ಸರ್ಕಾರಿ ಬಂಗಲೆ ಅನಧಿಕೃತ ನಿವಾಸಿಗಳಿಗೆ ಮುಲಾಜಿಲ್ಲದೇ ಗೇಟ್ಪಾಸ್, ಇದೂ ಮೋದಿ ಸರ್ಕಾರದ್ದೊಂದು ಸಕ್ಸಸ್!

ಡಿಜಿಟಲ್ ಕನ್ನಡ ಟೀಮ್

ಸರ್ಕಾರಿ ಸೌಲಭ್ಯಗಳನ್ನು ರಾಜಕಾರಣಿಗಳು ತಮ್ಮ ಮನೆಯ ಆಸ್ತಿ ಎಂಬಂತೆ ಅನುಭವಿಸುತ್ತಾರೆ. ಅಧಿಕಾರ ಮುಗಿದ ನಂತರ ಅದನ್ನು ಬಿಡಲು ಬಿಲ್ ಕುಲ್ ಸಿದ್ಧರಿಲ್ಲ. ಇದಕ್ಕೆ ಸೂಕ್ತ ಉದಾಹರಣೆ, ಅಧಿಕಾರ ಮುಗಿದಿದ್ದರೂ ದೆಹಲಿಯ ಲುಟ್ಯೆನ್ಸ್ ಪ್ರದೇಶದಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ಮಾಜಿ ಕೇಂದ್ರ ಸಚಿವರು ಮತ್ತು ಸಂಸದರು ಠಿಕಾಣಿ ಹೂಡಿರುವುದು. ಈಗಿನ ಕೇಂದ್ರ ಸರ್ಕಾರ ಮುಲಾಜಿಲ್ಲದ ಕ್ರಮಕ್ಕೆ ಮುಂದಾಗಿದೆ.

ಈ ಬಗ್ಗೆ ನಗರಾಭಿವೃದ್ಧಿ ರಾಜ್ಯ ಸಚಿವ ಬಾಬುಲ್ ಸುಪ್ರಿಯೋ ಲೋಕಸಭೆಯಲ್ಲಿ ಪ್ರಮುಖ ಅಂಕಿ ಅಂಶಗಳನ್ನು ಬುಧವಾರ ಬಹಿರಂಗ ಪಡಿಸಿದ್ದಾರೆ. 2013ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 246 ಮನೆಗಳನ್ನು ಖಾಲಿ ಮಾಡಿಸಿತ್ತು. ನಂತರ 2014ರಲ್ಲಿ ಈ ಸಂಖ್ಯೆ ದ್ವಿಗುಣವಾಯ್ತು. 2015ರಲ್ಲಿ ಮೋದಿ ಸರ್ಕಾರದ ವೇಳೆ ಈ ಸಂಖ್ಯೆ 746ಕ್ಕೆ ಏರಿತು. ಇನ್ನು 1207 ಮನೆಗಳಲ್ಲಿ ಅನಧಿಕೃತವಾಗಿ ವಾಸವಿದ್ದಾರೆ. ಕಳೆದ ಮೂರು ವರ್ಷದಲ್ಲಿ ಸಾರ್ವಜನಿಕ ಆಸ್ತಿ ಕಾಯ್ದೆ ಅಡಿ ಒಟ್ಟು 1531 ಮನೆಗಳಲ್ಲಿ ಅನಧಿಕೃತವಾಗಿ ವಾಸವಾಗಿದ್ದವರನ್ನು ತೆರವುಗೊಳಿಸಲಾಗಿದೆ ಎಂಬ ಮಾಹಿತಿಯನ್ನು ಬಾಬುಲ್ ನೀಡಿದರು.

ಈ ಮಾಹಿತಿಯನ್ನೇ ಇಟ್ಟುಕೊಂಡು ಸಾಮಾಜಿಕ ಮಾಧ್ಯಮಗಳಲ್ಲೀಗ ಭರಪೂರ ಚರ್ಚೆ. ಕೆಲವು ರಾಜಕೀಯ ನೇತಾರರು ಅಸಹಿಷ್ಣುತೆ ಅಂತ ಒದ್ದಾಡುತ್ತಿರುವುದಕ್ಕೆ ಇದೇ ಕಾರಣವಿರಬಹುದೇ ಅಂತಲೂ ಟ್ವೀಟಿಗರೀಗ ಪ್ರಶ್ನಿಸುತ್ತಿದ್ದಾರೆ.

ಹೀಗೆ ಅಕ್ರಮ ನಿವಾಸಿ ನೇತಾರರನ್ನು ತೆರವುಗೊಳಿಸುವ ಕಾರ್ಯ ರಾತ್ರಿ ಬೆಳಗಲ್ಲೇ ಆದದ್ದಲ್ಲ. ಈ ವಿಚಾರದಲ್ಲಿ ರಾಜಿಯೇ ಇಲ್ಲದೇ ಪಟ್ಟು ಬಿಡದಂತೆ ಕಾರ್ಯ ಸಾಧಿಸಿದ ಹೀರೋ ಅಂತಂದ್ರೆ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು!

ಅವರ ಕಟ್ಟುನಿಟ್ಟಿನ ನಿರ್ಧಾರದಿಂದ ಹಿಂದಿನ ವರ್ಷವೇ ಅನಧಿಕೃತವಾಗಿ ಸರ್ಕಾರಿ ಬಂಗಲೆಗಳನ್ನು ಬಳಸುತ್ತಿದ್ದ 461 ಸಚಿವರು, ಸಂಸದರು ಮತ್ತು ಅಧಿಕಾರಿಗಳಿಗೆ ಗೇಟ್ ಪಾಸ್ ಸಿಕ್ಕಿತ್ತು. ಸಂಸತ್ ಆವರಣದಲ್ಲಿ ವೆಂಕಯ್ಯ ನಾಯ್ಡು ಅವರನ್ನು ‘ಎವಿಕ್ಷನ್ ಮ್ಯಾನ್’ ಎಂದೇ ಕರೆಯಲಾಗುತ್ತಿದೆ.

ಅಧಿಕಾರದಲ್ಲಿರುವ ಕೇಂದ್ರ ಸಚಿವರು ಮತ್ತು ಸಂಸದರಿಗೆ ಲುಟ್ಯೆನ್ಸ್ ಪ್ರದೇಶದಲ್ಲಿರುವ ಸರ್ಕಾರಿ ಬಂಗಲೆಗಳನ್ನು ನೀಡುವುದು ಸಹಜ. ಅಧಿಕಾರ ಅವಧಿ ಮುಕ್ತಾಯವಾದ ನಂತರ ಬಂಗಲೆ ಖಾಲಿ ಮಾಡುವುದು ಪದ್ಧತಿ. ಒಂದು ವೇಳೆ ಖಾಲಿ ಮಾಡದಿದ್ದರೆ, ಈ ಬಂಗಲೆಯಲ್ಲಿನ ವಾಸಕ್ಕೆ ಬಾಡಿಗೆ ಕಟ್ಟಬೇಕಿರುವುದು ಕಾನೂನು. 2015ರಲ್ಲೇ 429 ಮಾಜಿ ಸಚಿವರು ಮತ್ತು ಸಂಸದರಿಗೆ ಶೋಕಾಸ್ ನೋಟೀಸ್ ನೀಡಲಾಯ್ತು. ಆದರೆ, ಕೇವಲ 44 ಮಂದಿ ಮಾತ್ರ, ಈ ನೋಟೀಸ್ ಗೆ ಖಾಲಿ ಮಾಡಿದರು. ನಂತರ 37 ಮಂದಿಯನ್ನು ಬಲವಂತವಾಗಿ ಖಾಲಿ ಮಾಡಿಸಲಾಗಿದೆ. ಈ ಪೈಕಿ ಮಾಜಿ ಪ್ರಧಾನಿ ಚಂದ್ರಶೇಖರ್ ಪುತ್ರ ಮತ್ತು ರಾಷ್ಟ್ರೀಯ ಲೋಕ ದಳ ಮುಖ್ಯಸ್ಥ ಅಜಿತ್ ಸಿಂಗ್ ಪ್ರಮುಖರು. ಈ ಅಜಿತ್ ಸಿಂಗ್ ಇದೇ ವಿಷಯದಲ್ಲಿ ವಿವಾದ ಎಬ್ಬಿಸಿ ಅನುಕಂಪ ಗಿಟ್ಟಿಸೋದಕ್ಕೆ ನೋಡಿದರು. ನಾಯ್ಡು ಅದಕ್ಕೆ ಪ್ರತಿಯಾಗಿ ಪತ್ರಿಕಾಗೋಷ್ಟಿ ನಡೆಸಿ, ವಾಸ್ತವಾಂಶಗಳನ್ನು ಹರಡಿಟ್ಟು ಜಾಡಿಸಿದಾಗ ಬಾಯಿ ಮುಚ್ಚಿಕೊಳ್ಳಬೇಕಾಯಿತು.

ಅವಧಿ ಮುಗಿದ ನಂತರವೂ ಅನಧಿಕೃತವಾಗಿ ಬಂಗಲೆಯಲ್ಲೇ ಉಳಿದವರನ್ನು ತೆರವುಗೊಳಿಸುವುದಕ್ಕೆ ಅಧಿಕಾರಿಗಳೇನಾದರೂ ಜಾಣ ಕುರುಡುತನ ತೋರಿದರೆ ಅವರನ್ನೂ ಶಿಕ್ಷಿಸಲಾಗುತ್ತದೆ ಅಂತ ಎಚ್ಚರಿಸಿಬಿಟ್ಟಿದ್ದಾರೆ ವೆಂಕಯ್ಯ ನಾಯ್ಡು.

ಬಂಗಲೆ ತೊರೆಯಬೇಕಾದವರ ಪಟ್ಟಿಯಲ್ಲಿ ಇದ್ದವರೇನು ಬಡಪೆಟ್ಟಿಗೆ ಬಗ್ಗುವವರಾಗಿರಲಿಲ್ಲ. ರಾಜಕೀಯ ದಿಗ್ಗಜರಾದ ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್, ಜೆಡಿಯುನ ನಾಯಕ ಕೆ.ಸಿ ತ್ಯಾಗಿ ಮತ್ತು ಹಲವು ಯುಪಿಎ ಸಚಿವರು ಇದ್ದರು.

ಈಗ ಇಷ್ಟೆಲ್ಲ ಹೀರೋಗಿರಿ ತೋರುತ್ತಿರುವ ವೆಂಕಯ್ಯ ನಾಯ್ಡು ಅವರು 2004ರಲ್ಲಿ ಅಧಿಕಾರ ಕಳೆದುಕೊಂಡಾಗ ತ್ವರಿತವಾಗಿಯೇನೂ ಬಂಗಲೆ ಖಾಲಿ ಮಾಡಿರಲಿಲ್ಲ ಅಂತ ಕಾಂಗ್ರೆಸಿಗರು ಆರೋಪಿಸುತ್ತಾರೆ. ವಾಸ್ತವವಾಗಿ ಈಗಿನ ಬಿಜೆಪಿ ಸರ್ಕಾರಕ್ಕೆ ಕ್ಷಿಪ್ರ ಕ್ರಮ ಕೈಗೊಳ್ಳುವುದಕ್ಕೆ ಆಸರೆಯಾಗಿರುವುದು ಸುಪ್ರೀಂಕೋರ್ಟ್ ನ ನಿರ್ದೇಶನ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ವಿಚಾರಿಸುತ್ತಿದ್ದ ನ್ಯಾಯಾಲಯವು, ಆ ಸಂಬಂಧ- ‘ಅಧಿಕಾರ ಕಳೆದುಕೊಂಡ ನಂತರವೂ ಸರ್ಕಾರಿ ಬಂಗಲೆ ತೆರವುಗೊಳಿಸದೇ ಇರುವವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ ಅಂತ ವಿವರ ಕೊಡಿ’ ಅಂತ ಕೇಂದ್ರ ಸರ್ಕಾರಕ್ಕೆ ಕೇಳಿತು. ಈ ನಿರ್ದೇಶನ ಬರುವಷ್ಟರಲ್ಲಿ ಬಿಜೆಪಿ ಕೇಂದ್ರದ ಚುಕ್ಕಾಣಿ ಹಿಡಿದಿತ್ತು. ಸುಪ್ರೀಂ ನಿರ್ದೇಶನದ ಬಲದೊಂದಿಗೆ ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿರುವ ಶ್ರೇಯಸ್ಸು ಮಾತ್ರ ಮೋದಿ ಸರ್ಕಾರ ಮತ್ತು ವೆಂಕಯ್ಯ ನಾಯ್ಡು ಎಂಬ ಮುಂಚೂಣಿ ಮನುಷ್ಯನಿಗೆ ಸಲ್ಲುವುದರಲ್ಲಿ ತಪ್ಪಿಲ್ಲ.

Leave a Reply