತಂಡ ಮೊದಲ ಲೀಗ್ ಪಂದ್ಯದಲ್ಲಿ ಸೋಲನುಭವಿಸಿತ್ತಾದರೂ ನಂತರ ಆಕರ್ಷಕ ಪ್ರದರ್ಶನದೊಂದಿಗೆ ಪ್ರಶಸ್ತಿ ಗೆದ್ದುಕೊಂಡಿದೆ. ಇನ್ನು ಮಹಿಳಾ ತಂಡ ಇದೇ ಮೊದಲ ಬಾರಿಗೆ ಟೂರ್ನಿಯ 8 ಪಂದ್ಯಗಳನ್ನು ಗೆದ್ದು ಅಜೇಯವಾಗಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಆಟಗಾರ್ತಿ ಮೆದುಳು ದಾನ

ಅಮೆರಿಕಾ ಮಹಿಳಾ ಪುಟ್ ಬಾಲ್ ತಂಡದ ನಿವೃತ್ತ ಆಟಗಾರ್ತಿ ಬ್ರಾಂಡಿ ಚಸ್ಟೈನ್ ತನ್ನ ಮೆದುಳನ್ನು ಸಿಟಿಇ ಸಂಶೋಧನೆಗಾಗಿ ಬೊಸ್ಟನ್ ವಿಶ್ವವಿದ್ಯಾಲಯದ ಕನ್ಕುಷನ್ ಲೆಗಸಿ ಫೌಂಡೇಶನ್ ಮತ್ತು ಸಂಶೋಧನಾ ಸಂಸ್ಥೆಗೆ ಮರಣೋತ್ತರ ದಾನ ಮಾಡುವುದಾಗಿ ಘೋಷಿಸಿದ್ದಾರೆ.

ಈ ದಾನಕ್ಕೊಂದು ಮಹತ್ವವಿದೆ. ಅದೆಂದರೆ ಬ್ರೈನ್ ಟ್ಯೂಮರ್ ಅಧ್ಯಯನಕ್ಕೆ ಇದು ಸಹಕಾರಿ. ಅಲ್ಲದೇ ಫುಟ್ಬಾಲ್ ಆಟಗಾರರಲ್ಲಿ ಈ ರೋಗ ಹೆಚ್ಚಾಗಿ ವರದಿಯಾಗುವ ದಾಖಲೆಗಳಿರುವುದರಿಂದ, ಈ ಬಗ್ಗೆ ಆಳ ಅಧ್ಯಯನಕ್ಕೆ ನೆರವಾಗಲಿದೆ.

47 ವರ್ಷದ ಬ್ರಾಂಡಿ ಅವರಿಗೆ ಒಂದು ಗಂಡು ಮಗುವಿದೆ ಮತ್ತು ಈಕೆ ಈಸ್ಟ್ ಹಾರ್ಟ್ ಪೊರ್ಡ್ ಪುಟ್ ಬಾಲ್ ಕ್ಲಬ್ ತರಬೇತುದಾರೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 1999ರ ವಿಶ್ವಕಪ್ ಫೈನಲ್ ನಲ್ಲಿ ಚೀನಾ ವಿರುದ್ಧ ಗಳಿಸಿದ ಗೆಲುವಿನ ಗೋಲು ಈಕೆಯ ಅತ್ಯುತ್ತಮ ಪ್ರದರ್ಶನ ಮತ್ತು ಈ ವೇಳೆ ತನ್ನ ಜೆರ್ಸಿ ತಿರುಗಿಸಿ ಸಂಭ್ರಮಿಸಿದ್ದು ಕೂಡ ವಿಶೇಷವಾಗಿತ್ತು.

ಪಕ್ಷಿಯೊಂದರ ವಿಸರ್ಜನೆ ವಿದ್ಯುತ್ ಸ್ಥಾವರ ಸ್ಥಗಿತಗೊಳಿಸ್ತು!

ಪಕ್ಷಿಯೊಂದು ಮಲ ವಿಸರ್ಜಿಸಿದ ಕಾರಣಕ್ಕೆ ಪರಮಾಣು ವಿದ್ಯುತ್ ಸ್ಥಾವರ ಘಟಕ ಸ್ಥಗಿತಗೊಂಡ ಅಪರೂಪದ ಘಟನೆ ಅಮೆರಿಕಾದ ನೂಯಾರ್ಕ್ ನಗರದಿಂದ ವರದಿಯಾಗಿದೆ. ಇದಾಗಿದ್ದು ಕಳೆದ ಡಿಸೆಂಬರ್ ನಲ್ಲಿ. ಆದರೆ ಆಗ 3 ದಿನಗಳ ಕಾಲ ಪರಮಾಣು ವಿದ್ಯುತ್ ಸ್ಥಾವರ ಸ್ಥಗಿತಗೊಂಡಿದ್ದಕ್ಕೆ ಕಾರಣ ತಿಳೀತಿರೋದು ಮಾತ್ರ ಈಗ.

‘ಪಕ್ಷಿಯ ಮಲ ವಿಸರ್ಜನೆಯಿಂದ ತೊಂದರೆ ಆಗಿದೆ. ತಂತಿಗಳು ಮತ್ತು ವಿದ್ಯುತ್ ಪ್ರಸರಣದ ನಡುವೆ ಸಮಸ್ಯೆ ಉದ್ಭವಿಸಿದೆ. ಈ ಕಾರಣಕ್ಕೆ ವಿದ್ಯುತ್ ಕಳುಹಿಸುವ ಜನರೇಟರ್ ಯಂತ್ರಗಳು ಸ್ವಯಂ ಚಾಲಿತವಾಗಿ ಸ್ಥಗಿತಗೊಂಡಿವೆ’ ಅನ್ನೋದು ಇದರ ಲೋಪದ ವಿಚಾರಣೆಗೆ ನಿಯುಕ್ತಿಗೊಂಡಿದ್ದವರು ನೀಡಿರೋ ವರದಿ. ಕೇಂದ್ರದ ಸುತ್ತ ಹಕ್ಕಿಗಳು ಸುಳಿಯದಂತೆ ಎತ್ತರದ ಗೋಪುರಗಳನ್ನು ನಿರ್ಮಿಸಿ ವೀಕ್ಷಕರನ್ನು ನೇಮಿಸಲಾಗಿದೆ. ಈ ಹಿಂದೆಯು ಇಂತಹ ಹಲವು ಘಟನೆಗಳು ಸಂಭವಿಸಿದ್ದರೂ ಕಾರಣ ಹುಡುಕುವಲ್ಲಿ ಸಫಲರಾಗಿರಲಿಲ್ಲ. ಆದರೆ ಈ ಬಾರಿ ಸ್ಥಗಿತಕ್ಕೆ ಕಾರಣವಾದ ಪಕ್ಷಿ ಸತ್ತಿರೋದು ಕಂಡುಬಂದಾಗ ಅನುಮಾನಗಳು ಬಗೆಹರಿದಿವೆ.

Leave a Reply