ಶಿವರಾತ್ರಿ ಹಬ್ಬಕ್ಕೆ 125 ಭಾರತೀಯ ಹಿಂದೂಗಳು ಪಾಕಿಸ್ತಾನಕ್ಕೆ ಹೋಗಿದ್ದೇಕೆ ಗೊತ್ತೆ?

ಡಿಜಿಟಲ್ ಕನ್ನಡ ಟೀಮ್

ಮಹಾ ಶಿವರಾತ್ರಿ ಹಬ್ಬ ಎಲ್ಲರಿಗೂ ವಿಶೇಷ. ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ರಾತ್ರಿ ಇಡೀ ಜಾಗರಣೆ ಮಾಡುವ ಅನುಭವವೇ ಬೇರೆ. ಇನ್ನು ಮಹಾಶಿವರಾತ್ರಿ ಅಂಗವಾಗಿ ಪುಣ್ಯ ಕ್ಷೇತ್ರಕ್ಕೆ ಹೋಗಬೇಕು ಅಂದರೆ, ನಮಗೆ ನೆನಪಾಗುವುದು ಕಾಶಿ, ಕೇದಾರನಾಥ. ಈಗ ಹೇಳಲು ಹೊರಟಿರೋ ವಿಷ್ಯ ಅಂದರೆ, ಮಹಾಶಿವರಾತ್ರಿ ಹಬ್ಬದಂದು ಹಿಂದೂ ಭಕ್ತಾದಿಗಳು ಪಾಕಿಸ್ತಾನಕ್ಕೆ ಹೋಗುವ ಬಗ್ಗೆ…!

ಅರೆ, ಶಿವರಾತ್ರಿಗೂ ಪಾಕಿಸ್ತಾನಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಎಂದು ಪ್ರಶ್ನೆ ಮೂಡುವುದು ಸಹಜ. ಹೌದು, ಭಾರತೀಯ ಹಿಂದೂಗಳಿಗೆ ಕಾಶಿ ವಿಶ್ವನಾಥ, ಕೇದಾರನಾಥದಂತೆ ಪಾಕಿಸ್ತಾನದ ಪಂಜಾಬ್ ನ ಚಕ್ವಾಲ್ ಜಿಲ್ಲೆಯಲ್ಲಿರುವ ಕಟಾಸ್ ರಾಜ್ ದೇವಾಲಯ ಸಹ ಪವಿತ್ರ ಕ್ಷೇತ್ರ. ಮಹಾಶಿವರಾತ್ರಿಯ ವಿಶೇಷವಾಗಿ ಪಾಕಿಸ್ತಾನದಲ್ಲಿ ಶಿವನ ದೇವಾಲಯದ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಪಾಕಿಸ್ತಾನದಲ್ಲಿರುವ ಹಿಂದೂಗಳಿಗೆ ಈ ಕ್ಷೇತ್ರ ಪವಿತ್ರವಾದುದು. ಈ ದೇವಾಲಯದ ಬಳಿ ಇರುವ ಕೆರೆಯ ನೀರನ್ನು ಪವಿತ್ರ ತೀರ್ಥ ಎಂದು ನಂಬಲಾಗುತ್ತದೆ. ಈ ಕ್ಷೇತ್ರದಲ್ಲಿ ಒಟ್ಟು ಏಳು ದೇವಾಲಯಗಳಿದ್ದವು. ಆ ಪೈಕಿ ಈಗ ಉಳಿದುಕೊಂಡಿರುವುದು ಮೂರು ದೇವಾಲಯ ಮಾತ್ರ. ಈ ದೇವಾಲಯದ ಇತಿಹಾಸದ ಕತೆಗಳನ್ನು ಕೆದಕುತ್ತಾ ಸಾಗಿದರೆ, ನಮಗೆ ಸಿಗುವುದು ಈ ದೇವಾಲಯ ಮಹಾಭಾರತದ ಕಾಲದಲ್ಲಿ ನಿರ್ಮಿಸಲಾಗಿದ್ದು ಎಂಬ ಉಲ್ಲೇಖ. ಪಾಂಡವರು ವನವಾಸಕ್ಕೆ ತೆರಳಿದಾಗ ಅವರು 4 ವರ್ಷ ಕಾಲ ಕಳೆದದ್ದು ಈ ಪ್ರದೇಶದಲ್ಲೇ ಎಂದು ನಂಬಲಾಗುತ್ತಿದೆ. ಅಲ್ಲದೆ ಸ್ವತಃ ಶ್ರೀ ಕೃಷ್ಣ ಈ ದೇವಾಲಯಕ್ಕೆ ಅಡಿಪಾಯ ಇಟ್ಟಿದ್ದ ಎಂಬುದು ಪುರಾಣದ ಕತೆಗಳಲ್ಲಿವೆ. ಶಿವನ ಮೊದಲ ಪತ್ನಿ ಸತಿ ಮೃತಪಟ್ಟಾಗ ದುಃಖದಿಂದ ಕಣ್ಣಿರಿಟ್ಟಾಗ ಒಂದು ಹನಿಯಿಂದ ಈ ಕೆರೆ ಉದ್ಭವಗೊಂಡಿತು. ಮತ್ತೊಂದು ಹನಿ ಕಣ್ಣೀರು ಅಜ್ಮೆರ್ ನ ಪುಷ್ಕರ್ ನಲ್ಲಿ ಕೆರೆಯಾಗಿ ನಿರ್ಮಾಣಗೊಂಡಿತು ಎಂಬುದು ಇಲ್ಲಿನ ಧಾರ್ಮಿಕ ನಂಬಿಕೆ.

Katas Raj Temples4

ಭಾರತ ಮತ್ತು ಪಾಕಿಸ್ತಾನ ವಿಭಜನೆ ನಂತರ ಈ ದೇವಾಲಯ ನಿರ್ಲಕ್ಷಕ್ಕೆ ಒಳಗಾಯಿತು. ಈ ಕೆರೆಗೆ ಕಸ ಎಸೆದು ಅಶುದ್ಧಿ ಮಾಡಲಾಗಿತ್ತು. ನಂತರ 1982ರಲ್ಲಿ ಈ ಪ್ರದೇಶದಲ್ಲಿರುವ ಹಿಂದೂಗಳು ದೇವಾಲಯದ ವೈಭವವನ್ನು ಮತ್ತೆ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು. ನಂತರ ಪಾಕಿಸ್ತಾನ ಸರ್ಕಾರ ಸಹ ಇದಕ್ಕೆ ಸ್ಪಂದಿಸಿ ಮಹಾಶಿವರಾತ್ರಿ ದಿನದಂದು ಭಾರತೀಯ ಭಕ್ತಾದಿಗಳು ಈ ಕ್ಷೇತ್ರಕ್ಕೆ ಭೇಟಿ ನೀಡಲು ಅನುಮತಿ ಮಾಡಿಕೊಟ್ಟಿತು. ಈ ವರ್ಷ 125 ಭಾರತೀಯರು ಈ ಕ್ಷೇತ್ರಕ್ಕೆ ತೆರಳಲು ಅನುಮತಿ ನೀಡಿದೆ. ಅವರನ್ನು ಲಾಹೋರ್ ಕೋಟೆಯ ಬಳಿಯ ಗುರುದ್ವಾರ ದೆರಾ ಸಾಹಿಬ್ ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ನಂತರ ಹಬ್ಬದ ದಿನ ಸೋಮವಾರ ಇವರು ಈ ಕ್ಷೇತ್ರಕ್ಕೆ ತೆರಳಿದ್ದಾರೆ.

ಕೈಗಾರಿಕೆಗಳಿಗೆ ಅಂತರ್ಜಲವನ್ನು ತೀವ್ರವಾಗಿ ಬಳಸುತ್ತಿರುವ ಹಿನ್ನೆಲೆಯಲ್ಲಿ ಈ ಪವಿತ್ರ ಕೆರೆ ಬತ್ತುತ್ತಿದೆ. 2007ರಲ್ಲಿ ಪಾಕಿಸ್ತಾನ ಸರ್ಕಾರ ಈ ದೇವಾಲಯ ಪುನಶ್ಚೇತನಕ್ಕೆ ಮುಂದಾಯಿತು. ಅಲ್ಲದೆ ವಿಶ್ವ ಪಾರಂಪರಿಕ ಸ್ಮಾರಕದ ಸ್ಥಾನಮಾನ ಪಡೆಯಲು ಈ ದೇವಾಲಯದ ಹೆಸರು ಸೂಚಿಸಿತ್ತು.

ಕೇವಲ ಇದೊಂದೆಯಲ್ಲ, ಮನ್ಸೆರಾ ಜಿಲ್ಲೆಯ 10 ಕಿ.ಮೀ ದೂರದಲ್ಲಿರುವ ಚಿಟ್ಟಿ ಗಾಟಿ ಪ್ರದೇಶದಲ್ಲಿ ಶಿವಲಿಂಗವಿದ್ದು ಪಾಕಿಸ್ತಾನದ ಅತಿ ದೊಡ್ಡ ಶಿವಲಿಂಗ ಎಂದೇ ಖ್ಯಾತಿ ಪಡೆದಿದೆ. ಈ ದೇವಾಲಯ 2000 ವರ್ಷಗಳ ಹಳೆಯದು ಎಂದು ಹೇಳಲಾಗುತ್ತಿದೆ. 1948ರಿಂದ 1998ರವರೆಗೂ ಈ ದೇವಾಲಯವನ್ನು ಸ್ಥಳೀಯರು ಮುಚ್ಚಿದ್ದರು. ನಂತರ ಅಲ್ಲಿನ ಹಿಂದೂಗಳು ತಮ್ಮ ನಂಬಿಕೆ ಮತ್ತು ಐತಿಹಾಸಿಕ ಮಹತ್ವವಿರುವ ಹಿನ್ನೆಲೆಯಲ್ಲಿ ಮತ್ತೆ ದೇವಾಲಯವನ್ನು ತೆರೆಯಲಾಯಿತು. ಮಹಾಶಿವರಾತ್ರಿ ದಿನದಂದು ಪಾಕಿಸ್ತಾನದಾದ್ಯಂತ ಹಿಂದೂ ಭಕ್ತಾದಿಗಳು ಈ ದೇವಸ್ಥಾನಕ್ಕೆ ಆಗಮಿಸಿ ಪೂಜೆ ನಡೆಸುತ್ತಾರೆ.

Katas Raj Temples10

ಇನ್ನು ಕರಾಚಿಯಲ್ಲಿರುವ ಶ್ರೀ ರತ್ನೇಶ್ವರ ಮಹಾದೇವ ದೇವಾಲಯದಲ್ಲೂ ಭಕ್ತಾದಿಗಳು ಶಿವರಾತ್ರಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಶಿವ, ಪಾರ್ವತಿ ದೇವಿಯನ್ನು ಮದುವೆಯಾದ ಘಳಿಗೆಯನ್ನು ಆಚರಿಸಲು ಇಲ್ಲಿನ ಭಕ್ತಾದಿಗಳು ಪೂಜೆ ನಡೆಸುತ್ತಾರೆ. ಮಹಿಳೆಯರು ಸೀರೆ ಉಟ್ಟು ಹೂವು, ತೆಂಗಿನ ಕಾಯಿ, ಅಕ್ಕಿ ಹಾಗೂ ಇತರೆ ಪೂಜಾ ವಸ್ತುಗಳನ್ನು ತೆಗೆದುಕೊಂಡು ಸೂರ್ಯೋದಯಕ್ಕೂ ಮುನ್ನ ಸಮುದ್ರ ತೀರಕ್ಕೆ ಬರಿಗಾಲಿನಲ್ಲಿ ಹೋಗಿ ಪೂಜೆ ಸಲ್ಲಿಸುತ್ತಾರೆ. ಅಂದು ಉಪವಾಸ ಮಾಡಿ ತಮ್ಮ ಗಂಡನ ಜತೆ ಉತ್ತಮ ಜೀವನಕ್ಕಾಗಿ ಪ್ರಾರ್ಥಿಸುತ್ತಾರೆ.

Leave a Reply