ಮಹಿಳಾ ದಿನದ ಖುಷಿಗಳು- ಭಾರತೀಯ ಸೇನೆಗೆ ಮಹಿಳಾ ಫೈಟರ್ ಪೈಲಟ್, ಇ ಪಿ ಎಫ್ ಮೇಲಿನ ತೆರಿಗೆ ಇಲ್ಲ… ಬ್ಯಾಡ್ನ್ಯೂಸ್- ಶರಪೋವಾಗೆ ಸಂಕಷ್ಟ

ನೌಕರ ಭವಿಷ್ಯ ನಿಧಿ ಮೇಲಿನ ತೆರಿಗೆ ವಾಪಸ್ ಪಡೆದ ಜೇಟ್ಲಿ

ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದ ಕಾಮಿರ್ಕರ ಭವಿಷ್ಯ ನಿಧಿ (ಇಪಿಎಫ್) ಯ ಮೇಲಿನ ತೆರಿಗೆ ಪದ್ದತಿಯನ್ನು ಮಂಗಳವಾರ ಹಿಂದಕ್ಕೆ ಪಡೆದಿದೆ. ಇಪಿಎಫ್ ಪಡೆಯುವ ಮತ್ತು ಉಳಿತಾಯ ಯೋಜನೆಯಿಂದ ಹಿಂತೆಗೆಯುವ ಶೇಕಡ 60 ರಷ್ಟು ಹಣಕ್ಕೆ ತೆರಿಗೆ ವಿಧಿಸುವ ಪ್ರಸ್ತಾಪವನ್ನು ಬಜೆಟ್ ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಪ್ರಸ್ತಾಪಿಸಿದ್ದರು. ಆದರೆ ನೌಕರರು ಸೇರಿದಂತೆ ಹಲವು ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳಿಂದ ಸಾಕಷ್ಟು ವಿರೋಧ ವಕ್ತವಾದ ಹಿನ್ನೆಲೆಯಲ್ಲಿ ಪ್ತಸ್ತಾಪವನ್ನು ಹಿಂಪಡೆದ ನಿರ್ಣಯವನ್ನು ಲೋಕಸಭೆಯಲ್ಲಿ ತಿಳಿಸಿದರು.

ಕೇಂದ್ರ ಸರ್ಕಾರ ಈ ಪ್ರಸ್ತಾಪ ಮಂಡಿಸಿದ್ದಕ್ಕೆ ತೀವ್ರ ಟೀಕೆಗಳನ್ನು ಎದುರಿಸಬೇಕಾಯಿತು. ಸಂಬಳ ಪಡೆಯುವಾಗಲೆ ತೆರಿಗೆ ಕಟ್ಟಿರುತ್ತೇವೆ ಆದಾಗ್ಯೂ ಮತ್ತೆ ಉಳಿತಾಯ ಮಾಡಿರುವ ಭವಿಷ್ಯ ನಿಧಿಗೂ ತೆರಿಗೆ ವಿಧಿಸುವ ಕ್ರಮ ಸಮಂಜಸವಲ್ಲ ಮತ್ತೊಮ್ಮೆ ಚಿಂತಿಸುವಂತೆ ನೌಕರರ ವರ್ಗ ಕೇಂದ್ರಕ್ಕೆ ತಿಳಿಸಿತ್ತು.

ಭವಿಷ್ಯ ನಿಧಿ ಹಿಂಪಡೆಯುವ ವೇಳೆ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ ಪಿ ಎಸ್)ಗೆ ನೊಂದಣಿಯಾದರೆ ಶೇ 40 ರಷ್ಟು ತೆರಿಗೆ ರಿಯಾಯಿತಿಯನ್ನೂ ಕೇಂದ್ರ ಸರ್ಕಾರ ಘೋಷಿಸಿತ್ತು. ಆದರೂ ನೌಕರರ ಸಮುದಾಯಕ್ಕೆ ಇದು ರುಚಿಸಲಿಲ್ಲ.

ಎಂಪ್ಲಾಯಿ ಪ್ರೊವಿಡಂಟ್ ಫಂಡ್ ಆರ್ಗನೈಸೇಷನ್ 3.7 ಕೋಟಿ ಕೊಡುಗೆದಾರರನ್ನು ಹೊಂದಿದೆ.

 ಜೂನ್ 18ಕ್ಕೆ ಮೊದಲ ಮಹಿಳಾ ಯುದ್ಧ ಪೈಲೆಟ್

ವಿಶ್ವ ಮಹಿಳಾ ದಿನದ ವಿಶೇಷವಾಗಿ ಭಾರತದ ಏರ್ ಚೀಫ್ ಮಾರ್ಷಲ್ ಅರೂಪ್ ರಾಹಾ ವಿಶೇಷ ಸುದ್ದಿಯೊಂದನ್ನು ನೀಡಿದ್ದಾರೆ. ಅದೇನಪ್ಪಾ ಅಂದರೆ, ಇದೇ ವರ್ಷ ಜೂನ್ 18ರಂದು ಭಾರತದ ಚೊಚ್ಚಲ ಮಹಿಳಾ ಯುದ್ಧ ಪೈಲೆಟ್ ತಂಡ ತಮ್ಮ ಸೇವೆಗೆ ಸಿದ್ಧವಾಗಲಿದೆ. ‘ಸದ್ಯಕ್ಕೆ ಮೂವರು ಮಹಿಳಾ ತರಬೇತುದಾರರು ಸ್ವಯಂ ಪ್ರೇರಿತರಾಗಿ ಯುದ್ಧ ವಿಭಾಗಕ್ಕೆ ಸೇರಲು ಮುಂದಾಗಿದ್ದಾರೆ. ಅವರು ಎರಡನೇ ಹಂತದ ತರಬೇತಿ ಪಡೆಯುತ್ತಿದ್ದಾರೆ. ಈ ತರಬೇತಿ ಮುಗಿದ ನಂತರ ಅವರು ಪುರುಷ ಸಿಬ್ಬಂದಿಯೊಂದಿಗೆ ಜೂನ್ 18ರಂದು ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ.’ ಎಂದು ಅರೂಪ್ ತಿಳಿಸಿದ್ದಾರೆ. ಈ ಮೂಲಕ ಇವರು ಅಧಿಕೃತವಾಗಿ ಭಾರತದ ಮೊದಲ ಮಹಿಳಾ ಯುದ್ಧ ಪೈಲೆಟ್ ಗಳಾಗಿ ಹೊರಹೊಮ್ಮಲಿದ್ದಾರೆ.

ಡೋಪಿಂಗ್ ಸುಳಿಯಲ್ಲಿ ರಷ್ಯಾ ಟೆನಿಸ್ ತಾರೆ ಶರಪೋವಾ

ಮರಿಯಾ ಶರಪೋವಾ ಪ್ರತಿಯೊಬ್ಬ ಕ್ರೀಡಾಭಿಮಾನಿಗಳಿಗೂ ಚಿರಪರಿಚಿತ ಹೆಸರು. ರಷ್ಯಾದ ಖ್ಯಾತ ಟೆನಿಸ್ ತಾರೆ ಮರಿಯಾ ಕೇವಲ ತನ್ನ ಆಟದಿಂದ ಮಾತ್ರವಲ್ಲ ತಮ್ಮ ನೀಳಕಾಯ ಸೌಂದರ್ಯದಿಂದಲೂ ಖ್ಯಾತಿ ಪಡೆದಿರುವ ಸೆಲೆಬ್ರಿಟಿ. ಆಕೆ ಮಂಗಳವಾರ ಮಾಡಿರುವ ಘೋಷಣೆ ಆಘಾತಕಾರಿಯಾಗಿದೆ. ‘ಉದ್ದೀಪನ ಮದ್ದು ಪರೀಕ್ಷೆಯಲ್ಲಿ ತಾನು ವಿಫಲಳಾಗಿದ್ದೇನೆ. ಈ ಪರೀಕ್ಷೆಯಲ್ಲಿ ಪಾಸ್ ಆಗದಿರುವುದಕ್ಕೆ ತಮ್ಮ ಅನಾರೋಗ್ಯದ ಪ್ರಯುಕ್ತ ಸೇವಿಸುತ್ತಿದ್ದ ಔಷಧವೇ ಕಾರಣ. ಕುಟುಂಬ ವೈದ್ಯರ ಮೇರೆಗೆ ಮಲ್ಡೊನಿಯಂ ಮದ್ದು ಸೇವನೆ ಮಾಡುತ್ತಿದ್ದೆ’ ಅಂತ ತಿಳಿಸಿದ್ದಾರೆ.

ಕಳೆದ ಜನವರಿಯಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆರೆನಾ ವಿಲಿಯಮ್ಸ್ ವಿರುದ್ಧದ ಪಂದ್ಯದಲ್ಲಿ ಸೋತಿದ್ದ ಶರಪೋವಾ, ವಾಡಾ ಪರೀಕ್ಷೆಗೆ ಒಳಗಾಗಿದ್ದರು. ಈಗ ಅದರ ಫಲಿತಾಂಶ ಹೊರಬಿದ್ದಿದೆ.

ತಾನು ಉದ್ದೀಪನ ಮದ್ದು ಸೇವಿಸಿದ್ದಾಗಿ ಒಪ್ಪಿಕೊಂಡ ಶರಪೋವಾ, ‘ಹತ್ತು ವರ್ಷಗಳಿಂದ ಹಲವು ಆರೋಗ್ಯದ ಕಾರಣಕ್ಕಾಗಿ ಕುಟುಂಬ ವೈದ್ಯರ ಸಲಹೆ ಮೇರೆಗೆ ಮೆಲ್ಡೊನಿಯಂ ಸೇವನೆ ಮಾಡುತ್ತಿದ್ದೇನೆ. ಈ ಮುನ್ನ ಮೆಲ್ಡೊನಿಯಂ ವಾಡಾ ನಿಷೇಧಿದ ಮದ್ದಿನ ಪಟ್ಟಿಯಲ್ಲಿರಲಿಲ್ಲ. ಆದರೆ, 2016ರ ಜನವರಿಯಲ್ಲಿ ಈ ಪಟ್ಟಿ ಪರಿಷ್ಕೃತಗೊಂಡಿದ್ದು, ಮೆಲ್ಡೊನಿಯಂ ನಿಷೇಧಿತ ಮದ್ದಾಗಿದೆ. 2006ರಲ್ಲಿ ಮೊದಲ ಬಾರಿಗೆ ಈ ಮದ್ದು ಸೇವಿಸಿದ್ದೆ’ ಎಂಬುದು ಶರಪೋವಾ ವಾದ.

Leave a Reply