ಮಕ್ಕಳ ಮೇಲೆ ನೀವು ಹೇರುವ ಅತಿಯಾದ ಶಿಸ್ತು ನಿಮ್ಮಿಂದ ಅವರನ್ನು ಅಷ್ಟೇ ದೂರಕ್ಕೆ ತಳ್ಳುತ್ತದೆ!

ಚಿತ್ರಕೃಪೆ : ದಿ ವೀಕ್

author-shamaಅದೊಂದು ಕಾಲವಿತ್ತು; ಮದುವೆಗೂ ಮುನ್ನ ಗಂಡು ಹೆಣ್ಣು ಮಾತಾಡುವುದಿರಲಿ, ನೋಡುವುದಕ್ಕೂ ಕೂಡ ಅವಕಾಶವಿರಲಿಲ್ಲ. ಇದು ಬದಲಾಗಿರುವ ಜಮಾನ. ಮದುವೆಗೂ ಮುನ್ನವೇ ಹುಟ್ಟಲಿರುವ ಮಗುವಿನ ಬಗ್ಗೆ ಕೂಡ ಮಾತುಕತೆ ನಡೆದಿರುತ್ತದೆ. ಇಂತಿಷ್ಟು ವರ್ಷದಲ್ಲಿ ಇಷ್ಟಿಷ್ಟು ದುಡಿದು, ಹೀಗ್ಹೀಗೆ ಉಳಿಸಿ, ಆ ದೊಡ್ಡ ಶಾಲೆಯ ಫೀ ತುಂಬುವುದಕ್ಕೆ ಸಶಕ್ತರು ಎನಿಸಿದಾಗ ಮಗುವಿನ ಬರುವಿಕೆ ನಿರ್ಧಾರವಾಗಿರುತ್ತದೆ. ಈ ‘ಯೋಜನಾ ಆಯೋಗ’ದ ಗಡಿಬಿಡಿಯಲ್ಲಿ ಸಹಜ ಸುಖ ಕಳೆದೇ ಹೋಗಿರುತ್ತದೆ. ಮಗು ಹುಟ್ಟಿದಾಗ ಅದರ ಲಾಲನೆ ಪಾಲನೆ ಆಟಗಳ ಖುಷಿಗಿಂತಲೂ ಮಗುವಿಗಾಗಿ ತಾವು ಪಟ್ಟ ಶ್ರಮವಷ್ಟೇ ರಿಂಗಣಿಸುತ್ತಿರುತ್ತದೆ. ಫಲವಾಗಿ ತನ್ನ ಮಗು ‘ಫಸ್ಟ್ Rank ರಾಜು’ ಆಗುವುದಕ್ಕೆ ಏನೆನು ಬೇಕೋ ಆ ತಯಾರಿ ಶುರು. ಅಷ್ಟು ವರ್ಷಗಳ ತಮ್ಮ ಕಷ್ಟ ವ್ಯರ್ಥವಾಗದೇ ಇರಲು ಅಪ್ಪ ಅಮ್ಮಂದಿರ ಸರ್ವ ಪ್ರಯತ್ನದ ಫಲವೇ ‘ಹೆಲಿಕಾಪ್ಟರ್ ಪೇರೆಂಟಿಂಗ್’ ಗೆ ನಾಂದಿ.

ಹೆಲಿಕಾಪ್ಟರ್ ಪೇರೆಂಟಿಂಗ್ ಅಂದರೆ ಮಕ್ಕಳನ್ನು ನೆರಳಿನಂತೆ ಹಿಂಬಾಲಿಸುವುದು, ಅತೀ ರಕ್ಷಣೆ ನೀಡುತ್ತ ಅವರಿಗೆ ಆಲದ ಮರವಾಗುವುದು ಮತ್ತು ಅವರ ಪರವಾಗಿ ಎಲ್ಲವನ್ನೂ ತಾವೇ ಮಾಡುತ್ತ ಮಕ್ಕಳಿಗೆ ಯಾವ ಕಷ್ಟವೂ ಗೊತ್ತಾಗದಂತೆ ಬೆಳೆಸಿದ್ದೇವೆಂದು ಹೆಮ್ಮೆಯಿಂದ ಬೀಗುವುದು. ಅಮೆರಿಕದ ಪ್ರಸಿದ್ಧ ಮಕ್ಕಳ ತಜ್ಞರಾದ ಫಾಸ್ಟರ್ ಡಬ್ಲ್ಯು ಕ್ಲೈನ್ ಹಾಗೂ ಜಿಮ್ ಫೇ ತಮ್ಮ `ಪೇರೆಂಟಿಂಗ್ ವಿತ್ ಲವ್ ಅಂಡ್ ಲಾಜಿಕ್: ಟೀಚಿಂಗ್ ಚಿಲ್ಡ್ರನ್ ರೆಸ್ಪಾನ್ಸಿಬಿಲಿಟಿ` (ಪ್ರೀತಿ ಹಾಗೂ ತರ್ಕಬದ್ಧ ಪೋಷಣೆ: ಮಕ್ಕಳಿಗೆ ಜವಾಬ್ದಾರಿ ಪಾಠ) ಎಂಬ ಕೃತಿಯಲ್ಲಿ 1990ರಲ್ಲಿ ಈ ಶಬ್ದವನ್ನ ಮೊದಲ ಬಾರಿ ಬಳಸಿದರು. ಇಂಥ ಅತಿ ಕಾಳಜಿಯನ್ನು ‘ಓವರ್ ಪೇರೆಂಟಿಂಗ್’ ಎಂದು ಮನಃಶಾಸ್ತ್ರಜ್ಞರು ಕರೆದರೆ ತಮ್ಮ ಕೈ ತೋಟದಲ್ಲಿ ಸಣ್ಣ ಕಳೆಯೂ ಬೆಳೆಯಲು ಬಿಡದ ಮಾಲಿಯ ಥರ ತಮ್ಮ ಮಕ್ಕಳ ಬಳಿ ಇವರು ವರ್ತಿಸುತ್ತಾರೆ ಎಂಬ ಸಕಾರಣ ಕೊಟ್ಟು ಪಾಶ್ಚಾತ್ಯ ದೇಶದ ಕೆಲ ಪ್ರೊಫೆಸರ್^ಗಳು ‘ಲಾನ್ ಮೂವರ್’ ಪೇರೆಂಟ್ಸ್ ಎಂದೂ ಕರೆದರು.

ಈಗಿನ ಬಹಳಷ್ಟು ಪೋಷಕರಿಗೆ ಮತ್ತೆ ಮತ್ತೆ ನೆನಪಾಗುವುದು ತಮ್ಮ ಬಾಲ್ಯ. ಆ ಕಷ್ಟಗಳು, ಇಲ್ಲಗಳು ತಮ್ಮ ಮಕ್ಕಳಿಗೂ ಮುಂದುವರಿಯುವುದು ಬೇಡವೆಂಬ ಕಾಳಜಿ. ಇದನ್ನು ನಿವಾರಿಸಲು ಬೇಕಾದಷ್ಟು ದುಡಿದು ಮಕ್ಕಳನ್ನು ‘ದೊಡ್ಡವರ’ ಶಾಲೆಗೆ ಸೇರಿಸಿ ಲೈಫ್ ಜಿಂಗಾ ಲಾಲಾ ಎನ್ನುವಂತೆ ಬೆಳೆಸಿದರಷ್ಟೇ ಸಾರ್ಥಕ್ಯವೆಂಬ ಗಟ್ಟಿ ನಂಬಿಕೆ. ಜತೆಗೇ ಮಗುವೇ ಮನೆಯಲ್ಲಿ ಉತ್ಸವ ಮೂರ್ತಿ. ಹುಟ್ಟಿದ ಕ್ಷಣದಿಂದ ಹಿಡಿದು ಪ್ರತಿ ನಗು ಅಳುವನ್ನು ಕ್ಯಾಮರಾದಲ್ಲಿ ಹಿಡಿದಿಟ್ಟು ಬೀಗುವ ತವಕ. ಜತೆಗೆ ಈಗ ಫೇಸ್ ಬುಕ್, ವಾಟ್ಸಾಪ್ ಮೂಲಕವೂ ಅದನ್ನು ಜಗತ್ತಿಗೆಲ್ಲ ಸಾರುವ ಉತ್ಸುಕತೆ. ಈ ಭರಾಟೆಯಲ್ಲಿ ಮಗುವಿನ ಜತೆಗೆ ತಾವೂ ನಗಬಹುದಿತ್ತು ಎನ್ನುವ ಸತ್ಯ ಅದೆಲ್ಲೋ ಮರೆತು ಹೋಗಿರುತ್ತದೆ. ಇನ್ನೂ ಶಾಲೆಗೆ ಸೇರದ ಮಗು ಮೊಬೈಲಿನಲ್ಲಿ ಗೇಮ್ಸ್ ಆಡುತ್ತದೆಂದರೆ ಅದು ಹೆಮ್ಮೆ.

ಶಾಲೆಯ ಆಯ್ಕೆಯಲ್ಲಿ ತಾವು ‘ದಿ ಬೆಸ್ಟ್’ ಎಂಬುದನ್ನೇ ಮಾಡಿದ್ದೇವೆಂಬ ಹಮ್ಮಿನ ಜತೆ ತಮ್ಮ ಈಡೇರದ ಕನಸುಗಳನ್ನು ಮಗುವಿನ ತಲೆಗೆ ತುಂಬುವ ಪ್ರಯತ್ನ. ಜತೆಗೆ ಅದಕ್ಕಾಗಿ ಕೋಚಿಂಗ್. ಮೊನ್ನೆ ಮಗಳು ಪ್ರಣತಿ ಆಟ ಮುಗಿಸಿ ಬಂದು “ಇವತ್ತಿಂದ ಚಿನ್ಮಯ್ ಆಟಕ್ಕೆ ಬರಲ್ವಂತಮ್ಮಾ; ಅವ್ನಿಗೆ ಈಗ ಬೇರೆ ಸ್ಕೂಲಂತೆ” ಅಂದಾಗ ಅಚ್ಚರಿಯಾಯ್ತು. ಶಾಲೆ ಬದಲಾಯಿಸಿದ್ದಕ್ಕೂ ಸಂಜೆ ಆಟಕ್ಕೂ ಸುತರಾಂ ಸಂಬಂಧ ಕಾಣಲಿಲ್ಲ ನನಗೆ. ವಾರದ ನಂತರ ಚಿನ್ಮಯನ ಅಮ್ಮ ಸಿಕ್ಕಿದಾಗ ಕುತೂಹಲಕ್ಕೆ ಕೇಳಿದರೆ “ಹೌದುರೀ ಈಗ ಟೆಕ್ನೋ ಸ್ಕೂಲಿಗೆ ಸೇರಿಸಿದ್ವಿ. ಏನ್ ಗೊತ್ತಾ ಅಲ್ಲಿ ಈಗಿಂದನೇ ಕಾಂಪಿಟಿಟಿವ್ ಎಕ್ಸಾಂಗಳಿಗೆ, ಸಿಇಟಿ, ಜಿ ಮ್ಯಾಟ್ ಥರದವಕ್ಕೆ ಹೇಗೆಲ್ಲ ಓದ್ಬೇಕು, ಏನೇನು ಮಾಡ್ಬೇಕು ಅಂತ ಹೇಳಿ ಕೊಡ್ತಾರೆ. ದಿನಾಲೂ ಡೈರಿನಲ್ಲಿ ಬರೆದು ಕಳಿಸ್ತಾರೆ. ಅದಷ್ಟನ್ನ ನಾವು ಮನೇಲಿ ಮಾಡಿಸಿದರಾಯ್ತು. ಆಮೇಲೆ ಒಂದೇ ಸಲ ಕಷ್ಟ ಪಡೋ ಬದಲು ಈಗಿಂದನೇ ಸ್ವಲ್ಪ ಅಭ್ಯಾಸ ಆದ್ರೆ ಓಳ್ಳೆಯದಲ್ವಾ? ನಾವಂತೂ ಏನೂ ಸಾಧಿಸ್ಲಿಲ್ಲ. ಇವನಾದ್ರೂ ಏನಾದ್ರೂ ಅಛೀವ್ ಮಾಡ್ಲಿ” ಅಂತ ಹೇಳುವಾಗ ಅವರ ಮುಖದ ಮೇಲೆ ಮಗನಾಗಲೇ ಜಗತ್ಪ್ರಸಿದ್ಧನಾದಂಥ ಭಾವ. ಅಷ್ಟಕ್ಕೂ ಅವನು ಎಷ್ಟನೇ ಕ್ಲಾಸು ಕೇಳಿದರೆ ಎರಡನೇ ತರಗತಿಯ ಕೂಸು.

ಈ ವಯಸ್ಸಲ್ಲಿ ಆಟದಲ್ಲೇ ಬಹಳಷ್ಟು ಕಲಿಯಬಲ್ಲ, ಸಮಾಜದಲ್ಲಿ ಚೆಂದಾಗಿ ಬೆರೆಯಬಲ್ಲ ಅವಕಾಶ ಕಸಿದುಕೊಂಡು ಮಗುವನ್ನು ಮನೆಯಲ್ಲಿ ಕೂಡಿಹಾಕಿ ಕಲಿಕೆಯ ಕಷಾಯ ಕುಡಿಸಿದರೆ ಅವನು ಮುಂದೆ ಸಮಾಜಮುಖಿಯಾದಾನು ಎಂಬ ಕಲ್ಪನೆಯೇ ತೀರ ಮೂರ್ಖತನ. ಇಂಥ ಒತ್ತಡಕ್ಕೆ ಬಿದ್ದ ಹುಡುಗ ಮಾನಸಿಕ ಸಮಸ್ಯೆಗಳಿಗೆ ಗುರಿಯಾಗದಿದ್ದರೆ ಸಾಕು ಎಂದುಕೊಂಡೆ.

ಸರಿ ಸುಮಾರು ದಶಕಗಳ ಹಿಂದೆಯೇ ಈ ಸಮಸ್ಯೆಯನ್ನು ಅಧ್ಯಯನ ಮಾಡಿದ ಕ್ಯಾಲಿಫೋರ್ನಿಯಾದ ಮನಃಶಾಸ್ತ್ರಜ್ಞೆ ಮೆಡೆಲೈನ್ ಲೆವಿನ್ 2006ರಲ್ಲಿ `ದಿ ಪ್ರಿನ್ಸ್ ಆಫ್ ಪ್ರಿವಿಲೆಜ್` ಎಂಬ ಪುಸ್ತಕ ಬರೆದಿದ್ದಾರೆ. ಹೆಚ್ಚು ಆದಾಯವಿರುವ ಮೇಲ್ವರ್ಗದ ಮಕ್ಕಳನ್ನು ಮತ್ತು ಅವರ ಮಾನಸಿಕ ಸಮಸ್ಯೆಗಳನ್ನು ಅಧ್ಯಯನ ಮಾಡಿ ಬರೆದ ಪುಸ್ತಕವಿದು. ಶಾಲೆಯಲ್ಲಿ ಒಳ್ಳೆಯ ಅಂಕ ಗಳಿಸುತ್ತಿರುವ ಮಕ್ಕಳು ದೊಡ್ಡವರಾದಂತೆ ‘ರಾಯರ ಕುದುರೆ ಕತ್ತೆ’ಯಾಗುವ ಮತ್ತು ಹಲವಾರು ಮನೋವ್ಯಾಧಿಗಳಿಗೂ ತುತ್ತಾಗುವುದು ಕಂಡಿತ್ತು. ಇವುಗಳಿಗೆ ಕಾರಣ ಕಂಡು ಹುಡುಕುವ ಯತ್ನದಲ್ಲಿ ಸಮಸ್ಯೆಗಳ ಬೆನ್ನು ಹತ್ತಿ ಹೋದ ಅವರಿಗೆ ಕಂಡಿದ್ದು ಬೆಚ್ಚಿ ಬೀಳಿಸುವ ಸತ್ಯ. ಗುರಿ ಸಾಧನೆಯ ದಾರಿಯಲ್ಲಿ ಇಂಚೂ ಅತ್ತಿತ್ತ ಸಾಗದಂತೆ ಲಗಾಮು ಹಾಕಿದ ತಂದೆ ತಾಯಿಯರು ಮಕ್ಕಳಿಗೆ ಬಾಲ್ಯವನ್ನೇ ಒದಗಿಸಿರಲಿಲ್ಲ. ಜತೆಗೇ ಬೇಕಾದ ಅಷ್ಟೂ ಅವಶ್ಯಕತೆಗಳ ಪೂರೈಕೆಯಿಂದ ದುಃಖ ಮರೆಯಲು ಅವರಲ್ಲಿ ಮಾದಕ ವ್ಯಸನದಂಥ ಚಟಗಳನ್ನು ಕೂಡ ಹುಟ್ಟು ಹಾಕಿತ್ತು.

ಒಂದು ನಿರ್ದಿಷ್ಟ ವಯಸ್ಸಿನ ವರೆಗೂ ಮಕ್ಕಳನ್ನು ಸದಾ ನಮ್ಮ ಪರಿಧಿಯಲ್ಲಿ ಇಟ್ಟುಕೊಂಡು ಸಾಕಬೇಕು, ಅವರಿಗೆ ತಪ್ಪು ಸರಿಗಳ ತಿಳವಳಿಕೆ ನೀಡಬೇಕು ನಿಜ. ಅದು ಬಂಧವಾಗಬೇಕೇ ಹೊರತು ಬಂಧನ ಎನಿಸಿಕೊಳ್ಳಬಾರದು. ‘ಅತೀ ಶಿಸ್ತಿನಿಂದ ಮಕ್ಕಳನ್ನು ಬೆಳೆಸುವ ಕುಟುಂಬವು ಅತೀ ಹೆಚ್ಚು ಸುಳ್ಳು ಹೇಳುವ ಮಕ್ಕಳನ್ನು ಸೃಷ್ಟಿಸುತ್ತದೆ’ ಎಂದು ಎಲ್ಲೋ ಓದಿದ ನೆನಪು. ಇದರಲ್ಲಿ ಹುರುಳಿಲ್ಲದಿಲ್ಲ.

ಮಕ್ಕಳ ಕಡೆಗೆ ಸದಾ ನಿಗಾ ವಹಿಸಿ ತಪ್ಪಿದಾಗಷ್ಟೇ ತಿದ್ದುವ ಹಳೆಯ ಪದ್ಧತಿಯೇ ಬಹಳ ಸೂಕ್ತವೆಂದು ಹೇಳುತ್ತಾರೆ ಚೀನಾದ ತತ್ವಜ್ಞಾನಿ ಲಾವೋಜಿ. ಭಾರತೀಯರಿಗೆ ಅತ್ತ ಪೂರ್ಣವಾಗಿ ಪಾಶ್ಚಾತ್ಯ ಅನುಕರಣೆಯೂ ಸಾಧ್ಯವಾಗದೇ, ಇತ್ತ ನಮ್ಮ ಪದ್ಧತಿಯಲ್ಲೇ ಇರುವುದಕ್ಕೆ ಮನಸ್ಸಿಲ್ಲದೇ ಗೊಂದಲದ ಕಾಲಘಟ್ಟದಲ್ಲಿ ಮಕ್ಕಳು ನಲುಗುತ್ತಿದ್ದಾರೆ. ಜೀವದಾಯಿಯಾದ ಕೃಷಿಯಂಥದ್ದಕ್ಕೆ, ಜಗತ್ತಿಗೇ ಬೆಳಕು ನೀಡಬಲ್ಲ ವಿಜ್ಞಾನಿಯಾಗುವುದಕ್ಕೆ, ಸಮಾಜ ಕಟ್ಟ ಬಹುದಾದ ಶಿಕ್ಷಕ ವೃತ್ತಿಗೆ ಮಕ್ಕಳನ್ನು ಪ್ರೋತ್ಸಾಹಿಸುವವರಿಲ್ಲ. (ಇವುಗಳಲ್ಲಿ ದುಡ್ಡಿನ ಹೊಳೆಯಿಲ್ಲ!!!) ಬದಲಿಗೆ ತಾನು ಸಾಧಿಸಲಾರದ ಇಂಜಿನಿಯರಿಂಗ್, ಮೆಡಿಕಲ್, ಕ್ರಿಕೆಟರ್, ಸಿನೆಮಾ ನಟಿ/ನಟ, ಐಎಎಸ್, ಐಪಿಎಸ್ ಮುಂತಾದ ದುಡ್ಡು ತರಬಲ್ಲವುಗಳತ್ತ ಮಾತ್ರ ಪೋಷಕರ ಕಣ್ಣು ನೆಟ್ಟಿದೆ. ಇದಾವುದೂ ಅರ್ಥವಾಗದ ಮಗುವಿನ ಕಣ್ಣು ಕೆಲಸದಾಕೆಯ ತನ್ನಷ್ಟೇ ವಯಸ್ಸಿನ ಮಕ್ಕಳು ಆಡುತ್ತಿರುವ ಚೆಂಡಿನ ಮೇಲೆ, ಅವರ ಕಿಲ ಕಿಲ ನಗುವಿನ ಮೇಲೆ ನೆಟ್ಟಿದೆ. ಮಕ್ಕಳ ಕನಸುಗಳು ಮುರುಟಿ ಕಂಬನಿ ಚಿಮ್ಮಿದರೆ ಸಾಧನೆಯ ದಾರಿಯಲ್ಲಿ ಸಾಗುವಾಗ ಮಂಜುಗಣ್ಣುಗಳಿಗೆ ದಾರಿಯೂ ಕಾಣದು; ಗುರಿಯೂ ಸಿಕ್ಕದು. ಇಂದಿನ ಪ್ರತಿ ತಾಯ್ತಂದೆ ಈ ಬಗ್ಗೆ ಗಮನ ಹರಿಸಬೇಕಿದೆ.

1 COMMENT

  1. ತುಂಬಾ ಚೆನ್ನಾಗಿ ಬರೆದಿದ್ದೀರಿ ಶಮಾ ಅವರೆ. ಸಮಾಜ ತಾನೇ ಸೃಷ್ಟಿಸಿಕೊಂಡಿರುವ ಈ ಗೊಂದಲದಿಂದ ಹೇಗೆ ತಾನೇ ಮುಕ್ತಿ ಪಡೆಯುತ್ತದೋ. ಇದನ್ನು ಕಾಲವೇ ನಿರ್ಣಯಿಸಬೇಕು.

Leave a Reply