ಮಹಿಳಾ ದಿನಾಚರಣೆಯ ಸ್ಫೂರ್ತಿಬಿಂದುಗಳು, ಇ ಕಾಮರ್ಸ್ ನ ಸ್ವಾವಲಂಬಿ ಸ್ತ್ರೀ ಉದ್ಯಮಿಗಳು

ಪ್ರಜ್ಞಾ ಭಟ್

ಇಂದು ‘ವಿಶ್ವ ಮಹಿಳೆಯರ ದಿನಾಚರಣೆ’. ಈ ಸುಸಂದರ್ಭದಲ್ಲಿ  ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ಎಂಬ ಉದ್ಯಮದಲ್ಲಿ ಭಾರತೀಯ ಮಹಿಳಾ ಉದ್ಯಮಿಗಳ ಸಾಧನೆ  ಮತ್ತು ಕೊಡುಗೆಯ  ಕುರಿತು ತಿಳಿಯುವುದು  ನಿಜಕ್ಕೂ ಅರ್ಥಪೂರ್ಣ ಹಾಗೂ ಸಮಂಜಸ ಎಂದರೆ ತಪ್ಪಾಗಲಾರದು.

ಈ  ಶತಮಾನದ ಮಾದರಿ  ಹೆಣ್ಣು ,

ಸ್ವಾಭಿಮಾನದ ಸಾಹಸಿ ಹೆಣ್ಣು ,

ಗುಲಾಮಳಿವಳಲ್ಲಾ  ,ಸಲಾಮು ಹೊಡೆಯೊಲ್ಲಾ ,

ಕುತಂತ್ರವಿಲ್ಲದೆ ,ಅತಂತ್ರವಾಗದೆ ಸ್ವತಂತ್ರಳಾಗಿಹಳು

1975ರಲ್ಲಿ  ಪ್ರಖ್ಯಾತ ಗೀತಾ ರಚನಕಾರರಾದ ‘ವಿಜಯ ನರಸಿಂಹ’ರವರು ಬರೆದ ಈ ಗೀತೆಯ ಸಾಲುಗಳು 21ನೇ  ಶತಮಾನದ ಮಹಿಳೆಯರ ಸಾಧನೆ ಮತ್ತು ತನ್ನ ಕರ್ತವ್ಯದಲ್ಲಿ ಯಶಸ್ವಿಯಾಗಲು ಅನುಸರಿಸುತ್ತಿರುವ ಮಾರ್ಗವನ್ನು  ಸಾರಿ ಸಾರಿ ಹೇಳುತ್ತಿದೆ.

ಈ ಲೇಖನವನ್ನು ಬರೆಯಲು ಮೂಲ ಸ್ಫೂರ್ತಿ ಇತ್ತೀಚಿಗೆ ನಾನು ಭೇಟಿ ಮಾಡಿದ ಮಹಿಳಾ ಉದ್ಯಮಿಗಳು. ಒಂದಿಷ್ಟು ಮಹಿಳೆಯರು  ಇಗಾಗಲೇ  ಸ್ವಉದ್ಯಮದಲ್ಲಿ  ತಮ್ಮ ಯಶಸ್ಸನ್ನು ಕಂಡುಕೊಂಡಿರುವವರು, ಇನ್ನು ಸ್ವಲ್ಪ ಮಹಿಳೆಯರು ಸ್ವಉದ್ಯಮದಲ್ಲಿ ಅಂಬೆಗಾಲು ಇಡುತ್ತಿರುವವರು. ಇವರೆಲ್ಲರ ಅಭಿಲಾಷೆ ಇ-ಕಾಮರ್ಸ್ ನಲ್ಲಿ ತಮ್ಮನ್ನು ತೊಡಗಿಸುವದರತ್ತ. ಆಗ ನನ್ನ ಮನಸ್ಸಿಗೆ ಬಂದಿದ್ದು ಇಂದು  ಇ -ಕಾಮರ್ಸ್ ಎಂಬ ದೈತ್ಯ ಅಂತರ್ಜಾಲ ವ್ಯಾಪಾರದಲ್ಲಿ ಉದ್ಯಮಿಯಾಗಿ  ಭಾರತೀಯ ಮಹಿಳೆಯರ ಕೊಡುಗೆ ಏನು ಅನ್ನುವಂತದ್ದು.

ಸುಚಿ ಮುಕರ್ಜಿ: ಇವರು  Limeroad.com ಎಂಬ ಆನ್ ಲೈನ್  ಶಾಪಿಂಗ್ ಪೋರ್ಟಲ್ ನನ್ನು 2012ರಲ್ಲಿ  ಸ್ಥಾಪಿಸಿದರು. ಮಹಿಳೆಯರು ಶಾಪಿಂಗ್ ನಲ್ಲಿ ಎತ್ತಿದ ಕೈ ಎಂಬದು ಎಲ್ಲರಿಗೂ ತಿಳಿದಿರುವ ವಿಷಯ. ಮಹಿಳೆಯರಿಗೆ  ಒಂದೆ ಚಾವಣಿ ಅಡಿಯಲ್ಲಿ ಎಲ್ಲಾ ಅಲಂಕಾರಿಕ ವಸ್ತುಗಳನ್ನು, ಬಟ್ಟೆ ,ಇನ್ನಿತರ ಮಹಿಳೆಯರು ಬಯಸುವ ವಸ್ತುಗಳನ್ನು ಒದಗಿಸುವ ದೃಷ್ಟಿಯಿಂದ ಈ ಶಾಪಿಂಗ್ ಪೋರ್ಟಲ್ ನ ಉಗಮವಾಯಿತು.

ಸಬಿನ ಛೋಪ್ರ: ಇವರು 2006ರಲ್ಲಿ Yatra.com ನ್ನು  ಪ್ರಾರಂಭಿಸಿದವರಲ್ಲಿ ಒಬ್ಬರು. ಇವತ್ತು ಇದು ಪ್ರಯಾಣಿಕರ ನೆಚ್ಚಿನ ವೆಬ್ ಸೈಟ್ ಆಗಿದೆ. ಕುಳಿತಲ್ಲಿಯೇ  ತಾವು ಭೇಟಿ ನೀಡುವ ಪ್ರದೇಶಕ್ಕೆ ತೆರಳುವದರಿಂದ ಹಿಡಿದು ವಾಪಸ್ಸು ಬರುವ ತನಕ ಬೇಕಾಗುವ  ಸೌಲಭ್ಯ ದ ಕುರಿತು ಮಾಹಿತಿ ನೀಡುವ ಈ ಸೈಟ್ ಜನಪ್ರಿಯವಾಗಿದೆ.

ಸ್ವಾತಿ ಭಾರ್ಗವ: ಇವರು CashKaro ಎಂಬ ಆನ್ ಲೈನ್ ಪೋರ್ಟಲ್ ನ ಸ್ಥಾಪಕರು. CashKaro ಪೋರ್ಟಲ್ ಮೂಲಕ  ಆನ್ ನಲ್ಲಿ ಶಾಪಿಂಗ್ ಮಾಡುವರಿಗೆ  ಕ್ಯಾಷ್ ಬಾಕ್  ಸೌಲಭ್ಯವನ್ನು ಒದಗಿಸಿವುದು ಇದರ  ಕಾರ್ಯ.

ರಿಚಾ ಕಾರ್:  Zivame.com ನ ಸಿಇಓ ಹಾಗೂ ಸಂಸ್ಥಾಪಕರಲ್ಲಿ ಒಬ್ಬರು. ಭಾರತದಲ್ಲಿ ಮಹಿಳೆಯರು ಒಳ ಉಡುಪುಗಳನ್ನು ಅಂಗಡಿಗಳಲ್ಲಿ ತೆಗೆದುಕೊಳ್ಳಲು ಅನುಭವಿಸುವ ಮುಜುಗರವನ್ನು ನಿಲ್ಲಿಸುವ ದೃಷ್ಟಿಯಿಂದ ಇದರ ಸ್ಥಾಪನೆಗೆ ಬುನಾದಿ ಹಾಡಿದರು.

ನೀರು ಶರ್ಮಾ: ಇವರು Infibeam ನ ಸಂಸ್ಥಾಪಕರಲ್ಲಿ ಒಬ್ಬರು. ವಿವಿಧ ಇಲೆಕ್ಟ್ರಾನಿಕ್ ವಸ್ತುಗಳಿಂದ ಹಿಡಿದು ಬೇರೆ ಬೇರೆ ವಿಭಾಗದಲ್ಲಿ ಬಳಸುವ ವಸ್ತುಗಳು ಉದಾಹರಣೆಗೆ ಮಹಿಳೆಯರ, ಪುರುಷರ, ಮಕ್ಕಳ ಬಟ್ಟೆ, ಪುಸ್ತಕ ಇವೆಲ್ಲವನ್ನು ಕುಳಿತಲ್ಲಿಯೇ ಆನ್ ಲೈನ್ ಮೂಲಕ ಖರೀದಿಸುವ ಸೌಲಭ್ಯವನ್ನು ಇದರಲ್ಲಿ ಪಡೆಯಬಹುದಾಗಿದೆ.

ಇ-ಕಾಮರ್ಸ್ ಸೈಟ್ ಗಳನ್ನೂ ಸ್ಥಾಪಿಸಿ ಅದನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ಮಹಿಳೆಯರು ಒಂದು ಕಡೆಯಾದರೆ, ಇನ್ನೊಂದು ಕಡೆ ಸಾವಿರಾರು ಮಹಿಳೆಯರು ಫ್ಲಿಪ್ಕಾರ್ಟ್, ಅಮೆಜಾನ್, ಸ್ನ್ಯಾಪ್ಡೀಲ್ ನಂತಹ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ತಾವು ತಯಾರಿಸಿದ ಉತ್ಪನ್ನಗಳನ್ನುಉದಾಹರಣೆಗೆ ಅಲಂಕಾರಿಕ, ಆಹಾರೋತ್ಪನ್ನ, ಆಯುರ್ವೇದ ಔಷಧಿಗಳು, ಕೈಮಗ್ಗ, ಆಭರಣಗಳನ್ನು ಮಾರಾಟಕ್ಕಿಟ್ಟು ಸ್ವಾವಲಂಬಿ ಜೀವನವನ್ನು ನಡೆಸುತ್ತಿದ್ದಾರೆ.

ಅದು ಇ ಕಾಮರ್ಸ್ ಆಗಿರಬಹುದು ಇಲ್ಲವೇ ಇನ್ಯಾವುದೇ ಬಗೆಯ ಸ್ಟಾರ್ಟ್ ಅಪ್ ಆಗಿದ್ದಿರಬಹುದು ಅವಕ್ಕೆ ಬಂಡವಾಳ ಒದಗಿಸುವ ವೆಂಚುರ್ ಕ್ಯಾಪಿಟಲಿಸ್ಟ್ ಗಳ ಪಾತ್ರವೂ ಮುಖ್ಯವಾಗುತ್ತದೆ. ಇಲ್ಲಿಯೂ ಕಲರಿ ಸಂಸ್ಥೆಯ ವಾಣಿ ಕೋಲಾರಂಥ ಮಹಿಳಾ ಉದ್ಯಮಿಗಳು ಛಾಪು ಮೂಡಿಸಿದ್ದಾರೆ.

ವರದಿಯ ಪ್ರಕಾರ ಫ್ಲಿಪ್ಕಾರ್ಟ್ ನ 30 ಸಾವಿರ ಮಾರಾಟಗಾರರಲ್ಲಿ ಶೇ.20 ಮಹಿಳಾ ಮಾರಾಟಗಾರರು. ಅದರಲ್ಲಿ ಶೇ. 15 ಮಹಿಳೆಯರು ಗ್ರಾಹಕರಿಂದ ಮಾರಾಟಗಾರರಾಗಿ ಬದಲಾದವರು.  “ಇವರೆಲ್ಲರೂ ಆನ್ ಲೈನ್ ಶಾಪಿಂಗ್ ನ  ಅವಶ್ಯಕತೆ ಹಾಗೂ ಅದರಲ್ಲಿ ತಮ್ಮ ಕೌಶಲವನ್ನು ಯಾವ ರೀತಿಯಲ್ಲಿ ಅಳವಡಿಸಿಕೊಳ್ಳಬಹುದು ಎಂಬುದನ್ನು ಅರಿತು ತಮ್ಮದೇ ಆದ  ರೀತಿಯಲ್ಲಿ ವ್ಯಾಪಾರವನ್ನು ಮಾಡುತ್ತಿದ್ದಾರೆ” ಎಂದು ಫ್ಲಿಪ್ಕಾರ್ಟ್ ನ  ಮಾರುಕಟ್ಟೆ ವಿಭಾಗದಲ್ಲಿ ಸೀನಿಯರ್ ವೈಸ್ ಪ್ರೆಸಿಡೆಂಟ್ ಆದ ಅಂಕಿತ್ ನಾಗೋರಿಯವರು ಎಕನಾಮಿಕ್ ಟೈಮ್ ನ  ಸಂದರ್ಶನದಲ್ಲಿ ಹೇಳಿದ್ದಾರೆ.

ಇ-ಕಾಮರ್ಸ್ ಭಾರತಕ್ಕೆ ಪರಿಚಯವಾದದ್ದು ತಡವಾದರೂ, ಬೆಳವಣಿಗೆಯ ವೇಗ ನಾವಿಂದು ನೋಡುತ್ತಿದ್ದೇವೆ. ‘Future of e-commerce: Uncovering Innovation’  ಅಧ್ಯಯನದ ಪ್ರಕಾರ ಭಾರತದಲ್ಲಿ  ಇ-ಕಾಮರ್ಸ್ ನ  ವ್ಯಾಪಾರದ ವಹಿವಾಟಿನ ಅಂಕಿ ಅಂಶ  ಹೀಗಿದೆ- 2010ರಲ್ಲಿ $4.4 ಬಿಲಿಯನ್, 2014ರಲ್ಲಿ $13.6 ಬಿಲಿಯನ್ ನಷ್ಟು, 2015ರಲ್ಲಿ $16 ಬಿಲಿಯನ್.

ಡಾ. ಅಂಬೇಡ್ಕರ್ ಅವರ “ ಒಂದು ಸಮುದಾಯದ ಪ್ರಗತಿಯನ್ನು ನಾನು ಆ ಸಮುದಾಯದಲ್ಲಿ ಮಹಿಳೆಯು ಮಾಡಿದ  ಸಾಧನೆಯ ಮೇಲೆ ನಿರ್ಧರಿಸುತ್ತೇನೆ” ಎಂಬ ಮಾತು ಇ-ಕಾಮರ್ಸ್ ಕ್ಷೇತ್ರಕ್ಕೆ ಅಕ್ಷರಶಃ ಅನ್ವಯವಾಗುತ್ತದೆ. ಆ ನಿಟ್ಟಿನಲ್ಲಿಇ-ಕಾಮರ್ಸ್ ಕ್ಷೇತ್ರದಲ್ಲಿಮಹಿಳಾ ಉದ್ಯಮಿಗಳು ನೀಡುತ್ತಿರುವ ಕೊಡುಗೆ ಪ್ರಶಂಸನೀಯ.

(ಲೇಖಕಿ ತಂತ್ರಜ್ಞಾನ ವಲಯದ ಉದ್ಯೋಗಿ)

Leave a Reply