ಇಮೇಲ್‌‌ಗೊಂದು ವಿಳಾಸ ಕೊಟ್ಟ ರೇ ಟಾಮ್ಲಿನ್‌ಸನ್ ಸರಿದರು ವಿಳಾಸವಿಲ್ಲದ ಲೋಕಕ್ಕೆ

 

Srinidhi_Oct_2014ಟಿ. ಜಿ. ಶ್ರೀನಿಧಿ

ಖ್ಯಾತ ಕಂಪ್ಯೂಟರ್ ತಜ್ಞ ರೇ ಟಾಮ್ಲಿನ್‌ಸನ್ ನಿಧನರಾಗಿದ್ದಾರೆ. ವಿವಿಧ ಮಾಧ್ಯಮಗಳಲ್ಲಿ ಕೇಳಿಬರುತ್ತಿರುವ ಅವರ ನಿಧನವಾರ್ತೆಯಲ್ಲಿ ಅವರನ್ನು “ಇಮೇಲ್ ಸೃಷ್ಟಿಕರ್ತ” ಎಂದು ಗುರುತಿಸುತ್ತಿರುವುದನ್ನೂ ನಾವು ನೋಡುತ್ತಿದ್ದೇವೆ.

ಇಮೇಲ್ ತಂತ್ರಜ್ಞಾನದ ವಿಕಾಸದಲ್ಲಿ ಬಹು ಮಹತ್ವದ ಪಾತ್ರ ವಹಿಸಿದ್ದವರು ಟಾಮ್ಲಿನ್‌ಸನ್. ಆದರೆ ಅವರು ಇಮೇಲ್ ಸೃಷ್ಟಿಕರ್ತರೇನೂ ಆಗಿರಲಿಲ್ಲ.

ಹಾಗಾದರೆ ಇಮೇಲ್ ತಂತ್ರಜ್ಞಾನಕ್ಕೆ ಹೊಸ ತಿರುವು ಕೊಟ್ಟ ಅವರ ಸಾಧನೆ ಏನು? ಈ ಲೇಖನದ ಮೂಲಕ ಅಗಲಿದ ಹಿರಿಯರಿಗೆ ನಮ್ಮ ಶ್ರದ್ಧಾಂಜಲಿ…

ಇಮೇಲ್ ಕಂಡುಹಿಡಿದದ್ದು ಯಾರು? ಕಂಪ್ಯೂಟರ್ ಪ್ರಪಂಚದಲ್ಲಿ ಕೇಳಸಿಗುವ ಅನೇಕ ಉತ್ತರವಿಲ್ಲದ ಪ್ರಶ್ನೆಗಳಲ್ಲಿ ಇದೂ ಒಂದು.

ಹೌದು, ಇಮೇಲ್ ತಂತ್ರಜ್ಞಾನವನ್ನು ಯಾರೋ ಒಬ್ಬ ವಿಜ್ಞಾನಿ ಯಾವುದೋ ಒಂದು ದಿನ ಇದ್ದಕ್ಕಿದ್ದಂತೆ ಕಂಡುಹಿಡಿಯಲಿಲ್ಲ; ಕಂಪ್ಯೂಟರ್ ಲೋಕದ ಅದೆಷ್ಟೋ ಆವಿಷ್ಕಾರಗಳಂತೆ ಸಾಕಷ್ಟು ದೀರ್ಘವಾದ ಅವಧಿಯಲ್ಲಿ ಅನೇಕ ತಂತ್ರಜ್ಞರ ಶ್ರಮದಿಂದ ವಿಕಾಸವಾದ ತಂತ್ರಜ್ಞಾನ ಅದು.

ಆದರೆ ಇಮೇಲ್ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ಅನೇಕ ಸಂಗತಿಗಳಿವೆ. ಇಮೇಲ್ ವಿಳಾಸಗಳಲ್ಲಿ @ ಚಿಹ್ನೆಯ ಬಳಕೆ ಪ್ರಾರಂಭವಾದದ್ದು ಇಂತಹ ಮೈಲಿಗಲ್ಲುಗಳಲ್ಲಿ ಅತ್ಯಂತ ಮಹತ್ವಪೂರ್ಣವಾದದ್ದು. ಆ ಸಾಧನೆಯ ಹಿಂದಿರುವ ಹೆಸರು ರೇ ಟಾಮ್ಲಿನ್‌ಸನ್‌ರದು.

ಪ್ರಪಂಚದ ಮೊದಲ ಇಮೇಲ್ ಕ್ರಮವಿಧಿಗಳು ರೂಪುಗೊಂಡದ್ದು 1960ರ ದಶಕದಲ್ಲಿ. ಆದರೆ ಆಗಿನ ಇಮೇಲ್ ವ್ಯವಸ್ಥೆ ನಮಗೆ ಈಗ ಪರಿಚಿತವಿರುವ ಇಮೇಲ್ ವ್ಯವಸ್ಥೆಯ ಹಾಗಿರಲಿಲ್ಲ. ಅಂದಿನ ಇಮೇಲೆ ಸಂವಹನ ಏನಿದ್ದರೂ ಒಂದೇ ಕಂಪ್ಯೂಟರಿನ ವಿವಿಧ ಬಳಕೆದಾರರ ನಡುವೆ ಮಾತ್ರವೇ ಸಾಧ್ಯವಿತ್ತು. ಒಂದೇ ಸಂದೇಶವನ್ನು ಹಲವರಿಗೆ ಒಟ್ಟಿಗೆ ಕಳುಹಿಸುವುದು ಸಾಧ್ಯವಿರಲಿಲ್ಲ; ನಾವು ಕಳುಹಿಸಿದ ಸಂದೇಶ ಸೇರಬೇಕಾದವರಿಗೆ ಸೇರಿದೆಯೋ ಇಲ್ಲವೋ ಎಂಬುದೂ ತಿಳಿಯುತ್ತಿರಲಿಲ್ಲ. ಇನ್ನು ಚಿತ್ರಗಳು, ಧ್ವನಿಗಳು ಮುಂತಾದವುಗಳನ್ನೆಲ್ಲ ಕಳುಹಿಸುವುದು ಹಾಗೂ ಬೇರೊಂದು ಕಂಪ್ಯೂಟರಿಗೆ ಸಂದೇಶ ರವಾನಿಸುವುದಂತೂ ಅಸಾಧ್ಯವೇ ಆಗಿತ್ತು.

ಅಂತಹ ಸನ್ನಿವೇಶದಲ್ಲಿ ಇಮೇಲ್ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಪಡಿಸುವ ಅಗತ್ಯ ಕಂಪ್ಯೂಟರ್ ತಂತ್ರಜ್ಞರನ್ನುಬಹುವಾಗಿ ಕಾಡುತ್ತಿತ್ತು.

ಇಮೇಲ್ ವ್ಯವಸ್ಥೆಯನ್ನು ಉತ್ತಮಪಡಿಸುವ ಅಂತಹುದೊಂದು ಪ್ರಯತ್ನದಲ್ಲಿ ತೊಡಗಿದ್ದವರಲ್ಲಿ ರೇ ಟಾಮ್ಲಿನ್‌ಸನ್ ಕೂಡ ಒಬ್ಬರು. ಎರಡು ಕಂಪ್ಯೂಟರುಗಳ ನಡುವೆ ವ್ಯವಸ್ಥಿತವಾಗಿ ಇಮೇಲ್ ಸಂದೇಶ ವಿನಿಮಯ ಮಾಡಿಕೊಳ್ಳಲು ಅನುವಾಗುವಂತೆ ಕಂಪ್ಯೂಟರ್ ಪ್ರೋಗ್ರಾಮನ್ನು ರೂಪಿಸಿದವರು ಅವರು. ಇಮೇಲ್ ವಿಳಾಸಗಳಲ್ಲಿ @ ಚಿಹ್ನೆಯ ಬಳಕೆಯನ್ನು ಪ್ರಾರಂಭಿಸಿದ್ದು ಅವರದ್ದೇ ಸಾಧನೆ.

ಎಪ್ಪತ್ತರ ದಶಕದಲ್ಲಿ ಟಾಮ್ಲಿನ್‌ಸನ್ ಬಾಸ್ಟನ್ನಿನ ಬಿಬಿಎನ್ ಎನ್ನುವ ಸಂಸ್ಥೆಯಲ್ಲಿ ಕೆಲಸಮಾಡುತ್ತಿದ್ದರು. ಆ ಸಂಸ್ಥೆ ಅಂತರಜಾಲದ ಪೂರ್ವಜ ವ್ಯವಸ್ಥೆಯಾದ ಅರ್ಪಾನೆಟ್‌ನ ಬೆಳವಣಿಗೆಯಲ್ಲಿ ತನ್ನನ್ನು ತೊಡಗಿಸಿಕೊಂಡಿತ್ತು.

ಆ ಸಮಯದಲ್ಲಿ ಟಾಮ್ಲಿನ್‌ಸನ್ SNDMSG ಎಂಬ ಇಮೇಲ್ ತಂತ್ರಾಂಶವನ್ನು ಅಭಿವೃದ್ಧಿಪಡಿಸುತ್ತಿದ್ದರು. ಹಿಂದಿನ ಹಲವು ಇಮೇಲ್ ತಂತ್ರಾಂಶಗಳಂತೆ ಇದೂ ಕೂಡ ಒಂದೇ ಕಂಪ್ಯೂಟರಿನ ಹಲವು ಬಳಕೆದಾರರ ನಡುವೆ ಸಂವಹನವನ್ನು ಸಾಧ್ಯವಾಗಿಸುತ್ತಿತ್ತು.

ಇದರ ಜೊತೆಜೊತೆಗೇ ಜಾಲದ ಮೂಲಕ ಸಂಪರ್ಕದಲ್ಲಿರುವ ಕಂಪ್ಯೂಟರುಗಳ ನಡುವೆ ಕಡತಗಳ ವಿನಿಮಯಕ್ಕೆ (ಫೈಲ್ ಟ್ರಾನ್ಸ್‌ಫರ್) ಅನುವುಮಾಡಿಕೊಡುವ ವಿಧಾನವೊಂದನ್ನು ರೂಪಿಸುವ ಪ್ರಯತ್ನದಲ್ಲೂ ಟಾಮ್ಲಿನ್‌ಸನ್ ತೊಡಗಿಕೊಂಡಿದ್ದರು.

ಇವೆರಡೂ ಪರಿಕಲ್ಪನೆಗಳನ್ನು ಒಟ್ಟಿಗೆ ಸೇರಿಸುವ ಮೂಲಕ ಅವರು ಜಾಲದ ಮೂಲಕ ಸಂಪರ್ಕದಲ್ಲಿರುವ ಯಾವುದೇ ಕಂಪ್ಯೂಟರುಗಳ ನಡುವೆ ಇಮೇಲ್ ಸಂವಹನವನ್ನು ಸಾಧ್ಯವಾಗಿಸಿದರು; ಆ ಮೂಲಕ ಇಮೇಲ್ ತಂತ್ರಜ್ಞಾನದ ಭವಿಷ್ಯವನ್ನೇ ಬದಲಿಸಿಬಿಟ್ಟರು.

ಅಟ್ ಹುಟ್ಟು 

ಬೇರೆಬೇರೆ ಕಂಪ್ಯೂಟರುಗಳ ನಡುವೆ ಇಮೇಲ್ ಸಂವಹನ ಸಾಧ್ಯವಾಗುತ್ತಿದ್ದಂತೆ ಇಮೇಲ್ ವಿಳಾಸಗಳನ್ನು ವ್ಯವಸ್ಥಿತವಾಗಿ ರೂಪಿಸುವ ಅಗತ್ಯ ಕೂಡ ಕಂಡುಬಂತು. ಸಹಜವಾಗಿಯೇ ಟಾಮ್ಲಿನ್‌ಸನ್ ಆ ನಿಟ್ಟಿನಲ್ಲಿ ಕಾರ್ಯನಿರತರಾದರು.

ಕಂಪ್ಯೂಟರ್ ಕೀಬೋರ್ಡಿನಲ್ಲಿರುವ ಯಾವುದಾದರೂ ವ್ಯಾಕರಣ ಚಿಹ್ನೆಯನ್ನು ಇಮೇಲ್ ವಿಳಾಸಗಳ ಭಾಗವಾಗಿ ಬಳಸಬಹುದೆಂದು ಯೋಚಿಸಿದ ಟಾಮ್ಲಿನ್‌ಸನ್‌ಗೆ @ ಅತ್ಯಂತ ಸೂಕ್ತವಾಗಿ ತೋರಿತಂತೆ. ಈ ಚಿಹ್ನೆಯನ್ನು ಬಳಕೆದಾರನ ಹೆಸರು ಹಾಗೂ ಆತನ ಕಂಪ್ಯೂಟರ್ ವಿಳಾಸದ ನಡುವೆ ಬಳಸಿದಾಗ “ಈ ಹೆಸರಿನ ಬಳಕೆದಾರ ಇಂಥ ವಿಳಾಸದಲ್ಲಿರುವ ಕಂಪ್ಯೂಟರ್ ಬಳಸುತ್ತಾನೆ” ಎಂಬುದೂ ಬಹಳ ಸುಲಭವಾಗಿ ಅರ್ಥವಾಗುತ್ತದೆ ಎನ್ನುವುದು ಅವರ ಯೋಚನೆಯಾಗಿತ್ತು.

@ ಚಿಹ್ನೆ ಬಳಸಿದ ಮೊದಲ ಇಮೇಲ್ ವಿಳಾಸ ಟಾಮ್ಲಿನ್‌ಸನ್‌ರದೇ ಆಗಿತ್ತು. ಆತ ಪ್ರಾಯೋಗಿಕವಾಗಿ ರೂಪಿಸಿಕೊಂಡ tomlinson@bbn-tenexa ಎಂಬ ಈ ವಿಳಾಸಕ್ಕೆ ಕಂಪ್ಯೂಟರ್ ಜಗತ್ತಿನ ಇತಿಹಾಸದಲ್ಲಿ ಮಹತ್ವದ ಸ್ಥಾನವಿದೆ.

ಟಾಮ್ಲಿನ್‌ಸನ್ ಈ ವಿಳಾಸದಿಂದ ಮೊದಲ ಇಮೇಲ್ ಕಳುಹಿಸಿದ್ದು 1971ರಲ್ಲಿ. ಅವರು ಆ ಸಂದೇಶದಲ್ಲಿ ‘qwertyuiop’ ಅಥವಾ ‘testing 1-2-3’ ಎಂಬಂಥದ್ದೇನನ್ನೋ ಬರೆದಿದ್ದರಂತೆ. ಇಂಥ ಪ್ರತಿಭೆ ತನ್ನ ಅನ್ವೇಷಕ ಬದುಕನ್ನು ಮುಗಿಸಿ ವಿಳಾಸವಿಲ್ಲದ ಲೋಕಕ್ಕೆ ಪಯಣಿಸಿದೆ.

(ಲೇಖಕರು ತಂತ್ರಜ್ಞಾನ ಬರಹಗಾರರು, www.ejnana.com ನಿರ್ವಾಹಕರು)

Leave a Reply