ತೈಲಬೆಲೆ ಇಳಿಸದೇ ಇರೋದಕ್ಕೆ ಜೇಟ್ಲಿ ಹೇಳಿದ ಕಾರಣ ಗೊತ್ತೇ? ಹಾಗೆಯೇ ಓದಿಕೊಳ್ಳಿ ಪ್ರಧಾನಿ ಮೋದಿ ಹೇಳಿದ ಮೃತ್ಯುವಿನ ಕತೆ ಮತ್ತು ನಿದಾ ಫಜ್ಲಿ ಕವಿತೆ!

ಡಿಜಿಟಲ್ ಕನ್ನಡ ಟೀಮ್

ಸಂಸತ್ತಿನಲ್ಲಿ ಪ್ರಮುಖ ಯೋಜನೆಗಳ ಕುರಿತು ಚರ್ಚೆ ನಡೆಸದೇ ಸಂಸತ್ತಿನಲ್ಲಿ ಗದ್ದಲ ನಿರ್ಮಿಸಿ ಕಾಲಹರಣ ಮಾಡುತ್ತಿರುವ ಪ್ರತಿಪಕ್ಷಗಳಿಗೆ ವಿತ್ತ ಸಚಿವ ಅರುಣ್ ಜೇಟ್ಲಿ ತಿರುಗೇಟು ನೀಡಿದ್ದಾರೆ. ಜೆಎನ್ ಯು, ಅಸಹಿಷ್ಣುತೆ, ಹಣದುಬ್ಬರ, ವಿದೇಶಾಂಗ ನೀತಿಯಂತಹ ವಿಷಯಗಳನ್ನಿಟ್ಟುಕೊಂಡು ಸರ್ಕಾರದ ವಿರುದ್ಧ ದಾಳಿ ನಡೆಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಪ್ರತಿ ಆರೋಪಕ್ಕೂ ಸ್ಪಷ್ಟನೆ ನೀಡುವ ಮೂಲಕ ತಿರುಗೇಟು ನೀಡಿದ್ದಾರೆ.

ಬುಧವಾರ ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿಸುವ ಸಂದರ್ಭದಲ್ಲಿ 45 ನಿಮಿಷಗಳ ಕಾಲ ಭಾಷಣ ನೀಡಿದ ಜೇಟ್ಲಿ, ಸಂಸತ್ತಿನಲ್ಲಿ ಪ್ರತಿಪಕ್ಷಗಳು ಮಾಡಿದ ಎಲ್ಲ ಆರೋಪಗಳನ್ನು ತಳ್ಳಿಹಾಕಿದರು. ಜೇಟ್ಲಿ ನಂತರ ಮಾತನಾಡಿದ ಪ್ರಧಾನಿ ಮೋದಿ ಸಹ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಈ ಸಂದರ್ಭದಲ್ಲಿ ಜೇಟ್ಲಿ ಹಾಗೂ ಮೋದಿ ಅವರ ಭಾಷಣ ಹೇಗಿತ್ತು ಎಂಬುದು ಇಲ್ಲಿದೆ: 

ಅರುಣ್ ಜೇಟ್ಲಿ

‘ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶದ ಪ್ರಜಾಪ್ರಭುತ್ವವನ್ನು ಕದಡದಂತೆ ನೋಡಿಕೊಳ್ಳಬೇಕು. ಒಗ್ಗಟ್ಟಿನಿಂದ ಎಲ್ಲರು ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸಬೇಕಿದೆ. ಕಚ್ಚಾತೈಲದ ಬೆಲೆ ಇಳಿಕೆಯಿಂದ ಗ್ರಾಹಕರಿಗೆ ಲಾಭವಿಲ್ಲ ಎಂಬ ಆರೋಪದಲ್ಲಿ ರಾಹುಲ್ ಲೆಕ್ಕಾಚಾರ ಸರಿ ಇಲ್ಲ. ಸದ್ಯ ಕಚ್ಚಾತೈಲ ಬೆಲೆ ಇಳಿಕೆ ಲಾಭವನ್ನು ಪೂರ್ಣ ಪ್ರಮಾಣವಾಗಿ ಗ್ರಾಹಕರಿಗೆ ನೀಡಲು ಸಾಧ್ಯವಿಲ್ಲ. ಕಾರಣ, ಇಲ್ಲಿನ ಲಾಭವನ್ನು ನಷ್ಟದಲ್ಲಿ ನಡೆಯುತ್ತಿರುವ ಸರ್ಕಾರಿ ತೈಲ ಕಂಪನಿಗಳಿಗೆ ನೀಡಲಾಗಿದೆ. ಉಳಿಕೆ ಮೊತ್ತವನ್ನು ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಆ ಮೂಲಕ ಪರೋಕ್ಷವಾಗಿ ಇದರ ಲಾಭ ಜನಸಾಮಾನ್ಯರಿಗೆ ತಲುಪಿದಂತಾಗುತ್ತದೆ.

ಜಾಗತಿಕ ಆರ್ಥಿಕ ಸ್ಥಿತಿ ಕುಸಿಯುತ್ತಿರುವ ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಬೇಕಿದೆ. ಜಾಗತಿಕ ಹಣಕಾಸು ವ್ಯವಸ್ಥೆ ಇಳಿಮುಖವಾಗಿದೆ. ಈ ಸಂದರ್ಭದಲ್ಲಿ ನಮಗೆ ಎಲ್ಲ ರಾಜಕೀಯ ಪಕ್ಷಗಳಿಂದ ಸಹಕಾರ ಅಗತ್ಯ. ಈ ಪರಿಸ್ಥಿಯನ್ನು ನಿಭಾಯಿಸಿ, ನಮ್ಮ ಆರ್ಥಿಕ ಸ್ಥಿತಿ ರಕ್ಷಿಸಲು ಸೂಕ್ತ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಭದ್ರತೆ, ಬೆಲೆಏರಿಕೆ, ವಿದೇಶಾಂಗ ನೀತಿಗಳು ಬೆಳವಣಿಗೆ ಕಾಣುತ್ತಿವೆ. ಈ ಸಂದರ್ಭದಲ್ಲಿ ನೀವು ಅಸಹಿಷ್ಣುತೆ ಬಗ್ಗೆ ಮಾತನಾಡುತ್ತಿದ್ದೀರಿ. ದೆಹಲಿ ಚುನಾವಣೆ ಸಂದರ್ಭದಲ್ಲಿ ಧಾರ್ಮಿಕ ಸ್ಥಳ ಹಾಗೂ ಒಂದು ಕೋಮಿನ ಮೇಲಿನ ದಾಳಿಯ ಸುದ್ದಿ ಸೃಷ್ಟಿಸಿ ರಾಜಕೀಯ ದ್ವೇಷ ಸಾಧಿಸಿದಿರಿ. ನಂತರ ಪೊಲೀಸರು ತನಿಖೆ ನಡೆಸಿದಾಗ ಅದು ಕುಡಿದ ಅಮಲಿನಲ್ಲಿ ನಡೆದ ದಾಳಿ ಎಂದು ಹೊರ ಬಂದಿತು. ನೀವು ಅದನ್ನು ಚುನಾವಣೆ ಸಂದರ್ಭದಲ್ಲಿ ಬಳಸಿಕೊಂಡರಿ. ಅದು ರಾಜಕೀಯ ದ್ವೇಷವಲ್ಲವೇ?

ಇತಿಹಾಸವನ್ನು ತೆಗೆದು ನೋಡಿ, ಬಿಜೆಪಿ ಆಡಳಿತ ನಡೆಸದ ಪಶ್ಚಿಮ ಬಂಗಾಳದಲ್ಲಿ ಕ್ರೈಸ್ತ ಸನ್ಯಾಸಿನಿ ಮೇಲಿನ ದಾಳಿ ಪ್ರಕರಣದಲ್ಲಿ ಬಾಂಗ್ಲಾದೇಶ ನಾಗರೀಕನನ್ನು ಬಂಧಿಸಲಾಯ್ತು. ನಂತರ ಅದಕ್ಕೆ ರಾಜಕೀಯ ಬಣ್ಣ ಹಚ್ಚಲಾಯ್ತು. ಇನ್ನು ಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಗಾಯಕ ಹಾಡು ಹೇಳದಿದ್ದಕ್ಕೆ ಆತನನ್ನು ಎಐಆರ್ ನಿಂದ ವಜಾಗೊಳಿಸಿದಿರಿ. ಇಷ್ಟೆಲ್ಲದರ ನಡುವೆ ಇಂದು ನೀವೇ ಅಸಹಿಷ್ಣು ವಿಷಯದಲ್ಲಿ ಮುಂದಾಳತ್ವ ವಹಿಸಿ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದೀರಿ.

ದೇಶದ ಭದ್ರತೆ ಬಗ್ಗೆ ಪ್ರಶ್ನಿಸುತ್ತಿರುವ ನೀವು, ಇಶ್ರತ್ ಜಹಾನ್ ಪ್ರಕರಣದಲ್ಲಿ ಯುಪಿಎ ಸರ್ಕಾರ ವಿಶೇಷ ತನಿಖಾ ದಳದ ಮೂಲ ಅಫಡವಿಟ್ ಗಳನ್ನೇ ಬದಲಿಸಿದಿರಿ. ಈ ಪ್ರಕ್ರಿಯೆಯಲ್ಲಿ ರಾಜಕೀಯ ನಾಯಕ (ನರೇಂದ್ರ ಮೋದಿ) ನನ್ನು ಸಿಲುಕಿಸಲು ಭದ್ರತಾ ವ್ಯವಸ್ಥೆಯನ್ನೇ ಬದಲಾಯಿಸಿದಿರಿ. ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಆಂತರಿಕ ಭದ್ರತೆಯಲ್ಲಿನ ಲೋಪದೋಷಗಳ ಕುರಿತ ತನಿಖೆ ನಡೆಯಲಿದೆ.

ನಾವು ವಿಭಿನ್ನ ಸೈದ್ಧಾಂತಿಕ ನೆಲೆಗಟ್ಟನ್ನು ಹೊಂದಿದ್ದೇವೆ. ಹಾಗಾಗಿ ದೇಶವನ್ನು ಒಗ್ಗೂಡಿಸಲು ನಮ್ಮ ಸಿದ್ಧಾಂತಗಳು ಉತ್ತಮ ಎಂದು ನಂಬುವುದರಲ್ಲಿ ಯಾವುದೇ ತಪ್ಪಿಲ್ಲ.

ಈ ದೇಶವನ್ನು ಒಟ್ಟಿಗೆ ಸೇರಿಸಲು ಮುಂದಾಗಬೇಕಾದರೆ, ಈ ದೇಶ ವಿಭಜನೆ ಮಾಡುವ ಹಾಗೂ ದೇಶದ ವಿರುದ್ಧ ಮಾತನಾಡುವ ಅಂಶಗಳನ್ನು ಕಿತ್ತುಹಾಕಬೇಕಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಯಾರೇ ಆಗಲಿ ಭಾರತದ ಸಾರ್ವಭೌಮತೆಗೆ ಧಕ್ಕೆ ತರುವ ಧ್ವನಿ ಎತ್ತಿದರೆ, ಅವರ ವಿರುದ್ಧ ನಾವು ನಿಲ್ಲುತ್ತೇವೆ.

ಇಲ್ಲಿ ಬಂಧಿತವಾಗಿರುವ ಒಬ್ಬ ವಿದ್ಯಾರ್ಥಿ ವಿರುದ್ಧ ಯಾರೇ ಆಗಲಿ ದ್ವೇಷ ಹೊಂದಿಲ್ಲ. ಅಭಿವ್ಯಕ್ತಿ ಸ್ವಾತಂತ್ರ ಎಲ್ಲರಿಗೂ ಅನ್ವಯ. ಆದರೆ, ಅದನ್ನೇ ಮುಂದಿಟ್ಟುಕೊಂಡು ದೇಶ ವಿಭಜನೆ ಬಗ್ಗೆ ಮಾತನಾಡುವುದು ಸರಿಯಲ್ಲ.

ಕಾಂಗ್ರೆಸ್ ನಂತಹ ಪ್ರಮುಖ ರಾಜಕೀಯ ಪಕ್ಷಗಳು ಈ ರೀತಿಯ ವ್ಯಕ್ತಿಗಳ ವಿರುದ್ಧ ನಿಲ್ಲಬೇಕು ಎಂದು ಅಪೇಕ್ಷಿಸುತ್ತೇನೆ. ಅದನ್ನು ಬಿಟ್ಟು, ಇಂತಹ ವ್ಯಕ್ತಿಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಬಾರದು.

ನರೇಂದ್ರ ಮೋದಿ

‘ಸಂಸತ್ತಿನಲ್ಲಿ ಕಾರ್ಯ ಸುಗಮವಾಗಿ ನಡೆಯಬೇಕು ಎಂಬ ರಾಷ್ಟ್ರಪತಿಯವರ ಮಾತನ್ನು ನಾವೆಲ್ಲ ಗಂಭೀರವಾಗಿ ಪರಿಗಣಿಸಿದ್ದೇವೆ. ಆ ಮೂಲಕ ಸದನ ಉತ್ತಮ ರೀತಿಯಲ್ಲಿ ಸಾಗುವಂತೆ ನೋಡಿಕೊಂಡಿದ್ದೇವೆ. ಸದನದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಟ್ಟ ಪ್ರತಿಪಕ್ಷಗಳಿಗೆ ಧನ್ಯವಾದಗಳು. ಈವರೆಗೂ ಸದನದಲ್ಲಿ 300 ತಿದ್ದುಪಡಿಗಳಾಗಿರುವುದಕ್ಕೆ ಆಭಾರಿಯಾಗಿದ್ದೇನೆ. ಸುದೀರ್ಘ ಅವಧಿಯ ನಂತರ ದೇಶದಲ್ಲಿನ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ.

ನೋಡಿ.. ಈ ಮೃತ್ಯುವಿನ ಮೇಲೆ ಯಾರೂ ಆರೋಪ ಹೊರೆಸುವುದಿಲ್ಲ. ಯಾರಾದರೂ ಕ್ಯಾನ್ಸರ್ ನಿಂದ ಸತ್ತರೆ ಮೃತ್ಯುವಿನ ಮೇಲೆ ದೋಷ ಹೊರಿಸುವುದಿಲ್ಲ. ಬದಲಿಗೆ ಕ್ಯಾನ್ಸರ್ ಆತನ ಜೀವ ತೆಗೀತು ಅಂತೇವೆ. ಆಕಸ್ಮಿಕವಾಗಿ ಸತ್ತರೆಂದೂ, ವೃದ್ಧಾಪ್ಯ ಸಾವಿಗೆ ಕಾರಣವಾಯಿತೆಂದೂ ಹೇಳುವ ರೂಢಿ ಇದೆಯೇ ಹೊರತು ಮೃತ್ಯುವನ್ನು ದೂಷಿಸೋದಿಲ್ಲ. ಮೃತ್ಯುವಿಗಿರುವ ಇಂಥದೇ ಅದೃಷ್ಟ ಕಾಂಗ್ರೆಸ್ ಪಕ್ಷಕ್ಕೂ ಇದೆ!

ಕಾಂಗ್ರೆಸ್ ಒಂದು ರೀತಿಯಲ್ಲಿ ಅದೃಷ್ಟದ ಪಕ್ಷ. ಅದು ಎಂದಿಗೂ ಕೆಟ್ಟ ಹೆಸರು ಪಡೆಯುವುದಿಲ್ಲ. ನಾವು ಕಾಂಗ್ರೆಸ್ ವಿರುದ್ಧ ದಾಳಿ ಮಾಡಿದರೆ ವಿಪಕ್ಷಗಳ ಮೇಲೆ ದಾಳಿ ಅಂತ ಮಾಧ್ಯಮದಲ್ಲಿ ಬರುತ್ತದೆ. ಈಗ ನಾನು ಶರದ್ ಪವಾರ್ ವಿರುದ್ಧವೋ, ಮಾಯಾವತಿಯವರ ವಿರುದ್ಧವೋ ಮಾತಾಡಿದರೆ ಅವರ ಹೆಸರನ್ನೇ ಉಲ್ಲೇಖಿಸಿ ಇಂಥವರ ಮೇಲೆ ದಾಳಿ ಮಾಡಲಾಯಿತೆನ್ನುತ್ತಾರೆ. ಆದರೆ ಕಾಂಗ್ರೆಸ್ ಗೆ ಮಾತ್ರ ಎಲ್ಲೂ ದೋಷಿಯಾಗದ ವಿಶಿಷ್ಟ ವರದಾನವಿದೆ.

ನೀವು ನನ್ನ ಕಾರ್ಯವನ್ನು ಮೈಕ್ರೋಸ್ಕೋಪ್ ನಿಂದ ನೋಡುವ ಮೂಲಕ ಪರಾಮರ್ಶಿಸುತ್ತಿದ್ದೀರಿ. ಅದೇ ನೀವು ಅಧಿಕಾರದಲ್ಲಿದ್ದಾಗ ನಿಮ್ಮ ಕಾರ್ಯವೈಖರಿ ಬಗ್ಗೆ ಬೈನಾಕುಲರ್ ಬಳಸಿ ವಿಮರ್ಶೆ ಮಾಡಿದ್ದರೆ ಇನ್ನು ಉತ್ತಮವಾಗಿರುತ್ತಿತ್ತು. ಈ ಕಠಿಣ ಪರಿಶ್ರಮವನ್ನು ಅಧಿಕಾರದಲ್ಲಿದ್ದಾಗಲೇ ಮಾಡಿದ್ದರೆ, ಕಾಂಗ್ರೆಸ್ ಈ ಪರಿಸ್ಥಿತಿಗೆ ತಲುಪುತ್ತಿರಲಿಲ್ಲ. ನಿಮ್ಮಿಂದ ನಾವೇನನ್ನೂ ಪಡೆದಿಲ್ಲ. ನೀವು ಬಿಟ್ಟುಹೋಗಿರುವ ಕೊಳೆಯನ್ನು ಶುದ್ಧ ಮಾಡುತ್ತಾ ದಣಿಯುತ್ತಿದ್ದೇವೆ.

ನಾನು ಮನಮೋಹನ್ ಸಿಂಗ್ ರಂತೆ ಆರ್ಥಿಕ ತಜ್ಞನಲ್ಲ. ಆದರೆ, ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿದ್ದೇನೆ. ಇನ್ನು ರೈತರ ಆದಾಯ 2022ರ ವೇಳೆಗೆ ದುಪ್ಪಟ್ಟಾಗುತ್ತದೆಯೇ ಎಂದು ಪ್ರಶ್ನಿಸಿದರೆ, ಹೌದು, ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆಯನ್ನು ಪರಿಣಾಮವಾಗಿ ಬಳಸಿಕೊಂಡರೆ, ಇದು ಖಂಡಿತ ಸಾಧ್ಯವಾಗಲಿದೆ.’

ಇವೆಲ್ಲ ಹೇಳಿ ಕೊನೆಯಲ್ಲಿ ಮೋದಿಯವರು ಹಿಂದಿ-ಉರ್ದು ಕವಿ ನಿದಾ ಫಜ್ಲಿಯ ಕವಿತೆ ಹೇಳಿದ್ದು ವಿಶೇಷ. ಕವಿತೆ ಒಗಾಯಿಸೋದು ಕಮ್ಯುನಿಸ್ಟ್ ದುರಿತ ಕವಿಗಳಿಗಷ್ಟೇ ಅಲ್ಲ, ನಮ್ಗೂ ಬರುತ್ತೆ ಎಂಬ ಥರದಲ್ಲಿ, ಅಲ್ಲೂ ತಮ್ಮ ವಿರೋಧಿಗಳನ್ನು ಕಣೆಕುವುದಕ್ಕೆ ಸಮೀಕರಿಸಬಲ್ಲ ಸಾಲುಗಳನ್ನೇ ಎತ್ತಿಕೊಂಡರು.

ಪ್ರಯಾಣವೆಂದ ಮೇಲೆ ಬಿಸಿಲು ಸೋಕಿಯೇ ಸಿದ್ಧ, ಹೊರಡುವವರೆಲ್ಲ ಹೊರಡಿ/ ಗುಂಪಿನಲ್ಲಿ ಸೇರಿಕೊಂಡಿಹರೆಲ್ಲರೂ, ಉಮೇದಿದ್ದರೆ ನೀನೂ ಹೊರಡು/ ಯಾರಿಗೋಸುಗವೂ ಇಲ್ಲಿ ದಾರಿ ಬದಲಾಗುವುದಿಲ್ಲ, ನಿನಗೆ ನಿನ್ನನ್ನು ಬದಲಿಸಿಕೊಳ್ಳುವ ವಿಶ್ವಾಸವಿದ್ದರಷ್ಟೇ ಹೊರಡು/ ಇಲ್ಲಿ ಯಾರೂ ನಿನಗಾಗಿ ದಾರಿ ಬಿಟ್ಟುಕೊಡುವುದಿಲ್ಲ, ನನ್ನನ್ನು ತುಳಿದು ನೀನುದ್ಧಾರವಾಗುವೆಯಾದರೆ ಅಭ್ಯಂತರವಿಲ್ಲ..

ಈ ಮೂಲಕ ತಮ್ಮನ್ನು ತುಳಿಯುವ ಗುಂಪು ಎಷ್ಟೋ ಇದೆ, ನೀವು ಈ ಪ್ರಯಾಣದಲ್ಲಿ ಜತೆಗೂಡದಿದ್ದರೂ, ಜತೆಗೆ ಬಂದು ತುಳಿಯಹೊರಟರೂ ತಮ್ಮ ಮಾರ್ಗ ತಮಗೆ ಗೊತ್ತಿದೆ ಎಂಬಂತೆ ಪ್ರಧಾನಿ ಟಾಂಗ್ ಕೊಟ್ಟಂತಿದೆ.

ಮೋದಿ ಉದ್ಧರಿಸಿದ ಕವಿತೆಯನ್ನು ಜಗಜೀತ್ ಸಿಂಗ್ ಕಂಠದಲ್ಲಿ ನೀವು ಕೇಳಬಹುದು.

Leave a Reply