ಸಿದ್ದರಾಮಯ್ಯನವರೇ, ನೀವು ಅರಸು ಆಗೋಕೆ ಸಾಧ್ಯವಿಲ್ಲ ಅಂತ ಹೇಳೋದೇನೂ ಬೇಕಿಲ್ಲ, ಅದು ಜನರಿಗೆ ಈಗಾಗಲೇ ಗೊತ್ತಾಗಿಬಿಟ್ಟಿದೆ!

 

author-thyagaraj‘ನಾನು ದೇವರಾಜ ಅರಸು ಆಗೋಕೆ ಸಾಧ್ಯವಿಲ್ಲ, ಅರಸು ಅವರೇ ಬೇರೇ, ನಾನೇ ಬೇರೆ..!’

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇನೋ ಮೊನ್ನೆ ಅಸೆಂಬ್ಲಿಯಲ್ಲಿ ಈ ಮಾತುಗಳನ್ನು ಸುಲಭವಾಗಿ ಹೇಳಿಬಿಟ್ಟರು. ಹಾಗೇ ಹೇಳುವುದಕ್ಕೆ ಅವರಿಗೆ ಈಗೇನು ಕಷ್ಟವಾಗಿರಲಿಕ್ಕಿಲ್ಲ. ಆದರೆ ಅವರಲ್ಲಿ ಮತ್ತೆ ದೇವರಾಜ ಅರಸು ಅವರನ್ನು ಕಾಣಬೇಕು, ಅವರು ಅರಸು ಅವರ ಸಂಕೇತ ಆಗಬೇಕು, ಹಿಂದುಳಿದವರ ಬಗ್ಗೆ ಅರಸು ಅವರಿಗಿದ್ದ ತುಡಿತವನ್ನು ಸಿದ್ದರಾಮಯ್ಯನವರ ಎದೆಮಿಡಿತದಲ್ಲಿ ಆಲಿಸಬೇಕು, ಅಲ್ಲಿ ಶೋಷಿತರ ಕಣ್ಣೀರು ಕರಗುವುದನ್ನು ಮನತುಂಬಿಕೊಳ್ಳಬೇಕು ಎಂದು ನಾಡಿನ ಜನ ಹಪಾಹಪಿಸಿದರಲ್ಲ ಅವರು ಎಲ್ಲಿಗೆ ಹೋಗಬೇಕು? ಹಾಗೆ ಅವರು ಕಲ್ಪಿಸಿಕೊಂಡದ್ದು ತಪ್ಪೇ..?

ಹೌದು, ಸಿದ್ದರಾಮಯ್ಯನವರೇ ನೀವು ದೇವರಾಜ ಅರಸು ಆಗಲು ಸಾಧ್ಯವಿಲ್ಲ. ಅರಸು ಅವರೇ ಬೇರೆ, ನೀವೇ ಬೇರೆ. ಅದನ್ನು ನೀವೀಗ ಹೇಳದಿದ್ದರೂ ರಾಜ್ಯದ ಜನರಿಗೆ ಬಹಳ ಚೆನ್ನಾಗಿ ಗೊತ್ತಾಗಿ ಹೋಗಿದೆ. ಅದನ್ನು ನೀವೀಗ ಹೇಳುವ ಅವಶ್ಯಕತೆಯೇ ಇಲ್ಲ. ಆದರೆ ನೀವು ಇವತ್ತು ಹೇಳಿರುವ ಮಾತನ್ನು ಮೂರು ವರ್ಷಗಳ ಹಿಂದೆಯೇ ಹೇಳಿದಿದ್ದರೆ, ಜನ ನಿಮ್ಮ ಬಗ್ಗೆ ಆಲೋಚಿಸುವ ಕ್ರಮವೇ ಬೇರೆ ಆಗಿರುತ್ತಿತ್ತು. ಅವರು ನಿಮ್ಮ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳುತ್ತಿರಲಿಲ್ಲ. ನಿಮ್ಮಲ್ಲಿ ಅರಸು ಅವರನ್ನು ಕಾಣುವ ಕನಸು ಕಟ್ಟುತ್ತಿರಲಿಲ್ಲ. ಮುಖ್ಯಮಂತ್ರಿಯಾಗಿ ಮೂರು ವರ್ಷ ಅಧಿಕಾರ ಪೂರೈಸಿದ ನಂತರ ಈ ಮಾತನ್ನು ಹೇಳುತ್ತಿದ್ದೀರಿ, ಜನಕ್ಕೆ ಅದನ್ನು ಸುಮ್ಮನೇ ಕೇಳೋದು ಬಿಟ್ಟು ಬೇರೇ ಅವಕಾಶ ತಾನೇ ಏನಿದೆ?

ಸದನದ ಹೊರಗೆ ಇನ್ನೊಂದು ಮಾತು ಹೇಳಿದ್ದೀರಿ. ‘ಹಿಂದುಳಿದ ವರ್ಗದವರು ಮುಖ್ಯಮಂತ್ರಿ ಆಗುವುದು ಕಷ್ಟ. ಮುಖ್ಯಮಂತ್ರಿ ಅದರೂ ಪದವಿ ಉಳಿಸಿಕೊಳ್ಳುವುದು ಮತ್ತೂ ಕಷ್ಟ. ನಾನು ಹಿಂದುಳಿದ ವರ್ಗದವನೆಂಬ ಕಾರಣಕ್ಕೆ ಪದವಿಯಿಂದ ಇಳಿಸಲು ಸಂಚು ನಡೆದಿದೆ’ ಎಂದು. ಆದರೆ ಇದು ಒಪ್ಪುವ ಮಾತಲ್ಲ. ಇಲ್ಲೂ ವೈರುಧ್ಯವಿದೆ. ಏಕೆಂದರೆ ಕಾಂಗ್ರೆಸ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ, ಎಚ್. ಕೆ. ಪಾಟೀಲ, ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಲು ಶತಕಕ್ಕೂ ಹೆಚ್ಚು ಕಾಲ ದುಡಿದ ಸಾಕಷ್ಟು ನಾಯಕರಿದ್ದರೂ, ಪಕ್ಷಕ್ಕೆ ಬಂದು ದಶಕ ಕೂಡ ಮುಟ್ಟದ ನಿಮಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದ್ದು ನೀವು ಹಿಂದುಳಿದ ವರ್ಗಕ್ಕೆ ಸೇರಿದವರು ಎಂಬ ಕಾರಣಕ್ಕೆ. ನಿಮ್ಮ ಆತ್ಮ ಆ ವರ್ಗಕ್ಕಾಗಿ ತುಡಿಯುತ್ತಿದೆ ಮತ್ತು ದುಡಿಯುತ್ತದೆ, ನಿಮ್ಮಲ್ಲಿ ಮತ್ತೊಬ್ಬ ಆರಸು ಆಗುವ ಗುಣಗಳಿವೆ, ಅರಸು ಆಗುವ ಮೂಲಕ ಪಕ್ಷವನ್ನು ಎತ್ತರಕ್ಕೆ ಕೊಂಡೊಯ್ಯುತ್ತೀರಿ ಎಂಬ ನಂಬಿಕೆಯಿಂದ. ನಿಮಗೆ ಪಟ್ಟ ಕಟ್ಟಿ ನಂತರ ಅದನ್ನು ತಪ್ಪಿಸುವ ಸಂಚು ಮಾಡುವ ಬದಲು, ಪಟ್ಟ ಕಟ್ಟದೆಯೇ ಅದನ್ನು ತಪ್ಪಿಸಬಹುದಿತ್ತು. ಅಂಥ ತಾಕತ್ತಿರುವ ಸಾಕಷ್ಟು ‘ಮೇಧಾವಿ’ಗಳು ಕಾಂಗ್ರೆಸ್ ನಲ್ಲಿದ್ದಾರೆ, ಆಗಲೂ ಇದ್ದರು.

ಆದರೆ ನಿಮ್ಮ ಪದವಿ ಸುತ್ತ ಒಂದಷ್ಟು ಮಾತುಗಳು ಗಿರಕಿ ಹೊಡೆದಿದ್ದು, ಅದರಿಂದ ನೀವು ಅಧೀರರಾದದ್ದು ಬೇರೆ ಕಾರಣಕ್ಕೆ. ಕಾಂಗ್ರೆಸ್ ಮತ್ತು ರಾಜ್ಯದ ಜನ ನಿಮ್ಮ ಮೇಲಿಟ್ಟಿದ್ದ ನಂಬಿಕೆ ಹುಸಿಯಾಯಿತು, ನಿಮ್ಮಲ್ಲಿ ಅರಸು ಕಾಣಲಿಲ್ಲ ಎಂದು. ಆಯಿತು, ನೀವು ಹೇಳಿರುವಂತೆ ನಿಮಗೆ ಯಾರೋ ಬಲವಂತವಾಗಿ ಆ ವಜ್ರಖಚಿತ ಹ್ಯೂಬ್ಲೊಟ್ ವಾಚನ್ನು ಉಡುಗೊರೆ ಕೊಟ್ಟರು ಎಂದಿಟ್ಟುಕೊಳ್ಳಿ. ಮೂರು ದಶಕದ ಸ್ನೇಹ, ಆ ಸ್ನೇಹ ದಯಪಾಲಿಸಿದ ಸೌಜನ್ಯ ನಿಮ್ಮನ್ನು ಆ ಉಡುಗೊರೆ ಪಡೆಯುವುದಕ್ಕೆ ಅಡ್ಡಿಯಾಯಿತು ಎಂಬುದನ್ನೂ ಒಪ್ಪೋಣ. ಆದರೆ ಆ ವಾಚನ್ನು ಕಟ್ಟದೇ ಹಾಗೇ ಇಡಬಹುದಿತ್ತಲ್ಲ. ಆ ವಾಚನ್ನು ಕಟ್ಟದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಉಡುಗೊರೆ ಕೊಟ್ಟ ಆಸಾಮಿಯೇನು ಹೆದರಿಸಿರಲಿಲ್ಲವಲ್ಲ. ಇವತ್ತು ಇಷ್ಟೆಲ್ಲ ರಾದ್ದಾಂತವಾದ ನಂತರ ಕ್ಯಾಬಿನೆಟ್ ಹಾಲ್ ಷೋಕೋಸ್ ನಲ್ಲಿಡುವ ಬದಲು ಉಡುಗೊರೆ ಬಂದ ದಿನವೇ ಅದನ್ನು ಅಲ್ಲಿಟ್ಟಿದ್ದಿದ್ದರೆ ಬಹಳ ದೊಡ್ಡವರಾಗಿಬಿಡುತ್ತಿದ್ದಿರಿ. ಅದೂ ಹೋಗಲಿ, ನಿಮ್ಮ ಮನೆಯ ಷೋಕೇಸ್ ನಲ್ಲಾದರೂ  ಇಡಬಹುದಿತ್ತಲ್ಲ. ನಿಮ್ಮ ಸ್ನೇಹಭಾವ ಕೂಡ ಆ ಷೋಕೇಸ್ ನಲ್ಲಿ ಬೆಚ್ಚಗಿರುತಿತ್ತಲ್ಲ.

ಯೆಸ್, ನೀವು ಉಡುಗೊರೆ ಪಡೆದದ್ದು ತಪ್ಪಲ್ಲ. ಆದರೆ ಸಮಾಜವಾದ, ಲೋಹಿಯಾವಾದ ಉಂಡು, ಹಾಸೊದ್ದು ಮಲಗಿದ್ದ ನಿಮ್ಮ ಕೈಯಲ್ಲಿ ಹ್ಯೂಬ್ಲೊಟ್ ವಾಚು ನಕ್ಕಿದ್ದು ತಪ್ಪು. ವಿವಾದಕ್ಕೆ ಆಸ್ಪದ ಮಾಡಿಕೊಟ್ಟದ್ದೂ ಈ ನಗುವೇ ಹೊರತು ನೀವು ಹಿಂದುಳಿದ ವರ್ಗಕ್ಕೆ ಸೇರಿದವರು ಎಂಬ ಕಾರಣವಲ್ಲ. ಒಂದೊಮ್ಮೆ ನೀವು ಹೇಳುವಂತೆ ಅದೇ ಕಾರಣವಾಗಿದಿದ್ದರೆ ನೀವು ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ, ನಿಮ್ಮಲ್ಲಿ ಆರಸು ಅವರನ್ನು ಕಾಣುವ ಕನಸನ್ನೂ ಜನರು ಇಟ್ಟುಕೊಳ್ಳುತ್ತಿರಲಿಲ್ಲ. ‘ಕೋತಿ ತಿಂದು ಮೇಕೆ ಬಾಯಿಗೆ ಒರೆಸಿತು’ ಎಂಬಂತೆ ನೀವು ತಪ್ಪು ಮಾಡಿ ಬೇರೆಯವರ ಮೇಲೆ ಗೂಬೆ ಕೂರಿಸಲು ಹೊರಟರೆ ಜನ ಅದನ್ನು ನಂಬುವಷ್ಟು ದಡ್ಡರೇನು ಅಲ್ಲ. ಮಿಗಿಲಾಗಿ ಅವರನ್ನು ನೀವು ದಡ್ಡರನ್ನಾಗಿ ಮಾಡಲು ಸಾಧ್ಯವೂ ಇಲ್ಲ!

ಒಬ್ಬ ವ್ಯಕ್ತಿ ನಡೆದು ಬಂದ ಹಾದಿ ಅವಲೋಕಿಸಿದಾಗ ಆತನ ಬಗ್ಗೆ ಒಂದಷ್ಟು ಹೊಳಹು ಸಿಗುತ್ತದೆ. ಅದು ಸಕಾರಾತ್ಮಕ ಆಗಬಹುದು ಅಥವಾ ನಕಾರಾತ್ಮಕವಾಗಿಯೂ ಇರಬಹುದು. ಒಂದೊಮ್ಮೆ ಸಕಾರಾತ್ಮಕ ಎಂದಿಟ್ಟುಕೊಳ್ಳಿ, ಈತ ಅಧಿಕಾರಕ್ಕೆ ಬಂದರೆ ಏನಾದರೂ ಮಾಡುತ್ತಾನೆ, ಒಂದಷ್ಟು ಉತ್ತಮ ಕೆಲಸ ಬಯಸಬಹುದು, ತಾನು ಅಷ್ಟು ದಿನ ಮಾಡಿದ ಹೋರಾಟದ ಹಾದಿಯಲ್ಲೊಂದು ಸಾರ್ಥಕಭಾವದ ಛಾಪು ಮೂಡಿಸಿ ಹೋಗುತ್ತಾನೆ ಎಂಬ ನಿರೀಕ್ಷೆಗಳು ಗರಿಗೆದರುತ್ತವೆ. ಸಿದ್ದರಾಮಯ್ಯ ಅವರ ವಿಚಾರದಲ್ಲಿ ಜನರಿಗೆ ಆದದ್ದೂ ಇದೇ. ಅವರು ವಿಪರೀತ ನಂಬಿಕೆಗಳನ್ನು ಕಟ್ಟಿಟ್ಟುಕೊಂಡರು. ಅದಕ್ಕೆ ಕಾರಣಗಳು ಇಲ್ಲದಿಲ್ಲ.

ಸಿದ್ದರಾಮಯ್ಯ ಅವರ ಹಿನ್ನೆಲೆ, ಅವರ ಹೋರಾಟದ ಹಾದಿ, ನಂಬಿದ ತತ್ವ ಕಂಡ ಜನಕ್ಕೆ ಅವರಲ್ಲೊಬ್ಬ ದೇವರಾಜ ಅರಸು ಇದ್ದಾರೆ ಎಂದು ಅನಿಸಿದ್ದೇನೂ ಸುಳ್ಳಲ್ಲ. ಜೆ.ಪಿ. ಚಳವಳಿಯಿಂದ ಉತ್ತೇಜಿತರಾಗಿ, ಸಮಾಜವಾದಿ ಸಿದ್ದಾಂತದ ಪ್ರತಿಪಾದಕರಾಗಿ, ಬಡವರು, ರೈತರು, ಶೋಷಿತರ ಪರ ನಡೆಸಿದ ಹೋರಾಟಗಳು, ದೀನ-ದಲಿತರ ಕಷ್ಟಕಾರ್ಪಣ್ಯಗಳಿಗೆ ಧ್ವನಿಯಾಗಿದ್ದು ಮೂವತ್ತು ವರ್ಷಗಳ ಹಿಂದೆಯೇ ಅವರಿಗೆ ಬರೀ ಶಾಸಕನ ಸ್ಥಾನ ಮಾತ್ರವಲ್ಲ ಮಂತ್ರಿ ಪದವಿಯನ್ನೂ ತಂದುಕೊಟ್ಟಿತ್ತು. ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ‘ಫೈರ್ ಬ್ರಾಂಡ್’ ಮಂತ್ರಿ ಆಗಿ ಅಧಿಕಾರ ರಾಜಕೀಯದ ಅಭಿಯಾನ ಆರಂಭಿಸಿದ ಸಿದ್ದರಾಮಯ್ಯನವರು ಹಲವು ರಾಜಕೀಯ ಸ್ಥಿತ್ಯಂತರಗಳನ್ನು ದಾಟಿ ದೇವೇಗೌಡರ ಗರಡಿಯಲ್ಲಿ ಫೈಲ್ವಾನರಾದರು. ಹಾಗೇ ಫೈಲ್ವಾನರಾಗಿ ಹೊರಹೊಮ್ಮುವಲ್ಲಿ ಅವರು ಮಾಡಿದ ಸಾಮು ಕಡಿಮೆಯೇನಲ್ಲ. ಜಾತಿ ಗುರಾಣಿಯನ್ನೇ ತಮ್ಮ ರಾಜಕೀಯ ಕಿರಾಣಿ ಅಂಗಡಿ ಮಾಲು ಮಾಡಿಕೊಂಡಿದ್ದ ದೇವೇಗೌಡರನ್ನು ಜಾತ್ಯಸ್ಥರಿಗಿಂತಲೂ ಉತ್ತಮವಾಗಿ ನಿಭಾಯಿಸಿದ್ದ ಸಿದ್ದರಾಮಯ್ಯನವರು ಜೆಡಿಎಸ್ ಗೆ ಹಿಂದುಳಿದ ವರ್ಗಗಳ ಮತಗಳನ್ನು ತಂದುಕೊಡುವ ‘ಶಕ್ತಿಕೇಂದ್ರ’ವೂ ಆಗಿದ್ದರು. ದೇವೇಗೌಡರ ಪಾಲಿಗೆ ಪಕ್ಷದಲ್ಲಿ ಉಳಿದ ನಾಯಕರೆಲ್ಲರ ತೂಕವೇ ಒಂದಾಗಿದ್ದರೆ, ಸಿದ್ದರಾಮಯ್ಯನವರ ತೂಕವೇ ಮತ್ತೊಂದಾಗಿತ್ತು.

ಆದರೆ ಗೌಡರ ರಾಜಕೀಯದಲ್ಲಿ ಕುಟುಂಬದ ಪಾರುಪತ್ಯೆ ಗಟ್ಟಿಯಾದಾಗ, ಕುಟುಂಬ ರಾಜಕೀಯ ವಿಜೃಂಭಿಸಿದಾಗ ಇತರ ನಾಯಕರು ಪಕ್ಕಕ್ಕೆ ಸರಿಸಲ್ಪಟ್ಟರು. ಅದರಲ್ಲಿ ಸಿದ್ದರಾಮಯ್ಯನವರೂ ಒಬ್ಬರು ಮತ್ತು ಪ್ರಮುಖರು. ಗೌಡರ ಪಾಳೇಗಾರಿಕೆ ಮನೋಭಾವವನ್ನು ಉಳಿದವರು ಸಹಿಸಿಕೊಂಡರಾದರೂ, ಗೌಡರಷ್ಟೇ ಪಾಳೇಗಾರಿಗೆ ಗತ್ತಿನ ಸಿದ್ದರಾಮಯ್ಯನವರಿಗೆ ಅದನ್ನು ಆರಗಿಸಿಕೊಳ್ಳಲು ಆಗಲಿಲ್ಲ. 2004 ರಲ್ಲಿ ಕಾಂಗ್ರೆಸ್-ಜಿಡಿಎಸ್ ಮೈತ್ರಿ ಸರಕಾರದ ಮಖ್ಯಮಂತ್ರಿ ಪಟ್ಟವನ್ನು ಗೌಡರು ಉದ್ದೇಶಪೂರ್ವಕವಾಗಿಯೇ ತಪ್ಪಿಸಿದ ನಂತರ ಸಿದ್ದರಾಮಯ್ಯನವರಿಗೆ ಪಕ್ಷದೊಳಗೆ ಎನ್ನುವುದಕ್ಕಿಂತ ಗೌಡರೊಂದಿಗೆ ಅಲ್ಲಿರಲಾಗಲಿಲ್ಲ. ಆಗಲೂ ಗೌಡರಿಗೆ ಸೆಡ್ಡು ಹೊಡೆಯಲು ಸಿದ್ದರಾಮಯ್ಯನವರು ಅಪ್ಪಿಕೊಂಡದ್ದು ಅಲ್ಪಸಂಖ್ಯಾತ, ಹಿಂದುಳಿದ, ದಲಿತ (ಅಹಿಂದ) ಮಂತ್ರವನ್ನು. ಆ ಆಹಿಂದ ಮಂತ್ರ ಅವರಿಗೊಂದು ಪ್ರತ್ಯೇಕ ‘ಗುರುತು’ ತಂದುಕೊಟ್ಟಿತು. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ, ಗೌಡರ ಅಧಿಕಾರ ವಂಚನೆಯನ್ನು ಬೆನ್ನಿಗಿಟ್ಟುಕೊಂಡು ರಾಜ್ಯಾದ್ಯಂತ ತಿರುಗಾಡಿದ ಸಿದ್ದರಾಮಯ್ಯನವರಲ್ಲಿ ಜನ ಆಹಿಂದ ನಾಯಕನನ್ನು ಕಂಡದ್ದು, ಮತ್ತೊಬ್ಬ ದೇವರಾಜ ಅರಸು ಅವರನ್ನು ಆವಾಹನೆ ಮಾಡಿಕೊಂಡದ್ದು ಆಗಲೇ.

ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಪಟ್ಟ ತಪ್ಪಿ ಹೋಗಿದ್ದು ಯಾಕೆ ಎಂಬ ಕಾರಣ ಹುಡುಕಿದ ಜನರಿಗೆ ಗೌಡರ ಕುಟುಂಬ ಪ್ರೇಮಕ್ಕಿಂದಲೂ ಮಿಗಿಲಾಗಿ ಸಿಕ್ಕಿದ್ದು ಸಿದ್ದರಾಮಯ್ಯನವರು ಹಿಂದುಳಿದ ವರ್ಗಕ್ಕೇ ಸೇರಿದವರು ಎಂಬುದು. ಆದರೆ ಆಗ ಮುಖ್ಯಮಂತ್ರಿ ಅದದ್ದು ಅದೇ ಹಿಂದುಳಿದ ವರ್ಗಕ್ಕೆ ಸೇರಿದ ಧರ್ಮಸಿಂಗ್ ಅವರು. ಗೌಡರಿಗೆ ಸಿದ್ದರಾಮಯ್ಯ ಅವರಂಥ ನಿಷ್ಠುರವಾದಿಗಿಂತಲೂ ಯಾವ ಆಕಾರಕ್ಕಾದರೂ ಬಗ್ಗುವ ಸೌಮ್ಯ ಸ್ವಭಾವದ ಧರ್ಮಸಿಂಗ್ ಅವರು ಆಪ್ಯಾಯಮಾನರಾಗಿ ಕಂಡರು ಎಂಬುದು ಕೇವಲ ಬಾಹ್ಯಸತ್ಯ. ಕುಮಾರಸ್ವಾಮಿ ಆ ಪಟ್ಟದಲ್ಲಿ ಕೂತಾಗ ‘ಒಳಸತ್ಯ’ ಹೊರಬಿತ್ತು. ಆಗಲೇ ಜನ ಅಂದುಕೊಂಡರು, ಆಹಿಂದ ನಾಯಕ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕಾಣಬೇಕು ಎಂದು. ಅದನ್ನು ಬಿಟ್ಟು ಈಗ ಸಿದ್ದರಾಮಯ್ಯನವರು ಹೇಳುತ್ತಿರುವಂತೆ ಹಿಂದುಳಿದ ವರ್ಗದ ನಾಯಕ ಎಂಬುದು ಅದಕ್ಕೆ ಅಡ್ಡಿಯೇನೂ ಆಗಿರಲಿಲ್ಲ, ಮುಂದೆ ಮುಖ್ಯಮಂತ್ರಿ ಆದಾಗಲೂ ಅಡ್ಡಿಯಾಗಲಿಲ್ಲ. ಬದಲಿಗೆ ಈಗ ಅಡ್ಡಿ ಆಗಿರುವುದು ಅವರು ಮಾಡಿಕೊಂಡಿರುವ ಸ್ವಯಂಕೃತ ತಪ್ಪುಗಳು!

ಹಾಗೇ ನೋಡಿದರೆ, ಹಿಂದುಳಿದ ವರ್ಗದ ದರ್ಪಣದಲ್ಲಿ ಪ್ರತಿಬಿಂಬಿಸಿದ ಸಿಎಂ ಪಟ್ಟ ಅಪ್ಪಿಕೊಂಡ ಸಿದ್ದರಾಮಯ್ಯನವರು ಮಾಡಿದ ಮೊದಲ ಕೆಲಸ ಮೇಲ್ವರ್ಗದವರ ವಿರುದ್ಧ ಸೇಡಿನ ರಾಜಕೀಯಕ್ಕೆ ಇಳಿದದ್ದು. ದೇವೇಗೌಡರ ಮೇಲಿನ ಸಿಟ್ಟನ್ನು ಸಾರಸಗಟು ಮೇಲ್ವರ್ಗದವರ ಮೇಲೆ ತೀರಿಸಿಕೊಳ್ಳಲು ಬಳಕೆ ಮಾಡಿಕೊಂಡದ್ದು. ತಮ್ಮನ್ನು ಮುಖ್ಯಮಂತ್ರಿ ಮಾಡಿದ ಕಾಂಗ್ರೆಸ್ ನೊಳಗೂ ಅದನ್ನು ಚಲಾಯಿಸಿದ್ದು. ಹೈಕಮಾಂಡ್ ಜತೆಗಿನ ನೇರ ಸಂಪರ್ಕವನ್ನು ಅಸ್ತ್ರ ಮಾಡಿಕೊಂಡ ಅವರು ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ ಸಮುದಾಯವನ್ನು ವಾರೆ ನೋಟಕ್ಕೆ ಸೀಮಿತ ಮಾಡಿಕೊಂಡರು. ಅಹಿಂದ ನಾಯಕರಿಗೆ ಅದರಲ್ಲೂ ವಿಶೇಷವಾಗಿ ತಮ್ಮೊಡನೆ ವಲಸೆ ಬಂದವರಿಗೆ ಮಣೆ ಹಾಕಿ,  ಸಂಪುಟದ ಆಯಕಟ್ಟಿನ ಖಾತೆಗಳಲ್ಲಿ ಪ್ರತಿಷ್ಠಾಪಿಸಿಬಿಟ್ಟರು. ಇದು ಅವರು ಮಾಡಿದ ಮೊದಲ ತಪ್ಪು. ಶೋಷಿತರ ಪರ ತುಡಿತ ಇಟ್ಟುಕೊಂಡಿದ್ದರೂ ದೇವರಾಜ ಅರಸು ಅವರ ಸಚಿವ ಸಂಪುಟ ಸಮತೋಲಿತವಾಗಿತ್ತು. ಎಲ್ಲ ವರ್ಗದವರನ್ನು ಜತೆಯಲ್ಲಿಟ್ಟುಕೊಂಡೇ ಹಿಂದುಳಿದ ವರ್ಗದವರ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು. ಒಬ್ಬರ ಏಳ್ಗೆಗೆ ಮತ್ತೊಬ್ಬರನ್ನು ತುಳಿಯಲಿಲ್ಲ. ಹೀಗಾಗಿ ಅವರು ಸರ್ವಮಾನ್ಯರಾದರು.

ಆದರೆ ಏಕೋ, ಏನೋ ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಈ ಗುಣಗಳು ಕಾಣಲೇ ಇಲ್ಲ. ಅವರು ಮೂರ್ನಾಲ್ಕು ದಶಕ ಹೋರಾಟ ಮಾಡಿದ್ದರ ಅಂತಿಮ ಗುರಿ ಮುಖ್ಯಮಂತ್ರಿ ಪದವಿಯೇ ಆಗಿತ್ತು. ಆದರೆ ಅದು ಸಿಕ್ಕ ಮೇಲೆ ಅವರೊಂದು ಆರಾಮ ವಲಯ (comfort zone) ಸೇರಿಕೊಂಡು ಬಿಟ್ಟರು. ಅಧಿಕಾರ ಅವಧಿ ಮುಗಿದ ಮೇಲೆ ಕಾಣಬೇಕಿದ್ದ ‘ಸಾರ್ಥಕಭಾವ’ ಸಿಎಂ ಆದ ತಕ್ಷಣವೇ ಅವರನ್ನು ಆವರಿಸಿಕೊಂಡು ಬಿಟ್ಟಿತು. ‘ಇನ್ನೇನು ಪದವಿ ಸಿಕ್ಕಾಗಿದೆ, ಇನ್ನೊಮ್ಮೆ ಸಿಎಂ ಆಗುವ ಕನಸಿಲ್ಲ’ ಎಂಬ ಮನೋಭಾವಕ್ಕೆ ಅವರು ಜಾರಿ ಹೋಗಿರುವುದು, ಅವರು ಪೂರೈಸಿರುವ ಮೂರು ವರ್ಷಗಳ ಅಧಿಕಾರವಧಿಯ ಪರಾಮರ್ಶೆ ಮಾಡಿದಾಗ ಢಾಳಾಗಿ ರಾಚುತ್ತದೆ. ‘ಆ ಭಾಗ್ಯ, ಈ ಭಾಗ್ಯ’ ಎಂದು ಕೊಟ್ಟ ಕಾರ್ಯಕ್ರಮಗಳು ಗುರಿ ಮುಟ್ಟುವುದಕ್ಕಿಂತ ಬರೀ ಅಗ್ಗದ ಜನಪ್ರಿಯತೆ ಸರಕುಗಳಾದವು. ಮೂವತ್ತು ಕೆಜಿ ಅಕ್ಕಿಯಿಂದ ಮೂರು ಕೆಜಿಗಿಳಿದ ಅನ್ನಭಾಗ್ಯ, ಸಾವಿರ ದಾಟಿದ ರೈತರ ಆತ್ಮಹತ್ಯೆ, ನೀರು ಕೇಳಿದ ರೈತರ ಮೇಲೆ ಲಾಠಿಚಾರ್ಜ್, ಬರ, ಕುಡಿಯುವ ನೀರಿಗೂ ತತ್ವಾರ, ಮುಖ್ಯಮಂತ್ರಿ ಪರಿಹಾರ ನಿಧಿಯೂ ಬರಕಾಸ್ತು – ಹೀಗೆ ಒಂದೇ ಎರಡೇ ಕೊರತೆಗಳ ಸಾಲು. ಅಷ್ಟೊಂದು ಭಾರೀ ಹಣಕಾಸು ಸಚಿವರಾಗಿದ್ದ, ಬಜೆಟ್ ಮಂಡಿಸಿದ್ದ ಅವರಲ್ಲಿ ಕೊನೆಗೂ ‘ಆರ್ಥಿಕ ತಜ್ಞ’ ಗೋಚರಿಸಲೇ ಇಲ್ಲ. ಹದಗೆಟ್ಟ ರಾಜ್ಯದ ಹಣಕಾಸು ಪರಿಸ್ಥಿತಿ ಅದಕ್ಕೊಂದು ಸಾಕ್ಷಿ.

‘ಅಹಿಂದ’ ಮಂತ್ರ ಪಠನೆ ಕೂಡ ಕ್ರಮವಾಗಿ ಬಿಗಿ ಕಳೆದುಕೊಳ್ಳುತ್ತಾ ಬಂತು. ಅವರ ಭಜನೆ ಮಾಡುವ ಸ್ವಕುಲ ಮತ್ತು ಕುಲಪಾತಕ ಭಟ್ಟಂಗಿಗಳು ಸುತ್ತುವರಿದರು. ತತ್ಪರಿಣಾಮ, ಪಕ್ಷಕ್ಕೆ ಕರೆತಂದ ಮಾಜಿ ಸಂಸದ ಎಚ್. ವಿಶ್ವನಾಥ್, ಮಾಜಿ ಸಚಿವ ರೇವಣ್ಣ, ದಿಲ್ಲಿಯಲ್ಲಿ ಗರಿಷ್ಠ ತಲೆ ಕಾಯ್ದ ವರಿಷ್ಠ ಮಂಡಳಿಯ ಬಿ.ಕೆ. ಹರಿಪ್ರಸಾದ್, ಸಚಿವರಾದ ಶ್ರೀನಿವಾಸ ಪ್ರಸಾದ್, ಸತೀಶ್ ಜಾರಕಿಹೊಳಿ, ಜಿ. ಪರಮೇಶ್ವರ್ ಅವರಂತವರೆಲ್ಲ ದೂರ ಸರಿದರು. ಅತ್ತ ಮೇಲ್ವರ್ಗವೂ ಇಲ್ಲ, ಇತ್ತ ಹಿಂದುಳಿದ ವರ್ಗವೂ ಇಲ್ಲ. ಭೈರತಿ ಸುರೇಶ್ ಟಿಕೆಟ್ ಪ್ರಹಸನದಲ್ಲಿ ಹೈಕಮಾಂಡ್ ವಿಶ್ವಾಸ ಕಳೆದುಕೊಂಡು, ಪಕ್ಷದೊಳಗಿನ ಎದುರಾಳಿಗಳನ್ನು ಒಗ್ಗೂಡಿಸಿದರು. ವಾಚ್ ಪ್ರಕರಣ ಜನರ ನಂಬಿಕೆ ಕಳೆಯಿತು. ಅವರು ಪ್ರತಿಪಾದಿಸಿದ್ದ ಸಮಾಜವಾದ, ಲೋಹಿಯಾವಾದ ಸಿದ್ಧಾಂತವನ್ನೂ ತೊಳೆಯಿತು. ಸಿಎಂ ಪದವಿಯ ಬುಡವೂ ಅಲ್ಲಾಡಿತು.

ಈಗ ಹೇಳಿ, ಸಿದ್ದರಾಮಯ್ಯನವರ ಪಟ್ಟ ಅಲ್ಲಾಡಿದ್ದು, ಅವರು ಹಿಂದುಳಿದ ವರ್ಗದವರು ಎಂಬ ಕಾರಣಕ್ಕೋ ಅಥವಾ ಅವರಲ್ಲಿದ್ದ ಹಿಂದುಳಿದ ವರ್ಗದ ನಾಯಕನ ಬಗ್ಗೆ ಜನರ ಪರಿಕಲ್ಪನೆ ಬದಲಾಗಿ ಹೋಗಿದ್ದಕ್ಕೋ..?!

ಲಗೋರಿ : ಜನರನ್ನು ನಂಬಿಸಲು ಯತ್ನಿಸುವುದು ತಪ್ಪಲ್ಲ. ಆದರೆ ಅವರು ನಂಬಿದರು ಎಂದು ನಂಬುವುದು ತಪ್ಪು.

2 COMMENTS

  1. Brilliant one sir… Nobody can explain things so meaningfully… Hope this will reach CM so he can plan his future steps.

Leave a Reply