ಶಕ್ತಿ ಸ್ವರೂಪಿ ಮಹಾಶಿವನಿಗೂ ಅಣುಶಕ್ತಿ ಸ್ಥಾವರಗಳಿಗೂ ಏನು ಸಂಬಂಧ?

ಡಿಜಿಟಲ್ ಕನ್ನಡ ವಿಶೇಷ

ಮಹಾಶಿವರಾತ್ರಿ. ಶಿವನನ್ನು ಧ್ಯಾನಿಸುವ, ಶಿವಚಿಂತನೆಯ ಸಮಯ. ಹಾಗೆಂದೇ ಜಾಗರಣೆಯ ಪರಿಕಲ್ಪನೆಯೂ ಇದೆ. ಶಿವ- ಪಾರ್ವತಿ ಅನುರಾಗ, ಮನ್ಮಥ ದಹನ, ಶಿವ ತಾಂಡವ ಹೀಗೆ ಹಲವು ಕಲ್ಪನೆಗಳು ಶಿವನನ್ನು ಪೂಜಿಸುವಾಗ ಉತ್ತೇಜನಕ್ಕೆ, ಭಕ್ತಿಗೆ ಒದಗುವ ಸಂಗತಿಗಳಾಗಿವೆ.

ಇವುಗಳ ಜತೆಗೆ, ನಿಮಗೆ ಅಷ್ಟೇನೂ ಪರಿಚಯವಿಲ್ಲದೇ ಇದ್ದಿರಬಹುದಾದ ಹೊಸ ಕಲ್ಪನೆ- ಪ್ರತಿಪಾದನೆಯೊಂದಿದೆ. ಇದನ್ನು ತುಂಬ ‘ವೈಜ್ಞಾನಿಕ’ ಅಂತ ಸಾಧಿಸಬೇಕಾದ ಸರ್ಕಸ್ಸಿಗೆ ಸಿಲುಕಬೇಕಿಲ್ಲ. ಆದರೆ, ಆಧುನಿಕ ಕಾಲದಲ್ಲಿ ಶಕ್ತಿ- ಸಂಪನ್ಮೂಲಗಳ ಅಗತ್ಯ ಹಾಗೂ ಅದಕ್ಕಾಗಿ ಜಗತ್ತು ಹಲವು ಒಪ್ಪಂದ- ಸಂಘರ್ಷಗಳಲ್ಲಿ ತೊಡಗಿರುವಾಗ ಇಂಥದೊಂದು ಸಾಧ್ಯತೆ ಪುಳಕ ಕಟ್ಟಿಕೊಟ್ಟೀತು.

ಶಿವನ ಆರಾಧನೆಯಲ್ಲಿ ವಿಶೇಷವೇನೆಂದರೆ, ಉಳಿದೆಲ್ಲ ದೇವತೆಗಳ ರೂಪವನ್ನು ಮೂರ್ತಿಯಾಗಿಸಿ ಪೂಜಿಸಿದರೆ ಈತನನ್ನು ಲಿಂಗರೂಪದಲ್ಲಿ ಪೂಜಿಸಲಾಗುತ್ತದೆ. ಅಭಿಷೇಕವೇ ಭಕ್ತಿಯ ಅಭಿವ್ಯಕ್ತಿ ಇಲ್ಲಿ.

ಇವೆಲ್ಲವನ್ನು ಆಧಾರವಾಗಿಟ್ಟುಕೊಂಡು ‘ಇಂಟರ್ನೆಟ್ ಆಸ್ತಿಕರ’ ವರ್ಗವೊಂದು ಭಿನ್ನ ಸುಳಿವನ್ನೂ ಕೊಡುತ್ತಿದೆ. ಇವರು ಅಣು ಸ್ಥಾವರಗಳಿಗೂ, ಶಿವಲಿಂಗದ ರೂಪುರೇಷೆಗೂ ಹೋಲಿಕೆಗಳನ್ನು ಸೂಚಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಪ್ರಸ್ತಾಪವಾಗುವ ಚಿತ್ರ ಬಾಬಾ ಅಟೊಮಿಕ್ ರಿಸರ್ಚ್ ಸೆಂಟರ್ (ಬಾರ್ಕ್) ನದ್ದು. ನ್ಯೂಕ್ಲಿಯರ್ ಸ್ಥಾವರಗಳ ಡೂಮ್ ಭಾಗಕ್ಕೂ ಶಿವಲಿಂಗಕ್ಕೂ ಸಾಮ್ಯವಿದೆ. ಶಿವದೇವಾಲಯ ಎಂದರೆ ಅದರ ಎದುರಿಗೊಂದು ಪುಷ್ಕರಣಿ ಇರಲೇಬೇಕು. ನೀರಿನ ಅಭಿಷೇಕವೇ ಪೂಜೆಯ ಮುಖ್ಯಭಾಗ. ಅಣು ಸ್ಥಾವರಗಳೂ ಹಾಗೆಯೇ. ಅವನ್ನು ನೀರಿನ ಹರಿವಿನ ಹತ್ತಿರದಲ್ಲೇ ಸ್ಥಾಪಿಸಲಾಗುತ್ತದೆ. ಏಕೆಂದರೆ, ಅಣು ರಿಯಾಕ್ಟರ್ ಗಳನ್ನು ತಣ್ಣಗಾಗಿಸುವ ಪ್ರಕ್ರಿಯೆಗೆ ಧಾರಾಳ ನೀರು ಅತ್ಯಗತ್ಯ.

shiva linga

ಮನೆಯಲ್ಲಿ ದೇವರ ಪೂಜೆ ಮಾಡಿದಾಗ ಅಭಿಷೇಕದ ನೀರನ್ನು ತೀರ್ಥವಾಗಿ ಸ್ವೀಕರಿಸುವ ಪದ್ಧತಿ ಇದೆ. ಆದರೆ ಶಿವ ದೇವಾಲಯಗಳಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡಿದ ನೀರನ್ನು ಹರಿದುಹೋಗುವುದಕ್ಕೆ ಬಿಡಲಾಗುತ್ತದೆಯೇ ಹೊರತು ಅದನ್ನು ತೀರ್ಥರೂಪದಲ್ಲಿ ಸ್ವೀಕರಿಸುವ ಪದ್ಧತಿ ಇಲ್ಲ. ನ್ಯೂಕ್ಲಿಯರ್ ರಿಯಾಕ್ಟರ್ ಗಳಲ್ಲಿ ಕೂಲಿಂಗ್ ಗಾಗಿ ಬಳಸುವ ನೀರು ಸಹ ವಿಸರ್ಜನೆಗೊಂಡಾಗ ವಿಕಿರಣಯುಕ್ತವಾಗಿರುತ್ತದೆ.

ಧಾರ್ಮಿಕ ಪರಿಕಲ್ಪನೆಯಲ್ಲಿ ಶಿವನನ್ನು ಲಯಕರ್ತ ಎನ್ನಲಾಗುತ್ತದೆ. ಹಾಗಂತ ಬೇಡಿದವರಿಗೆ ವರ ಕೊಡುವವನೂ ಅಲ್ಲವೆಂದಲ್ಲ. ಅಣು ಸ್ಥಾವರಗಳೂ ಹಾಗೆಯೇ. ಅಲ್ಲಿಂದ ವಿದ್ಯುತ್ ಶಕ್ತಿ ಪಡೆದುಕೊಳ್ಳಬಹುದು. ಅದೇ ರೀತಿ ಆ ಶಕ್ತಿಯನ್ನು ಬೇರೆ ವಿಧದಲ್ಲಿ ಬಳಸಿದರೆ ಅಣುಬಾಂಬ್ ಆಗಿ ಲಯಕ್ಕೂ ಕಾರಣವಾಗಬಲ್ಲದು!

ಈ ಎಲ್ಲ ಹೋಲಿಕೆಗಳನ್ನು ಇಟ್ಟುಕೊಂಡು, ನಮ್ಮ ದೇಶದ 12 ಜ್ಯೋತಿರ್ಲಿಂಗಗಳಿವೆಯಲ್ಲ… ಅವು ವಾಸ್ತವದಲ್ಲಿ ಪ್ರಾಚೀನ ಕಾಲದ ಅಣು ಶಕ್ತಿಯ ವ್ಯವಸ್ಥೆಗಳಾಗಿದ್ದವು ಅಂತ ಪ್ರತಿಪಾದಿಸುವವರಿದ್ದಾರೆ. ಭಕ್ತಿಯಲ್ಲೇ ವೈಜ್ಞಾನಿಕ ವ್ಯವಸ್ಥೆಯೊಂದನ್ನು ಅಡಗಿಸಿಡಲಾಗಿತ್ತು ಎಂಬ ವಾದವಿದೆ. ಪಿ. ಎನ್. ಓಕ್ ರಂತಹ ಇತಿಹಾಸಕಾರರು ಇಂಥ ಥಿಯರಿಗಳನ್ನು ಪ್ರತಿಪಾದಿಸಿದ್ದರೆ, ಇತ್ತೀಚೆಗೆ ಅಶ್ವಿನ್ ಸಾಂಘ್ವಿಯಂಥ ಪುರಾಣ ಆಧರಿತ ಕಾದಂಬರಿ ಬರಹಗಾರರು ಇಂಥ ಪರಿಕಲ್ಪನೆಗಳನ್ನು ಕಲ್ಪನೆಗಳಲ್ಲಿ ಹಿಡಿದಿಟ್ಟಿದ್ದಾರೆ. ಸಾಂಘ್ವಿಯವರ ‘ಕೃಷ್ಣ ಕೀ’ ದಲ್ಲಿ ಅಲ್ಲಿನ ಪಾತ್ರಗಳು ಇದೇ ಎಳೆಯ ಪ್ರತಿಪಾದನೆ ಹೊಂದಿವೆ. ಒಂದು ಹೆಜ್ಜೆ ಮುಂದೆಹೋಗಿ ಘಜ್ನಿ ಕುರಿತೂ ಪಾತ್ರವೊಂದು ಈ ಧಾಟಿಯಲ್ಲಿ ವಿಶ್ಲೇಷಿಸುತ್ತದೆ- ‘ಹತ್ತಕ್ಕೂ ಹೆಚ್ಚುಬಾರಿ ಸೋಮನಾಥದ ಶಿವ ದೇವಾಲಯದ ಮೇಲೆ ದಾಳಿ ಮಾಡಿದ್ದ ಘಜ್ನಿ. ಆದರೆ ಕೊನೆಗೊಂದು ದಾಳಿಯಲ್ಲಿ ಶಿವಲಿಂಗವನ್ನೂ ಒಡೆದು ಅದರ ಚೂರುಗಳನ್ನು ತನ್ನ ದೇಶದ ಮಸೀದಿ ಮೆಟ್ಟಿಲಿಗೆ ಉಪಯೋಗಿಸಿಕೊಂಡ. ಆ ಬಳಿಕವೇ ಆತನಿಗೆ ಅನಾರೋಗ್ಯ ಕಾಡಿ ಸಾಯಬೇಕಾಯಿತು. ವಿಕಿರಣ ಪದಾರ್ಥಗಳನ್ನು ಹಿಡಿದಿಟ್ಟಿದ್ದ ವ್ಯವಸ್ಥೆಯೊಂದನ್ನು ಒಡೆದು ಅದನ್ನು ನಿತ್ಯ ತುಳಿಯುವ ಹಾಗೆ ಬಳಸಿದ್ದು ಜೀವಕ್ಕೆ ಎರವಾಯ್ತು’ ಎಂಬರ್ಥದ ಮಾತುಗಳಿವೆ.

ಅದೇ ಪುಸ್ತಕದಲ್ಲೇ ಶಿವಲಿಂಗಕ್ಕೆ ಬಿಲ್ಪತ್ರೆಯೇ ಆಪ್ತವೇಕೆ ಎಂಬ ಕುರಿತೂ ಪಾತ್ರಗಳು ಚರ್ಚಿಸುತ್ತ ಕೆಲವು ಸೂತ್ರಗಳನ್ನು ಹರವಿಡುತ್ತವೆ. ಶಿವಲಿಂಗವನ್ನು ಮುಚ್ಚಿಡುವ ಬಿಲ್ಪತ್ರೆಯಲ್ಲಿ ವಿಕಿರಣ ಪ್ರತಿರೋಧದ ಅಂಶಗಳಿವೆ. ಹಾಗೆಂದೇ ಬಿಲ್ಪತ್ರೆ ಶ್ರೇಷ್ಠವೆಂಬ ರಿವಾಜು ಎಂಬ ಕಲ್ಪನೆಯೊಂದನ್ನು ಅಲ್ಲಿ ಕಟ್ಟಿಕೊಡಲಾಗಿದೆ. ಆಧುನಿಕ ಸಂದರ್ಭದಲ್ಲಿ ಬಿಲ್ಪತ್ರೆ ಉಪಯೋಗಿಸಿಕೊಂಡು ಇಲಿಗಳ ಮೇಲೆ ಮಾಡಿದ ಪ್ರಯೋಗದಲ್ಲೂ, ಅವಕ್ಕೆ ವಿಕಿರಣ ಪ್ರತಿರೋಧದ ಗುಣ ಮೈಗೂಡಿದ್ದನ್ನು ಕೆಲವು ಸಂಶೋಧನೆಗಳು ಸಾರುತ್ತಿವೆ.

ಇವನ್ನೆಲ್ಲ ಇದಮಿತ್ಥಂ ಅಂತ ಒಪ್ಪಿಕೊಳ್ಳಬೇಕಿಲ್ಲ, ವಿಜ್ಞಾನದ ಮುದ್ರೆ ಒತ್ತಿಸಿಕೊಳ್ಳುವ ಕಾತುರವನ್ನೂ ಪ್ರಕಟಿಸಬೇಕಿಲ್ಲ. ಆದರೆ ನಮ್ಮ ಪುರಾಣದ ಕಲ್ಪನೆಗಳನ್ನು ಇನ್ನಷ್ಟು ಹಿಗ್ಗಿಸುವ ಇಂಥ ವಿವರಗಳನ್ನು ಮಹಾಶಿವರಾತ್ರಿಯ ಈ ದಿನ ಬೆರಗಿಂದ ಗಮನಿಸುವುದಕ್ಕೇನಡ್ಡಿ ಅಲ್ಲವೇ?

Leave a Reply