
ಸೋಮಶೇಖರ ಪಿ ಭದ್ರಾವತಿ
ಕಳೆದ ವರ್ಷ ಬಾಂಗ್ಲಾದೇಶ ತವರಿನಲ್ಲಿ ಭಾರತ ವಿರುದ್ಧ ಏಕದಿನ ಸರಣಿ ಗೆದ್ದ ನಂತರ, ಅಲ್ಲಿನ ಅಭಿಮಾನಿಗಳು ಭಾರತ ಆಟಗಾರರ ತಲೆಯನ್ನು ಅರ್ಧ ಬೊಳಿಸಿದ ಪೋಸ್ಟರ್ ಅನ್ನು ಜಾಹೀರಾತಾಗಿ ಬಳಸಿ ಧಿಮಾಕು ತೋರಿದ್ದರು. ಮೊನ್ನೆ ಅಂದರೆ, ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದ ಮುನ್ನಾ ದಿನ ಬಾಂಗ್ಲಾ ಅಭಿಮಾನಿಗಳು ಮತ್ತದೇ ಅತಿರೇಕ ಮೆರೆದಿದ್ದರು, ಇನ್ನಷ್ಟು ವಿಕ್ಷಿಪ್ತತೆ ಜತೆಗೆ. ಬಾಂಗ್ಲಾ ವೇಗಿ ತಸ್ಕಿನ್ ಅಹ್ಮದ್ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ತಲೆಯನ್ನು ಕತ್ತರಿಸಿ ಕೈಯಲ್ಲಿಸಿರಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟಿದ್ದರು. ಇದಕ್ಕೆಲ್ಲ ಧೋನಿ ಉತ್ತರ ಕೊಟ್ಟದ್ದು ಕೇವಲ ಆರು ಎಸೆತದಲ್ಲಿ.
ಹೌದು, ಫೈನಲ್ ಪಂದ್ಯದಲ್ಲಿ 2 ಓವರ್ ಗೆ 19 ರನ್ ಅಗತ್ಯವಿದ್ದಾಗ ಯುವರಾಜ್, ರೈನಾ ಕ್ರಮಾಂಕ ದಾಟಿ ಸ್ವತಃ ತಾವೇ ಕ್ರೀಸ್ ಗೆ ಬಂದ ಧೋನಿ, ಕಣ್ಮುಚ್ಚಿ ಬಿಡುವುದರೊಳಗೆ ಆರು ಎಸೆತಗಳಲ್ಲಿ 20 ರನ್ ಬಾರಿಸಿ ಜಯವನ್ನು ಬಾಚಿ ತಬ್ಬಿಕೊಂಡಿದ್ದರು. ಆ ಮೂಲಕ ಅಲ್ಲೀವರೆಗೂ ಗೆಲುವಿನ ನಿರೀಕ್ಷೆಯಲ್ಲಿ ಮೈದಾನದ ತುಂಬ ಕುಣಿದು ಕುಪ್ಪಳಿಸಿದ್ದ ಬಾಂಗ್ಲಾ ಅಭಿಮಾನಿಗಳನ್ನು ನೀರವ ಮೌನಕ್ಕೆ ತಳ್ಳಿದ್ದರು. ಅವರು ಬಾಂಗ್ಲಾ ಆಟಗಾರರದ್ದಷ್ಟೇ ಅಲ್ಲ, ಅಲ್ಲಿನ ಹುಚ್ಚು ಅಭಿಮಾನಿಗಳ ತಲೆಗಳೂ ನೆಲ ನೋಡುವಂತೆ ಮಾಡಿದ್ದರು. ಪೋಸ್ಟರ್ ತಿಕ್ಕಲುತನಕ್ಕೆ ಭಾರತದ ಮಾತಲ್ಲ, ಆಟವೇ ಉತ್ತರವಾಗಿತ್ತು.
ಏಷ್ಯಾಕಪ್ ಟ್ರೋಫಿ ಗೆಲ್ಲುವುದರ ಮೂಲಕ ಪ್ರಸಕ್ತ ವರ್ಷ ಟೀಂ ಇಂಡಿಯಾ ಟಿ20 ಮಾದರಿಯಲ್ಲಿ ತನ್ನ ಪ್ರಭುತ್ವ ಮುಂದುವರಿಸಿದೆ. ಈ ಜಯ ಮಂಗಳವಾರದಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿ ಬಗ್ಗೆ ಭಾರತದ ಆತ್ಮವಿಶ್ವಾಸವನ್ನೂ ಇಮ್ಮಡಿಗೊಳಿಸಿದೆ. ತವರಿನಲ್ಲಿ ನಡೆಯುವ ಈ ಕದನದಲ್ಲಿ ಪಾಲ್ಗೊಳ್ಳುವ ವಿಶ್ವದ ಇತರೆ ತಂಡಗಳಿಗೆ ಕಠಿಣ ಸವಾಲಿನ ಸಂದೇಶ ರವಾನಿಸಿದೆ.
ಏಷ್ಯಾ ಕಪ್ ಟೂರ್ನಿ ವಿಶ್ವಕಪ್ ಗೆ ಪೂರ್ವಬಾವಿ ತಯಾರಿ ವೇದಿಕೆ ಎಂದೇ ಬಿಂಬಿತವಾಗಿತ್ತು. ಈ ವರ್ಷ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟಿ20 ಸರಣಿ, ನಂತರ ತವರಿನಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಸರಣಿ ಗೆದ್ದಿದ್ದ ಟೀಂ ಇಂಡಿಯಾ, ಏಷ್ಯಾಕಪ್ ನಲ್ಲೂ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿತ್ತು. ಬಾಂಗ್ಲಾದೇಶದ ಪಿಚ್ ಬ್ಯಾಟ್ಸ್ ಮನ್ ಗಳಿಗೆ ಸ್ವರ್ಗವಾಗಲಿಲ್ಲ, ಬದಲಿಗೆ ಬೌಲರ್ ಗಳಿಗೆ ಸ್ವಲ್ಪ ಸಾಥ್ ನೀಡಿತ್ತು. ಹೀಗಾಗಿ ಎದುರಾಳಿಗಳು ಭಾರತ ಬ್ಯಾಟಿಂಗ್ ಲೈನ್ ಅಪ್ ಗೆ ಸ್ವಲ್ಪ ಸವಾಲೊಡ್ಡಲು ಯತ್ನಿಸಿದವು. ಆದರೆ, ವಿಶ್ವ ಚಾಂಪಿಯನ್ ಆಟಗಾರರ ಬಳಗವನ್ನೇ ಹೊಂದಿರುವ ಭಾರತದ ಬಲಿಷ್ಠ ಬ್ಯಾಟಿಂಗ್ ಕ್ರಮಾಂಕದ ಎದಿರು ಉಳಿದ ತಂಡಗಳ ಆಟ ನಡೆಯಲಿಲ್ಲ.
ಆಸ್ಟ್ರೇಲಿಯಾ ನೆಲದಲ್ಲಿ ಜನವರಿಯಲ್ಲಿ ಮೂರು ಪಂದ್ಯಗಳ ಸರಣಿ ಗೆದ್ದು ಫಾರ್ಮ್ ಕಂಡುಕೊಂಡ ಭಾರತ, ಈ ವರ್ಷ ಆಡಿರುವ 11 ಟಿ20 ಪಂದ್ಯಗಳ ಪೈಕಿ 9 ರಲ್ಲಿ ಜಯ ಸಾಧಿಸಿದೆ. ಈ ಅದ್ಭುತ ಲಯ ಭಾರತವನ್ನು ಟಿ20 ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡವಾಗಿಸಿದೆ. ಜತೆಗೆ, ತವರಿನಲ್ಲಿ ಸರಣಿ ನಡೆಯುತ್ತಿರುವುದರಿಂದ ಇಲ್ಲಿನ ಪಿಚ್ ಆಪ್ಯಾಯಮಾನ. ವೇಗಿಗಳಿಗಿಂತ ಸ್ಪಿನ್ನರ್ ಗಳಫ ಪ್ರಾಬಲ್ಯಕ್ಕೆ ಅವಕಾಶ ಇರುವುದರಿಂದ ಧೋನಿ ಪಡೆಗೆ ಎದುರಾಳಿಗಳ ವಿರುದ್ಧ ಭಿನ್ನ ತಂತ್ರಗಾರಿಕೆ ಎಣೆಯಲು ಹೆಚ್ಚಿನ ಅವಕಾಶವಿದೆ. ಬ್ಯಾಟಿಂಗ್ ವಿಭಾಗದಲ್ಲಿ ರೋಹಿತ್ ಶರ್ಮಾ ಮತ್ತು ಧವನ್ ಅತ್ಯುತ್ತಮ ಆರಂಭಿಕ ಜೋಡಿಯಾಗಿದೆ. ಇನ್ನು ವಿರಾಟ್ ಕೊಹ್ಲಿ ತಂಡದ ಬೆನ್ನೆಲುಬಾಗಿದ್ದಾರೆ. ತಂಡ ಯಾವುದೇ ಕಠಿಣ ಪರಿಸ್ಥಿತಿಯಲ್ಲಿದ್ದರೂ ತಮ್ಮ ಸಮಯೋಜಿತ ಬ್ಯಾಟಿಂಗ್ ನಿಂದ ಎದುರಾಳಿ ಬೌಲರ್ ಗಳನ್ನು ಕಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಇನ್ನು ಟಿ20 ಸ್ಪೆಷಲಿಸ್ಟ್ ರೈನಾ, ಯುವರಾಜ್, ಧೋನಿ ಪಂದ್ಯ ಫಿನಿಶಿಂಗ್ ಪಂಟರುಗಳು. ಭಾರತಕ್ಕೆ ತೀವ್ರ ಸಮಸ್ಯೆಯಾಗಿದ್ದ ಬೌಲಿಂಗ್ ವಿಭಾಗ ಈಗ ಸಂಘಟಿತ ದಾಳಿ ನಡೆಸುತ್ತಿರುವುದು ಉತ್ತಮ ಬೆಳವಣಿಗೆ. ಜಸ್ಪ್ರೀತ್ ಬುಮ್ರಾ ಮತ್ತು ನೆಹ್ರಾ ಜೋಡಿ ಮಾರಕ ಬೌಲಿಂಗ್ ನಡೆಸುತ್ತಿದೆ. ಜಡೇಜಾ ಮತ್ತು ಅಶ್ವಿನ್ ಸ್ಪಿನ್ ಜುಗಲ್ಬಂದಿ ಧೋನಿಯ ಪ್ರಮುಖ ಟ್ರಂಪ್ ಕಾರ್ಡ್. ಇನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಂಡಕ್ಕೆ ಹೆಚ್ಚುವರಿ ಅಸ್ತ್ರ. ಮತ್ತಷ್ಟು ಸ್ಪಿನ್ನರ್ ಗಳು ಬೇಕಿದ್ದರೆ ಯುವರಾಜ್, ರೈನಾ ಇದ್ದೇ ಇದ್ದಾರೆ.
ಟಿ20 ಮಾದರಿಯಲ್ಲಿ ಭಾರತ ಸಮತೋಲಿತ ತಂಡವಾಗಿ ಹೊರಹೊಮ್ಮಿದೆ. ಪ್ರತಿಯೊಬ್ಬ ಆಟಗಾರರು ತಮ್ಮ ಜವಾಬ್ದಾರಿಯನ್ನು ಅರಿತಿದ್ದಾರೆ. ಇದೇ ಪ್ರದರ್ಶನ ಮುಂದುವರಿದರೆ, ಭಾರತ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸುವುದು ಕಷ್ಟವಾಗುವುದಿಲ್ಲ. ಟೂರ್ನಿಯಲ್ಲಿ ಪಾಕಿಸ್ತಾನದ ವೇಗಿ ಮೊಹಮದ್ ಆಮೀರ್, ಭಾರತ ಬ್ಯಾಟ್ಸ್ ಮನ್ ಗಳನ್ನು ಕಾಡಿದ್ದು ರೋಚಕವಾಗಿತ್ತು. ಟಿ20 ವಿಶ್ವಕಪ್ ನಲ್ಲಿ ಇತರೆ ತಂಡಗಳಲ್ಲೂ ಆಮೀರ್ ರಂತಹ ಪ್ರಬಲ ಅಸ್ತ್ರಗಳಿರುತ್ತವೆ. ಅದಕ್ಕೆ ತಕ್ಕ ತಯಾರಿ ನಡೆಸಬೇಕಿದೆ.
ಐಪಿಎಲ್ ನಿಂದ ವಿಶ್ವದ ಇತರೆ ಆಟಗಾರರಿಗೂ ಭಾರತದ ಪಿಚ್ ಗಳು ಚಿರಪರಿಚಿತ. ಭಾರತೀಯ ಆಟಗಾರರ ಬಲಾಬಲಗಳು, ನ್ಯೂನ್ಯತೆಗಳು ಗೊತ್ತಿರುವುದೇ. ಹಾಗಾಗಿ ಭಾರತ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ಮುಂದುವರಿಸಬೇಕು. ಅತಿಯಾದ ಆತ್ಮ ವಿಶ್ವಾಸಕ್ಕೆ ತಂಡ ಹಾಗೂ ಆಟಗಾರರು ಬಲಿಯಾಗದಂತೆ ನೋಡಿಕೊಳ್ಳುವುದು ನಾಯಕ ಧೋನಿ ಮತ್ತು ಟೀಂ ಇಂಡಿಯಾ ನಿರ್ದೇಶಕ ರವಿಶಾಸ್ತ್ರಿ ಮೇಲಿನ ಜವಾಬ್ದಾರಿ.