ಯೋಧರಿಂದ ಕೂಲಿ ಮಾಡಿಸಿಕೊಂಡಿದ್ದಕ್ಕೆ ಕುಂಭಮೇಳದ ಕುತರ್ಕ, ಭಕ್ತರಿಗೇಕೆ ಅರ್ಥವಾಗದು ಬ್ರಾಂಡ್ ಗುರುಗಳ ಮರ್ಮ?

ಪ್ರವೀಣ್ ಕುಮಾರ್

ಯಮುನಾ ನದಿಯ ಪ್ರವಾಹ ಪ್ರದೇಶದಲ್ಲಿ ಬೃಹತ್ ಕಾರ್ಯಕ್ರಮ ಆಯೋಜನೆಯಿಂದ ಪರಿಸರಕ್ಕೆ ಆಗುತ್ತಿರುವ ಹಾನಿಗೆ, ಆರ್ಟ್ ಆಫ್ ಲಿವಿಂಗ್ ₹5 ಕೋಟಿ ದಂಡ ತುಂಬುವಂತೆ ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್ (ಎನ್ ಜಿ ಟಿ) ಬುಧವಾರ ತೀರ್ಪಿತ್ತಿತ್ತಷ್ಟೆ. ಆದರೆ ತಾವು ತಪ್ಪು ಮಾಡದಿರುವುದರಿಂದ, ಜೈಲಿಗೆ ಬೇಕಾದರೆ ಹೋಗುವೆ ಆದ್ರೆ ದಂಡ ಕಟ್ಟಲ್ಲ ಅಂತ ರವಿಶಂಕರ್ ಗುರೂಜಿ ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಆದರೆ ಎನ್ ಜಿ ಟಿ ಶುಕ್ರವಾರ ಸಂಜೆ 5 ಗಂಟೆ ಒಳಗೆ ಆರ್ಟ್ ಆಫ್ ಲಿವಿಂಗ್ ತನ್ನ ಪಾಲಿನ ದಂಡ ಕಟ್ಟಬೇಕು ಅಂತ ಹೇಳಿದೆ.

ಇನ್ನು ಯೋಧರನ್ನು ಬಳಸಿಕೊಂಡಿರುವುದರ ಕುರಿತೂ ರವಿಶಂಕರರಿಗೆ ಯಾವುದೇ ಪಶ್ಚಾತಾಪವಿಲ್ಲ. ಇದು ಸರ್ಕಾರಕ್ಕೆ ಸನಿಹವಾಗಿರುವ ತಮಗೆ ಸಿಕ್ಕಿರುವ ವಿಶೇಷ ಸೌಲಭ್ಯ ಎಂಬ ಆರೋಪವನ್ನೂ ತಳ್ಳಿಹಾಕಿದ್ದಾರೆ. ಕುಂಭಮೇಳಕ್ಕೆ ಮಿಲಿಟರಿ ಬಳಸಿಕೊಳ್ಳುವುದಾದರೆ ಲಕ್ಷಾಂತರ ಜನ ಸೇರಿಸುವ ತಮಗೇಕಿಲ್ಲ ಎಂಬ ತರ್ಕ ಅವರದ್ದು.

ಎನ್ ಜಿ ಟಿ ಹಸಿರಿಗೆ ಸಂಬಂಧಿಸಿದಂತೆ ದೇಶದ ಉನ್ನತ ಕೋರ್ಟ್. ಆ ತೀರ್ಪು ಒಪ್ಪಿಗೆಯಿಲ್ಲದಿದ್ದರೆ ಮೇಲ್ಮನವಿ ಹೋಗುವುದು ಸ್ವಾಭಾವಿಕ. ಸುಪ್ರೀಂ ಕೋರ್ಟಿನಲ್ಲಿ ತಮ್ಮ ವಾದಕ್ಕೆ ಜಯವಾಗಲಿದೆ, ಅಲ್ಲಿಯೂ ಒಮ್ಮೆ ದಂಡ ಕಟ್ಟುವಂತೆ ಹೇಳಿದರೂ ತಾವು ಜೈಲಿಗೆ ಹೋಗಲು ಸಿದ್ಧ ಹೊರತು ದಂಡ ಕಟ್ಟಲ್ಲ. ಏಕೆಂದರೆ ತಪ್ಪು ಮಾಡಿಲ್ಲ ಅನ್ನೋದು ರವಿಶಂಕರ್ ಮಾತು.

ಪರಿಸರ ಉಲ್ಲಂಘನೆ ಸಂಬಂಧದ ಕಾನೂನು ಪ್ರಕ್ರಿಯೆಗಳು ಅದರ ಪಾಡಿಗೆ ನಡೆದುಕೊಳ್ಳಲಿ. ಆದರೆ ಕುಂಭಮೇಳದ ಉದಾಹರಣೆ ಇಟ್ಟುಕೊಂಡು ಯೋಧರ ಬಳಕೆ ಸಮರ್ಥಿಸಿಕೊಳ್ಳುವ, ಇದನ್ನು ಖಾಸಗಿ ಕಾರ್ಯಕ್ರಮವೆಂದು ನೋಡಬಾರದೆಂದು ವಾದಿಸುವ ಆರ್ಟ್ ಆಫ್ ಲಿವಿಂಗ್ ಪ್ರತಿಪಾದನೆಯ ದೋಷಗಳೇನು ನೋಡೋಣ.

ಕುಂಭಮೇಳಕ್ಕೆ ಯಾವುದೇ ಒಂದು ಸಂಸ್ಥೆ- ವ್ಯಕ್ತಿಯ ಬ್ರಾಂಡ್ ಇಲ್ಲ. ಕುಂಭಮೇಳವೆಂದರೆ ಜನಪ್ರವಾಹ, ಸಾಮಾನ್ಯರ ಭಕ್ತಿಯ ವಿರಾಟ್ ರೂಪ, ಸಂತರ ಪ್ರವಾಹ ಇವೆಲ್ಲ ಕಾಣಸಿಗುತ್ತದೆ. ಆದರೆ ಇವರೆಲ್ಲರನ್ನು ನಿರ್ದೇಶಿಸುವುದಕ್ಕೆ ಆರ್ಟ್ ಆಫ್ ಲಿವಿಂಗ್ ನಂಥ ಯಾವುದೇ ಒಂದು ಸಂಸ್ಥೆ ನಿಂತಿರುವುದಿಲ್ಲ.ಅಂಥ ಕುಂಭಮೇಳವನ್ನು ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮ ಆಯೋಜನೆಗೆ ಹೋಲಿಸುವ ಕೆಲಸವನ್ನು ಕಂಡಿದ್ದನ್ನೆಲ್ಲ ಹಿಂದುತ್ವಕ್ಕೆ ಹೋಲಿಸಿಕೊಂಡು ಕುರಿಗಳಾಗುವ ವಿಚಾರಶೂನ್ಯ ಜನರಷ್ಟೇ ಮಾಡಬಲ್ಲರು.

ಸುಮ್ಮನೇ ಆರ್ಟ್ ಆಫ್ ಲಿವಿಂಗ್ ವೆಬ್ ಸೈಟ್ ಗೆ ಹೋದರೂ ಅಲ್ಲಿ ಆನ್ ಲೈನ್ ಶಾಪಿಂಗ್ ಸಹ ಇದೆ. ಇವರು ನಡೆಸುವ ಶಾಲೆಗಳಿಗೆ ಶುಲ್ಕವಿಲ್ಲದೇ ಇಲ್ಲ. ಆರ್ಟ್ ಆಫ್ ಲಿವಿಂಗ್ ಅನ್ನೋದೊಂದು ಉತ್ತಮ ಬಿಸಿನೆಸ್ ಮಾಡೆಲ್. ಹಾಗೆ ಮಾಡೆಲ್ ಇಟ್ಟುಕೊಂಡಿರೋದ್ರಲ್ಲಿ ತಪ್ಪಿಲ್ಲ. ಆದರೆ ಅದನ್ನೇ ‘ಸಂತಗಿರಿ’, ಅಧ್ಯಾತ್ಮ, ಹಾಳೂಮೂಳು ಅಂತ ಬಿಂಬಿಸಿ ವಿಶ್ವಕಲ್ಯಾಣದ ಪೋಸು ಕೊಟ್ಟು ಯೋಧರ ಬೆನ್ನಮೇಲೆ ಕಂಬಿ ಹೊರೆಸಿ ಭಾಷಣ ಹೊಡೆಯೋದು ಬೇರೆ ಕೇಡು.

aol

ಭಾರತದ ಅಧ್ಯಾತ್ಮದ ಇಂಡಸ್ಟ್ರಿಗಳು ಮತ್ತು ಕಾರ್ಪೋರೇಟ್ ಭಾರತ ಇವೆರಡೂ ಇಂಥ ವಿಷಯ ಬಂದಾಗಲೆಲ್ಲ ತಾವು ಮಾಡಿರುವ ಒಳ್ಳೇ ಕೆಲಸದ ಪಟ್ಟಿ ಕೊಡುತ್ತವೆ. ಕಂಪನಿಗಳು ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿಯಲ್ಲಿ ತಾವು ಏನಕ್ಕೆಲ್ಲ ದುಡ್ಡು ಹರಿಸಿದ್ದೇವೆ ಅಂತ ಬಡಾಯಿ ಕೊಚ್ಚಿದರೆ, ಎಒಎಲ್ ನಂಥ ಅಧ್ಯಾತ್ಮದ ಇಂಡಸ್ಟ್ರಿಗಳು ತಮ್ಮನ್ನು ಯಾರಾದರೂ ಪ್ರಶ್ನಿಸಿದರೆ ಹಳ್ಳಿಗಳಲ್ಲಿ ಎಷ್ಟು ಸ್ಕೂಲು ಕಟ್ಟಿದ್ದೇವೆ ಗೊತ್ತಾ ಅಂತ ಲೆಕ್ಕ ಬಿಚ್ಚಿಟ್ಟು ಪ್ರಶ್ನಿಸಿದವನನ್ನು ಹೆದರಿಸುತ್ತವೆ. ಭಾರತಕ್ಕೆ ಹೆಮ್ಮೆ ತರುವ ಇಂಥದೊಂದು ಕಾರ್ಯಕ್ರಮ ಆಯೋಜನೆಗೆ ತಮ್ಮನ್ನು ಪ್ರಶಂಸಿಸಬೇಕು ಅಂತ ರವಿಶಂಕರ್ ಹೇಳುತ್ತಿರುವುದೂ ಇದೇ ಜಾಡಿನಲ್ಲಿ.

ಇವರು ಪಟ್ಟಣಗಳ ಶಾಲೆಯಲ್ಲಿ ಪಡೆಯುತ್ತಿರುವ ಡೊನೇಷನ್, ಆ ಶಾಲೆಗಳನ್ನು ನಡೆಸುವುದಕ್ಕೆ ಇವರಿಗೆ ಸಿಕ್ಕಿರುವ ರಿಯಲ್ ಎಸ್ಟೇಟ್ ಇವೆಲ್ಲದರ ಎದುರು ಇವರ ‘ಸಹಾಯಾರ್ಥ- ಕಲ್ಯಾಣಾರ್ಥ’ ಆಟಗಳೆಲ್ಲ ತುಂಬ ದೊಡ್ಡದೇನಲ್ಲ. ಇವರು ಮಾಡೋ ಕೆಲಸಕ್ಕೆಲ್ಲ ದೊಡ್ಡ ದೊಡ್ಡ ಕಟೌಟ್ ಹಾಕಿಕೊಂಡು ತಮ್ಮ ‘ಬ್ರಾಂಡ್’ ಹೆಚ್ಚಿಸಿಕೊಳ್ಳುವುದಕ್ಕೇನು ಮುಲಾಜಿಟ್ಟುಕೊಂಡಿದ್ದಾರಾ? ನಿಸ್ವಾರ್ಥ ಸೇವೆ ಮಾಡ್ತೀರಿ ಅಂತಾದ್ರೆ ನಿಮ್ಮ ಆಳೆತ್ತರದ ಪೋಸ್ಟರ್ ಗಳೇಕೆ ಸ್ವಾಮಿ? ನಿಮ್ಮ ಕಾರ್ಯಕ್ರಮದ ಆಯೋಜನೆಗೆ ಕಬ್ಬಿಣದ ಕಂಬಿ ಹೊತ್ತು ಅಕ್ಷರಶಃ ಕಾಮಗಾರಿ ಕೆಲಸಗಾರರಾಗಿ ದುಡಿದ ಸೈನಿಕರ ಫೋಟೋದಿಂದಲೇ ವೇದಿಕೆ ಶೃಂಗರಿಸಿಬಿಡಿ ನೋಡೋಣ? ಅದೆಲ್ಲ ಕೇಳ್ಬೇಡಿ, ನಮ್ಮದೇನಿದ್ರೂ ಲೋಕಕಲ್ಯಾಣಾರ್ಥ ‘ನೊಬೆಲ್’ ಸೇವೆ!

ಅದು ಬೆನ್ನಿಹಿನ್ ಇರಲಿ, ಹಿಂದು ಸಂತನಿರಲಿ… ಸರ್ಕಾರಿ ವ್ಯವಸ್ಥೆ ಇಂಥದಕ್ಕೆಲ್ಲ ಗೋಣು ಅಲ್ಲಾಡಿಸುವುದನ್ನು ವಿರೋಧಿಸಬೇಕಿರುವ ಪ್ರಜ್ಞಾವಂತರೆಲ್ಲ ರೈಟು- ಲೆಫ್ಟುಗಳಲ್ಲಿ ಹರಡಿಕೊಂಡು, ಈ ಹಿಂದೆ ಅವ್ರು ಗಬ್ಬೆಬ್ಸಿದಾರಾದ್ದರಿಂದ ಈಗ ಇವರಿಗೆ ಆಟ ಆಡೋಕೆ ಬಿಡಿ ಎಂಬಂತೆ ವಾದ ಮಾಡಿಕೊಂಡಿದ್ದಾರೆ. ಈ ಬುದ್ಧಿಹೀನ ಭಕ್ತರ ಭಾವನೆಗಳ ಇಟ್ಟಿಗೆ ಮೇಲೆ ಉದ್ಯಮ ಸಾಮ್ರಾಜ್ಯಗಳೇಳುತ್ತವೆ. ನಮ್ಮ ಜನ ಕೃತಾರ್ಥರಾಗಿ ಭಾರತ ವಿಶ್ವಗುರು ಆಯ್ತು ಅಂತ ಅಡ್ಡಡ್ಡ ಬೀಳುತ್ತಾರೆ.

1 COMMENT

  1. ಲೇಖಕರು ತೀರಾ ವೈಯುಕ್ತಿಕ ಮಟ್ಟದ ಆಸಕ್ತಿ ತೆಗೆದುಕೊಂಡು ರವಿಶಂಕರ್ ಗುರೂಜಿಗಳ ಆಶ್ರಮದ ಕಾರನಾಮೆಗಳನ್ನು ಪತ್ತೆ ಹಚ್ಚಿರುವ ಹಾಗಿದೆ.. ರವಿಶಂಕರರನ್ನು ಹಾಗೂ ಭಕ್ತರನ್ನು ಟೀಕಿಸುವ ಭರದಲ್ಲಿ ಒಂದು ವಿಷಯ ಮರೆತಂತಿದೆ, ಸೇನಾ ಬಳಕೆಗೆ ಮನವಿ ಸಲ್ಲಿಸಿದ್ದು ದೆಹಲಿ ಸರ್ಕಾರದ ಸಚಿವರೇ ಹೊರತು ರವಿಶಂಕರರಲ್ಲ.. ಇಷ್ಟಕ್ಕೂ ಯಾರು ಕರೆದರೂ ಬರುವುದಕ್ಕೆ ಭಾರತೀಯ ಸೇನೆಯೇನೂ ಖಾಸಗಿ ಗುತ್ತಿಗೆದಾರನಲ್ಲವಲ್ಲ? ಇಲ್ಲಿ ವಿಷಯವಿರುವುದು ಸೇನೆಯ ಬಳಕೆ ಸರಿಯೇ ತಪ್ಪೇ ಎಂಬುದೇ ಹೊರತು ರವಿಶಂಕರರು ಏನು ಮಾರುತ್ತಾರೆ, ಏನು ಮಾಡುತ್ತಾರೆ ಎಂಬುದಲ್ಲ.. ಇಷ್ಟೆಲ್ಲಾ ಬರೆದವರು ರವಿಶಂಕರರ ಶಿಷ್ಯರು ಯಮುನೆಯನ್ನು ಶುಚಿಗೊಳಿಸಿದ್ದರ ಬಗ್ಗೆ ಒಂದು ಮಾತೂ ಬರೆಯದಿರುವುದು ವಿಷಯದ ಕೊರತೆಯಿಂದಲೋ ಅಥವಾ ಜಾಣ ಮರೆವೋ?

Leave a Reply