ಅಯ್ಯೋ ಭಕ್ತರೇ… ಸೇನೆಯ ಇಮೇಜು ಕುಲಗೆಡಿಸಿಯಾದರೂ ಸಂಸ್ಕೃತಿಯ ಬ್ರಾಂಡು ಕಟ್ತೇವೆ ಎಂಬ ಮಟ್ಟಕ್ಕಿಳಿಯಿತೇ ನಿಮ್ಮ ಬೌದ್ಧಿಕ ದಾರಿದ್ರ್ಯ?

ಪ್ರವೀಣ್ ಕುಮಾರ್

ದೆಹಲಿಯ ಯಮುನಾ ತೀರದಲ್ಲಿ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಆಯೋಜಿಸಿರುವ ವರ್ಲ್ಡ್ ಕಲ್ಚರಲ್ ಫೆಸ್ಟಿವಲ್ ಗೆ ಇನ್ನೆರಡು ದಿನ ಬಾಕಿ ಇರುವಾಗ ಹಲವು ವಿವಾದಗಳು ಮೆತ್ತಿಕೊಂಡಿವೆ.

ಆರ್ಟ್ ಆಫ್ ಲಿವಿಂಗ್ ಹೇಳಿಕೊಳ್ಳುತ್ತಿರುವಂತೆ ಈ ಕಾರ್ಯಕ್ರಮಕ್ಕೆ 30 ಲಕ್ಷದಷ್ಟು ಮಂದಿ ಸೇರಲಿದ್ದಾರೆ. ನದಿತೀರದಲ್ಲಿ ಇಷ್ಟುಮಂದಿಯನ್ನು ಸೇರಿಸುವುದು ಸುರಕ್ಷತೆ ದೃಷ್ಟಿಯಿಂದ ಹಾಗೂ ಪರಿಸರದ ದೃಷ್ಟಿಯಿಂದ ಮಾರಕವಾಗದೇ ಎಂಬುದು ಈಗ ಎದ್ದಿರುವ ಪ್ರಶ್ನೆ. ಈ ನಿಟ್ಟಿನ ಪರ- ವಿರೋಧ ವಾದಗಳೆರಡನ್ನೂ ಪರಿಶೀಲಿಸಲೇಬೇಕು. ಆದರೆ ಅವೆಲ್ಲಕ್ಕಿಂತ ಮುಖ್ಯವಾಗಿ ಕರುಳು ಹಿಂಡುವ ದೃಶ್ಯ ಎಂದರೆ ಇಂಥದೊಂದು ಖಾಸಗಿ ಕಾರ್ಯಕ್ರಮಕ್ಕೆ ದೇಶದ ಸೈನಿಕರನ್ನು ಬಳಸಿಕೊಳ್ಳುತ್ತಿರುವ ದೃಶ್ಯಗಳು! ಯಮುನೆಯ ಮೇಲೆ ತಾತ್ಕಾಲಿಕ ಸೇತುವೆಗಳ ನಿರ್ಮಾಣದಲ್ಲಿ ಸೇನೆ ತೊಡಗಿಸಿಕೊಂಡಿರುವ ದೃಶ್ಯಾವಳಿಗಳು ಕಣ್ಣಿಗೆ ಕಟ್ಟುವಂತೆ ಬಿತ್ತರವಾಗಿವೆ.

ಇಷ್ಟೊಂದು ಬೃಹತ್ ಸಮಾರಂಭದಲ್ಲಿ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಸೇರುತ್ತಿದ್ದಾರಾದ್ದರಿಂದ ಸುರಕ್ಷತೆ ದೃಷ್ಟಿಯಿಂದ ಸೇನೆಗೇ ಈ ಹೊಣೆಯನ್ನು ವಹಿಸಲಾಗಿದೆ ಎಂಬ ಉತ್ತರ ಸರ್ಕಾರದಿಂದ ಬಂದಿದೆ.

ಅಲ್ಲಾ ಸ್ವಾಮಿ, ಇಂಥ ನೆಪದ ಮೂಲಕ ಖಾಸಗಿ ಕಾರ್ಯಕ್ರಮಕ್ಕೆ ಸೇನೆಯನ್ನು ಬಳಸಿಕೊಳ್ಳುವ ಪರಂಪರೆಗೆ ಮುನ್ನುಡಿ ಬರೆದರೆ ಮುಂದಾಗುವ ಅಧ್ವಾನದ ಅರಿವಿದೆಯೇ? ರವಿಶಂಕರ್ ಗುರೂಜಿಯವರ ಜನ ಸೇರಿಸುವ ತಾಕತ್ತಿಗೆ ಅಡ್ಡಡ್ಡ ಬೀಳೋಣ. ಆದರೆ ಜನ ಸೇರಿಸುವ ಬಲಾಢ್ಯರ ವಿಷಯದಲ್ಲೆಲ್ಲ ಸುರಕ್ಷತೆ- ಸಾರ್ವಜನಿಕ ಹಿತಾಸಕ್ತಿ ಅನ್ವಯಗೊಳಿಸಿ ಅಲ್ಲೆಲ್ಲ ಸೈನಿಕರ ಕಡೆಯಿಂದ ಸಿಮೆಂಟ್ ಮೂಟೆ ಹೊರಿಸುವ ಕೆಲಸ ಮಾಡುತ್ತೀರಾ? ಇದೇನಾ ಆಳುವವರ ಪ್ರಕಾಂಡ ದೇಶಪ್ರೇಮ, ಸೈನಿಕರ ಕಾಳಜಿ?

ಸಂತರೆನಿಸಿಕೊಂಡವರೆಲ್ಲ ಹಿಂದುತ್ವದ ಉದ್ಧಾರಕ್ಕೇ ಇರುವವರು ಹಾಗೂ ಮೋದಿ ಸರ್ಕಾರ ಮಾಡಿದ್ದೆಲ್ಲ ಸರಿ ಎಂಬ ಕೆಲ ಅತಿರೇಕದ ರೈಟಿಸ್ಟರ ಗುಂಪಿನಿಂದ ಅದಾಗಲೇ ಈ ಬಗ್ಗೆಯೂ ಸಮರ್ಥನೆಗಳು ಬರತೊಡಗಿವೆ. ನಾಗರಿಕ ಸೇವೆಗೆ ಸೇನೆಯ ಬಳಕೆ ಹೊಸತೇನಲ್ಲ, ಅಲ್ಲದೇ ತ್ವರಿತವಾಗಿ ಇಂಥ ಸೇತುವೆಗಳನ್ನು ನಿರ್ಮಿಸುವ ಕ್ಷಮತೆ ಸೇನೆಯ ಬಳಿ ಮಾತ್ರವೇ ಇರೋದು, ಕುಂಭಮೇಳದಲ್ಲೂ ಸೇನೆಯ ಸಹಕಾರವಿದೆ… ಇತ್ಯಾದಿ ವಾದಗಳು ಎದುರಾಗುತ್ತಿವೆ.

ಖಂಡಿತ. ಸೇನೆ ಕೇವಲ ಯುದ್ಧರಂಗದಲ್ಲಿ ಮಾತ್ರವಲ್ಲದೇ ನಾಗರಿಕ ಬದುಕು ಕಟ್ಟುವಲ್ಲೂ ತೊಡಗಿಸಿಕೊಳ್ಳುವ ಉದಾಹರಣೆಗಳಿವೆ. ಆದರೆ ಅದಕ್ಕೊಂದು ರೀತಿನೀತಿ ಇಲ್ಲವೇ? ಸೇನೆಯನ್ನು ಕೊನೆಯ ಆಯ್ಕೆಯಾಗಿ ಉಪಯೋಗಿಸಬೇಕು ಎಂಬುದು ಇಲ್ಲೆಲ್ಲ ಪಾಲಿಸಬೇಕಾದ ನೀತಿ. ಈಶಾನ್ಯ ಭಾರತದ ನಕ್ಸಲೀಯ ಹಿಂಸೆಯ ಸಂದರ್ಭದಲ್ಲಿ ಮತ್ಯಾರಿಗೂ ಮುಟ್ಟಲಾಗದ ಜಾಗಗಳಲ್ಲಿ ಸೇನೆಯೇ ರಸ್ತೆ ನಿರ್ಮಿಸುವುದರಿಂದ ಹಿಡಿದು ಅನೇಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತದೆ. ಆದರೆ, ಇಲ್ಲಿ ಅಂಥ ಯಾವ ತುರ್ತು ಉದ್ದೇಶವಿದೆ?

ಆರ್ಟ್ ಆಫ್ ಲಿವಿಂಗ್ ಹೇಳಿಕೊಳ್ಳುತ್ತಿರುವಂತೆ ವರ್ಷದ ಮೊದಲೇ ಇಂಥದೊಂದು ಸಮ್ಮೇಳನಕ್ಕೆ ಅನುಮತಿಗಾಗಿ ಅರ್ಜಿ ಸಲ್ಲಿಸಲಾಗಿತ್ತು. ಹಾಗಿರುವಾಗ ಸೇತುವೆ ನಿರ್ಮಾಣವೋ ಇನ್ನೊಂದೋ ಎಲ್ಲದರ ಜವಾಬ್ದಾರಿ ಹೊರಬೇಕಿರೋದು, ಸೇರಲಿರುವ ಜನ 35 ಲಕ್ಷವೋ ಮೂವತ್ತು ಕೋಟಿಯೋ ಅದಕ್ಕೆ ತಕ್ಕ ತಯಾರಿಯ ಜವಾಬ್ದಾರಿ ಹೊರಬೇಕಿರುವುದು, ಅಲ್ಲಿನ ನಿರ್ಮಾಣಗಳಿಗೆ ಬೇಕಾದ ಪರಿಣತರನ್ನು ಕರೆಸಿಕೊಳ್ಳಬೇಕಿರುವುದು ಸಂಸ್ಥೆಯ ಸಿದ್ಧತೆಯ ಭಾಗವಾಗುತ್ತದೆಯೇ ಹೊರತು, ಕೊನೆಕ್ಷಣದಲ್ಲಿ ಸೈನಿಕರನ್ನು ಕರೆಸಿ, ಬೆನ್ನಮೇಲೆ ಕಂಬಿ ಹೊರೆಸಿ ಸಮರ್ಥನೆ ಮಾಡಿಕೊಂಡರಾಯಿತೇ?

yamuna army2

ಈ ಹಿಂದೆ ಕುಂಭಮೇಳ, ಮತ್ಯಾವುದೋ ರಾಕ್ ಕಾರ್ಯಕ್ರಮಕ್ಕೆ ಸೇನೆ ಸಹಯೋಗ ನೀಡಿತ್ತು ಎಂಬುದನ್ನು ಈಗಿನ ಆಯೋಜನೆ ಸಮರ್ಥನೆಗೆ ಬಳಸಿಕೊಳ್ಳಲಾಗುತ್ತಿದೆಯಲ್ಲ, ಇದರ ಅಪಾಯ ಎಂಥಾದ್ದು ಗೊತ್ತೇ? ನಾಳೆ ಇನ್ಯಾವುದೋ ಪಂಥ, ಮತ್ಯಾವುದೋ ಅಧ್ಯಾತ್ಮ ಚಿಂತಕ ತನಗೂ ಲಕ್ಷಗಟ್ಟಲೇ ಜನ ಸೇರಿಸುವ ತಾಕತ್ತಿದೆ ಹಾಗೂ ಇದು ಲೋಕಕಲ್ಯಾಣಕ್ಕೆ ಅಂತ ವಾದಿಸಿ ಸೇನೆಯನ್ನು ಬಳಸಿಕೊಳ್ಳುವ ಪರಂಪರೆ ಮುಂದುವರಿದರೆ ಇದು ಹೋಗಿ ನಿಲ್ಲುವುದಾದರೂ ಎಲ್ಲಿಗೆ? ಆಗಲೂ ಈ ಸನಾತನ ಸಮರ್ಥಕರು ಸುಮ್ಮನಿರುತ್ತಾರೆಯೇ? ಅಥವಾ ಆಗ ಎದ್ದು ಪ್ರತಿಭಟಿಸುವ ನೈತಿಕತೆ ಹೇಗೆ ಉಳಿದಿರಲು ಸಾಧ್ಯ?

ಹಾಗಂತ ಇಲ್ಲಿ ಕೇಂದ್ರ ಸರ್ಕಾರವೊಂದೇ ಉತ್ತರದಾಯಿಯಲ್ಲ. ದೆಹಲಿ ಸರ್ಕಾರವೂ ತನ್ನ ಭದ್ರತೆಯ ಪರಿಧಿ ಮೀರಿದ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟಿದಲ್ಲದೇ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರೂ ಈ ಕಾರ್ಯಕ್ರಮದ ಭಾಷಣಕಾರರ ಪಟ್ಟಿಯಲ್ಲಿದ್ದಾರೆ. ಇನ್ನು ಎನ್ ಡಿ ಎ ಸಚಿವರ ಭಾಗವಹಿಸುವಿಕೆಯಂತೂ ದಂಡಿಯಾಗಿಯೇ ಇದೆ. ಹೀಗಾಗಿ ಇದು ಬಿಜೆಪಿ ವರ್ಸಸ್ ಆಪ್, ರೈಟ್ ವರ್ಸಸ್ ಲೆಫ್ಟ್ ಪ್ರಶ್ನೆಯಾಗಬೇಕಿಲ್ಲ.

ಇವತ್ತಿಗೆ ರವಿಶಂಕರ್ ಭಕ್ತರಾಗಿಯೋ, ಮೋದಿ ಭಕ್ತರಾಗಿಯೋ, ಮನೋಹರ್ ಪರಿಕರ್ ಪ್ರಶಂಸಕರಾಗಿಯೋ ಸೇನೆಯ ಬಳಕೆ ಸಮರ್ಥಿಸಿಕೊಳ್ಳಬಹುದು. ನಾಳೆ ಮತ್ಯಾವುದೋ ರಾಜಕಾರಣಿ ಸಾಮೂಹಿಕ ವಿವಾಹ ಏರ್ಪಡಿಸಿ, ಇದನ್ನೂ ಲೋಕಕಲ್ಯಾಣಕ್ಕೆ, ಸಂಸ್ಕೃತಿ ಉಳಿವಿಗೇ ಮಾಡ್ತಿದೀನಿ ಅಂತ ಆಗಿನ ಸರ್ಕಾರದ ಮೇಲೆ ಒತ್ತಡ ತಂದು ಯೋಧರ ಬೆನ್ನಮೇಲೆ ಮರಳು ಮೂಟೆ ಹೊರಿಸುವ, ಆರ್ಟ್ ಆಫ್ ಲಿವಿಂಗ್ ಗೆ ಸಿಕ್ಕ ಸೌಲಭ್ಯ ನಮಗೇಕಿಲ್ಲ ಅಂತ ಭವಿಷ್ಯದಲ್ಲಿ ಹಲವು ಸಂಘಟನೆಗಳು ಪ್ರಶ್ನಿಸುವ ಅತಿ ದರಿದ್ರ ಸಂಪ್ರದಾಯವೊಂದಕ್ಕೆ ಗಟ್ಟಿ ಅಡಿಪಾಯ ಹಾಕಿದಂತಾಗುತ್ತದೆ ಅಷ್ಟೆ. ನಾಳೆ ಬಿಜೆಪಿ ನೇತಾರನೊಬ್ಬ ಪ್ರತ್ಯೇಕತಾವಾದಿಗಳಿಗೆ- ಉಗ್ರರಿಗೆ ಅನುಕಂಪ ತೋರಿ ಸೈನಿಕರ ಆತ್ಮಬಲ ಕುಗ್ಗಿಸಬೇಡಿ ಅಂತ ಆಗ್ರಹಿಸಿದರೆ ಅಲ್ಲಿಂದ ಬರುವ ಉತ್ತರ ಏನಿರುತ್ತದೆ? ಯೋಧರ ತಲೆಮೇಲೆ ಕಂಬಿ ಹೊರೆಸಿ ಕಾರ್ಮಿಕರನ್ನಾಗಿಸಿದ ನಿಮಗೆ ಮಾರಲ್ ಬಗ್ಗೆ ಮಾತಾಡೋ ಯೋಗ್ಯತೆ ಇಲ್ಲ ಮುಚ್ಕೋಳಿ ಅಂತ ಬಯ್ಸಿಕೊಳ್ಳೋದಕ್ಕೆ ಸಿದ್ಧರಾಗಿ.

ಕಲ್ಯಾಣಿ ಶುದ್ಧೀಕರಣ, ಕೆರೆ ಪುನರುಜ್ಜೀವನ ಅಂತೆಲ್ಲ ಆರ್ಟ್ ಆಫ್ ಲಿವಿಂಗ್ ತಾನು ಮಾಡಿರುವ ಒಳ್ಳೇ ಕೆಲಸದ ಪಟ್ಟಿ ಕೊಡಬಹುದು. ಆದರೆ ಅವ್ಯಾವವೂ ನಿಯಮ ಸಡಿಲಿಸಿ ಮುನ್ನುಗ್ಗುವುದಕ್ಕೆ ಲೈಸೆನ್ಸ್ ಆಗುವುದಿಲ್ಲ. ಸಮ್ಮೇಳನಕ್ಕೆ ಸಾರ್ವಜನಿಕರು ಸೇರುತ್ತಾರೆ ಎನ್ನುವುದು ನಿರ್ಮಾಣ ಕಾಮಗಾರಿಗೆ ಸೇನೆಯನ್ನು ಬಳಸಿಕೊಳ್ಳುವುದಕ್ಕೆ ಸಮರ್ಥನೆ ಅಲ್ಲವೇ ಅಲ್ಲ. ಆಧುನಿಕ ಯುಗದಲ್ಲಿ ಸಂತನಾಗಲೀ, ರಾಜಕಾರಣಿಯಾಗಲಿ, ಇನ್ಯಾರೇ ಆಗಲಿ ಮಾಡುತ್ತಿರುವ ಕಾರ್ಯವೆಲ್ಲ ಲೋಕಕಲ್ಯಾಣಕ್ಕೆ, ಜಾತಿ-ಮತ ಮೀರಿದ ಸಂಸ್ಕೃತಿ ಉದ್ಧಾರಕ್ಕೆ ಅಂತ ಹೇಳಿಕೊಳ್ಳುವುದು ಅರ್ಧಸತ್ಯವಷ್ಟೇ ಆಗಿರಲು ಸಾಧ್ಯ. ನಿಸ್ವಾರ್ಥ ಸೇವೆ ಎಂಬ ಪದವನ್ನು ಬಳಸಿದಷ್ಟೇ ಸುಲಭವಾಗಿ ಕಾರ್ಯದಲ್ಲೂ ತೊಡಗಿಸಿಕೊಳ್ಳೋದು ಸಾಧ್ಯವಾಗಿಬಿಟ್ಟಿದ್ದರೆ, ಯೋಧರು ನಿರ್ಮಿಸಿದ ಸೇತುವೆ ಮೇಲೆ ನಡೆದು, ವೇದಿಕೆ ಎದುರು ಮಾತ್ರ ರವಿಶಂಕರರ ದೊಡ್ಡ ಪೋಸ್ಟರ್ ಲಗಾಯಿಸುವ ಪ್ರಮೇಯವೇ ಇರುತ್ತಿರಲಿಲ್ಲ.

ravishankar1

ಈ ಬಕ್ವಾಸ್ ನಿಲ್ಲಿಸಿ.

1 COMMENT

  1. ಲೇಖಕರ ಸೈನಿಕ ಪರ ಕಾಳಜಿ ಮೆಚ್ಚುವಂತಹದ್ದೆ.. ಅದಕ್ಕೊಂದು ಸಲಾಮ್.. ಆದರೆ ಭಕ್ತರನ್ನು ಟೀಕಿಸುವ ಭರದಲ್ಲಿ ಮುಂದೊಮ್ಮೆ ಸೈನಿಕರ ಪರ ವಾದಿಸುವ ಸ್ಥಿತಿ ಬಂದಾಗ ಬಿ ಜೆ ಪಿ ನೇತಾರಿರಿಗೆ ಹಕ್ಕಿರುವುದಿಲ್ಲ ಎಂದಿರುವುದು, ಸೈನಿಕರ ಪರ ಮಾತಾಡಾವುದು ಕೇವಲ ಬಿ ಜೆ ಪಿ ಯವರು ಮಾತ್ರವೇ ಅಂದಂತಾಯಿತಲ್ಲವೇ, ಅದರಲ್ಲೂ ಪ್ರತ್ಯೆಕತವಾದಿಗಳಿಗೆ ಅವರನ್ನು ಹೋಲಿಸಿರುವುದು ಉಪಮಾನದ ಅತಿರೇಕ ಎನ್ನಬಹುದು.. ಇಷ್ಟಕ್ಕೂ ಸೈನ್ಯದ ಮುಖ್ಯಸ್ಠರು ಇದರ ಬಗೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.. ಅದು ಅಂತಹ ದೇಶ ದ್ರೋಹದ ತಪ್ಪೇ ಆಗಿದ್ದರೆ, ಸೇನಾ ಮುಖ್ಯಸ್ಥರು ಒಂದು ಸಣ್ಣ ಪ್ರತಿಭಟನೆಯನ್ನಾದರೂ ದಾಖಲಿಸುತ್ತಿರಲಿಲ್ಲವೇ ? ಹಿಂದಿನಿಂದಲೂ ಬಂದಂತಹ ಪದ್ಧತಿಗೆ ಈಗ ಅಧಿಕಾರಕ್ಕೆ ಬಂದಂತಹ ಸರ್ಕಾರವನ್ನು ಪೂರ್ಣ ಹೊಣೆ ಮಾಡುವುದು ಎಷ್ಟು ಸರಿ ? ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎನ್ನುವ ಹಾಗೆ, ದೇಶದಲ್ಲಿ ನಡೆಯುವ ಎಲ್ಲದಕ್ಕೂ ಮೋದಿ ಸರ್ಕಾರ, ಭಕ್ತರೇ ಕಾರಣ ಎಂದಂತಾಯ್ತು..

Leave a Reply