ಕನ್ಹಯ್ಯ ಭಾಷಣಕ್ಕೆ ಮರುಳಾದವರು ಓದಿಕೊಳ್ಳಬೇಕಾದ ಜೆ ಎನ್ ಯು ಪ್ರೊಫೆಸರ್ ಪ್ರತಿವಾದ

(ಮಕರಂದ ಪರಾಂಜಪೆ- ಇಂಟರ್ನೆಟ್ ಕಡತ ಚಿತ್ರ)

ಡಿಜಿಟಲ್ ಕನ್ನಡ ಟೀಮ್

ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮರುಡೋಸು. ಸೋಮವಾರ ಜೆಎನ್ ಯು ಆಡಳಿತ ವಿಭಾಗದಲ್ಲಿ ನಡೆದ 15ನೇ ಆವೃತ್ತಿಯ ಸ್ಪೀಕ್ ಇನ್ ಕಾರ್ಯಕ್ರಮದಲ್ಲಿ ರಾಷ್ಟ್ರೀಯತೆ ಕುರಿತ ಚರ್ಚೆ ನಡೆದಿದೆ. ಯಥಾಪ್ರಕಾರ ಅಲ್ಲಿ ಲೆಫ್ಟಿಸ್ಟ್ – ಉದಾರವಾದಿಗಳೆನಿಸಿಕೊಂಡವರದ್ದೇ ಓತಪ್ರೋತ ಭಾಷಣಗಳು. ತಾವು ಸೃಷ್ಟಿಸಿಕೊಂಡಿರುವ ಹೊಸಹೀರೋ ಕನ್ಹಯ್ಯ ಆರಾಧನೆಗೆ ಒಗ್ಗುವ ಮಾತುಗಳೇ ಅಲ್ಲಿದ್ದವು. ಉಳಿದ ವಿಚಾರಗಳು ಅಲ್ಲಿ ಸುಳಿಯಗೊಡದಂತೆ ಎಡಪಂಥೀಯರು ತಮ್ಮ ಎಂದಿನ ಎದೆತಟ್ಟಿಕೊಳ್ಳುವ ಸೆಮಿನಾರು ನಡೆಸಿಕೊಂಡಿದ್ದರು.

ಆದರೆ….

ಅದೇ ಜೆ ಎನ್ ಯುದಲ್ಲಿ ಇಂಗ್ಲಿಷ್ ಪ್ರೊಫೆಸರ್ ಹಾಗೂ ಕವಿ ಮಕರಂದ್ ಪರಾಂಜಪೆ ಮಾತ್ರ ಅವೆಲ್ಲ ಧ್ವನಿಗಳ ನಡುವೆ ಕೆಲದಿನಗಳ ಹಿಂದಿನ ಕನ್ಹಯ್ಯ ಭಾಷಣವನ್ನು ತಾರ್ಕಿಕವಾಗಿ ಧ್ವಂಸ ಮಾಡಿದರು. ಆ ಸಂದರ್ಭದಲ್ಲಿ ಮಹಾನ್ ಸಹಿಷ್ಣುತೆಯ ಪ್ರತಿಪಾದಕರಾದ ಎಡಪಂಥೀಯ ವಿದ್ಯಾರ್ಥಿ ಸಮೂಹದಲ್ಲಿ ಅಸಹಿಷ್ಣುತೆ ಭುಗ್ಗೆಂದು ಹೊತ್ತಿತು. ಪರಾಂಜಪೆ ಅವರ ಭಾಷಣಕ್ಕೆ ಅಡ್ಡಿಪಡಿಸುವ, ಬೊಬ್ಬೆ- ಘೋಷಣೆಗಳನ್ನು ಕೂಗಿ ಮಟ್ಟಹಾಕುವ ಎಲ್ಲ ಪ್ರಯತ್ನಗಳನ್ನೂ ಮಾಡಿದರು. ಇದಕ್ಕೆ ಪ್ರತಿಯಾಗಿ ಪರಾಂಜಪೆಯವರು ಸ್ಲೋಗನ್ ಕೂಗಲಿಲ್ಲ, ಬದಲಿಗೆ ತಮ್ಮ ನಿಖರ ಮಾತುಗಳನ್ನು ನಿರ್ಭಿಡೆಯಿಂದ ಹೇಳಿದರು.

ಇಗೋ ಇಲ್ಲಿದೆ ಪರಾಂಜಪೆ ಅವರ ಭಾಷಣ ಹೀಗಿದೆ:

‘ಕನ್ಹಯ್ಯ ತನ್ನ ಖ್ಯಾತ ಭಾಷಣದಲ್ಲಿ, ಗೋಲ್ವಾಲ್ಕರ್ ಈ ಹಿಂದೆ ಮುಸಲೋನಿಯನ್ನು ಭೇಟಿಯಾಗಿದ್ದ ಎಂದು ಹೇಳಿದ್ದರು. ಭಾಷಣಕ್ಕೂ ಮುನ್ನ ಕನ್ಹಯ್ಯ ಈ ಬಗ್ಗೆ ಸತ್ಯಾಂಶ ಅರಿತಿದ್ದರೆ? ನಿಜವಾಗಿ ಮುಸಲೋನಿಯನ್ನು ಭೇಟಿಯಾಗಿದ್ದು ಮೂಂಜೆ. ಅಷ್ಟಾಗಿ ಸಂಘದವರು ಫ್ಯಾಸಿಸ್ಟ್ ಗಳಿಂದ ಸ್ಫೂರ್ತಿಗೊಳಗಾಗಿಲ್ಲ ಎಂಬುದು ನನ್ನ ವಾದವಲ್ಲ. ಏಕಕೇಂದ್ರಿತ ಆಡಳಿತದ ಬಗ್ಗೆ ಅವರಿಗೆ ಒಲವಿತ್ತು.

ಫ್ಯಾಸಿಸಂ ಪ್ರಜಾಪ್ರಭುತ್ವ ವಿರೋಧಿ ವ್ಯವಸ್ಥೆಯನ್ನು ಬೆಂಬಲಿಸುತ್ತದೆ. ಅದೇ ರೀತಿ ಸ್ಟಾನಿಲಿಸಂ ಸಹ.

ತಥಾಕಥಿತ ನ್ಯಾಯಾಂಗಿಯ ಹತ್ಯೆ ಆರೋಪ ಎತ್ತಿದಾಗಲೂ ಇಷ್ಟೊಂದು ಚರ್ಚೆಗಳಿಗೆ ಅನುಕೂಲ ಕಲ್ಪಿಸುವ ಈ ದೇಶದಲ್ಲಿ ಇರುವುದಕ್ಕೆ ಹೆಮ್ಮೆ ಪಡುತ್ತೇನೆ.

1920ರಿಂದ 1950ರ ವರೆಗೂ ಸ್ಟಾಲಿನ್ ಆಡಳಿತದ ಯುಎಸ್ ಎಸ್ ಆರ್ ನಲ್ಲಿ ಎಷ್ಟು ನ್ಯಾಯಾಂಗಿಯ ಹತ್ಯೆಗಳಾದವು ಎಂಬ ಮಾಹಿತಿ ಕನ್ಹಯ್ಯನಿಗೆ ಇದೆಯೇ? ಸುಮಾರು 10 ಲಕ್ಷ ಹತ್ಯೆಗಳಾಗಿವೆ. ಅದರಲ್ಲಿ ನಾಗರೀಕ ಮತ್ತು ಅಪರಾಧ ಪ್ರಕರಣಗಳಲ್ಲಿ ಮರಣದಂಡನೆ ಆಗಿದ್ದು 34 ಸಾವಿರ ಮಂದಿಗೆ ಮಾತ್ರ.

ಜೆ ಎನ್ ಯುವನ್ನು ನಾವು ಪ್ರಜಾಪ್ರಭುತ್ವದ ವೇದಿಕೆ ಅಂತ ಹೇಳಿಕೊಳ್ಳುತ್ತಿದ್ದೇವಲ್ಲ… ಇದು ಸಂಪೂರ್ಣ ನಿಜವೇ ಅಂತಲೂ ಪ್ರಶ್ನಿಸಿಕೊಳ್ಳಬೇಕಲ್ಲವೇ? ಇದು ಕೇವಲ ಎಡ ವಿಚಾರಗಳ ಸಾಮ್ರಾಜ್ಯವಾಗಿರು ಸಾಧ್ಯತೆಯೂ ಇದೆಯಲ್ಲವೇ? ಈ ವಿಚಾರ ಒಪ್ಪುವುದಿಲ್ಲ ಎಂದು ಹೇಳಿದರೆ ನಿಮ್ಮನ್ನು ಸುಮ್ಮನಾಗಿಸಲಾಗುತ್ತದೆ, ನಿಂದಿಸಲಾಗುತ್ತದೆ, ಹತ್ತಿಕ್ಕಲಾಗುತ್ತದೆ.. ಆದರೆ ಜೆ ಎನ್ ಯುವನ್ನು ನಾನು ಇಷ್ಟಪಡುತ್ತೇನೆ.

ಇಷ್ಟಕ್ಕೂ ಎಡಪಂಥ ರಾಜಕೀಯ ವಿಚಾರಧಾರೆಗೆ ಇಂಡಿಯನ್ ಸ್ಟೇಟ್ ಎಂಬುದನ್ನು ಒಪ್ಪಿಕೊಳ್ಳುವುದಕ್ಕೆ ಕಷ್ಟವಾಗುತ್ತಿರುವುದಾದರೂ ಏಕೆ? ಇವತ್ತು ಜೆ ಎನ್ ಯುದಲ್ಲಿ ಹುಟ್ಟಿರುವ ಚರ್ಚೆ ಮತ್ತು ಅದರಿಂದಾಗಿ ದೇಶದೆಲ್ಲೆಡೆ ನಡೆಯುತ್ತಿರುವ ವಾದಗಳು ಮಧ್ಯಮ ಮಾರ್ಗವನ್ನೇ ಕಸಿಯುತ್ತಿವೆ.

ಸ್ನೇಹಿತ ಕನ್ಹಯ್ಯ ತಮ್ಮ ಭಾಷಣದಲ್ಲಿ ಕಮ್ಯೂನಿಸ್ಟರನ್ನು ಪ್ರತಿನಿಧಿಸುತ್ತ ಹೇಳ್ತಾರೆ- ಇವರು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದರು ಅಂತ. ಈ ಕುರಿತು ಒಂದು ಪ್ರಶ್ನೆ ಕೇಳಲು ಇಚ್ಛಿಸುತ್ತೇನೆ. ನಮ್ಮ ದೇಶದಲ್ಲಿ ಸಾಮ್ರಾಜ್ಯಶಾಹಿ ವಿರುದ್ಧದ ಕದನವನ್ನು ಪೀಪಲ್ಸ್ ವಾರ್ ಎಂದು ಏಕಾಏಕಿ ಭಾರತೀಯ ಕಮ್ಯುನಿಷ್ಟ್ ಪಕ್ಷ ಘೋಷಿಸಿದ್ದೇಕೆ? ಬ್ರಿಟೀಷರಿಗೆ ಪತ್ರ ಬರೆದಿದ್ದ ಭಾರತೀಯ ಕಮ್ಯೂನಿಸ್ಟ್ ಪಾರ್ಟಿ, ನೀವು ದಾಳಿ ನಡೆಸಿದಾಗ ನಾವು ಬೆಂಬಲಿಸುತ್ತೇವೆ ಎಂದು ತಿಳಿಸಿತ್ತು. ಕನ್ಹಯ್ಯ, ಕಮ್ಯುನಿಸ್ಟರು ಸಹ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದವು ಎಂದು ಹೇಳಿದ್ದಾರೆ. ಅದಕ್ಕೆ ಸಾಕ್ಷಿ ಏನಿದೆ ಎಂದು ಕೇಳಲಿಚ್ಛಿಸುತ್ತೇನೆ.

ಈ ಬಗ್ಗೆ ಸಾಕಷ್ಟು ಕಡೆಯಿಂದ ವಿವಿಧ ಹೇಳಿಕೆಗಳು ನಮ್ಮ ಮುಂದೆ ಬರುತ್ತವೆ. ಅದರಲ್ಲಿ ಉತ್ತರ ಕೊರಿಯಾ ಮತ್ತು ಚೀನಾದಿಂದ ಬಂದ ಹೇಳಿಕೆಗಳನ್ನು ತೋರಿಸಲು ಸಾಧ್ಯವೇ? ವಾಸ್ತವದಲ್ಲಿ ಬಂಡವಾಳಶಾಹಿಯೇ ಆದರೂ ಚೀನಾ ಕಮ್ಯುನಿಸ್ಟ್ ಆಡಳಿತದಲ್ಲಿದೆ. ಚೀನಾದಲ್ಲಿನ ಸ್ನೇಹಿತರು ಅಲ್ಲಿನ ಕೆಟ್ಟ ಪರಿಸ್ಥಿತಿಯ ಬಗ್ಗೆ ವಿವರಿಸುತ್ತಾರೆ. ಹಾಗಂತ ಅಲ್ಲಿ ಪ್ರತಿಭಟನಾರ್ಥವಾಗಿ ಸಣ್ಣ ಮೋರ್ಚಾ ಹೊರಡಿಸುವುದಕ್ಕೂ ಸಾಧ್ಯವಿಲ್ಲ.

ಹೀಗಾಗಿ ಯಾರು ಪ್ರಜಾಪ್ರಭುತ್ವದ ಪರ, ಯಾರಲ್ಲ ಎಂಬುದನ್ನು ನಮ್ಮೊಳಗೇ ಕೇಳಿಕೊಳ್ಳಬೇಕಾಗಿದೆ.

Leave a Reply