ಶ್ರೀ ಶ್ರೀ ಉತ್ಸವಕ್ಕೆ ಮುಕ್ತವಾಯ್ತು ಯಮುನೆ ದಡ, ಆದ್ರೆ ₹5 ಕೋಟಿ ದಂಡ… ನೀವು ತಿಳಿಯಬೇಕಿರುವ ಪ್ರಮುಖಾಂಶಗಳಿಲ್ಲಿವೆ

ಡಿಜಿಟಲ್ ಕನ್ನಡ ಟೀಮ್

ಯಮುನಾ ನದಿ ದಡದಲ್ಲಿ ವಿಶ್ವ ಸಾಂಸ್ಕೃತಿಕ ಹಬ್ಬ ಆಯೋಜಿಸಿ ವಿವಾದ ಸೃಷ್ಟಿಸಿದ್ದ ಆಧ್ಯಾತ್ಮಿಕ ಗುರು ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲೀವಿಂಗ್ ಫೌಂಡೇಷನ್ ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 5 ಕೋಟಿ ದಂಡ ವಿಧಿಸಿದೆ. ಕಾರ್ಯಕ್ರಮ ನಡೆಸುವುದಕ್ಕೆ ಶರತ್ತುಗಳನ್ನು ವಿಧಿಸಿ ಅನುಮತಿ ನೀಡಿದೆ. ಈ ವಿಚಾರವಾಗಿ ಬುಧವಾರ ನಡೆದ ಪ್ರಮುಖ ಅಂಶಗಳು ಹೀಗಿವೆ.

 • ಕಾರ್ಯಕ್ರಮದ ವೇಳೆ ನದಿಯ ಪರಿಸರಕ್ಕೆ ಸಂಭವಿಸುವ ಹಾನಿಯನ್ನು ಮನಗಂಡು ನ್ಯಾಯಮಂಡಳಿ ಆಯೋಜಕರಿಗೆ ₹5 ಕೋಟಿ ದಂಡ ವಿಧಿಸಿದೆ. ಅಂದಹಾಗೆ, ಈ ಕಾರ್ಯಕ್ರಮ ಆಯೋಜನೆಗೆ ತನಗೆ 26 ಕೋಟಿ ರುಪಾಯಿಗಳ ವೆಚ್ಚವಾಗುತ್ತಿದೆ ಎಂದು ಸಂಸ್ಥೆ ನ್ಯಾಯಮಂಡಳಿ ಮುಂದೆ ಹೇಳಿದೆ.
 • ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ)ಕ್ಕೆ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದ ಮಂಡಳಿ ಮುಂದೆಂದೂ ಇಂತಹವುಗಳಿಗೆ ಅನುಮತಿ ನೀಡದಂತೆ ಆದೇಶಿದೆ. ಡಿಡಿಎಗೆ 5 ಲಕ್ಷ ಪಾವತಿಸುವಂತೆ ಸೂಚಿಸಿದೆ.
 • ಸುರಕ್ಷತೆಯ ಕೊರತೆಯಿಂದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅನುಮಾನವಿದೆ. ಮಂಗಳವಾರವಷ್ಟೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಭಾಗವಹಿಸುವುದಿಲ್ಲ ಎಂದು ಅಧಿಕೃತವಾಗಿ ಘೋಷಿಸಿದ್ದರು.
 • 150 ದೇಶಗಳಿಂದ ಬರುವ 35 ಸಾವಿರ ಕಲಾವಿದರು ಮತ್ತು ಪ್ರವಾಸಿಗರಿಗೆ 7 ಎಕರೆ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಬೃಹತ್ ವೇದಿಕೆ ಸುರಕ್ಷಿತವಲ್ಲ ಎಂಬ ಆರೋಪಗಳೂ ಕೇಳಿಬಂದಿವೆ.
 • ಕಾರ್ಯಕ್ರಮವನ್ನು ಬಿಜೆಪಿ ಸರ್ಕಾರದ ನೇತಾರರೆಲ್ಲ ಸಮರ್ಥಿಸಿಕೊಳ್ಳುತ್ತಿದ್ದರೂ ಇಲ್ಲಿ ಸರ್ಕಾರದ ಪಾಲ್ಗೊಳ್ಳುವಿಕೆಯ ಸ್ಪಷ್ಟ ಚಿತ್ರಣ ಸಿಕ್ಕಿರಲಿಲ್ಲ. ನ್ಯಾಯಮಂಡಳಿ ಪ್ರಕರಣವನ್ನು ಆಲಿಸುತ್ತಿದ್ದ ಸಂದರ್ಭದಲ್ಲಿ, ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರವು ₹2.55 ಕೋಟಿ ನೀಡಿರುವುದು ತಿಳಿದುಬಂದಿದೆ.
 • ಏಳು ಫುಟ್ಬಾಲ್ ಮೈದಾನದಷ್ಟು ವಿಸ್ತಿರ್ಣದ ವೇದಿಕೆ, ತಾತ್ಕಾಲಿಕ ಸೇತುವೆಗಳು, ಎತ್ತರದ ಗೋಪುರಗಳು ಮತ್ತು ವಾಹನ ನಿಲ್ದಾಣ ಸೇರಿದಂತೆ ಒಟ್ಟು 1000 ಎಕರೆ ಪ್ರದೇಶದಲ್ಲಿ ಕಾರ್ಯಕ್ರಮ ನಡೆಯಲಿದೆ.
 • ನದಿಯ ಪ್ರವಾಹ ಸ್ಥಳದಲ್ಲಿ ನಿರ್ಮಾಣ ಚಟುವಟಿಕೆಗಳು ಕಾಣುತ್ತಿವೆ. ಇದಕ್ಕೆ ಹೇಗೆ ಅನುಮತಿ ನೀಡಿದಿರಿ ಎಂದು ಮಂಡಳಿ ಸರ್ಕಾರವನ್ನು ಪ್ರಶ್ನಿಸಿತು.
 • ಕಾರ್ಯಕ್ರಮಕ್ಕೆ ಜಲಸಂಪನ್ಮೂಲ ಸಚಿವಾಲಯದ ಕಡೆಯಿಂದ ಅನುಮತಿ ಇಲ್ಲವೇ ಅನುಮತಿ ನಿರಾಕರಣೆಯಂಥ ಯಾವ ಪ್ರಕ್ರಿಯೆಗಳೂ ಆಗಿಲ್ಲ ಎಂದು ಸಚಿವೆ ಉಮಾಭಾರತಿ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ.
 • ಲೋಕಸಭೆ ಮತ್ತು ರಾಜ್ಯಸಭೆಯಲ್ಲೂ ಕಾರ್ಯಕ್ರಮಕ್ಕೆ ಯಮುನಾ ನದಿಯ ಪ್ರವಾಹ ಸ್ಥಳದಲ್ಲಿ ಅವಕಾಶ ನೀಡಿದ್ದಕ್ಕೆ ಹಾಗೂ ಸೇನೆಯನ್ನು ಬಳಸಿಕೊಂಡಿದಕ್ಕೆ ಪ್ರತಿ ಪಕ್ಷಗಳಿಂದ ಪ್ರತಿಭಟನೆ ಮತ್ತು ಆಕ್ಷೇಪಣೆಗಳನ್ನು ಸರ್ಕಾರ ಎದುರಿಸುವಂತಾಯಿತು.
 • ಎಲ್ಲಾ ಪಕ್ಷಗಳಿಗೂ ನಾನು ಮನವಿ ಮಾಡಿಕೊಳ್ಳುತ್ತೇನೆ #WCF2016 ರಲ್ಲಿ ರಾಜಕೀಯ ಮಾಡಬೇಡಿ. ಇದು ಎಲ್ಲಾ ಸಂಸ್ಕೃತಿಗಳ, ರಾಷ್ಟ್ರಗಳ, ಧರ್ಮಗಳ ಮತ್ತು ಸಿದ್ಧಾಂತಗಳನ್ನು ಒಟ್ಟುಗೂಡಿಸಲಿರುವ ಕಾರ್ಯಕ್ರಮ. ಇದಕ್ಕೆ ನೀವು ಕೈಜೊಡಿಸಿ ಎಂದು ರವಿಶಂಕರ್ ಗುರೂಜಿ ಟ್ವೀಟರ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
 • ನದಿ ಮಾಲಿನ್ಯದ ಬಗ್ಗೆ ದಾಖಲೆಗಳನ್ನು ನೀಡದ್ದಕ್ಕೆ ಎನ್ ಜಿ ಟಿ ದೆಹಲಿ ವಾಯುಮಾಲಿನ್ಯ ನಿಯಂತ್ರಣ ಸಮಿತಿ (ಡಿಡಿಸಿಸಿ) ಗೆ 1 ಲಕ್ಷ ದಂಡ ವಿಧಿಸಿದೆ.

Leave a Reply