ಅಂದು ಬಾಹ್ಯಾಕಾಶ ಚುಂಬಿಸಿ ಹೀರೋ ಆಗಿದ್ದ ಸಿರಿಯಾದ ಮಹ್ಮದ್ ಇಂದು ನಿರಾಶ್ರಿತ!

ಡಿಜಿಟಲ್ ಕನ್ನಡ ಟೀಮ್

ಸಿರಿಯಾದಲ್ಲಿ ಆಂತರಿಕ ಸಂಘರ್ಷಕ್ಕೆ ಸಿಕ್ಕು ಲಕ್ಷಾಂತರ ಮಂದಿ ಯುರೋಪ್ ಗೆ ಹರಿದುಹೋಗುತ್ತಿರುವುದು, ಆ ಮೂಲಕ ಯುರೋಪಿನ ರಾಷ್ಟ್ರಗಳಲ್ಲೂ ವಲಸೆ ಬಿಕ್ಕಟ್ಟು ತಲೆದೋರಿರುವುದರ ವಿವರಗಳನ್ನು ಓದಿರುತ್ತೀರಿ. ಇಂಥ ವಲಸಿಗರ ಪೈಕಿ ಬಾಹ್ಯಾಕಾಶ ಪಯಣಿಗನೂ ಸೇರಿದ್ದಾನೆ ಅನ್ನೋದು ಕೌತುಕದ ಸಂಗತಿ.

ಒಂದೊಮ್ಮೆ ವಿಶ್ವವೇ ತನ್ನತ್ತ ನೋಡುವಂತೆ ಮಾಡಿದ್ದ ಸಿರಿಯಾದ ಮಹ್ಮದ್ ಫಾರಿಸ್ ಈಗ ಟರ್ಕಿಯ ಇಸ್ತಾನಬುಲ್ ನಿವಾಸಿ.

ನಾಲ್ಕು ವರ್ಷಗಳ ಹಿಂದೆಯೇ ತಮ್ಮ ಕುಟುಂಬದ 6 ಮಂದಿಯೊಂದಿಗೆ ಸಿರಿಯಾ ತೊರೆದಿರುವ ಫಾರಿಸ್ ಟರ್ಕಿಯಲ್ಲಿ ನೆಲೆಸಿದ್ದಾರೆ. 1987 ರಲ್ಲಿ ಸೋವಿಯತ್ ಇಂಟರ್ ಕಾಸ್ಮೋಸ್ ಕಾರ್ಯಕ್ರಮದ ಭಾಗವಾಗಿ ಸೋಯುಜ್ ಟಿಎಂ-3 ಮೂಲಕ ಬಾಹ್ಯಾಕಾಶಕ್ಕೆ ತೆರಳಿದ ಫಾರಿಸ್ 7 ದಿನ 23 ಗಂಟೆ 8 ನಿಮಿಷಗಳ ಕಾಲ ಅಲ್ಲಿದ್ದು ಸಂಶೋಧನೆ ನಡೆಸಿದ್ದರು. ಆಗ ರಾಷ್ಟ್ರಾಧ್ಯಕ್ಷರಿಂದ ಇವರಿಗೆ “ಹೀರೋ ಆಫ್ ಸಿರಿಯಾ” ಪ್ರಶಸ್ತಿ ಸಿಕ್ಕಿತ್ತು.

ಹಾಗಂತ ಸಾಮಾನ್ಯ ನಿರಾಶ್ರಿತರಿಗೆ ಮಹ್ಮದ್ ಫಾರಿಸ್ ಅವರನ್ನು ಹೋಲಿಸಬೇಕಿಲ್ಲ. ಏಕೆಂದರೆ ಟರ್ಕಿಯಲ್ಲಿ ಇವರ ವಾಸ ಆರಾಮದಲ್ಲೇ ಇದೆ. ಹುಟ್ಟೂರಿನಲ್ಲಿ ಹೀರೋ ಅನಿಸಿಕೊಂಡು ಸ್ವಾತಂತ್ರ್ಯವಿಲ್ಲದೇ, ಸ್ವಂತ ಜನರ ದಮನ ನೋಡುತ್ತಿರುವುದಕ್ಕಿಂತ ದೇಶಭ್ರಷ್ಟನಾದರೂ ಚಿಂತೆಯಿಲ್ಲ ಎಂಬ ನಿರ್ಧಾರಕ್ಕೆ ಬಂದೆ ಅಂತ ಫಾರಿಸ್ ಹೇಳಿಕೊಂಡಿದ್ದಾರೆ. ಆದರೆ ದೇಶವೊಂದು ತನ್ನ ಹೀರೋಗಳನ್ನು ಹೊರಗಿಡುವಮಟ್ಟಿಗೆ  ಕುಸಿತ ಕಾಣುವ ಪರಿಯನ್ನು ಈ ಪ್ರಕರಣದಿಂದ ಕಾಣಬಹುದಾಗಿದೆ. ಫಾರಿಸ್ ಬಾಹ್ಯಾಕಾಶ ಸಾಧನೆ ಮಾಡುತ್ತಲೇ ಸಿರಿಯಾದ ಬೀದಿಗಳಿಗೆ, ಕೆಲವು ಸಂಸ್ಥೆಗಳಿಗೆಲ್ಲ ಇವರ ಹೆಸರಿಡಲಾಗಿತ್ತು. ವ್ಯಂಗ್ಯವೆಂದರೆ ದೇಶ ತೊರೆಯುತ್ತಲೇ ಇವರ ಆಸ್ತಿಯನ್ನೂ ಜಪ್ತಿ ಮಾಡಲಾಗಿದೆ.

Faris

ಬಾಹ್ಯಾಕಾಶಕ್ಕೆ ಹೋಗಿ ಬಂದಿದ್ದಷ್ಟೇ ಅವರ ಸಾಧನೆಯಲ್ಲ. ನಂತರ 10 ವರ್ಷ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡಿ, ಆಮೇಲೆ ಸೇನೆಗೆ ಸೇರಿ, 2004ರಲ್ಲಿ ಜನರಲ್ ಕೂಡ ಆಗಿದ್ದವರು. ಆದರೆ ಈಗಿನ ಅಸಾದ್ ಆಡಳಿತಕ್ಕೆ ಇವರ ಪ್ರತಿರೋಧವಿತ್ತು. ಅಷ್ಟಾಗಿಯೂ ದೇಶ ತೊರೆಯುವ ನಿರ್ಧಾರ ಕೈಗೊಂಡಿದ್ದು ಅಲ್ಲಿ ಸಶಸ್ತ್ರ ಸಂಘರ್ಷ ಶುರುವಾದಾಗಲೇ. ಆ ಸಂದರ್ಭದಲ್ಲಿ ರಷ್ಯ ಸಹ ಇವರಿಗೆ ಆಶ್ರಯ ನೀಡುವುದಕ್ಕೆ ಮುಂದಾದರೂ ತಿರಸ್ಕರಿಸಿದರು. ಕಾರಣ ಆ ದೇಶವೂ ಈಗ ಸಿರಿಯಾ ಮೇಲೆ ಬಾಂಬ್ ಹಾಕ್ತಿದೆಯಲ್ಲ ಎಂಬ ಸಿಟ್ಟು. ಅದೇನಿದ್ದರೂ ಸೇವಿಯತ್ ನೆಲದಿಂದ ಬಂದು ತಮ್ಮೊಂದಿಗೆ ಬಾಹ್ಯಾಕಾಶಕ್ಕೆ ಪಯಣಿಸಿದ್ದ ಇಬ್ಬರು ರಷ್ಯನ್ನರು ಈಗಲೂ ಸಹೋದರರೇ ಅಂತಾರೆ.

ಟರ್ಕಿ, ಸಿರಿಯಾ ನಿರಾಶ್ರಿತರನ್ನು ಭಿಕ್ಷುಕರಂತೆ ಕಾಣಬೇಕಿಲ್ಲ. ಏಕೆಂದರೆ ಹಿಂದಿನ ವರ್ಷ ಶೇ. 4ರಷ್ಟು ಬೆಳೆದಿರುವ ಟರ್ಕಿ ಅರ್ಥವ್ಯವಸ್ಥೆಗೆ ವಲಸಿಗರ ಕೊಡುಗೆಯೂ ಇದೆ ಅನ್ನೋದು ಮಾಜಿ ಬಾಹ್ಯಾಕಾಶಯಾನಿ ಪ್ರತಿಪಾದನೆ.

Leave a Reply