ಸುದ್ದಿಸಂತೆ: ಮಲ್ಯಗೆ ಬ್ಯಾಡ್ ಟೈಮ್, ಕೆರೆಗೆ ಮೃತ ಮೀನುಗಳ ಹಾರ… ನೀವರಿಯಬೇಕಿರುವ ಸುದ್ದಿವಿವರ

ಮಲ್ಯ ಸುಸ್ತಿ, ಕೊನೆಗೂ ಜಫ್ತಿಯಾಗ್ತಿದೆ ಆಸ್ತಿ

ಬ್ಯಾಂಕ್ ಗಳು ಉಳಿಸಿಕೊಂಡಿರುವ ಕೆಟ್ಟಸಾಲಗಳ ವಸೂಲಾತಿ ಕುರಿತು ದೇಶದಲ್ಲಿ ಹಲದಿನಗಳಿಂದ ಚರ್ಚೆ ನಡೆದಿದೆಯಷ್ಟೆ. ಇದರ ಮೊದಲ ಭಾಗವಾಗಿ ಉದ್ಯಮಿ ವಿಜಯ್ ಮಲ್ಯ ಪ್ರಶ್ನೆಗೊಳಗಾಗುತ್ತಿದ್ದರು. ಇದೀಗ ಇವರ ಪ್ರಕರಣ ತಾರ್ಕಿಕ ಹಂತದತ್ತ ಸಾಗುತ್ತಿದ್ದು ಆಸ್ತಿ ಜಫ್ತಿಗೆ ನ್ಯಾಯಾಧಿಕರಣ ಆದೇಶಿಸಿದೆ. ಬೃಹತ್ ಪ್ರಮಾಣದ ಸಾಲ ಪಾವತಿಸಲು ಮೊಂಡುತನ ಪ್ರದರ್ಶಿಸಿದ ಮಲ್ಯ ವಿರುದ್ಧ ಬ್ಯಾಂಕುಗಳು ಸಾಲ ವಸೂಲಾತಿ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದ್ದವು. ಅರ್ಜಿ ಪುರಸ್ಕರಿಸಿ ವಿಚಾರಣೆ ನಡೆಸಿದ ಕೋರ್ಟ್, ಮಲ್ಯ ಆಸ್ತಿಗಳ ಜಪ್ತಿಗೆ ಸೋಮವಾರ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೇ ಜಾರಿ ನಿರ್ದೇಶನಾಲಯ(ಇಡಿ)ವೂ ಕೂಡ ಮಲ್ಯ ವಿರುದ್ಧ ದೂರು ದಾಖಲಿಸಿಕೊಂಡಿದೆ.

18 ಬ್ಯಾಂಕುಗಳಿಂದ ಪಡೆದಿದ್ದ ಸುಮಾರು ₹7 ಸಾವಿರ ಕೋಟಿ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಮಲ್ಯ ಆಸ್ತಿ ಜಪ್ತಿ ಮಾಡುವಂತೆ ನ್ಯಾಯಾಧಿಕರಣದ ಮೊರೆ ಹೋಗಿದ್ದವು. ಇದರಲ್ಲಿ ಒಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಸಿ ಆರ್ ಬೆನಕನಹಳ್ಳಿ ಅವರು ಈ ಆದೇಶ ನೀಡಿ, ಉಳಿದ ಅರ್ಜಿಗಳ ವಿಚಾರಣೆಯನ್ನು ಮಾರ್ಚ್ 28 ಕ್ಕೆ ಮುಂದೂಡಿದ್ದಾರೆ.

ಯುನೈಟೆಡ್ ಸ್ಪೀರಿಟ್ ಲಿಮಿಟೆಡ್ ನ ವ್ಯವಹಾರವನ್ನು ಡಿಯಾಜಿಯೊ ಕಂಪನಿಗೆ ಬಿಟ್ಟುಕೊಟ್ಟಿದಕ್ಕೆ ಪ್ರತಿಯಾಗಿ ಮಲ್ಯಗೆ ₹515 ಕೋಟಿ ಸಂದಾಯವಾಗಲಿಕ್ಕಿತ್ತು. ಮಲ್ಯಗೆ ನೀಡದಂತೆ ನ್ಯಾಯಾಧಿಕರಣ ಡಿಯೊಜಿಯೊ ಕಂಪನಿಗೆ ಆದೇಶಿಸಿದ್ದು, ಈ ಹಣವನ್ನು ಬ್ಯಾಂಕುಗಳಿಗೆ ಕೊಡುವ ವೇಳೆ ಮೊದಲ ಪ್ರಾಶಸ್ಯ ಎಸ್ ಬಿ ಐ ಗೆ ನೀಡಲಾಗುವುದು ಎಂದಿದೆ. ಸದ್ಯಕ್ಕೆ ಈ ಮೊತ್ತವು ತಾತ್ಕಾಲಿಕ ಜಫ್ತಿಗೆ ಒಳಗಾಗಿದ್ದು, ಮೊತ್ತ ಯಾರಿಗೆ ಸಲ್ಲಬೇಕೆಂಬ ನಿರ್ಧಾರ ಇನ್ನಷ್ಟೇ ಪ್ರಕಟವಾಗಬೇಕಿದೆ.

ಪೂರಕ ಓದುಗಳು

ಸಾಲ ತೀರಿಸಲಾಗದ ಮಲ್ಯ ಆಸ್ತಿಗಳ ಪಟ್ಟಿ

ಮೈಮೇಲೆ ಸಾಲವಿದ್ದರೂ ಮಲ್ಯ ಮೋಜಿಗೇನು ಕಡಿಮೆಯಾಗಿಲ್ಲ

ಹಲಸೂರು ಕೆರೆಯಲ್ಲಿ ಸಾವಿರಾರು ಮೀನುಗಳ ಮರಣ

ಬೆಂಗಳೂರು ನಗರದ ಹಲಸೂರು ಕೆರೆಯಲ್ಲಿ ಮಲಿನದ ಕಾರಣದಿಂದ ಸಾವಿರಾರು ಮೀನುಗಳು ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಸಾಕಷ್ಟು ಸಂಖ್ಯೆಯಲ್ಲಿ ಸತ್ತಿರುವ ಮೀನುಗಳು ಕೆರೆ ದಡದ ಬಳಿ ತೇಲುತ್ತಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ನಾರುತ್ತಿದೆ. ಮುಂಜಾನೆ ವಾಯುವಿಹಾರಕ್ಕೆ ಹಾಗೂ ವಾಕಿಂಗ್ ಗಾಗಿ ಬಂದ ಸಾರ್ವಜನಿಕರು ಮೀನುಗಳು ಸತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ರಾಸಾಯನಿಕ ವಸ್ತು ಸೇರಿ ಮಲಿನಗೊಂಡ ಬೆಳ್ಳಂದೂರು ಕೆರೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಈಗ ಹಲಸೂರು ಕೆರೆ ಪ್ರಕರಣದ ಮೂಲಕ ಬೆಂಗಳೂರಿನ ಕೆರೆಗಳು ಶುದ್ಧವಾಗಿಲ್ಲ ಎಂಬುದು ದೃಢವಾಗಿದೆ.

Ulsoor Lake

 ಕನ್ಹಯ್ಯನ ಹತ್ಯೆ ಮಾಡಿದರೆ ಬಹುಮಾನ ಘೋಷಿಸಿದ ವ್ಯಕ್ತಿ ಬಂಧನ

ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ನನ್ನು ಶೂಟ್ ಮಾಡಿದರೆ, ₹ 11 ಲಕ್ಷ ಬಹುಮಾನ ಕೊಡುವುದಾಗಿ ಹೇಳಿಕೆ ನೀಡಿದ್ದ ಬಿಹಾರ ಮೂಲದ ಆನಂದ್ ಶರ್ಮಾ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೂರ್ವಾಂಚಲ್ ಸೇನಾ ಎಂಬ ಸಂಘಟನೆಯ ಅಧ್ಯಕ್ಷ ಎಂದು ಹೇಳಿಕೊಂಡಿರುವ ಈತ, ದೆಹಲಿಯಲ್ಲಿ ಕನ್ಹಯ್ಯನನ್ನು ಕೊಂದರೆ ಬಹುಮಾನ ನೀಡುವುದಾಗಿ ಭಿತ್ತಿಪತ್ರಗಳನ್ನು ಹಂಚಿದ್ದ. ಆದರೆ ತಮಾಷೆ ನೋಡಿ. ಕೆಲ ವೆಬ್ ಸೈಟ್ ಗಳ ವರದಿ ಪ್ರಕಾರ ಈತನ ಬ್ಯಾಂಕ್ ಖಾತೆಯಲ್ಲಿ ಕೇವಲ ₹ 150 ಮಾತ್ರ ಇದ್ದು, ಕಳೆದ ಕೆಲವು ದಿನಗಳಿಂದ ಮನೆ ಬಾಡಿಗೆಯನ್ನು ಕಟ್ಟಿಲ್ಲವಂತೆ!

ಭೀಕರ ಅಪಘಾತ: ರಾಜ್ಯದ ಐವರ ದುರ್ಮರಣ

ತೆಲಂಗಾಣದಲ್ಲಿ ಸಂಭವಿಸಿದ ಕಾರು ಮತ್ತು ಲಾರಿ ನಡುವಿನ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿ ರಾಜ್ಯದ ಐವರು ಮೃತಪಟ್ಟಿದ್ದಾರೆ. ಮೆಹಬೂಬನಗರ ಜಿಲ್ಲೆಯ ಕೊಡಂಗಲ್ ನಲ್ಲಿ ಸೋಮವಾರ ಈ ದುರ್ಘಟನೆ ನಡೆದಿದ್ದು, ಮೃತರನ್ನು ರಾಜ್ಯದ ಚಿಂಚೋಳಿ ಮೂಲದ ಯಲ್ಲಪ್ಪ (40), ನರಸಮ್ಮ(32), ಈ ದಂಪತಿಗಳ 4 ವರ್ಷದ ಹೆಣ್ಣು ಮಗು ಮತ್ತು ಸತೀಶ್(42) ಇವರ ಮಗಳು 8 ವರ್ಷದ ಅಶ್ವಿನಿ ಎಂದು ಗುರುತಿಸಲಾಗಿದೆ.

Leave a Reply