ವಿಜಯ್ ಮಲ್ಯ ಪರಾರಿ, ಛೇ… ಇದೆಂಥ ವ್ಯವಸ್ಥೆರೀ?

 

ಡಿಜಿಟಲ್ ಕನ್ನಡ ಟೀಮ್

‘ನಮಗೆ ಗೊತ್ತಿರುವ ಮಾಹಿತಿಗಳ ಪ್ರಕಾರ ವಿಜಯ್ ಮಲ್ಯ ದೇಶ ತೊರೆದಿದ್ದಾರೆ. ಅವರು ಲಂಡನ್ ನಲ್ಲಿ ಇರುವ ಬಗ್ಗೆ ಸಿಬಿಐನಿಂದ ಮಾಹಿತಿ ಸಿಕ್ಕಿದೆ.’ ಹಾಗಂತ ಕೇಂದ್ರ ಸರ್ಕಾರವೇ ಸುಪ್ರೀಂಕೋರ್ಟ್ ಗೆ ಬುಧವಾರ ಹೇಳಿದಂತಾಗಿದೆ.

ಸುಪ್ರೀಂಕೋರ್ಟ್ ವಿಚಾರಣೆ ವೇಳೆ, ವಿಜಯ್ ಮಲ್ಯ ಈಗ ಎಲ್ಲಿದ್ದಾರೆ ಎಂಬ ಕುರಿತೇನಾದರೂ ಮಾಹಿತಿ ಇದೆಯಾ ಅಂತ ನ್ಯಾಯಾಲಯವು, ಬ್ಯಾಂಕ್ ಗಳ ಗುಂಪನ್ನು ಪ್ರತಿನಿಧಿಸುತ್ತಿರುವ ಅಟಾರ್ನಿ ಜನರಲ್ ಮುಕುಲ್ ರೋಹ್ತಗಿ ಅವರನ್ನು ವಿಚಾರಿಸಿದಾಗ ಅವರು ಈ ಮೇಲಿನ ಮಾಹಿತಿ ತಿಳಿಸಿದ್ದಾರೆ.

ವಿಜಯ್ ಮಲ್ಯ ತನ್ನ ಯುಬಿ ಪಾಲನ್ನು ಡಿಯಾಗೋ ಎಂಬ ಕಂಪನಿಗೆ ಮಾರಿ, ಅವರಿಂದ 500 ಚಿಲ್ಲರೆ ಕೋಟಿ ರುಪಾಯಿಗಳನ್ನು ಪಡೆಯುವ ಹಂತದಲ್ಲಿ ಎಸ್ ಬಿ ಐ ಮಧ್ಯಪ್ರವೇಶ ಮಾಡಿತು. ಒಪ್ಪಂದದ ಈ ಹಣ ಮಲ್ಯಗೆ ಸಿಗುವಂತಿಲ್ಲ. ಏಕೆಂದರೆ ವಿಜಯ್ ಮಲ್ಯಗೆ ನೀಡಿದ್ದ ಸಾಲ ಮರುಪಾವತಿ ಆಗಿಲ್ಲ. ಹೀಗಾಗಿ ಆಸ್ತಿ ಮಾರಾಟದ ಪಾಲಿಗೆ ಹೆಚ್ಚಿನ ಮೊತ್ತದ ಸಾಲ ಕೊಟ್ಟ ತಾನೇ ಮೊದಲ ಹಕ್ಕುದಾರನಾಗುತ್ತೇನೆ ಎಂಬುದು ಸ್ಟೇಟ್ ಬ್ಯಾಂಕ್ ಇಂಡಿಯಾ ವಾದ. ಅದಕ್ಕೆ ಮನ್ನಣೆ ಸಿಕ್ಕು ಮಲ್ಯಗೆ ಡಿಯಾಗೋದಿಂದ ಬರಬೇಕಿದ್ದ ಹಣ ತಾತ್ಕಾಲಿಕ ಜಪ್ತಿಯಾಗಿದೆ. ಇನ್ನೂ 16 ಬ್ಯಾಂಕುಗಳು ವಿಜಯ ಮಲ್ಯರಿಂದ ಬರಬೇಕಿದ್ದ ಹಣ ಪಡೆಯುವುದಕ್ಕೆ ಸರತಿ ಸಾಲಿನಲ್ಲಿ ನಿಂತಿವೆ.

ಇದೇ ಎಸ್ ಬಿ ಐ ನೇತೃತ್ವದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳೆಲ್ಲ ಸೇರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ, ಉದ್ದೇಶಪೂರ್ವಕ ಸುಸ್ತಿದಾರ ವಿಜಯ ಮಲ್ಯರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಅನುಮತಿ ಕೇಳಿದವು. ಸರಿ, ಈ ಬಗ್ಗೆ ಪ್ರತಿಕ್ರಿಯೆಗೆ ಆರೋಪಿಗೆ ನೋಟೀಸ್ ನೀಡುವುದರಿಂದ ನ್ಯಾಯಾಂಗದ ಪ್ರಕ್ರಿಯೆಗಳು ಶುರುವಾಗಬೇಕಲ್ಲ? ಆಗಲೇ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್ ಮತ್ತು ರೋಹಿನ್ಟನ್ ನಾರಿಮನ್ ಅವರಿಗೆ ಅನುಮಾನ ಕಾಡಿದ್ದು. ವಿಜಯ್ ಮಲ್ಯಗೆ ಈ ಸಂಬಂಧ ಉತ್ತರ ಕೊಡುವಂತೆ ನೋಟೀಸ್ ಜಾರಿಮಾಡಬೇಕಾದ ವಿಳಾಸವಾದರೂ ಯಾವುದು ಅಂತ! ಆಗ ಅಟಾರ್ನಿ ಜನರಲ್ ಹೇಳಿದರು- ‘ಸಿಬಿಐ ಹೇಳೋ ಪ್ರಕಾರ ಅವರು ಲಂಡನ್ ನಲ್ಲಿದ್ದಾರೆ. ಅಲ್ಲದೇ ಇಂಗ್ಲೆಂಡ್ ನಲ್ಲಿ ಅವರಿಗೆ ಅಪಾರ ಆಸ್ತಿಪಾಸ್ತಿ ಇರುವುದರಿಂದ ಅಲ್ಲಿಗೇ ಹೋಗಿರೋದು ಅಂತ ಹೇಳಬಹುದು. ಇಷ್ಟಕ್ಕೂ ನಮಗೆ ಅವರನ್ನು ಬೇಟೆಯಾಡಿಬಿಡುವ ಉದ್ದೇಶವೇನಿಲ್ಲ. ಕುಳಿತು ಮಾತಾಡಿ, ನಮ್ಮ ಹಣ ಹಿಂದಕ್ಕೆ ಪಡೆದುಕೊಳ್ಳಬೇಕಷ್ಟೆ. ಹೀಗಾಗಿ ಘನ ನ್ಯಾಯಾಲಯ ನೋಟೀಸ್ ನೀಡಬೇಕು’.

ಆಸ್ತಿಗಳೆಲ್ಲ ವಿದೇಶಗಳಲ್ಲೇ ಇವೆ ಅಂತೀರಾ. ಹಾಗಾದರೆ ಈ ಮನುಷ್ಯನಿಗೆ ಸಾಲ ನೀಡುವಾಗ ನಿಮ್ಮ ಬ್ಯಾಂಕುಗಳು ಯಾವ ಭದ್ರತೆ ಇಟ್ಟುಕೊಂಡಿದ್ದವು ಅಂತ ನ್ಯಾಯಮೂರ್ತಿಗಳು ಪ್ರಶ್ನಿಸಿದರು. ‘ಆ ಸಮಯಕ್ಕೆ ಕಿಂಗ್ ಫಿಷರ್ ಏರ್ ಲೈನ್ಸ್ ಬ್ರಾಂಡ್ ಕೋಟ್ಯಂತರ ರುಪಾಯಿ ಬೆಲೆಬಾಳುತ್ತಿತ್ತು. ನಂತರ ಮಹಾಪತನವಾಗಿಹೋಯ್ತು’ ಅಂತ ರೋಹ್ತಗಿ ಬ್ಯಾಂಕುಗಳ ಪರವಾಗಿ ಸಮಜಾಯಿಷಿ ಕೊಟ್ಟರು.

ಇವೆಲ್ಲ ಕೇಳಿದ ಮೇಲೆ ಸುಪ್ರೀಂಕೋರ್ಟ್, ಮಲ್ಯ ಒಡೆತನದ ಯುನೈಟೆಡ್ ಬ್ರೂವರೀಸ್ ಹೋಲ್ಡಿಂಗ್ ಲಿಮಿಟೆಡ್, ಅವರ ವಕೀಲರು, ಇಂಗ್ಲೆಂಡ್ ನ ಭಾರತೀಯ ದೂತಾವಾಸ ಹಾಗೂ ಮಲ್ಯರ ರಾಜ್ಯಸಭೆ ಸದಸ್ಯ ಸ್ಥಾನದ ಇಮೈಲ್ ಐಡಿ ಇವುಗಳಿಗೆ ನೋಟೀಸ್ ಜಾರಿ ಮಾಡಿದೆ. ಎರಡು ವಾರಗಳಲ್ಲಿ ಉತ್ತರಿಸುವಂತೆ ಹೇಳಿ, ಮಾರ್ಚ್ 30ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದೆ.

ಮಲ್ಯ ಮಹಾತ್ಮೆ, ನೀವು ಓದಿಕೊಳ್ಳಬೇಕಾದ ಸಂಗತಿಗಳು

ಸಾಲ ತೀರಿಸಲಾಗದ ಮಲ್ಯ ಆಸ್ತಿಗಳ ಪಟ್ಟಿ

ಮೈಮೇಲೆ ಸಾಲವಿದ್ದರೂ ಮಲ್ಯ ಮೋಜಿಗೇನು ಕಡಿಮೆಯಾಗಿಲ್ಲ

ಇವಿಷ್ಟು ಸುಪ್ರೀಂಕೋರ್ಟ್ ನಲ್ಲಿ ತಿಳಿದಿದ್ದು. ಅಲ್ಲಿಗೆ, 9 ಸಾವಿರ ಕೋಟಿ ರುಪಾಯಿಗಳ ಸಾಲ ಇಟ್ಟುಕೊಂಡು ವಿಜಯ್ ಮಲ್ಯ ವಿದೇಶಕ್ಕೆ ಪರಾರಿ. ಐಪಿಎಲ್ ಹಗರಣದಲ್ಲಿ ಹೆಸರು ಕೇಳಿಬಂದೊಡನೆ ಹೀಗೆಯೇ ಲಂಡನ್ ಮಾರ್ಗ ಹಿಡಿದ ಲಲಿತ್ ಮೋದಿ, ಅದೇನ್ ಕಿತ್ಕೋತೀರೋ ಕಿತ್ಕೋಳಿ ಅನ್ನೋ ಥರ ನಡೆದುಕೊಳ್ತಿದ್ದಾರೆ. ಈಗ ಆ ಸಾಲಿಗೆ ವಿಜಯ್ ಮಲ್ಯ ಸೇರ್ಪಡೆ. ಸರ್ಕಾರಿ ಬ್ಯಾಂಕ್ ಗಳ ಅರ್ಥಾತ್ ಸಾರ್ವಜನಿಕರ ಹಣ ವಸೂಲಾಗೋದು ಇನ್ಯಾವ ಕಾಲಕ್ಕೋ? ಆದರೆ ಮಲ್ಯ ಉಳಿಸಿಹೋಗಿರೋದು ಪ್ರಶ್ನೆಗಳನ್ನು ಮಾತ್ರ.

ಒಬ್ಬ ಸಾಮಾನ್ಯ ವ್ಯಕ್ತಿ ಸಾಲ ತೆಗೆದುಕೊಂಡರೆ ಆತ ಒಂದು ಕಂತು ತಡಮಾಡಿದರೂ ಇನ್ನಿಲ್ಲದ ಒತ್ತಡ ಹೇರಲಾಗುತ್ತದೆ. ಮುಖ ಉಳಿಸಿಕೊಳ್ಳಲು ಆತ್ಮಹತ್ಯೆ ಮಾಡಿಕೊಂಡವರೂ ಎಷ್ಟೋ ಮಂದಿ. ಹೀಗಿರುವಾಗ ಮಲ್ಯ ಮರುಪಾವತಿ ಕೆಟ್ಟಸಾಲವೆಂದು ಪರಿಗಣಿತವಾಗಿ ನಾಲ್ಕು ವರ್ಷಗಳ ನಂತರವೂ ಈ ವ್ಯವಸ್ಥೆ ಆತನನ್ನು ಆರಾಮಾಗಿ ಪಾರ್ಟಿ ಮಾಡಿಕೊಂಡಿರಲು ಬಿಟ್ಟಿದ್ದೇಕೆ? ಮೋದಿ ಸರ್ಕಾರ ಬಂದ ನಂತರ ಒಬ್ಬ ರಘುರಾಮ್ ರಾಜನ್ ಗುಟುರುಹಾಕಿದ ನಂತರವಷ್ಟೇ ಬ್ಯಾಂಕ್ ಗಳು ವಸೂಲಿಗೆ ಆಕ್ರಮಣಶೀಲತೆ ತೋರಿಸಿದವು. ಇದಕ್ಕೂ ಮೊದಲು ಅವುಗಳನ್ನು ಕಟ್ಟಿಹಾಕಿದ್ದ ಅಂಶ ಯಾವುದಾಗಿತ್ತು? ಕ್ಷುಲ್ಲಕ ರಾಜಕೀಯಕ್ಕೆ ಅಣಿಯಾಗುತ್ತಿರುವ ಕನ್ಹಯ್ಯ ಕುಮಾರ್ ಅಂಥವರ ಬಗ್ಗೆ ಭಾವನಾತ್ಮಕವಾಗಿ ಮಾತನಾಡುವ ರಾಹುಲ್ ಗಾಂಧಿ ಮತ್ತು ಪ್ರತಿಪಕ್ಷದವರಿಗೆ ವಿಜಯ್ ಮಲ್ಯ ಬಗ್ಗೆ ಪ್ರಶ್ನೆ ಎತ್ತಬೇಕಾದ ತುರ್ತು ಕಾಣಲೇ ಇಲ್ಲವೇ? ಇಷ್ಟಕ್ಕೂ ಮಲ್ಯ ಸೇರಿದಂತೆ ಹಲವರ ಕೆಟ್ಟಸಾಲಗಳು ಕೊಬ್ಬಿದ್ದು ಇವರ ಅವಧಿಯಲ್ಲೇ ಅಲ್ಲವೇ? ಎಲ್ಲ ವಿಷಯಗಳಲ್ಲೂ ಒಂದೊಂದು ಸೈಡ್ ತೆಗೆದುಕೊಳ್ಳುವ ರಾಜಕೀಯ ಪಕ್ಷಗಳ ನೇತಾರರು ವಿಜಯ್ ಮಲ್ಯ ವಿಷಯದಲ್ಲಿ ಖಡಾಖಡಿ ಮಾತಾಡಿದ್ದನ್ನು ಯಾರಾದರೂ ಕೇಳಿದ್ದೀರಾ?

ಮಾರ್ಚ್ 2ರಂದೇ ವಿಜಯ ಮಲ್ಯ ಲಂಡನ್ನಿಗೆ ಹೋಗಿದ್ದು ಖಾತ್ರಿಯಾಗಿದೆಯಂತೆ. ಎಲ್ಲವನ್ನೂ ಖಾತ್ರಿ ಮಾಡಿಕೊಂಡು ತಮಾಷೆ ನೋಡಿಕೊಂಡಿರುವುದಕ್ಕಿವೆಯಾ ನಮ್ಮ ಏಜೆನ್ಸಿಗಳು? ಉದ್ದೇಶಪೂರ್ವಕ ಸುಸ್ತಿದಾರ ಅಂತ ಘೋಷಣೆಯಾಗುತ್ತಲೇ ಆತನ ಮೇಲೊಂದು ಕಣ್ಣಿಡಬೇಕಿತ್ತಲ್ಲವೇ?

ಇನ್ನುಕೆಲದಿನಗಳಲ್ಲಿ ವಿಜಯ ಮಲ್ಯ- ಲಲಿತ್ ಮೋದಿ ಆಜೂಬಾಜು ಕುಳಿತುಕೊಂಡು ನಿರ್ಭಿಡೆಯಿಂದ ಪೋಸು ಕೊಟ್ಟಾರು. ನಮ್ಮ ರಾಷ್ಟ್ರೀಯ ವಾಹಿನಿಗಳು ಅಲ್ಲಿಗೆ ಹೋಗಿ ಸಂದರ್ಶನ ಮಾಡಿಕೊಂಡುಬಂದು ಪುನೀತರಾಗುತ್ತವೆ. ಇಲ್ಲಿ ನಿಯತ್ತಿನಿಂದ ದುಡಿಯುವವ ಮಾತ್ರ ದಣಿದುಕೊಂಡಿರುತ್ತಾನೆ.

ಮಲ್ಯನನ್ನು ಮತ್ತೆ ಭಾರತಕ್ಕೆ ಕರೆತಂದು ಹಣ ಕಕ್ಕಿಸುವುದು ಅಷ್ಟರಲ್ಲೇ ಇದೆ. ಕೊನೆಪಕ್ಷ, ಇಂಥ ಮಲ್ಯನನ್ನು ಉದ್ದೇಶಪೂರ್ವಕ ಸುಸ್ತಿದಾರನಾಗಿ ಬೆಳೆಸುವುದಕ್ಕೆ ಸಹಕರಿಸಿದ ವ್ಯವಸ್ಥೆಯಲ್ಲಿ ಕೆಲವರಿಗಾದರೂ ಶಿಕ್ಷೆಯಾದರೆ, ಲಗಾಮಿಲ್ಲದ ಬಂಡವಾಳಶಾಹಿಗೆ ಎಚ್ಚರಿಕೆ ಕೊಟ್ಟಂತಾಗುತ್ತದೆ.

Leave a Reply