ಪ್ರಾಣ ಉಳಿಸಿದವನ ನೋಡಲು ಪ್ರತಿ ವರ್ಷ 8 ಸಾವಿರ ಕಿ.ಮೀ ದೂರದಿಂದ ಬರುತ್ತೆ ಈ ಪೆಂಗ್ವಿನ್!

ಡಿಜಿಟಲ್ ಕನ್ನಡ ಟೀಮ್

ಮನುಷ್ಯ ಹಾಗೂ ಪ್ರಾಣಿಗಳ ನಡುವಣ ಪ್ರೀತಿ, ಅವಿನಾಭಾವ ಸಂಬಂಧ, ವಿಶ್ವಾಸದ ಒಡನಾಟವನ್ನು ನಾವು ಸಾಕಷ್ಟು ಕೇಳಿದ್ದೇವೆ ನೋಡಿದ್ದೇವೆ. ಈಗ ಮತ್ತೊಂದು ಉದಾಹರಣೆ ನಮ್ಮ ಕಣ್ಮುಂದೆ ಬಂದಿದೆ. ಇಲ್ಲಿ ಪ್ರಾಣಾಪಾಯದಲ್ಲಿದ್ದ ತನ್ನನ್ನು ರಕ್ಷಿಸಿದ ವ್ಯಕ್ತಿಯನ್ನು ನೋಡಲು ಪೆಂಗ್ವಿನ್ ಪ್ರತಿ ವರ್ಷ ಆಗಮಿಸುತ್ತದೆ. ಅದರಲ್ಲೇನು ವಿಶೇಷ ಅಂತಾ ಯೋಚಿಸುತ್ತಿದ್ದೀರಾ? ವಿಶೇಷ ಇದೆ. ಅದೇನಪ್ಪಾ ಅಂದ್ರೆ ಈ ಪೆಂಗ್ವಿನ್ ಪ್ರತಿ ವರ್ಷ ತನ್ನ ಪ್ರಾಣ ರಕ್ಷಕನನ್ನು ನೋಡಲು ಬರುವುದು 8 ಸಾವಿರ ಕಿ.ಮೀ ದೂರದಿಂದ.

ಹೌದು, ಇದು ದಕ್ಷಿಣ ಅಮೆರಿಕಾದ ಕಥೆ. ಬ್ರೆಜಿಲ್ ನ ರಿಯೊ ಡಿ ಜೆನೈರೊದಿಂದ ಸ್ವಲ್ಪ ದೂರದ ಸಮುದ್ರ ತೀರದಲ್ಲಿರುವ ಹಳ್ಳಿಯ ನಿವೃತ್ತ ಕಟ್ಟಡ ಕೆಲಸಗಾರ ಹಾಗೂ ಮೀನುಗಾರ ಜಾವೊ ಪೆರೇರಾ ಡಿ ಸೋಜಾ (71) ಈ ಪೆಂಗ್ವಿನ್ ನ ಪ್ರಾಣ ಸ್ನೇಹಿತ.

ಅದು 2011ರಲ್ಲಿ ನಡೆದ ಘಟನೆ. ತನ್ನ ಮನೆಯ ಬಳಿ ಪುಟ್ಟ ಪೆಗ್ವಿನ್ ಮೈಗೆಲ್ಲ ತೈಲ ಮೆತ್ತಿಕೊಂಡು ಸಾವು ಬದುಕಿನ ಮಧ್ಯೆ ನರಳಾಡುತ್ತಿತ್ತು. ಇದನ್ನು ಕಂಡ ಡಿ ಸೋಜಾ, ತಕ್ಷಣವೇ ಪೆಂಗ್ವಿನ್ ಅನ್ನು ತನ್ನ ಮನೆಗೆ ಕರೆದೊಯ್ದು, ಅದನ್ನು ಶುದ್ಧಿಗೊಳಿಸಿ ಆಹಾರ ನೀಡಿದ. ಅದು ಪೂರ್ಣ ಪ್ರಣಾಮದಲ್ಲಿ ಚೇತರಿಸಿಕೊಳ್ಳುವವರೆಗೂ ಸಾಕಿದ. ಅಲ್ಲದೆ ಅದಕ್ಕೆ ಡಿನ್ ಡಿಮ್ ಎಂದು ನಾಮಕರಣ ಮಾಡಿದ. ನಂತರ ಮತ್ತೆ ಸಮುದ್ರ ತೀರಕ್ಕೆ ತಂದು ಬಿಟ್ಟ. ಆದರೆ, ಈತನ ಪ್ರೀತಿಗೆ ಮನಸೋತಿದ್ದ ಪೆಂಗ್ವಿನ್ ಅಲ್ಲಿಂದ ಹೋಗಲು ಮನಸ್ಸು ಮಾಡಲಿಲ್ಲ.

ಈ ಬಗ್ಗೆ ವಾಲ್ ಸ್ಟ್ರೀಟ್ ಜರ್ನಲ್ ಮಾಡಿರುವ ವಿಡಿಯೋ ವರದಿ ಇಲ್ಲಿದೆ ನೋಡಿ.

ಪ್ರತಿ ವರ್ಷ 8 ತಿಂಗಳ ಕಾಲ ತನ್ನ ಸ್ನೇಹಿತನ ಮನೆಯಲ್ಲೇ ಉಳಿಯುವ ಈ ಪೆಂಗ್ವಿನ್ ನಾಲ್ಕು ತಿಂಗಳ ಕಾಲ ಚಿಲಿ ಮತ್ತು ಅರ್ಜೆಂಟೀನಾದ ಸಮುದ್ರ ತೀರ ಪ್ರದೇಶದಲ್ಲಿ ತನ್ನ ಸಂತತಿ ಬೆಳವಣಿಗೆಗಾಗಿ ತೆರಳುತ್ತದೆ. ಪ್ರತಿ ವರ್ಷ ಫೆಬ್ರವರಿಯಲ್ಲಿ ತೆರಳುವ ಈ ಡಿನ್ ಡಿಮ್ ಮತ್ತೆ ಜೂನ್ ವೇಳೆಗೆ ಡಿಸೋಜಾನನ್ನು ಅರಸಿ ಬರುತ್ತದೆ. ಈ ಪದ್ಧತಿ ಕಳೆದ ನಾಲ್ಕು ವರ್ಷದಿಂದ ಚಾಚೂತಪ್ಪದೇ ನಡೆಯುತ್ತಿದೆ. ಈ ಪೆಂಗ್ವಿನ್ ಡಿಸೋಜಾ ಜತೆ, ಆಡುತ್ತೆ, ಮುದ್ದು ಮಾಡುತ್ತೆ. ತಾನು ಈ ಕುಟುಂಬದ ಭಾಗ ಎಂಬ ಮಟ್ಟಿಗೆ ಬೆರೆತು ಹೋಗಿದೆ.

ಬೇರೆ ಯಾವುದೇ ಪ್ರಾಣಿ ತನ್ನ ಗೆಳೆಯನ ಜತೆ ಇರುವುದನ್ನು ಡಿನ್ ಡಿಮ್ ಸಹಿಸೊಲ್ಲ. ಅಷ್ಟರ ಮಟ್ಟಿಗೆ ಈ ಪೆಂಗ್ವಿನ್, ಪೊಸೆಸ್ಸಿವ್ ಆಗಿ ಬಿಟ್ಟಿದೆ. ಡಿಸೋಜಾ ಮತ್ತು ಡಿನ್ ಡಿಮ್ ನಡುವಣ ಭಾವನಾತ್ಮಕ ಸಂಬಂಧವನ್ನು ಕಂಡು ಸುತ್ತಮುತ್ತಲಿನ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧದ ಬಗ್ಗೆ ಮಾತನಾಡಿರುವ ಡಿಸೋಜಾ ಹೇಳೊದೇನೆಂದರೆ ‘ಪೆಂಗ್ವಿನ್ ಅನ್ನು ನನ್ನ ಮಗುವಿನಂತೆ ನೋಡುತ್ತಿನೆ. ಅದನ್ನು ಕಂಡರೆ ನನಗೆ ತುಂಬಾ ಇಷ್ಟ. ನನ್ನ ಬಿಟ್ಟರೆ ಬೇರೆ ಯಾರನ್ನೂ ಮುಟ್ಟಿಸಿಕೊಳ್ಳಲು ಸಹ ಬಿಡಲ್ಲ. ನನ್ನ ತೊಡೆಯ ಮೇಲೆ ಮಲಗುತ್ತದೆ. ಅದಕ್ಕೆ ಸ್ನಾನ ಮಾಡಿಸಿ, ಆಹಾರ ನೀಡುತ್ತೇನೆ. ಮೊದಲ ಬಾರಿ ಇದು ಹೋದಾಗ ಮತ್ತೆ ಬರುವುದಿಲ್ಲ ಎಂದು ಎಲ್ಲರು ಹೇಳಿದ್ದರು. ಆದರೆ, ಕಳೆದ ನಾಲ್ಕು ವರ್ಷದಿಂದ ತಪ್ಪದೇ ಇಲ್ಲಿಗೆ ಬರುತ್ತದೆ. ಈ ಪೆಂಗ್ವಿನ್ ಜತೆಗಿನ ಪ್ರೀತಿ ಹೇಳಲು ಸಾಧ್ಯವಾಗದು’.

ತನ್ನ ಪ್ರಾಣ ಉಳಿಸಿದವನ ಋಣ ಮರೆಯದಿರುವುದು ನಾವು ಕಲಿಯಬೇಕಾದ ಪಾಠ ಎಂದರೆ ತಪ್ಪಿಲ್ಲ.

Leave a Reply