ಸುದ್ದಿಸಂತೆ: ಮಲ್ಯ ಪಲಾಯನದ ಟೀಕಾಪರ್ವ, ಕನ್ಹಯ್ಯ ಹೀರೋಗಿರಿಗೆ ಟ್ವಿಸ್ಟ್… ನೀವ್ ತಿಳಿಬೇಕಿರೋ ಸುದ್ದಿ ಇಷ್ಟು

ಕನ್ಹಯ್ಯ ವಿರುದ್ಧ ಮತ್ತೊಂದು ಪ್ರಕರಣ

ದೇಶದ್ರೋಹ ಪ್ರಕರಣದಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಕಾಶ್ಮೀರದಲ್ಲಿ ಭಾರತೀಯ ಸೈನಿಕರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕಾನ್ಪುರ ನಾಗರೀಕ ನ್ಯಾಯಾಲಯದಲ್ಲಿ ದಾಖಲಾಗಿದೆ. ಬುಧವಾರ ಮಹಿಳಾ ದಿನಾಚರಣ ಅಂಗವಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಕನ್ಹಯ್ಯ, ಭದ್ರತಾ ಸಿಬ್ಬಂದಿಯಿಂದ ಕಾಶ್ಮೀರದ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಭಾರತೀಯ ಜನತಾ ಯುವ ಮೋರ್ಚಾ ಸಂಘಟನೆ ವಸಂತ ವಿಹಾರ ಪೊಲೀಸ್ ಠಾಣೆಯಲ್ಲಿ ಕನ್ಹಯ್ಯ ಮತ್ತು ಪ್ರೊ.ನಿವೇದಿತಾ ಮೆನನ್ ವಿರುದ್ಧ ದೂರು ದಾಖಲಿಸಿತು.

ಇನ್ನೊಂದೆಡೆ, ಕನ್ಹಯ್ಯ ಈ ಹಿಂದೆ ಮಹಿಳೆಯೊಂದಿಗೆ ಅಸಭ್ಯ ವರ್ತನೆ ಮಾಡಿ, ವಿಶ್ವವಿದ್ಯಾಲಯದಲ್ಲಿ ಪ್ರಕರಣ ದಾಖಲಾಗಿದ್ದ ಇತಿಹಾಸ ಬೆಳಕಿಗೆ ಬಂದಿದೆ. ಈ ಮೂಲಕ ಕನ್ಹಯ್ಯ ಮಹಾನ್ ನಾಯಕ ಎನ್ನುತ್ತಿದ್ದವರಿಗೆ ಮುಜುಗರ ಎದುರಾಗಿದೆ.

6ನೇ ಪಥದರ್ಶಕ ಉಪಗ್ರಹ ಉಡಾವಣೆ ಮಾಡಿದ ಇಸ್ರೊ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಗುರುವಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಮೊದಲ ಬಾರಿಗೆ ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ ಐಐರ್ಎನ್ಎಸ್ಎಸ್- 1ಎಫ್ ಉಪಗ್ರಹವನ್ನು ಉಡಾವಣೆ ಮಾಡಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್ ನಿಂದ ಸಂಜೆ 4.01ಕ್ಕೆ ಪಿಎಸ್ಎಲ್ ವಿ ಸಿ32 ಮೂಲಕ ಈ ಉಪಗ್ರಹ ಹಾರಿಸಲಾಯಿತು. ಉಡಾವಣೆಯಾದ 20 ನಿಮಿಷಕ್ಕೆ ಈ ಉಪಗ್ರಹ ತನ್ನ ಕಕ್ಷೆಯನ್ನು ಸೇರಿತು. ಏಳು ಉಪಗ್ರಹಗಳ ಸರಣಿಯಲ್ಲಿ ಇದು ಆರನೇ ಉಪಗ್ರಹವಾಗಿದೆ. ಇಸ್ರೋದ ಈ ಉಪಗ್ರಹ ಯೋಜನೆ ಹೇಗೆ ಪ್ರಯೋಜನಕಾರಿ ಅಂತ ಈ ಹಿಂದಿನ ಬರಹದಲ್ಲಿ ವಿವರಿಸಲಾಗಿತ್ತು, ಓದಿ.

ಮಲ್ಯ ಪಲಾಯನ: ಸರ್ಕಾರದ ವಿರುದ್ಧ ರಾಹುಲ್ ಟೀಕೆ

ಉದ್ದೇಶಿತ ಸುಸ್ಥಿದಾರನಾಗಿ ಭಾರತೀಯ ಬ್ಯಾಂಕುಗಳಿಗೆ ಸಾವಿರಾರು ಕೋಟಿ ನೀಡದೇ ಮದ್ಯದ ದೊರೆ ವಿಜಯ್ ಮಲ್ಯ ಲಂಡನ್ ಗೆ ಪಲಾಯನ ಮಾಡಿದ್ದನ್ನು ಖಂಡಿಸಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ. ಹಲವು ಬ್ಯಾಂಕ್ ಗಳು ವಿಜಯ್ ಮಲ್ಯ ವಿರುದ್ಧ ಹೋರಾಟ ನಡೆಸುತ್ತಿರುವಾಗ ಆತನನ್ನು ಬಂಧಿಸಲಿಲ್ಲವೇಕೆ. ಆತನ ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳಲಿಲ್ಲ ಏಕೆ ಎಂದು ಪ್ರಶ್ನಿಸುವ ಮೂಲಕ ವಿಪಕ್ಷ ನಾಯಕ ಗುಲಾಮ್ ನಬಿ ಆಜಾದ್ ಈ ವಿಷಯವನ್ನು ಪ್ರಶ್ನಿಸಿದರು. ನಂತರ ರಾಹುಲ್ ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ಕಿಡಿ ಕಾರಿದರು. ‘₹9 ಸಾವಿರ ಕೋಟಿ ಬಾಕಿ ಉಲಿಸಿಕೊಂಡಿರುವ ವಿಜಯ್ ಮಲ್ಯ, ದೇಶ ಬಿಟ್ಟು ಹೋಗಲು ಅವಕಾಶ ಮಾಡಿಕೊಟ್ಟಿದ್ದೇಕೆ? ಅದೇ ಒಬ್ಬ ಸಾಮಾನ್ಯ ಮನುಷ್ಯ ಕಳ್ಳತನ ಮಾಡಿದ್ದರೆ, ಆತನನ್ನು ಹಿಡಿದು ಜೈಲಿಗೆ ಹಾಕುತ್ತಿದ್ದಿರಿ. ಈಗ ದೊಡ್ಡ ಉದ್ಯಮಿ ₹9 ಸಾವಿರ ಕೋಟಿ ಲೂಟಿ ಮಾಡಿ ಫಸ್ಟ್ ಕ್ಲಾಸ್ ನಲ್ಲಿ ಇಂಗ್ಲೆಂಡ್ ಗೆ ತೆರಳಿದ್ದಾನೆ. ಇಲ್ಲಿ ಏನಾಗುತ್ತಿದೆ?’ ಎಂದು ಪ್ರಶ್ನಿಸಿದರು.

ನಂತರ ಇದಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ರಾಹುಲ್ ಗಾಂಧಿಗೆ ತಿರುಗೇಟು ನೀಡಿದರು. ವಿಜಯ್ ಮಲ್ಯ ಪಲಾಯನ ಪ್ರಶ್ನಿಸಿದ ರಾಹುಲ್ ಗೆ ಅರುಣ್ ಜೇಟ್ಲಿ, ಒಟ್ಟಾವಿಯೊ ಕ್ವಟ್ರೊಚಿ ತಪ್ಪಿಸಿಕೊಂಡಿದ್ದು ಹೇಗೆ ಎಂದು ಮರು ಪ್ರಶ್ನಿಸಿದರು. ‘ಯಾವುದೇ ಒಬ್ಬ ವ್ಯಕ್ತಿಯನ್ನು ತಡೆಯಬೇಕಾದರೆ, ಕಾನೂನು ಪ್ರಕ್ರಿಯೆ ಇರುತ್ತದೆ. ಪಾಸ್ ಪೋರ್ಟ್ ಅನ್ನು ಕಾನೂನಿನ ರೀತಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಬೇಕು ಅಥವಾ ನ್ಯಾಯಾಲಯದ ಆದೇಶವಿರಬೇಕು. ಇಲ್ಲವಾದರೆ, ಯಾರೊಬ್ಬರನ್ನು ತಡೆಯಲು ಸಾಧ್ಯವಿಲ್ಲ. ಬ್ಯಾಂಕ್ ಗಳು ಈ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸುವ ಹೊತ್ತಿಗೆ ಮಲ್ಯ ದೇಶ ಬಿಟ್ಟಿದ್ದರು. ಬ್ಯಾಂಕ್ ಗಳು ಮೊದಲೇ ಈ ಪ್ರಕ್ರಿಯೆ ಆರಂಭಿಸಬೇಕಿತ್ತು’ ಎಂದರು.

ಇನ್ನು ರಾಜ್ಯ ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಮಂಡಿಸಿದ ರಿಯಲ್ ಎಸ್ಟೇಟ್ ಮಸೂದೆಗೆ ಅನುಮೋದನೆ ನೀಡಲಾಯಿತು.

ಮಿಂಚಿದ ಕರುಣ್, ಶೇಷ ಭಾರತಕ್ಕೆ ಭರ್ಜರಿ ಜಯ

ರಣಜಿ ಚಾಂಪಿಯನ್ ಮುಂಬೈ ಹಾಗೂ ಶೇಷ ಭಾರತ ವಿರುದ್ಧದ ಪ್ರತಿಷ್ಠಿತ ಇರಾನಿ ಕಪ್ ಪಂದ್ಯದಲ್ಲಿ ಶೇಷ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ತನ್ನ ಎರಡು ಇನಿಂಗ್ಸ್ ನಲ್ಲಿ ಕ್ರಮವಾಗಿ 603 ಮತ್ತು 182 ರನ್ ದಾಖಲಿಸಿತು. ಶೇಷ ಭಾರತ ತಂಡ ಕ್ರಮವಾಗಿ 306 ಮತ್ತು 482ಕ್ಕೆ 6 ರನ್ ದಾಖಲಿಸಿತು. ಮುಂಬೈ ನೀಡಿದ್ದ 482 ರನ್ ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಶೇಷ ಭಾರತಕ್ಕೆ ಆರಂಭಿಕ ಫೈಯಾಜ್ ಫಜಲ್ (127), ಕರುಣ್ ನಾಯರ್ (92), ಜಾಕ್ಸನ್ (59), ಚಟರ್ಜಿ (54), ಬಿನ್ನಿ (54) ಜವಾಬ್ದಾರಿಯುತ ಬ್ಯಾಟಿಂಗ್ ನಿಂದ ಗುರಿ ಮುಟ್ಟಿತು. ಪಂದ್ಯದ ಎರಡು ಇನಿಂಗ್ಸ್ ನಲ್ಲಿ ಶೇಷ ಭಾರತದ ಪರ ಆಕರ್ಷಕ ಬ್ಯಾಟಿಂಗ್ ಮಾಡಿದ ಕರುಣ್ ನಾಯರ್ (94 ಮತ್ತು 92) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Leave a Reply