ಸಮಾನತೆ ಅಂದರೆ ಗಂಡಿನಂತೆ ಆಗುವುದಲ್ಲ, ಬದಲಿಗೆ ಆತ್ಮಗೌರವದಿಂದ ಬದುಕುವುದು..!

author-geethaಗೀತಾ ಬಿ.ಯು.

ಮಾರ್ಚ್ 8, ಅಂತಾರಾಷ್ಟ್ರೀಯ ಮಹಿಳಾ ದಿನ. ನಾನೇ ನಾಲ್ಕು ಕಡೆ ಭಾಷಣ ಮಾಡಲು ಹೋಗಿದ್ದೆ.

ಮಹಿಳಾ ಸಂಘಗಳಲ್ಲಿ ಭಾಷಣ, ಮಹಿಳೆಯರಿಗೆ ಹೂವು, ಸೀರೆ, ಒಡವೆಗಳ ಕಾಣಿಕೆ. ‘ನೋಡಿ ನಿಮಗೆ ವರ್ಷದಲ್ಲಿ ಒಂದು ದಿನವಾದರೂ ಇದೆ. ನಮಗೆ ಇಲ್ಲವೇ ಇಲ್ಲ’ ಎಂದು ಪುರುಷ ಸ್ನೇಹಿತರ ವ್ಯಂಗ್ಯ ಹಾಸ್ಯ..! ಕಳೆದ ವರ್ಷ ಒಂದು ಮಹಿಳಾ ಸಂಘದಲ್ಲಿ ಅಂದಿನ ಕಾರ್ಯಕ್ರಮಕ್ಕೆ ವಿಶಿಷ್ಠ ಕೇಶಾಲಂಕಾರ ಮಾಡಿಕೊಂಡು ಬರಲು ಸದಸ್ಯರಿಗೆ ಸೂಚಿಸಲಾಗಿತ್ತು. ಇನ್ನೊಂದು ಕಡೆ ಯಾವ ಬಣ್ಣದ ಸೀರೆ ಉಟ್ಟು ಬರಬೇಕು ಎಂಬುದು ಕಾರ್ಯಕ್ರಮದ ಹೈಲೈಟ್ಸ್! ಸೆಲೆಬ್ರೇಷನ್ಸ್, ಸಾಧಕ ಮಹಿಳೆಯರಿಗೆ ಸನ್ಮಾನ, ಸೀರೆ, ಒಡವೆ, ಪರ್ಸು, ಶೂ ಅಂಗಡಿಗಳಲ್ಲಿ ಮಹಿಳೆಯರಿಗೆ ಡಿಸ್ಕೌಂಟ್..! ಪಬ್ ಗಳಲ್ಲಿ ಒಂದು ಡ್ರಿಂಕ್ ಕಾಂಪ್ಲಿಮೆಂಟರಿ! ಮಹಿಳೆಯ ಸೇವೆ, ತ್ಯಾಗಗಳ ಕುರಿತು ಕವನ ಲೇಖನ. ಎಲ್ಲಾ ಚಾನೆಲ್ಲುಗಳಲ್ಲಿ ಮಹಿಳೆಯರ ಕುರಿತಾದ ಚರ್ಚೆ, ಮಾತು ಕಥೆ. ನಮ್ಮ ಪಾರ್ಲಿಮೆಂಟಿನಲ್ಲಿ ಕೂಡ ಮಹಿಳಾ ಸಂಸದರದೇ ಮಾತು, ಭಾಷಣ.

ಇದ್ಯಾವುದನ್ನು ನಾನು ತಪ್ಪು ಎಂದು ಹೇಳುತ್ತಲೇ ಇಲ್ಲ. ತಪ್ಪು ಅಲ್ಲ ಕೂಡ.

ಆದರೆ ಒಮ್ಮೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹುಟ್ಟು ಹಾಗೂ ಅದು ನಡೆದು ಬಂದ ದಾರಿ ಹಾಗೂ ಅದರ ಉದ್ದೇಶದತ್ತ ಗಮನಹರಿಸಬಹುದೇನೋ.. ಶತಮಾನದ ಮೇಲೆ ಕೆಲವು ವರ್ಷಗಳು ಕಳೆದಿವೆ.. ಹಲವು ಶತಮಾನಗಳ ತುಳಿತದ ವಿರುದ್ಧ ದನಿಯೆತ್ತಿ.

ಶುರುವಾಗಿದ್ದು ಸಮಾನ ವೇತನದ ಬೇಡಿಕೆಯೊಂದಿಗೆ. ರಷ್ಯಾ ಹಾಗೂ ಡೆನ್ಮಾರ್ಕಿನ ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ. ‘ಇಂಟರ್ ನ್ಯಾಷನಲ್ ಗಾರ್ಮೆಂಟ್ ವುಮೆನ್ಸ್ ವರ್ಕರ್ಸ್ ಯುನಿಯನ್’ ಎಂಬ ಅಸೋಸಿಯೇಷನ್ ಅಡಿ.

ಸಮಾನ ಅವಕಾಶ, ಸಮಾನ ವೇತನ.. ಶತಮಾನದ ಹಿಂದಿನ ಬೇಡಿಕೆಯೂ ಅದೇ.. ಇಂದಿನ ಬೇಡಿಕೆಯೂ ಅದೇ.. ಬೇಡಿಕೆ ಆಗಿರುವುದರಿಂದ ನೆರವೇರಿಯೇ ಇಲ್ಲವೇನೋ.. ಬೇಡಿಕೆ ಎಂದು ವರ್ಷವಿಡೀ ಕೆಲಸ ಮಾಡದೇ ಕೂರಲು ಆಗುವುದಿಲ್ಲ.. ವರ್ಷದಲ್ಲಿ ಒಂದು ದಿನ ಪ್ರಪಂಚದ ಗಮನ ತಮ್ಮೆಡೆಗೆ, ತಮಗಾಗಿರುವ ಅನ್ಯಾಯದೆಡೆಗೆ ಸೆಳೆಯಲು ಶುರುವಾಗಿದ್ದು ಮಹಿಳಾ ದಿನಾಚರಣೆ. ಗೆದ್ದದ್ದು ಕೆಲವು, ಹೋರಾಟ ಮುಂದುವರಿದಿರುವುದು ಹಲವು ವಿಚಾರಗಳಿಗೆ. ಗಮನ ಇತ್ತ ಹರಿದಿದೆ, ಪ್ರಪಂಚ ನಿಂತು, ತಿರುಗಿ ನೋಡಿದೆ, ಗಮನಿಸಿದೆ, ವಿಷಯ ಹರಡಿದೆ ಎಂಬುದೇ ಒಂದು ದೃಷ್ಠಿಯಲ್ಲಿ ಗೆಲುವು. ಹಲವು ರಂಗಗಳಲ್ಲಿ ಸಮಾನ ಅವಕಾಶ ಮಹಿಳೆಗೆ ಇನ್ನೂ ಕನಸು. ಕೆಲವು ಕಡೆ ಸಮಾನ ವೇತನ ಸಿಕ್ಕರೂ ಅದರಿಂದ ಬೇರೆ ಹಲವು ಸಮಸ್ಯೆಗಳು ಹುಟ್ಟಿಕೊಂಡಿವೆ.

1975 ರಲ್ಲಿ ವಿಶ್ವಸಂಸ್ಥೆ (UN) ಕೂಡ ಮಹಿಳಾ ದಿನಾಚರಣೆಯನ್ನು ಆಚರಿಸಲಾರಂಭಿಸಿತು. 1996 ರಿಂದ ಪ್ರತಿವರ್ಷ ಒಂದು theme ಇಟ್ಟುಕೊಂಡು ಆಚರಣೆ ಮಾಡುವುದನ್ನು ಮೊದಲು ಮಾಡಿತು. ಪ್ರತಿವರ್ಷ ಒಂದೊದು theme.. ಒಂದೊಂದು agenda.. ಸಾಧಿಸಲು ಸಾಧ್ಯವೇ? ಆದರೆ ಅದರ ಬಗ್ಗೆ ತಿಳವಳಿಕೆ ಮೂಡಿಸಬಹುದು. ಕಾಲು ಭಾಗದ ಕೆಲಸ ಆದಂತೆ.

ಈ ವರ್ಷದ (2016) ಕಾರ್ಯಸೂಚಿ.. ‘woman for parity.’ ಪ್ರತೀ ವರ್ಷ ಒಂದೊಂದು agenda ಕೊಟ್ಟ UN ಸಮಿತಿ ಈ ಬಾರಿ 2030ರ ವೇಳೆಗೆ planet 50-50 ಆಗಬೇಕು ಎಂಬ ಕಾರ್ಯಸೂಚಿ ಕೊಟ್ಟಿದೆ.

ಸಾಧ್ಯವೇ? ಸಾಧ್ಯವಾದರೆ ಹೇಗೆ ಸಾಧ್ಯ? ಪ್ರಪಂಚಾದ್ಯಂತ ಎಂಬ ವಿಚಾರ ಬಿಟ್ಟು ನಮ್ಮ ಭಾರತದ ಮಟ್ಟಿಗೆ ಸಾಧ್ಯವೇ ಎಂದು ಯೋಚಿಸಬೇಕು. ಈ ಕಾರ್ಯಸೂಚಿ ಬಿಟ್ಟು ನಮ್ಮ ದೇಶಕ್ಕೆ ಸೂಕ್ತವಾದದ್ದು ಏನು? ಸಾಧಿಸುವುದು ಹೇಗೆ? ಎಂದು ಯೋಚಿಸಬೇಕು.

ಅತ್ಯಾಚಾರ ನಿಲ್ಲಬೇಕು, ಹೆಣ್ಣು ಭ್ರೂಣಹತ್ಯೆ ನಿಲ್ಲಬೇಕು, ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು, ಆರ್ಥಿಕ ಸ್ವಾತಂತ್ರ್ಯ ಸಿಗಬೇಕು, ರಾಜಕೀಯದಲ್ಲಿ ಪ್ರಾಶಸ್ತ್ಯ ಸಿಗಬೇಕು, ಅಧಿಕಾರ ಅವರಿಗೆ ಸಿಗಬೇಕು – ಇವೆಲ್ಲಾ, ರಸ್ತೆಗಿಳಿದು ಹೋರಾಟ ಮಾಡಿ ದಕ್ಕಿಸಿಕೊಳ್ಳುವುದಲ್ಲ. ರಸ್ತೆಗಿಳಿದು ವಿಚಾರವನ್ನು ಪ್ರಚಲಿತಗೊಳಿಸಬಹುದು. ಆದರೆ ದಕ್ಕಿಸಿಕೊಳ್ಳಲು ವಿದ್ಯಾಭ್ಯಾಸ ಕೊಡಬೇಕು. ತಿಳವಳಿಕೆ ಮೂಡಬೇಕು ಹಾಗೂ ಮನೋಭಾವದಲ್ಲಿ ಬದಲಾವಣೆ ಆಗಬೇಕು.

ವಿದ್ಯಾಭ್ಯಾಸ, ಉದ್ಯೋಗ ಹಾಗೂ ಆರ್ಥಿಕ ಸ್ವಾತಂತ್ರ್ಯ ತಂದುಕೊಡಬಹುದು. ಕ್ಷಮಿಸಿ.. ಸ್ವಾತಂತ್ರ್ಯ ಅಲ್ಲ, ಆರ್ಥಿಕ ಸಬಲತೆ ಎನ್ನಬಹುದು. ಏಕೆಂದರೆ ತಾನು ದುಡಿದ ಹಣದ ಮೇಲೆ ಆ ಮಹಿಳೆಗೆ ಹಕ್ಕಿರುವುದಿಲ್ಲ. ವಿದ್ಯಾಭ್ಯಾಸ ದೊರಕಿಸಿಕೊಟ್ಟ ಉದ್ಯೋಗದಿಂದ ಬಂದ ಸಂಬಳವನ್ನು ತಂದು ಮನೆಯ ಗಂಡಸಿಗೆ (ಅಪ್ಪ ಅಥವಾ ಗಂಡ) ಕೊಟ್ಟು, ತನ್ನ ಖರ್ಚಿಗೆ ಹಣ ಕೇಳುವ ಉದ್ಯೋಗಸ್ಥ ಮಹಿಳೆಯರೇ ಹೆಚ್ಚು.

ಮಹಿಳೆಗೆ ಮೀಸಲಿಟ್ಟ ಕ್ಷೇತ್ರದಲ್ಲಿ ಗಂಡ ಅಥವಾ ಅಪ್ಪ ನಿಲ್ಲಲು ಸಾಧ್ಯವಿಲ್ಲವಾದ್ದರಿಂದ ಚುನಾವಣೆಗೆ ನಿಂತು ಗೆಲ್ಲುವ ಮಹಿಳೆ ಅಧಿಕಾರ ನಡೆಸುವುದಿಲ್ಲ. ಆ ಅಧಿಕಾರ ತಿರುಗೀ ಗಂಡ ಅಥವಾ ತಂದೆಯ ಹಕ್ಕು. ತನ್ನ ಒಡಲಿನಲ್ಲಿ ಮೂಡುವ ಹೆಣ್ಣು ಭ್ರೂಣದ ಸಂರಕ್ಷಣೆಯನ್ನು ಮಾಡಲಾರಳು ಆಧುನಿಕ ಹೆಣ್ಣು.

ವಿದ್ಯಾಭ್ಯಾಸ, ಉದ್ಯೋಗ, ಆರ್ಥಿಕ ಸಬಲತೆಗಳ ಜೊತೆಗೆ ಮನೋಭಾವದ ಬದಲಾವಣೆ ಆಗಬೇಕಾಗಿರುವುದು ಇಂದಿನ ಪ್ರಧಾನ ಅವಶ್ಯಕತೆ. ಹೆಣ್ಣು ಮಕ್ಕಳ ಹಾಗೂ ಗಂಡು ಮಕ್ಕಳ ಇಬ್ಬರ ಮನೋಭಾವದಲ್ಲೂ ಬದಲಾವಣೆ ಆಗಬೇಕಾಗಿದೆ.

ಸಮಾಜದ ಚಿಕ್ಕ unit ಆಗಿರುವ ಸಂಸಾರ ಅಂದರೆ ಫ್ಯಾಮಿಲಿಯ ಜವಾಬ್ದಾರಿ ಇಲ್ಲಿ ಅಖಂಡವಾಗಿದೆ. ಮಕ್ಕಳನ್ನು ಬೆಳೆಸುವ ತಂದೆತಾಯಂದಿರು ತುಂಬಾ ಜವಾಬ್ದಾರಿಯುತವಾಗಿ, ಸಮಾನವಾಗಿ ಮಕ್ಕಳನ್ನು ಬೆಳೆಸಬೇಕು. ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು, ಗಂಡು ಮಕ್ಕಳಲ್ಲಿ ಹೆಣ್ಣು ಮಕ್ಕಳನ್ನು ಸಮಾನವಾಗಿ ನೋಡುವ ಮನೋಭಾವ ಬೆಳೆಸಬೇಕು. ಬರೀ ಮಾತಲ್ಲಿ, ಕಥೆಯಲ್ಲಿ ಅಲ್ಲ.. ತಂದೆ ತನ್ನ ಹೆಂಡತಿಯನ್ನು ಗೌರವಿಸುವುದರ ಮೂಲಕ, ತಾಯಿ ಆತ್ಮವಿಶ್ವಾಸದಿಂದ ಇರುವ ಮೂಲಕ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ‘lead by example’ ಮಂತ್ರವಾಗಬೇಕು.

ನಿರ್ಲಕ್ಷಿತವಾಗಿರುವ ಪ್ರೈಮರಿ ಶಾಲೆಯ ವಿದ್ಯಾಭ್ಯಾಸವನ್ನು ಸಬಲಗೊಳಿಸಬೇಕು. ಮೊಳಕೆಯಾಗಿ ಮನೆಯಲ್ಲಿ ಚಿಗುರೊಡೆದ ಪೈರಿಗೆ ನೀರೆರೆಯುವ ಕಾಯಕ ಆಗುವುದು ಪ್ರಾಥಮಿಕ ಶಾಲೆಯಲ್ಲಿ. ಸೂಕ್ತ ಪಾಠ, ದಕ್ಷ ಅಧ್ಯಾಪಕರು ವಿಜ್ಞಾನ, ಲೆಕ್ಕ, ಇತಿಹಾಸ, ಭಾಷೆಯ ಜೊತೆಗೆ ಸದೃಢ ಸಮಾಜಮುಖಿ, ಸಮಾನತೆಯ ಮನೋಭಾವ ಮಕ್ಕಳಲ್ಲಿ ಮೂಡುವಂತೆ, ಮೂಡಿದ್ದು ಬೆಳೆಯುವಂತೆ ಮಾಡಬೇಕು.

ನಮಗೆ ಏನಿದ್ದರೂ celebrate ಮಾಡುವ ಹುಮ್ಮಸ್ಸು.. ಅದನ್ನೂ ಮಾಡುವ. Let us celebrate womanhood. ನಾವು ಹೆಣ್ಣು ಎಂದು ಹೆಮ್ಮೆಪಡುವ. ಸಮಾನತೆ ಬೇಕು ಅಂದರೆ ಗಂಡಿನಂತೆ ಆಗಬೇಕು ಎಂದಲ್ಲ.. ನಮಗೆ ಬೇಕಾದಂತೆ ಇರಬೇಕು.. ಯಾರಿಗೂ ಅಡಿಯಾಳಾಗಿ ಅಲ್ಲ.

2017ರ ವೇಳೆಗೆ ಒಂದೆರೆಡು ಹೆಜ್ಜೆಗಳನ್ನಾದರೂ ಇಡುವ.

Leave a Reply