ಭಾರತೀಯ ಸೇನೆಯ ಅಭ್ಯಾಸವರ್ಗವನ್ನು ಸ್ತ್ರೀ ಮುನ್ನಡೆಸಿದ ವಿದ್ಯಮಾನ, ಅರ್ಥಪೂರ್ಣವಾಯ್ತು ಮಹಿಳಾ ದಿನ

ಡಿಜಿಟಲ್ ಕನ್ನಡ ಟೀಮ್

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿಅಭಿಮಾನಕ್ಕೆ ಎಡೆಮಾಡುವ ಸಂಗತಿಯೊಂದು ನಡೆದಿದೆ. ಫೋರ್ಸ್ 18 ಎಂಬ 18 ರಾಷ್ಟ್ರಗಳನ್ನೊಳಗೊಂಡ ಮಿಲಿಟರಿ ಅಭ್ಯಾಸವರ್ಗವೊಂದು ಮಾರ್ಚ್ 8ರಂದು ಪುಣೆಯಲ್ಲಿ ಸಂಪನ್ನಗೊಂಡಿತು. ಇದರಲ್ಲಿ ಭಾರತೀಯ ಸೇನೆಯನ್ನು ಮುನ್ನಡೆಸಿದ್ದು ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ.

ದಕ್ಷಿಣ ಏಷ್ಯಾದ ಹಲವು ರಾಷ್ಟ್ರಗಳು ಹಾಗೂ ಅಮೆರಿಕ, ರಷ್ಯಾ, ನ್ಯೂಜಿಲೆಂಡ್ ಮತ್ತು ಚೀನಾದ ಸೇನೆಗಳೂ ಭಾಗವಹಿಸಿದ್ದ ಅಭ್ಯಾಸವರ್ಗವಿದು. ಇಲ್ಲಿ ಮಾನವ ನೆರವು ಕಾರ್ಯಾಚರಣೆಗಳಲ್ಲಿ ಭಾಗವಹಿಸುವ ತರಬೇತಿ, ಶಾಂತಿಪಾಲನೆ ಕಾರ್ಯಾಚರಣೆ ಇತ್ಯಾದಿ ಅಂಶಗಳ ಬಗ್ಗೆ ವಾರಗಳ ಚಿಂತನ-ಮಂಥನ, ಕವಾಯತುಗಳು ನಡೆದಿವೆ.

ಇಂಥ ಫೋರ್ಸ್ 18 ರಲ್ಲಿ ಭಾರತೀಯ ಸೇನೆಯನ್ನುಮುನ್ನಡೆಸಿದ ಮೊದಲ ಮಹಿಳಾ ಸೇನಾಧಿಕಾರಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ.

sophia

ಗುಜರಾತ್ ನ ವಡೋದರ ಮೂಲದವರಾದ ಖುರೇಷಿ ಅವರು 1999 ರಲ್ಲಿ ಸಿಗ್ನಲ್ ಕಾರ್ಪ್ ಮೂಲಕ ಕಾರ್ಯಾರಂಭ ಮಾಡಿದರು. ಇದರಲ್ಲೆ ದೇಶ ಮತ್ತು ವಿದೇಶಗಳ ವಿವಿಧ ಸ್ಥಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಸೇನೆಗೆ ಎರಡನೆ ಬ್ಯಾಚ್ ನ ಮಹಿಳಾ ಅಧಿಕಾರಿಯಾಗಿ ಸೇರ್ಪಡೆಗೊಂಡು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಮಿಲಿಟರಿ ವೀಕ್ಷಕರಾಗಿ ನಿಯೋಜನೆಗೊಂಡರು. 2006ರಲ್ಲಿ ಡಿಸಿಆರ್ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಂಸಾತ್ಮಕ ವಾತಾವರಣವಿದ್ದಾಗ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯಲ್ಲಿ ಇವರ ಪಾತ್ರ ಹಿರಿದಾಗಿತ್ತು.

ಸೇನೆ- ನಾಗರಿಕ ಸಹಕಾರದ ಯೋಜನೆಯಡಿ ದಕ್ಷಿಣ ಆಫ್ರಿಕಾದ ಶಾಂತಿಪಾಲನ ವಿಭಾಗಕ್ಕೆ ತರಬೇತಿ ಅಧಿಕಾರಿಯಾಗಿ ನಾಮನಿರ್ದೇಶನಗೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಈಕೆಯದ್ದು. ಕಾಂಬೋಡಿಯನ್ ಸೇನೆಯ ಯುಎನ್ ತರಬೇತಿ ತಂಡಕ್ಕೆ ಬೋಧಕರಾಗಿ ನಾಮನಿರ್ದೇಶನಗೊಂಡ ಮೊದಲ ಮಹಿಳೆ ಎಂಬ ಪ್ರಶಂಸೆಯ ಪ್ರಮಾಣ ಪತ್ರ ಲಭಿಸಿದೆ.

ಶಾಂತಿಪಾಲನೆ ತುಂಬ ಪ್ರಯಾಸದ ಕೆಲಸ ಎಂಬುದು ಖುರೇಷಿ ಅವರ ಅಭಿಮತ. ಏಕೆಂದರೆ ಶಾಂತಿಪಾಲನೆ ಮತ್ತು ಸಂಘರ್ಷದ ನಡುವಿನ ತೆಳುಗೆರೆಯನ್ನು ಅರ್ಥಮಾಡಿಕೊಂಡು ನಿಭಾಯಿಸುವುದು ಹಾಗೂ ಆ ಸಂದರ್ಭದಲ್ಲಿ ತಮ್ಮನ್ನು ತಾವು ಕಾಪಾಡಿಕೊಳ್ಳುವುದು ಸವಾಲಿನದ್ದಾಗಿರುತ್ತದೆ ಎನ್ನುತ್ತಾರವರು.

ದೆಹಲಿಯಲ್ಲಿರುವ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆ ಕೇಂದ್ರದ ಕರ್ತವ್ಯದಲ್ಲಿ 2010ರಿಂದಲೂ ತೊಡಗಿಸಿಕೊಂಡಿದ್ದ ಇವರು, ಇಲ್ಲಿ ಅಂತಾರಾಷ್ಟ್ರೀಯ ವೀಕ್ಷಕರು ಮತ್ತು ಸೇನಾಧಿಕಾರಿಗಳನ್ನು ತರಬೇತುಗೊಳಿಸುತ್ತಾರೆ.

ದೇಶ- ವಿದೇಶಗಳಲ್ಲಿ ತಮ್ಮ ಕರ್ತವ್ಯ ನಿಭಾವಣೆ ಬಗ್ಗೆ ಸಂತೃಪ್ತಿ ಸೂಸುವ ಇವರು, ಸೇನೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಲಿ ಎಂಬ ಅಂಶವನ್ನು ಪ್ರತಿಪಾದಿಸುವವರಲ್ಲಿ ಮುಂಚೂಣಿಯಲ್ಲಿರುವವರು. ದೇಶಪ್ರೇಮದ ಭಾವನೆ ಪುರುಷರಲ್ಲಿರುವಂತೆ, ಮಹಿಳೆಯರಲ್ಲೂ ಸಹಜವಾಗಿರುತ್ತದೆ. ಹೀಗಿರುವಾಗ ಸ್ತ್ರೀಯರು ಸೇನಾ ಸಮವಸ್ತ್ರ ಧರಿಸುವುದು ವಿಸ್ಮಯದ ಸಂಗತಿಯೇನೂ ಆಗಬೇಕಿಲ್ಲಎನ್ನುವ ಇವರು, ಈ ಬಗ್ಗೆ ಶಾಲೆ- ಕಾಲೇಜುಗಳ ಮಟ್ಟದಲ್ಲಿ ವಿಚಾರಗಳನ್ನು ಹರಡಬೇಕಿದೆ ಅಂತಾರೆ.

Leave a Reply