ಲೋಕಾಯುಕ್ತ ಹುದ್ದೆಗೆ ನ್ಯಾ. ಎಸ್.ಆರ್. ನಾಯಕ್ ಹೆಸರು ತಿರಸ್ಕಾರ, ಸಿದ್ದರಾಮಯ್ಯ ಅವರಿಗೆ ಮತ್ತೊಮ್ಮೆ ಮುಖಭಂಗ!

ಡಿಜಿಟಲ್ ಕನ್ನಡ ಟೀಮ್

ನೂತನ ಲೋಕಾಯುಕ್ತರಾಗಿ ನ್ಯಾಯಮೂರ್ತಿ ಎಸ್.ಆರ್. ನಾಯಕ್ ಅವರನ್ನು ನೇಮಕ ಮಾಡುವಂತೆ ರಾಜ್ಯ ಸರಕಾರ ಮಾಡಿದ್ದ ಶಿಫಾರಸ್ಸನ್ನು ರಾಜ್ಯಪಾಲ ವಜುಭಾಯಿ ವಾಲ ತಿರಸ್ಕರಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಮ್ಮೆ ಮುಖಭಂಗವಾಗಿದೆ. ಬೇರೊಬ್ಬರ ಹೆಸರು ಹುಡುಕುವುದು ಅನಿವಾರ್ಯವಾಗಿದೆ.

ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ತಮ್ಮ ಪದಚ್ಯುತಿಗೆ ವಿಧಾನ ಮಂಡಲದಲ್ಲಿ ನಿರ್ಣಯ ಮಂಡನೆಯಾದ ಹಿನ್ನೆಲೆಯಲ್ಲಿ ಹಿಂದಿನ ಲೋಕಾಯುಕ್ತ ವೈ. ಭಾಸ್ಕರರಾವ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ತದನಂತರ ಈ ಹುದ್ದೆಗೆ ನ್ಯಾಯಮೂರ್ತಿ ಎಸ್.ಆರ್. ನಾಯಕ್ ಅವರನ್ನು ತರಲು ಸಿದ್ದರಾಮಯ್ಯನವರು ಉತ್ಸುಕರಾಗಿದ್ದರೆ, ವಿಧಾನ ಮಂಡಲ ಉಭಯ ಸದನಗಳ ಸ್ಪೀಕರ್ ಗಳು, ಪ್ರತಿಪಕ್ಷಗಳ ನಾಯಕರು ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹೆಸರನ್ನು ಮುಂದು ಮಾಡಿದ್ದರು. ಮೊದಲ ಸುತ್ತಿನ ಸಭೆಯಲ್ಲಿ ತಮ್ಮ ನಿಲುವಿಗೆ ಅಂಟಿಕೊಂಡ ಹಿನ್ನೆಲೆಯಲ್ಲಿ ಒಮ್ಮತ ಹೊರಹೊಮ್ಮಲಿಲ್ಲ. ಇದೇ ಕಾರಣಕ್ಕೆ ನ್ಯಾ. ವಿಕ್ರಮಜಿತ್ ಅವರು ಈ ಹುದ್ದೆಗೇರಲು ನಿರಾಕರಿಸಿದ್ದರು.

ಮತ್ತೊಂದು ಸುತ್ತಿನ ಸಭೆ ನಡೆದಾಗ ಸಿದ್ದರಾಮಯ್ಯನವರು ತಮ್ಮ ಹಠಕ್ಕೆ ಅಂಟಿಕೊಂಡು ನ್ಯಾ. ಎಸ್.ಆರ್. ನಾಯಕ್ ಅವರ ಹೆಸರನ್ನು ಅಂತಿಮಗೊಳಿಸಿ, ರಾಜ್ಯಪಾಲರಿಗೆ ಕಳುಹಿಸಿದ್ದರು. ಕೆಲವೊಂದು ಆಪಾದನೆಗಳು ಇರುವ ಅವರ ಹೆಸರನ್ನು ಗವರ್ನರ್ ತಿರಸ್ಕರಿಸಿದ್ದು, ಸರಕಾರಕ್ಕೆ ಮುಜುಗರ ತಂದಿದೆ.

Leave a Reply