ಕಂಡ ಕಂಡಲ್ಲಿ ಮೂತ್ರ ಮಾಡೋ ಸ್ವಾತಂತ್ರ್ಯವನ್ನಷ್ಟೇ ಬಯಸಿದ್ದ ಕನ್ಹಯ್ಯನನ್ನು ಆಜಾದಿ ಹೀರೋ ಮಾಡಿದವರೆಲ್ಲ ಓದಿಕೊಳ್ಳಲೇಬೇಕಾದ ಪತ್ರವಿದು!

ಡಿಜಿಟಲ್ ಕನ್ನಡ ಟೀಮ್

ದೇಶದಲ್ಲಿ ಆಜಾದಿ ಅಂತ ಅರ್ಥಹೀನವಾಗಿ ಬಡಬಡಿಸಿಕೊಂಡಿರುವ ಜೆ ಎನ್ ಯು ಕಲಾವಿದ ಕನ್ಹಯ್ಯ ಕುಮಾರ್ ಎಂಬ ವ್ಯಕ್ತಿಯನ್ನು ಅದೇ ವಿಶ್ವವಿದ್ಯಾಲಯದ ಪ್ರೊಫೆಸರ್ ಮಕರಂದ ಪರಾಂಜಪೆ ತಾರ್ಕಿಕವಾಗಿ ಧ್ವಂಸ ಮಾಡಿದ್ದನ್ನು ಇಲ್ಲಿಯೇ ಓದಿದ್ದಿರಿ.

ದೇಶದ ಎಲ್ಲ ಸಮಸ್ಯೆಗಳಿಗೆ ಭಾಷಣಗಳಲ್ಲೇ ಮದ್ದು ನೀಡುವಂತೆ ಪೋಸು ನೀಡುತ್ತಿರುವ ಕನ್ಹಯ್ಯ ಕುಮಾರ್ ನಿಜ ಜೀವನದಲ್ಲಿ ತೋರುತ್ತಿರುವ ವರ್ತನೆ ಎಂಥಾದ್ದು? ಸಾರ್ವಜನಿಕವಾಗಿ ಮೂತ್ರ ಮಾಡುತ್ತಿದ್ದಾಗ ಅದನ್ನು ಪ್ರಶ್ನಿಸಿದ ವಿದ್ಯಾರ್ಥಿನಿ ಜತೆಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಆತ 3 ಸಾವಿರ ರುಪಾಯಿಗಳ ದಂಡ ಕಟ್ಟಿದ್ದ ಎಂಬುದು ಈಗ ಬೆಳಕಿಗೆ ಬಂದಿದೆ. ಮೀಡಿಯಾದ ಒಂದು ವರ್ಗ ಕನ್ಹಯ್ಯನನ್ನು ಅವತಾರ ಪುರುಷ ಎಂಬಂತೆ ಚಿತ್ರಿಸುತ್ತಿರೋದಕ್ಕೆ ರೋಸಿಹೋದ ಜೆ ಎನ್ ಯು ಹಳೆ ವಿದ್ಯಾರ್ಥಿನಿಯೊಬ್ಬರು ಆತನ ಕರಾಳ ಮುಖವನ್ನು, ಅವನೊಂದಿಗಾದ ಕೆಟ್ಟ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಒಬ್ಬ ಹೀರೋ ಹುಟ್ಟಿದ ಅಂತ ಸಂಭ್ರಮಿಸಿದವರೆಲ್ಲ ಎದೆಮುಟ್ಟಿ ನೋಡಿಕೊಳ್ಳಬೇಕಾದ ಫೇಸ್ಬುಕ್ ಪತ್ರ, ಅದರೊಂದಿಗೆ ಲಗತ್ತಿಸಿರುವ ದಾಖಲೆಗಳೆಲ್ಲವನ್ನೂ ನಿಮ್ಮ ಮುಂದೆ ಇಡುತ್ತಿದ್ದೇವೆ. ಓವರ್ ಟು ಕಮ್ಲೇಶ್ ನರ್ವಾನಾ…

—–

ಅದ್ಯಾಕೆ ಪೊಳ್ಳು ಕ್ರಾಂತಿಕಾರಿಗಳನ್ನು ಸೃಷ್ಟಿಸುತ್ತಿದ್ದೀರಿ? ‘ಮಹಿಳಾ ಗೌರವೋದ್ಧಾರಕ ಮಿಸ್ಟರ್ ಕನ್ಹಯ್ಯಗೊಂದು ಬಹಿರಂಗ ಪತ್ರ

ಇದು ಬಹಿರಂಗ ಪತ್ರಗಳ ಕಾಲ. ಟಿವಿ ನಿರೂಪಕರಿಂದ ಹಿಡಿದು ವಿದ್ಯಾರ್ಥಿಗಳವರೆಗೆ ಎಲ್ಲರೂ ತಮ್ಮ ವಿಚಾರ- ಆತಂಕಗಳನ್ನು ಹೇಳಿಕೊಳ್ಳುವುದಕ್ಕೆ ಮೋದಿಗೆ, ಸ್ಮೃತಿ ಇರಾನಿಗೆ ಅಂತೆಲ್ಲ ಬಹಿರಂಗ ಪತ್ರಗಳನ್ನು ಬರೆಯುತ್ತಿದ್ದಾರೆ. ನಾನೂ ಸಹ ಈ ವೇದಿಕೆ ಉಪಯೋಗಿಸಿಕೊಂಡು ನನ್ನ ವ್ಯಥೆಗೊಂಡಿರುವ ಹೃದಯವನ್ನು ಸರಿಮಾಡಿಕೊಳ್ಳುವುದಕ್ಕೆ ಬಯಸುತ್ತೇನೆ.

ನರ್ವಾನಾ ಫೇಸ್ಬುಕ್ ನಲ್ಲಿ ಒದಗಿಸಿದ ದಾಖಲೆ.
ನರ್ವಾನಾ ಫೇಸ್ಬುಕ್ ನಲ್ಲಿ ಒದಗಿಸಿದ ದಾಖಲೆ.

ನನ್ನ ಜೆ ಎನ್ ಯು ಸಮುದಾಯವೆಲ್ಲ ಒಟ್ಟುಗೂಡಿ ಒಬ್ಬ ಪೊಳ್ಳು ಕ್ರಾಂತಿಕಾರಿಯನ್ನು ಸೃಷ್ಟಿಸುತ್ತಿರುವುದನ್ನು ನೋಡಿ ಈ ಪತ್ರ ಬರೆಯಲೇಬೇಕಾಗಿದೆ. ನಾನೀ ಪತ್ರ ಬರೆಯುತ್ತಿರುವುದು ಜೆ ಎನ್ ಯು ವಿದ್ಯಾರ್ಥಿ ಸಂಘಟನೆ ನಾಯಕ ಮಿ. ಕನ್ಹಯ್ಯ ಹಾಗೂ ಆತನನ್ನು ಈ ಶತಮಾನದ ಭಗತ್ ಸಿಂಗ್ ಅಂತ ಸಾಬೀತುಗೊಳಿಸುವುದಕ್ಕೆ ಒಟ್ಟಾಗಿರುವವರಿಗೆ.

ನನಗೆ ಈ ಪತ್ರ ಬರೆಯುವ ಅರ್ಹತೆ ಏಕಿದೆ ಎಂದರೆ, ಜೆ ಎನ್ ಯುದ ಈ ಹೊಸ ಚೆ ಗೆವೆರಾನ ನಿಜಮುಖವನ್ನು ನಾನು ಕಂಡಿದ್ದೇನೆ ಹಾಗೂ ಅದನ್ನು ಬಹಿರಂಗಪಡಿಸದೇ ಬಿಡಲಾರೆ. ಜೆ ಎನ್ ಯು ಕ್ಯಾಂಪಸ್ಸಿನ ರಸ್ತೆ ಮೇಲೆ ಈ ಕನ್ಹಯ್ಯ ಎಂಬ ಪುಂಡ ಉಚ್ಚೆ ಹೊಯ್ಯುತ್ತಿದ್ದ ಸಂದರ್ಭದಲ್ಲಿ, ಕಳೆದ ವರ್ಷ ಜೂನ್ ನಲ್ಲಿ ಈತನೊಂದಿಗೆ ಮೊದಲ ಮತ್ತು ಕೊನೆಯ ಭೇಟಿ ಆಯಿತು. ರಸ್ತೆಯಲ್ಲಿ ಮೂತ್ರ ಮಾಡುತ್ತಿರುವುದಕ್ಕೆ ನಾನು ಆಕ್ಷೇಪಿಸಿದಾಗ, ಆತ ಕ್ಷಮೆ ಕೇಳುವುದರ ಬದಲು ನನ್ನ ಮೇಲೆ ಕೂಗಾಡಿದ. ಅಷ್ಟೇ ಅಲ್ಲ, ಇದರ ಪರಿಣಾಮ ನೆಟ್ಟಗಿರೋಲ್ಲ ಅಂತ ಹೆದರಿಸಿದ್ದಲ್ಲದೇ, ನಾನು ಮನೋವೈದ್ಯರ ಚಿಕಿತ್ಸೆ ತೆಗೆದುಕೊಳ್ಳಬೇಕು ಅಂತ ನಿಂದಿಸಿದ. ಆಗ ಜೆ ಎನ್ ಯುದವಳೇ ಆಗಿದ್ದ ನಾನು, ವಿಶ್ವವಿದ್ಯಾಲಯದ ಶಿಸ್ತುಪಾಲಕರ ಬಳಿ 2015ರ ಜೂನ್ ನಲ್ಲಿ ದೂರು ದಾಖಲಿಸಿದೆ. ವಿಚಾರಣೆಯ ಬಳಿಕ ಮುಖ್ಯ ಶಿಸ್ತುಪಾಲಕರು ಹಾಗೂ ಜೆ ಎನ್ ಯುದ ವೈಸ್ ಚಾನ್ಸೆಲರ್ ಇಬ್ಬರೂ ‘ಆತನ ವರ್ತನೆ ಜೆ ಎನ್ ಯು ವಿದ್ಯಾರ್ಥಿಗೆ ತಕ್ಕುದಾಗಿ ಇರಲಿಲ್ಲ’ ಎಂಬ ತೀರ್ಮಾನಕ್ಕೆ ಬಂದು 3 ಸಾವಿರ ರುಪಾಯಿಗಳ ದಂಡ ವಿಧಿಸಿದರು.

ಈ ಹಿನ್ನೆಲೆಯಲ್ಲಿ ಕನ್ಹಯ್ಯ ಮತ್ತು ಆತನ ಬೆಂಬಲಿಗರಿಗೆ ನಾನು ಕೆಲ ಪ್ರಶ್ನೆಗಳನ್ನು ಕೇಳುವುದಕ್ಕಿದೆ. ಇದಕ್ಕೂ ಮೊದಲು ಒಂದು ಮಾತು ಸ್ಪಷ್ಟಪಡಿಸಿಬಿಡ್ತೇನೆ. 7 ವರ್ಷ ಜೆ ಎನ್ ಯುದಲ್ಲಿ ಓದಿದವಳು ಹಾಗೂ 11 ವರ್ಷ ಈ ಸಂಸ್ಥೆಯೊಂದಿಗೆ ಬಾಂಧವ್ಯ ಇರಿಸಿಕೊಂಡವಳು ನಾನು. ಹೀಗಾಗಿ ಅಲ್ಲಿನ ಚರ್ಚಾ ಮುಕ್ತತೆಯ ವಾತಾವರಣದ ಬಗ್ಗೆ ಬಹಳ ಗೌರವವಿದೆ. ಜೆ ಎನ್ ಯು ಎಂಬ ಉಟೋಪಿಯಾ ಪ್ರಪಂಚದಿಂದ ಸಾಕಷ್ಟು ಕಲಿತಿದ್ದೇನೆ. ಇಷ್ಟು ಹೇಳಿ, ಕೆಲವನ್ನು ಪ್ರಶ್ನಿಸುವೆ.

  • ಮಿ. ಕನ್ಹಯ್ಯ ಫೆಬ್ರವರಿ 9ರ ತನ್ನ ಮಾತಿನಲ್ಲಿ, ತಾನು ಮಹಿಳೆಯರ ಗೌರವಕ್ಕಾಗಿ ಹೇಗೆ ಹೋರಾಡಿದೆ ಅಂತ ವಿವರಿಸಿರುವುದು ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿಯಲ್ಲಿ ಪ್ರಕಟವಾಗಿದೆ. ನಾನು ಕೇಳಲಿಕ್ಕಿದೆ… ಮಿಸ್ಟರ್ ಕನ್ಹಯ್ಯ, ಮಹಿಳೆಯರ ಗೌರವ ಎಂಬ ಪದದ ಒಂದು ಅಕ್ಷರವನ್ನಾದರೂ ನೆಟ್ಟಗೆ ತಿಳಿದುಕೊಂಡಿರುವಿರಾ? ರಸ್ತೆ ಮೇಲೆ ಮೂತ್ರ ಮಾಡಬೇಡ ಅಂತ ಹೆಣ್ಣೊಬ್ಬಳು ನಿನ್ನನ್ನು ಕೇಳಿದಾಗ (ನೀನು ಶೌಚಾಲಯದ ಹತ್ತಿರದಲ್ಲೇ ಇದ್ದೆ ಹಾಗೂ ನಿನ್ನ ಸ್ನೇಹಿತರ ಕಾರು ಅಲ್ಲಿಗೆ ಒಯ್ಯುವುದಕ್ಕೆ ಪಕ್ಕದಲ್ಲೇ ಲಭ್ಯವಿತ್ತು) ನೀನು ಆಕೆಯ ಎದುರು ಕೂಗಾಡಿದೆ. ಬಾಯ್ಮುಚ್ಚಿಕೊಳ್ಳುವಂತೆ ಆಕೆಯನ್ನು ಬೆದರಿಸಿದೆ. ಆಕೆಯನ್ನು ನಿಂದಿಸಿ, ಅವಮಾನಿಸಿ, ಮೆಂಟಲ್ ಆಸ್ಪತ್ರೆಗೆ ಹೋಗು ಅಂತ ಬಯ್ದೆ. (ಇದೇನನ್ನು ತೋರಿಸುತ್ತೆ ಅಂದ್ರೆ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡುವುದು, ನಿನ್ನ ಖಾಸಗಿ ಅಂಗವನ್ನು ರಸ್ತೆಯಲ್ಲಿ ತೆರೆದಿಡುವುದು ಇವೆಲ್ಲ ನಿನಗೆ ತುಂಬ ಮಾಮೂಲಿನ ಸಂಗತಿ). ಮಹಿಳಾ ಗೌರವವನ್ನು ಎತ್ತಿಹಿಡಿಯೋದು ಅಂದ್ರೆ ಹೀಗೇನಾ?
  •  ಸಾರ್ವಜನಿಕವಾಗಿ ಉಚ್ಚೆ ಹೊಯ್ಯೋದು, ಧೂಮಪಾನ ಮಾಡೋದು ನಿನ್ನ ಸ್ವಾತಂತ್ರ್ಯ ಅಂತ ಸಾಧಿಸಿದ್ದೆ. ನಿನ್ನ ಸ್ವಾತಂತ್ರ್ಯದ ಪರಿಕಲ್ಪನೆ ಇಷ್ಟೇನಾ? ನಿನ್ನ ರಾಜಕೀಯ ಮತ್ತು ಕ್ರಾಂತಿಕಾರಕ ಸಿದ್ಧಾಂತದ ಪೊಳ್ಳುತನವನ್ನು ತೋರಿಸುತ್ತದಿದು. ಕ್ರಾಂತಿ ಮತ್ತು ಸ್ವಾತಂತ್ರ್ಯಕ್ಕೆ ವ್ಯಾಖ್ಯೆ ಏನು ಹೇಳು? ರಸ್ತೆ ಮೇಲೆ ಮೂತ್ರ ಮಾಡೋದು, ಧೂಮಪಾನ ನಿಷೇಧ ವಲಯದಲ್ಲಿ ಸೇದೋದು ಸ್ವಾತಂತ್ರ್ಯ ಅಲ್ಲವಲ್ಲ.
  •  ನಿನ್ನ ಭಾಷಣಗಳಲ್ಲಿ ನೀನು ಬಡ ಕುಟುಂಬದಿಂದ ಬಂದಿರುವುದಾಗಿ, ಅಮ್ಮನ ತಿಂಗಳ ದುಡಿಮೆ 3 ಸಾವಿರ ರುಪಾಯಿಗಳಿರುವುದಾಗಿ ಹೇಳುತ್ತಿರುವೆ. ಅಯ್ಯಪ್ಪಾ ಕ್ರಾಂತಿಕಾರಿ… ನೀನು ನಿಜಕ್ಕೂ ನಿನ್ನಮ್ಮನ ದುಡಿಮೆಯ ಹೋರಾಟವನ್ನು ಗೌರವಿಸುವವನೇ ಆಗಿದ್ದರೆ, ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡುವುದಕ್ಕೆ, ಹೆಣ್ಣನ್ನು ನಿಂದಿಸುವುದಕ್ಕೆ ಅದೇ 3 ಸಾವಿರ ರುಪಾಯಿಗಳ ದಂಡ ಭರಿಸುವ ಸ್ಥಿತಿ ಏಕೆ ತಂದುಕೊಳ್ಳುತ್ತಿದ್ದೆ? ನಾನೂ ಬಡ ಕುಟುಂಬದಿಂದ ಬಂದವಳೇ. ನನ್ನ ತಾಯಿ ಕೃಷಿ ಕಾರ್ಮಿಕಳಾಗಿಯೇ ನನ್ನ ಸಹಿತ ನಾಲ್ವರು ಮಕ್ಕಳನ್ನು ಬೆಳೆಸಿದಳು. ಹೆಣ್ಣುಮಕ್ಕಳ ಗೌರವ ಏನು ಹಾಗೂ ಅದನ್ನು ಕಾಪಾಡಿಕೊಳ್ಳುವುದಕ್ಕೆ ಅವರೆಷ್ಟು ಕಷ್ಟ ಪಡ್ತಾರೆ ಅಂತ ನಂಗೆ ಗೊತ್ತು ಕೇಳು. ನಿನ್ನಂಥವರು ರಸ್ತೆ ಮೇಲೆ ಮೂತ್ರಕ್ಕೆ ನಿಲ್ಲುತ್ತಾರಲ್ಲ, ಅಂಥವರಿಂದ ನನ್ನಂಥವರು, ನನ್ನ ಸ್ತ್ರೀ ಸಹಪಾಠಿಗಳು ಅಸುರಕ್ಷತೆ ಅನುಭವಿಸುತ್ತೇವೆ. (ಸ್ವಚ್ಛತೆ ವಿಚಾರ ಬೇರೆ). ಸಾರ್ವಜನಿಕವಾಗಿ ಮೂತ್ರ ಮಾಡುವ ನೆಪ ಮಾಡಿಕೊಂಡು ಹೆಣ್ಣನ್ನು ಹೇಗೆ ದಾಳಿಗೀಡುಮಾಡಲಾಗುತ್ತದೆ ಅನ್ನೋದನ್ನು ನಾನು ನೋಡಿದ್ದೇನೆ. ಇದನ್ನು ನಾನವತ್ತು ನಿನಗೆ ವಿವರಿಸಬೇಕನ್ನುವಷ್ಟರಲ್ಲೇ ನಿನ್ನ ಕ್ಷುಲ್ಲಕ ಪುರುಷಾಹಂಕಾರ ಆರ್ಭಟಿಸಿತು!
  • ಇದನ್ನು ಬರೆಯುತ್ತ ನಾನು ಸರ್ಕಾರದ ನಡೆಯನ್ನು ಸಮರ್ಥಿಸಿಕೊಳ್ಳುತ್ತಿಲ್ಲ.ಸರ್ಕಾರವನ್ನು ಟೀಕಿಸುವುದು ಬೇರೆ, ಕನ್ಹಯ್ಯನನ್ನು ಭಗತ್ ಸಿಂಗ್ ಗೆ ಸಮನಾದ ಕ್ರಾಂತಿಕಾರಿ ಅಂತ ಬಿಂಬಿಸೋದು ಬೇರೆ. ಆತ ವಿದ್ಯಾರ್ಥಿಯಂತೆ ನಡೆದುಕೊಳ್ಳುತ್ತಿಲ್ಲ, ಅವಕಾಶವಾದಿ ರಾಜಕಾರಣಿಯಂತಿದ್ದಾನೆ. ಕೆಲ ಟಿವಿ ವಾಹಿನಿಗಳು, ಪತ್ರಿಕೆಗಳು ಕನ್ಹಯ್ಯನ ಬಡ ಕುಟುಂಬ ಹಿನ್ನೆಲೆ ಹಾಗೂ ಆತ ಕಮ್ಯುನಿಸ್ಟ್ ನೇತಾರ ಎ. ಬಿ. ಬರ್ಧನ್ ಹತ್ತಿರ ಶಾಲಾ ಬಾಲಕನಾಗಿದ್ದಾಗ ಪ್ರಶಸ್ತಿ ಸ್ವೀಕರಿಸುತ್ತಿರೋ ಚಿತ್ರವನ್ನಿಟ್ಟುಕೊಂಡು ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಬದ್ಧ ಹೀರೋ ಅಂತ ಸಾರುತ್ತಿವೆ. ‘ಕಮ್ಯುನಿಸ್ಟ್ ಸಿದ್ಧಾಂತವು ಲಿಂಗ ಸಮಾನತೆ ಬಗ್ಗೆ ಹೇಳಿರೋದೇನು’ ಅಂತ ತುಸುವಾದರೂ ಗೊತ್ತಿದೆಯಾ ನಿನಗೆ? ನಾನೂ ಕಮ್ಯುನಿಸ್ಟ್ ಕುಟುಂಬದಿಂದಲೇ ಬಂದವಳು. ನನ್ನ ಸಹೋದರ ದಿವಂಗತ ಕಾಮ್ರೆಡ್ ರಾಜೆಂದರ್ ಗಿರಾ ಹರ್ಯಾಣ ಸಿಪಿಎಂನಲ್ಲಿ ಸಕ್ರಿಯರಾಗಿದ್ದವರು. ಜೆ ಎನ್ ಯು ವಿದ್ಯಾರ್ಥಿ ಚಳವಳಿಗಳಲ್ಲಿ ನಾನೂ ಭಾಗವಹಿಸಿದ್ದೆ. ಈ ಚಳವಳಿಗಳು ಲಿಂಗ ಸಮಾನತೆಗೆ ಪ್ರಾಮುಖ್ಯ ಕೊಡುತ್ತಿದ್ದದ್ದನ್ನೂ ಬಲ್ಲೆ. ಹರ್ಯಾಣದ ಪಿತೃಪ್ರಧಾನ ಸಮಾಜದ ನಡುವೆ ಕಾಮ್ರೆಡ್ ಜಗ್ವತಿ ಸಂಗ್ವಾನ್, ಕಾಮ್ರೆಡ್ ಪೂಲ್ ಸಿಂಗ್, ಮಾಸ್ಟರ್ ಶೇರ್ ಸಿಂಗ್, ಸತ್ಯಪಾಲ್ ಸಿವಾಚ್ ಇವರೆಲ್ಲ ಲಿಂಗ ಸಮಾನತೆಗೆ ಹೋರಾಡಿದ ಬಗೆಯನ್ನು ಹತ್ತಿರದಿಂದ ಕಂಡಿದ್ದೇನೆ.

ಅಂತೆಯೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದ ಜೆ ಎನ್ ಯುದ ನಿನ್ನಂಥ ಪುರುಷ ಮೂಲಭೂತವಾದಿಗಳನ್ನೂ ಎದುರಿಸಿದ್ದೇನೆ. ಅಂಥ ನೀನು ಈಗ ನಿನ್ನನ್ನೇ ಕ್ರಾಂತಿಕಾರಿ ಎದು ಘೋಷಿಸುತ್ತಿರುವೆ!

ಕನ್ಹಯ್ಯನಂಥ ಸ್ತ್ರೀದ್ವೇಷಿಯನ್ನು ಜೆ ಎನ್ ಯು ಕ್ರಾಂತಿಕಾರಿ ಎಂದು ಹೇಳುತ್ತಿರುವುದು ಆಘಾತ ತಂದಿದೆ. ಜೆ ಎನ್ ಯು ಒಳ ಹೊರಗಿನ ಜನರೇ… ಸರ್ಕಾರವನ್ನು ಟೀಕಿಸಿ ತಪ್ಪಿಲ್ಲ. ಆತನ ಬಂಧನವನ್ನೂ ಪ್ರತಿಭಟಿಸಿ. ಆದರೆ ಪೊಳ್ಳು ಕ್ರಾಂತಿಕಾರಿಯೊಬ್ಬನನ್ನು ಏಕೆ ಸೃಷ್ಟಿಸುತ್ತಿರುವಿರಿ? ನಿಮ್ಮ ವಿಚಾರಶಕ್ತಿ ಕಾಪಿಟ್ಟುಕೊಳ್ಳಿ.

kamlesh1

ಕಮ್ಲೇಶ್ ನರ್ವಾನಾ

ಜೆ ಎನ್ ಯು ಹಳೆ ವಿದ್ಯಾರ್ಥಿ

ದೆಹಲಿ ವಿವಿಯ ಇನ್ ಸ್ಟಿಟ್ಯೂಟ್ ಆಫ್ ಹೋಮ್ ಎಕನಾಮಿಕ್ಸ್ ನಲ್ಲಿ ಸಹಾಯಕ ಪ್ರೊಫೆಸರ್

2 COMMENTS

  1. ಈ ಪೊಳ್ಳು ಕ್ರಾಂತಿಕಾರಿಗಳಿಂದ, ಸುಳ್ಳು ಸ್ತ್ರೀವಾದಿಗಳಿಂದ ದೇಶಕ್ಕ್ಯಾವಾಗ ಮುಕ್ತಿಯೋ?

Leave a Reply