ಸಿಂಚು ದೋಸೆ, ಸಾಯಿರಾಮ್ಸ್ ಚಾಟ್ಸ್ ಮತ್ತು ಮೋದಿ ಸ್ಟಾರ್ಟಪ್‌ ನಡುವೆ ನಮ್ಮ ರಾಮಣ್ಣ..!

kodsaraವಿನಾಯಕ ಕೋಡ್ಸರ

ಗಾಂಧೀಜಿಯವರ ಆತ್ಮಕತೆ ‘ಸತ್ಯಾನ್ವೇಷಣೆ’ ಓದುತ್ತಿದ್ದೆ. ಗೋಡ್ಸೆ ಗಾಂಧಿಯನ್ನು ಕೊಂದ ಎಂಬ ಕಾರಣಕ್ಕೆ ಗೋಡ್ಸೆ ಬಳಗವನ್ನು ವಿರೋಧಿಸುವ ಒಂದಷ್ಟು ಜನ. ಗೋಡ್ಸೆ ವಿರೋಧಿಗಳು ಎಂಬ ಕಾರಣಕ್ಕೆ ಗಾಂಧಿಯವರನ್ನು ಜರಿಯುವ ಮತ್ತೊಂದಷ್ಟು ಜನ. ಈ ಸಂಘರ್ಷದಲ್ಲಿ ಗಾಂಧೀಜಿ ಆಲೋಚನೆಗಳು ಕಳೆದು ಹೋದವೇನೋ ಎಂದು ಆಲೋಚಿಸುವ ಹೊತ್ತಿಗೆ ಪ್ರಧಾನಿ ಮೋದಿ ‘ಸ್ಟಾರ್ಟಪ್‌ ಇಂಡಿಯಾ’ಕ್ಕೆ ಕರೆ ಕೊಟ್ಟಿದ್ದಾರೆ.

ದಕ್ಷಿಣಾಫ್ರಿಕದಲ್ಲಿ ತಮ್ಮ ಮಗನಿಗೆ ವಿದ್ಯಾಭ್ಯಾಸ ಕೊಡಿಸಲು ಗಾಂಧೀಜಿ ಹೆಣಗುತ್ತಾರೆ. ಗುಜರಾತಿ ಭಾಷೆಯಲ್ಲಿಯೇ ಅವನ ವಿದ್ಯಾಭ್ಯಾಸ ನಡೆಯಬೇಕು ಎಂಬುದು ಅವರ ಬಯಕೆ. ಕೊನೆಗೆ ಅದು ಸಾಧ್ಯವಾಗುವುದಿಲ್ಲ. ಆಗ ಗಾಂಧೀಜಿ ಹೀಗೆ ಬರೆಯುತ್ತಾರೆ: “ಗುಲಾಮಗಿರಿಯ ಕೋಟೆಗಳಾಗಿರುವ ಸ್ಕೂಲು ಕಾಲೇಜುಗಳನ್ನು ತೊರೆದು ಬನ್ನಿ. ಗುಲಾಮಗಿರಿಯ ಸಂಕೋಲೆಗಳೊಡನೆ ಅಕ್ಷರ ಜ್ಞಾನವನ್ನು ಸಂಪಾದಿಸುವುದರ ಬದಲು, ಸ್ವಾತಂತ್ರ್ಯಕ್ಕಾಗಿ ಕಲ್ಲು ಒಡೆಯುತ್ತಾ ಅನಕ್ಷರಸ್ಥರಾಗಿ ಉಳಿಯುವುದು ಉತ್ತಮ”.

ಯಾಕೊ, ಗಾಂಧೀಜಿಯವರ ಈ ಸಾಲುಗಳು ತುಂಬಾ ಕಾಡುತ್ತಿವೆ. ಇಂದಿನ ಶಿಕ್ಷಣ ವ್ಯವಸ್ಥೆ ಒಂದು ರೀತಿ ಪ್ರಾಡಕ್ಟ್‌ಗಳನ್ನು ಹುಟ್ಟುಹಾಕುವ ಸಂಸ್ಥೆಯಾಗಿ ಕಾಣಿಸುತ್ತಿದೆ. ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಬೇರಿಂಗ್‌ ಉತ್ಪಾದಿಸುವ ಕಂಪನಿಯಲ್ಲೋ, ಆಪ್‌ ತಯಾರಿಸುವ ಸಂಸ್ಥೆಯಲ್ಲೋ, ಮೆಮೊರಿ ಚಿಪ್‌ಗಳಲ್ಲಿ ಪ್ರೋಗ್ರಾಂ ತುರುಕುವ ಜಗತ್ತಿನಲ್ಲೋ, ಸಾಮಾನ್ಯರ ರಕ್ತ ಹೀರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲೋ ಗುಲಾಮಗಿರಿಗೆ ಸಜ್ಜಾಗಿ ಒಂದಷ್ಟು ಪ್ರಾಡಕ್ಟ್‌ಗಳು ಹೊರಬರುತ್ತವೆ.

ಈ ಸಾಲುಗಳು ನಿಮಗೆ ರುಚಿಸದೆ ಇರಬಹುದು. ನಾವು ನಮ್ಮ ಇಚ್ಛೆಯಿಂದ ಕೋರ್ಸ್‌ ಮಾಡಿದ್ದೇವೆ. ನೀವೇಕೆ ಅದನ್ನು ಗುಲಾಮಗಿರಿ ಎನ್ನುವಿರಿ? ಎಂದು ಪ್ರಶ್ನಿಸಬಹುದು. ಫೈನ್‌, ನೀವು ಕೋರ್ಸನ್ನು ಇಚ್ಛೆಯಿಂದಲೇ ಮಾಡಿದ್ದೀರಿ. ಆದರೆ ಕೋರ್ಸ್‌ ಮುಗಿಸಿದ ಶೇ.೭೦ರಷ್ಟು ಮಂದಿಯನ್ನು ಕೇಳಿನೋಡಿ. ಅವರ್ಯಾರು ಇಚ್ಛೆಯಂತೆ ಕೆಲಸ ಮಾಡುತ್ತಿರುವುದಿಲ್ಲ! ಶಿಕ್ಷಣಕ್ಕಾಗಿ ಮಾಡಿದ ಸಾಲ ತೀರಿಸಲಿಕ್ಕೋ, ದಿನನಿತ್ಯದ ಬದುಕಿಗಾಗಿಯೋ ತಾವು ಮಾಡಿದ ಕೋರ್ಸ್‌ನಲ್ಲಿ ಉತ್ತಮ ಸಂಬಳ ಸಿಗಬಹುದಾದ ಕೆಲಸ ಮಾಡುತ್ತಿರುತ್ತಾರೆ. ಹಾಗಂತ ನಾನು ಹೇಳುತ್ತಿಲ್ಲ. ಕೆಲಸ ಮಾಡುವ ಹಲವರು ಹೇಳುತ್ತಾರೆ!

‘ಅದೇ ಲೈಫು ಗುರು. ಅದೇ ಆಫೀಸು, ಅದೇ ಕೆಲಸ’ ಎಂದು ನಿರುತ್ಸಾಹದಿಂದ ಹೇಳುವವರೇ ನಮ್ಮಲ್ಲಿ ಹೆಚ್ಚು ಬಿಟ್ಟರೆ, ವಾವ್‌ ಅದ್ಭುತವಾದ ಕೆಲಸ. ದಿನ ಕಳೆದಿದ್ದೆ ಗೊತ್ತಾಗುವುದಿಲ್ಲ ಎಂಬುವವರು ಕಡಿಮೆ. ಇಂಥ ಹೊತ್ತಿನಲ್ಲಿ ಮೋದಿ ‘ಮೇಕ್‌ ಇನ್‌ ಇಂಡಿಯಾ’ ಕನಸು ಘೋಷಿಸಿದ್ದಾರೆ. ಸ್ಟಾರ್ಟಪ್‌ಗಳಿಗೆ ಹೊಸ ಯೋಜನೆ ಅನೌನ್ಸ್‌ ಮಾಡಿದ್ದಾರೆ. ಅದೆನೇನೋ ವಿನಾಯಿತಿಗಳು. ನೀವು ನಿಮ್ಮ ಬುದ್ಧಿ ಉಪಯೋಗಿಸಿ ಸ್ವಂತ ಕೆಲಸ ಮಾಡಿ. ಖುಷಿಪಡಿ. ಸಾಕಷ್ಟು ಗಳಿಕೆ ಮಾಡಿರಿ. ನಿಜಕ್ಕು ಭಾರತ ಹೆಮ್ಮೆಪಡುವ ಕೆಲಸ. ಮತ್ತೊಂದಷ್ಟು ಬೇರಿಂಗ್‌ ಉತ್ಪಾದನೆ ಕಂಪನಿಗಳು, ತರತರೇವಾರಿ ಪ್ರೊಗ್ರಾಂಗಳನ್ನು ಬರೆದು ಸಾಫ್ಟ್‌ವೇರ್‌ ಹುಟ್ಟುಹಾಕುವ ಸಂಸ್ಥೆಗಳು, ಆನ್‌ಲೈನ್‌ ಆರ್ಡರ್‌ ಮಾಡಿದರೆ ಡೋರ್‌ ಡಿಲೆವರಿ ಕೊಡುವ ಸ್ಟಾರ್ಟಪ್‌ಗಳು ಹುಟ್ಟುತ್ತವೆ.

ಇನ್‌ ಬಿಟ್ವೀನ್‌ ಮಲ್ಲೇಶ್ವರಂನ ೯ನೇ ಕ್ರಾಸ್‌ನಲ್ಲಿ ಸಿಂಚು ದೋಸೆ ಅಂತೊಂದು ಕೈಗಾಡಿ ದೋಸೆ ಸೆಂಟರ್‌ ಇದೆ. ಆಟೋದಲ್ಲಿ ೯೯ ಥರದ ದೋಸೆ ಮಾಡುತ್ತಾನೆ. ಅವರ ಬುಟ್ಟಿಯಲ್ಲಿ ಬೇಬಿಕಾರ್ನ್‌, ಸ್ವೀಟ್‌ ಕಾರ್ನ್‌, ಪನ್ನೀರ್‌, ಚೀಸು ಸೇರಿ ೧೪ ಐಟಂಗಳಿದೆ. ನಮಗೆ ಗಣಿತದಲ್ಲಿ ಫರ್ಮ್ಯುಟೇಷನ್‌ ಮತ್ತು ಕಾಂಬಿನೇಷನ್‌ ಅಂತೊಂದು ಪಾಠವಿತ್ತು. ಅದನ್ನು ಆತ ಅದೆಷ್ಟು ಚೆನ್ನಾಗಿ ಬಳಿಸಿಕೊಂಡಿದ್ದಾನೆ ಎಂದರೆ, ಕೇವಲ ೧೫ ಐಟಂಗಳಿಂದ ೯೯ ದೋಸೆ ಮಾಡುತ್ತಾನೆ.

ಮೊನ್ನೆ ಇಂಗ್ಲಿಷ್‌ ಪತ್ರಿಕೆಯೊಂದರಲ್ಲಿ(ಎಕನಾಮಿಕ್‌ ಟೈಮ್ಸ್‌) ಒಂದು ವರದಿ ಮಾಡಿತ್ತು. ನಮ್ಮ ದೇಶದಲ್ಲಿ ಶೇ.೮೦ರಷ್ಟು ಸ್ಟಾರ್ಟಪ್‌ಗಳು ಮೊದಲ ವರ್ಷದ ಹುಟ್ಟುಹಬ್ಬವನ್ನೇ ಆಚರಿಸಿಕೊಳ್ಳುತ್ತಿಲ್ಲ ಎಂದು! ಮೈಸೂರು-ಹುಣಸೂರು ಹೈವೆಯ ಹೂಟಗಳ್ಳಿಯಲ್ಲಿ ಪ್ರಿಯದರ್ಶಿನಿ ಅಂತೊಂದು ಹೊಟೆಲ್‌ ಇದೆ. ಅಲ್ಲಿ ಸಂಕ್ರಾಂತಿ ಪ್ರಯುಕ್ತ ಸದಸ್ಯರಿಗೆ ಏನೋ ಸ್ಪರ್ಧೆ. ೨೫ ಕೆಜಿ ಅಕ್ಕಿ ಗೆಲ್ಲುವ ಅವಕಾಶ ಎಂದಿತ್ತು. ನಂಗೆ ಸಖತ್‌ ಇಷ್ಟ ಆಯ್ತು. ಅಕ್ಕಿ ಗೆಲ್ಲುವ ಅವಕಾಶ. ವಾವ್‌ ಅನ್ನಿಸ್ತು. ಫಿಜ್ಜಾ ಜೊತೆ ಬರ್ಗರ್‌ ಫ್ರಿ ಎಂಬ ಕಾಲದಲ್ಲಿ ಭತ್ತದ ಕೃಷಿಕನ ಪರವಾಗಿ ಆಲೋಚಿಸಿ ಅಕ್ಕಿಯನ್ನು ಬಹುಮಾನವಾಗಿ ಇಟ್ಟ ಆ ಹೊಟೆಲ್‌ ಕುರಿತು ತುಂಬಾ ಖುಷಿಯಾಯ್ತು.

ಸ್ಟಾರ್ಟಪ್‌ಗಳ ಬಗ್ಗೆ ಮಾತಾಡುತ್ತಿದ್ವಿ. ಅದೇ ನನ್ನ ಹಾಗೆ ಅಲ್ಲಿ ದುಡಿಯುವುದು ಗುಲಾಮಿತನ, ಇಲ್ಲಿ ಕೆಲಸ ಮಾಡುವುದು ಕಷ್ಟ ಅಂತ ಆಲೋಚಿಸಿ ಉಮೇದಿನಲ್ಲಿ ಸ್ಟಾರ್ಟಪ್‌ ಮಾಡುವ ಮನಸ್ಸುಗಳು ಸಾಕಷ್ಟಿವೆ. ಒಂದಷ್ಟಕ್ಕೆ ಹೂಡಿಕೆದಾರರು ಸಿಗುತ್ತಾರೆ. ಅಷ್ಟಾಗಿಯೂ ವರ್ಷಕ್ಕೆ ಯಶಸ್ಸಾಗುವುದು ಶೇ.೨೦ರಷ್ಟು ಸ್ಟಾರ್ಟಪ್‌ಗಳು ಮಾತ್ರ. ಕಾರಣ ಮಾರುಕಟ್ಟೆಯನ್ನು ಆವರಿಸಿರುವ ದೊಡ್ಡ ಬಂಡವಾಳಗಾರರು ಹಾಗೂ ಅವರು ಮಾರುಕಟ್ಟೆಯನ್ನೇ ಬಾಚಿಕೊಂಡು ನೀಡುತ್ತಿರುವ ಸ್ಪರ್ಧೆ.

ಸಿಂಚು ದೋಸೆ ಕಥೆಗಿನ್ನು ಲಿಂಕ್‌ ಸಿಕ್ಕಿಲ್ಲ . ಅದೇ ಕಥೆ ಮುಂದುವರಿಸುತ್ತ ಅಲ್ಲಿಂದ ಮುಂದೆ ಸಾಗಿದರೆ ಸಿಗುವ ಸಾಯಿರಾಂ ಚಾಟ್ಸ್‌ ಸೆಂಟರ್‌ ಬಗ್ಗೆ ಹೇಳ್ತೀನಿ. ಮಲ್ಲೇಶ್ವರಂ ೧೫ ಕ್ರಾಸ್‌ನಲ್ಲಿರುವ ಸಾಯಿರಾಂನಲ್ಲೂ ೯೯ ವಿಧದ ಚಾಟ್ಸ್‌ಗಳಿವೆ ಮತ್ತು ಎಲ್ಲವೂ ಬಾಯಲ್ಲಿ ನೀರೂರಿಸುವವು. ಅಲ್ಲಿಂದ ಕಾರ್ಡ್‌ ರಸ್ತೆಗೆ ಬಂದರೆ ಅಜ್ಜನೊಬ್ಬ ಖರ್ಜೂರ, ದ್ರಾಕ್ಷಿ ಮಾರುತ್ತಾನೆ. ಅಲ್ಲಿಗೆ ಬರುವ ಪೊಲೀಸ್‌ ಪೇದೆ ೨೦೦ ರೂ. ಮಾಮೂಲು ಕೊಡಲ್ಲ ಎಂದ ಅಜ್ಜನನ್ನು ತಳಿಸಿ ಅಂಗಡಿ ಎತ್ತಂಗಡಿ ಮಾಡುತ್ತಾನೆ. ಬೀಟ್‌ ಪೊಲೀಸ್‌ನೊಬ್ಬ ಹಾದಿಯಲ್ಲಿ ಟೈಪ್‌ ರೈಟ್‌ ಮಾಡುವ ವೃದ್ಧನನ್ನು ತಳ್ಳಿಸಿದ ದೃಶ್ಯ ಕೆಲ ತಿಂಗಳ ಹಿಂದೆ ಮಾಧ್ಯಮಗಳಲ್ಲಿ ಬಿತ್ತರಗೊಂಡಿತ್ತು. ಅಂಥ ಅದೆಷ್ಟು ಘಟನೆಗಳು ನಿತ್ಯವೂ ನಡೆಯುತ್ತವೆಯೋ ಗೊತ್ತಿಲ್ಲ.

ನಾವೀಗ ಆನ್‌ಲೈನ್‌ ಯುಗದಲ್ಲಿದ್ದೇವೆ. ಕುಳಿತಲ್ಲೇ ಎಲ್ಲವೂ ಆಗಬೇಕು. ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಭಾರತ ಹಳ್ಳಿಗಳ, ಕೃಷಿಪರ ರಾಷ್ಟ್ರ. ಅದೆಷ್ಟೆ ನಗರೀಕರಣವಾದರೂ, ಬೆಂಗಳೂರಿನ ಎಷ್ಟೋ ಹಳ್ಳಿ ಮೂಲೆಗಳು ಸೈಟ್‌ಗಳಾಗಿ ಬದಲಾದರು ಭಾರತದಲ್ಲಿ ಹಳ್ಳಿಯ ಪ್ರಮಾಣ ಶೇ.೬೫ಕ್ಕಿಂತ ಕಡಿಮೆಯೇನೂ ಆಗಿಲ್ಲ. ನಮ್ಮ ಆರ್ಥಿಕತೆ ಬೆನ್ನುಲುಬೇ ಕೃಷಿ. ೯೯ ದೋಸೆಗಳಲ್ಲಿ ಎಲ್ಲವೂ ತರಕಾರಿಯದ್ದೆ. ಪನ್ನೀರ್‌ ಮತ್ತು ಚೀಸ್‌ ಎರಡು ಇವತ್ತಿನದ್ದು. ಅವನದು ಅದೇ ಗೋಳು. ಸರ್‌ ಪೋಲಿಸ್ರಿಗೆ ದುಡ್ಡು ಕೊಟ್ಟೇ ಮುಗಿಯೋದಿಲ್ಲ. ಅಧಿಕಾರಿಗಳು ನೆಮ್ಮದಿಯಿಂದ ವ್ಯಾಪಾರ ಮಾಡೋಕೆ ಬಿಡಲ್ಲ. ಬೆಂಗಳೂರಿನಲ್ಲಿ ಬೀದಿ ವ್ಯಾಪಾರಿಗಳು ಹಾಳಾಗಲಿ, ಬಾಡಿಗೆ ಪಡೆದು ಅಂಗಡಿ ನಡೆಸುವವರು ಮಾಮೂಲಿ ಕೊಡಬೇಕು. ಇಲ್ಲ ಅಂದ್ರೆ ದಬ್ಬಾಳಿಕೆ ಮಾಡ್ತಾರೆ.

ಅದೇನೋ ಸ್ಟಾರ್ಟಪ್‌, ವಿನಾಯಿತಿಗಳು…ಇಷ್ಟೆಲ್ಲದರ ನಡುವೆ ವರ್ಷಕ್ಕೆಶೇ. ೮೦ ಕಂಪನಿ ಬಾಗಿಲು ಹಾಕುತ್ತವೆ. ಇನ್‌ ಬಿಟ್ವೀನ್‌ ರಾಮಣ್ಣ ದಿನಕ್ಕೆ ೨೦೦ರೂ. ಪೊಲೀಸರಿಗೆ ಮಾಮೂಲಿ ಕೊಟ್ಟೂ ಅಂಗಡಿ ನಡೆಸುತ್ತಾನೆ. ಆ ೨೦೦ ರೂ. ದುಡಿಯಲು ಇಡಬಹುದಾದ ಬೇರೆ ಉತ್ಪನ್ನಗಳ ಕುರಿತು ಆಲೋಚಿಸುತ್ತಾನೆ. ೭ ಗಂಟೆಗೆ ಅಂಗಡಿ ಬಾಗಿಲು ತೆಗೆಯುವವನು, ಪೊಲೀಸ್‌ ಮಾಮೂಲಿ ಹೆಚ್ಚಾದಾಗ ೬ ಗಂಟೆಗೆ ಬಾಗಿಲು ತೆರೆಯುತ್ತಾನೆ. ಯಾಕಂದ್ರೆ ಅಂಗಡಿ ಬಿಟ್ಟು ಮತ್ತೊಂದು ಉದ್ಯೋಗ ರಾಮಣ್ಣನಿಗೆ ಗೊತ್ತಿಲ್ಲ. ಸಿಂಚು ದೋಸೆ ಪಾಯಿಂಟ್‌ನದ್ದು ಅದೇ ಕಥೆ.

ಇಷ್ಟೆಲ್ಲದರ ನಡುವೆ ನಿಮ್ಮ ಸಮಸ್ಯೆ ಏನು ಎನ್ನುವಿರಾ? ನಾವು ರೊಟ್ಟಿ ತಿನ್ನುವ, ದೋಸೆ ತಿನ್ನುವ ಉದ್ಯಮ ಹೆಚ್ಚಿಸಬೇಕು. ಹಾಗಿದ್ರೆ ದೇಶವಿಡಿ ಹೊಟೆಲ್‌ನೇ ಮಾಡಿಬಿಡಿ ಅನ್ನಬಹುದು ನೀವು. ಅದಲ್ಲ ಹೇಳುತ್ತಿರುವ ವಿಷಯ. ವಾಹನ ಬಳಕೆ ಹೆಚ್ಚಾಗುತ್ತಿದೆ. ಹಾಗಾಗಿ ಬೇರಿಂಗ್‌ ಕಂಪನಿಗಳು ಬೇಕು. ಹಾಗೆಯೆ ಕೃಷಿ ಉತ್ಪನ್ನ ಆಧಾರಿತ ಪ್ರಾಡಕ್ಟ್‌ಗಳ ಬಳಕೆಯೂ ಹೆಚ್ಚಾಗುವ ಉದ್ದಿಮೆಗಳು ಬರಬೇಕು. ಮೊಬೈಲ್‌, ಇಂಟರ್‌ನೆಟ್‌, ಸಾಫ್ಟ್‌ವೇರ್‌ನಿಂದ ದೇಶಕ್ಕೆ ಲಾಭವಿಲ್ಲ ಎಂದಲ್ಲ. ಆದರೆ ಅಲ್ಲಿ ಹತ್ತಾರು ಎಕರೆಯಲ್ಲಿ ಬೆಳೆದ ಟೊಮೆಟೊ, ಬಾಳೆಕಾಯಿಯನ್ನು ರೈತ ಕಣ್ಣೀರಿಡುತ್ತ ರಸ್ತೆಗೆ ಸುರಿಯುವಾಗ, ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುವಾಗ ಕರುಳು ಕಿವುಚುತ್ತದೆ.

ಖಂಡಿತ ಒಬ್ಬ ರಾಮಣ್ಣನಿಗೆ ನೀವು ಯಾವ ವಿನಾಯಿತಿಯನ್ನು ಕೊಡುವುದು ಬೇಡ. ಜೊತೆಗೆ ಆತ ನಾನಾ ಕಡೆ ಬ್ರ್ಯಾಂಚ್‌ಗಳನ್ನು ಮಾಡಲಾರ. ಅಧಿಕಾರಿಗಳ ದಬ್ಬಾಳಿಕೆಯಿಲ್ಲದೆ ನೆಮ್ಮದಿಯಿಂದ ವ್ಯಾಪಾರ ಮಾಡಲು ಬಿಡಿ. ಮಿಕ್ಕಿದ್ದು ಆತನಿಗೆ ಗೊತ್ತಿದೆ. ಹಾಗೆಯೇ ನೀವು ಸ್ಟಾರ್ಟಪ್‌ ಹೆಸರಿನಲ್ಲಿ ಒಂದಿಷ್ಟು ಕೃಷಿ ಆಧಾರಿತ, ನಮ್ಮ ನೆಲದ ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸಬಲ್ಲ ಉದ್ದಿಮೆಯನ್ನು ಉತ್ತೇಜಿಸಿ. ಡೋರ್‌ ಡಿಲೆವರಿ ನೀಡುವ ಫಿಜ್ಜಾ ಕೇಂದ್ರಗಳು ಬೇಡ. ಎಳನೀರು, ಮಜ್ಜಿಗೆ ಡೋರ್‌ ಡಿಲೆವರಿ ಸಿಗಲಿ. ಈಗಿರುವ ಸ್ವಾಲವಂಬಿ ಕೇಂದ್ರಗಳು, ಗ್ರಾಮೀಣಾಭಿವೃದ್ಧಿ ಕೇಂದ್ರಗಳಿಗೆ ಇನ್ನಷ್ಟು ಜೀವ ತುಂಬಿ. ಆಗ ಖಂಡಿತ ಬೆಂಗಳೂರಿನಂಥ ನಗರದಲ್ಲಿ ಕಸ ನಿರ್ವಹಣೆ ಹೇಗೆ ಎಂಬ ಸಮಸ್ಯೆಯೇ ಬರುವುದಿಲ್ಲ.

ಇದ್ರಲ್ಲಿ ಖಂಡಿತ ಸಂಸ್ಕೃತಿ, ಸನಾತನತೆ ಯಾವ ಬೂದಿಯೂ ಇಲ್ಲ. ನಮ್ಮ ನೆಲದ ಮಂದಿ ಖುಷಿಯಾಗಿರಬಹುದೆಂಬುದಷ್ಟೆ ಆಶಯ. ಒಬ್ಬ ಗಾಂಧೀಜಿ ಶಾಖಾಹಾರದ ಕುರಿತು ಆಳವಾಗಿ ಅಧ್ಯಯಿನಿಸಿ ಇಂಗ್ಲೆಂಡ್‌, ದಕ್ಷಿಣಾಫ್ರಿಕಗಳಲ್ಲೂ ಸಸ್ಯಾಹಾರಿ ಉತ್ತೇಜನದ ಕೆಲಸ ಮಾಡಿದ್ದು ಇದೇ ಕಾರಣಕ್ಕೆ. ಆದರೆ ಅಂಥ ಗಾಂಧಿಯನ್ನು ಬದಿಗಿಟ್ಟ ನಾವು ಗೋಡ್ಸೆ, ಪಂಥ, ರಾಜಕೀಯದ ಗಾಂಧಿಯನ್ನುಮಾತ್ರ ಉಳಿಸಿಕೊಂಡಿದ್ದೇವೆ. ನಾನಿಲ್ಲಿ ಒಂದು ಬೆಂಗಳೂರಿನ ವ್ಯಾಪಾರಿಗಳ ಕಥೆಯನ್ನುಉದಾಹರಿಸಿದ್ದೇನೆ. ಇದು ನಮ್ಮ ದೇಶದ ಎಲ್ಲ ಮೂಲೆಯ ಸಣ್ಣ ವ್ಯಾಪಾರಿ, ಉದ್ದಿಮೆದಾರರ ಕಥೆಯೂ ಹೌದು.

Leave a Reply