ಚಾಲೆಂಜಿಂಗ್ ಸ್ಟಾರ್ ದರ್ಶನ್ ದಾಂಪತ್ಯದಲ್ಲಿ ಮತ್ತೆ ರಾದ್ಧಾಂತ, ಫಲ ಕೊಟ್ಟಿಲ್ಲ ಅಂಬರೀಶ್ ‘ಆಪರೇಷನ್ ಅಂತ್ಯ’!

ಡಿಜಿಟಲ್ ಕನ್ನಡ ಟೀಮ್

ನಾಲ್ಕು ಗೋಡೆ ಮಧ್ಯೆ ನಡೆದಿದ್ದರೆ ಇದೊಂದು ದಾಂಪತ್ಯದೊಳಗಣ ತೀರಾ ಖಾಸಗಿ ವಿಚಾರ ಎಂದು ಸುಮ್ಮನಾಗಬಹುದಿತ್ತು. ಆದರೆ ಸಿನಿಮಾಗಳಲ್ಲಿ ಹೀರೋ ಆಗಿ ಮೂರ್ನಾಲ್ಕು ಹೀರೋಯಿನ್ ಗಳನ್ನು ಒಟ್ಟೊಟ್ಟಿಗೆ ಮೇಂಟೇನ್ ಮಾಡ್ತಿದ್ದ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರೇ ತಮ್ಮ ಹೆಂಡತಿಗೊಬ್ಬ ಬಾಯ್ ಫ್ರೆಂಡ್ ಇದ್ದಾನೆ ಅಂತ ಪಬ್ಲಿಕ್ ಆಗಿ ಹೇಳಿರೋದ್ರಿಂದ ಅದನ್ನಿಲ್ಲಿ ಯಥಾವತ್ತಾಗಿ ಕೊಡ್ಬೇಕಾಗಿ ಬಂದಿದೆ.

ನಾಲ್ಕು ವರ್ಷದ ಹಿಂದೆ ತನ್ನ ಗಂಡ ಕೊಲೆ ಬೆದರಿಕೆ ಹಾಕಿದ್ದಾನೆ ಅಂತ ಪೊಲೀಸ್ ಕಂಪ್ಲೆಂಟ್ ಕೊಟ್ಟು ದರ್ಶನ್ ಅವರನ್ನು ಜೈಲಿಗೆ ಕಳುಹಿಸಿದ್ದ ವಿಜಯಲಕ್ಷ್ಮಿ ಅವರು, ಜೈಲಿಂದ ವಾಪಸ್ಸು ಬಂದ ಮೇಲೆ ದರ್ಶನ್ ಗೆ ಜಾಗ್ವಾರ್ ಕಾರ್ ಗಿಫ್ಟ್ ಕೊಟ್ಟು ಅಡ್ಜಸ್ಟ್ ಮಾಡಿಕೊಂಡಿದ್ದರು. ಆದರೆ ದರ್ಶನ್ ಅವರೇ ಜಾಗ್ವಾರ್ (ಕರಿಚಿರತೆ) ಆಗಿ ಮತ್ತೆ ತಮ್ಮ ಮೇಲೆ ಎರಗಿದ್ದಾರೆ ಅಂತ ವಿಜಯಲಕ್ಷ್ಮಿ ಇದೀಗ ಪೊಲೀಸರಿಗೆ ಸೆಕೆಂಡ್ ರೌಂಡ್ ಕಂಪ್ಲೆಂಟ್ ಕೊಟ್ಟಿದ್ದು, ಅದಕ್ಕೆ ದರ್ಶನ್ ನೀಡಿರುವ ತಿರುಗೇಟೇ ತಮ್ಮ ಹೆಂಡತಿಗೆ ಪ್ರಿಯಕರ ಇದ್ದಾನೆ ಅನ್ನೋದು.

ಯಾವುದೋ ಎಲ್ಲಮ್ಮನ ಗಲ್ಲೀಲಿ ಯಾರೋ ಸಾಮಾನ್ಯ ಗಂಡ-ಹೆಂಡತಿ ಕಿತ್ತಾಡಿಕೊಂಡಿದ್ರೆ ಜನ ಇದೆಲ್ಲ ಇದ್ದಿದ್ದೇ ಅಂತ ಸುಮ್ಮನಾಗ್ತಿದ್ರೇನೋ. ಆದರೆ ಗೆರೆ ಮೂಡಿರೋದು ಕನ್ನಡದ ಮುಂಚೂಣಿ ಹೀರೋ ದರ್ಶನ್ ಮನೇಲಿ. ಅವರು ತಮ್ಮ ಫ್ಯಾಮಿಲಿ ರಿಯಲ್ ಸ್ಟೋರಿಯನ್ನೇ ಬೀದೀಲಿ ಹಂಗಂಗೆ ತೆರೆದಿಡ್ತಾ ಇರೋದ್ರಿಂದ ಜನ ಕುತೂಹಲದಿಂದ ನೋಡ್ತಿದಾರೆ.

ದರ್ಶನ್ ಮತ್ತು ವಿಜಯಲಕ್ಷ್ಮಿ ದಾಂಪತ್ಯದ ಬಿರುಕು ಮೊದಲ ಬಾರಿ ಕಾಣಿಸಿಕೊಂಡದ್ದು 2011 ಸೆಪ್ಟೆಂಬರ್ ನಲ್ಲಿ. ದರ್ಶನ್ ದಿನಾ ಕುಡಿದು ಬಂದು ಬಡೀತಾರೆ. ತಮ್ಮನ್ನು ಬಲವಂತವಾಗಿ ಕಾರಲ್ಲಿ ಹೊತ್ತೊಯ್ದು ಪಿಸ್ತೂಲು ತೋರಿಸಿ ಕೊಲೆ ಬೆದರಿಕೆ ಹಾಕಿದ್ರು ಅಂತ ವಿಜಯನಗರ ಪೊಲೀಸರಿಗೆ ಕಂಪ್ಲೆಂಟ್ ಕೊಟ್ಟಿದ್ರು. ಕೊಲೆ ಬೆದರಿಕೆ ಆರೋಪದಡಿ ಜೈಲಿಗೂ ಹೋಗಿ ಬಂದ್ರು. ಆಗ ಹಿರಿಯ ನಟ ಅಂಬರೀಶ್ ಮಧ್ಯಸ್ಥಿಕೆ ವಹಿಸಿದ್ದೇನೂ, ದರ್ಶನ್ ತಾವು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟಿದ್ದೇನೂ, ವಿಜಯಲಕ್ಷ್ಮಿ ಅವರು ಗಂಡನಿಗೆ ಕೋಟಿ ರುಪಾಯಿ ಕಾರ್ ಗಿಫ್ಟ್ ಕೊಡಿಸಿದ್ದೇನೂ, ಇದನ್ನ ಕಂಡ ಜನ ಸಂಸಾರ ಸರಿಹೋಯ್ತು ಅಂದುಕೊಂಡಿದ್ರು.

ಆದರೆ ಇದು ಫುಲ್ ನಾಟಕ ಅಂತ ಗೊತ್ತಾಗೋದಿಕ್ಕೆ ಜಾಸ್ತಿ ದಿನ ಏನ್ ತಗೊಂಡಿಲ್ಲ. ಆ ಘಟನೆನಾ ಜನ ಮರೆಯೋಕೆ ಮುಂಚೆನೇ ಅವರ ದಾಂಪತ್ಯದಲ್ಲಿ ಮತ್ತೊಂದು ರೌಂಡು ಇಂಡೋ-ಪಾಕ್ ವಾರ್ ಕಾಣಿಸಿಕೊಂಡಿದೆ. ಎಂಟು ತಿಂಗಳ ಹಿಂದೆ ವಿಜಯಲಕ್ಷ್ಮಿ ರಾಜರಾಜೇಶ್ವರಿನಗರದಲ್ಲಿರುವ ದರ್ಶನ್ ಮನೆ ತೊರೆದು ಹೊಸಕೆರೆಹಳ್ಳಿ ಆಪಾರ್ಟ್ ಮೆಂಟ್ ಒಂದರಲ್ಲಿ ಸೆಟ್ಲ್ ಆಗಿದ್ದರು. ಬುಧವಾರ ಸಂಜೆ ಅಲ್ಲಿಗೆ ಬಂದು ದರ್ಶನ್ ಗಲಾಟೆ ಮಾಡಿದ್ದಾರೆ, ಸೆಕ್ಯೂರಿಟಿ ದೇವರಾಜ್ ಎಂಬುವರ ಮೇಲೂ ಹಲ್ಲೆ ಮಾಡಿದ್ದಾರೆ ಅಂತ ಪೊಲೀಸರಿಗೆ ದೂರಿದ್ರು. ಆದರೆ ದರ್ಶನ್ ಹೇಳಿರೋದೇ ಬೇರೆ. ‘ನಾನು ನನ್ನ ಮಗನನ್ನು ನೋಡಲು ಹೋಗಿದ್ದೆ. ಆದರೆ ಸೆಕ್ಯುರಿಟಿ ಒಳಗೆ ಬಿಡಲಿಲ್ಲ. ವಿಜಯಲಕ್ಷ್ಮಿ ನನ್ನ ಆಡಿ ಕಾರನ್ನು ತಗೊಂಡು ಹೋಗಿ ಸ್ನೇಹಿತನಿಗೆ ಕೊಟ್ಟಿದ್ದಾಳೆ. ಅದನ್ನೂ ಕೇಳೋಕೆ ಹೋಗಿದ್ದೆ. ಆ ಕಾರನ್ನು ಎಲ್ಲೋ ಗುದ್ದಿಸಿಕೊಂಡು ತಂದು ಅಪಾರ್ಟ್ ಮೆಂಟ್ ನಲ್ಲಿ ನಿಲ್ಲಿಸಿಕೊಂಡಿದ್ದಾರೆ. ಅದರೆ ನಾನು ಅವಳು ಮುಖಾಮುಖಿ ಆಗಿಯೇ ಇಲ್ಲ. ಆದರೂ ನನ್ನ ಮೇಲೆ ಸುಳ್ಳು ಕಂಪ್ಲೆಂಟ್ ಕೊಟ್ಟಿದ್ದಾಳೆ ಅಂತ.

ಇದಕ್ಕೆ ಪ್ರತಿಯಾಗಿ ವಿಜಯಲಕ್ಷ್ಮಿ ಅವರು, ‘ನನಗೆ ಯಾವ ಬಾಯ್ ಫ್ರೆಂಡೂ ಇಲ್ಲ. ತಾಕತ್ತಿದ್ದರೆ ಅದನ್ನು ಪ್ರೂವ್ ಮಾಡಲಿ. ಎಲ್ಲ ಸುಳ್ಲೇ ಸುಳ್ಳು. ನಾನು ಆಡಿ ಕಾರು ತಂದಿದ್ದದು ನಿಜ. ಆದರೆ ಯಾರಿಗೂ ಅದನ್ನು ಕೊಟ್ಟಿರಲಿಲ್ಲ. ನನ್ನ ಮಗನ ಸುರಕ್ಷತೆ ನನಗೆ ಬಹಳು ಮುಖ್ಯ. ಅವನನ್ನು ಉತ್ತಮ ವಾತಾವರಣದಲ್ಲಿ ಬೆಳೆಸಬೇಕು ಎಂಬ ದೃಷ್ಟಿಯಿಂದ ಪ್ರತ್ಯೇಕವಾಗಿ ಜೀವನ ಮಾಡುತ್ತಿದ್ದೇನೆ. ಆದರೆ ಅಲ್ಲಿಗೂ ಬಂದು ಗಲಾಟೆ ಮಾಡಿದ್ದಾರೆ. ಮಗನ ಸುರಕ್ಷತೆ ದೃಷ್ಟಿಯಿಂದ ದರ್ಶನ್ ಗೆ ಕರೆಸಿ ಬುದ್ದಿವಾದ ಹೇಳಿ ಅಂತ ಪೊಲೀಸರಿಗೆ ತಿಳಿಸಿದ್ದೆ’ ಅಂತ ಹೇಳಿದ್ದಾರೆ.

ಇದೀಗ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಕೂಡ ಪ್ರಕರಣದ ವಿಚಾರಣೆ ನಡೆಸಿದ್ದಾರೆ. ಹಿರಿಯ ನಟ ಅಂಬರೀಶ್ ಅವರು ಈ ಗಲಾಟೆಗೆ ಮತ್ತೊಂದು ಸುತ್ತಿನ ‘ಆಪರೇಷನ್ ಅಂತ್ಯ’ ನಡೆಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಒಂದೆರಡು ದಿನದಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆ ಇದೆ. ವಿಚ್ಛೇದನ ಪಡೆಯಲು ಇಬ್ಬರೂ ನಿರ್ಧರಿಸಿದ್ದಾರೆ. ಆದರೆ ಆಸ್ತಿ ಹಂಚಿಕೆ ಮತ್ತು ಮಗು ಯಾರ ಬಳಿ ಇರಬೇಕು ಎಂಬ ವಿಚಾರ ಅಡ್ಡಿಯಾಗಿದೆ. ದಾಂಪತ್ಯ ಮುರಿದು ಬೀಳುವುದು ಬಹುತೇಕ ನಿಚ್ಚಳವಾಗಿದ್ದು, ಪರಸ್ಪರ ಒಪ್ಪಿಗೆಯೋ, ನ್ಯಾಯಾಲಯದ ವಿಚಾರಣೆ ಮೂಲಕವೋ ಎಂಬುದಷ್ಟೇ ಬಾಕಿ ಉಳಿದಿದೆ.

Leave a Reply