ಬೆಗೆಟ್, ಚೆಕವ್ರಂಥ ಲೇಖಕರ ಮೇಲೆ ಅನನ್ಯ ಸಿನಿಮಾಗಳಾಗಿವೆ, ನಮ್ಮ ಬೇಂದ್ರೆ, ಕುವೆಂಪು, ಕಾರಂತರತ್ತ ಗಮನ ಬೇಡವೇ?

sridharamurthyಎನ್.ಎಸ್.ಶ್ರೀಧರ ಮೂರ್ತಿ

ಜಗತ್ತಿನ ಸಿನಿಮಾಗಳಲ್ಲಿ ಜೀವನ ಚಿತ್ರಣಗಳು ಸಾಕಷ್ಟು ಮೂಡಿ ಬರುತ್ತಿರುವ ಕಾಲ ಇದು. ಬಾಲಿವುಡ್ ನಲ್ಲಿ ಕೂಡ ‘ನೀರಜಾ’ ನಂತರ ಈಗ ಸರ್ಬಜಿತ್ ತಯಾರಿಕೆಯ ಸುದ್ದಿ ಇದೆ. ಆದರೆ  ಒಂದು ವ್ಯತ್ಯಾಸವನ್ನು ಸ್ಪಷ್ಟವಾಗಿಯೇ ಗುರುತಿಸಬಹುದು. ಭಾರತದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಗಳಲ್ಲಿ ಭಾವನಾತ್ಮಕ ಅಂಶಗಳಿಗೆ ಮಹತ್ವ ಜಾಸ್ತಿ. ಸೈದ್ಧಾಂತಿಕವಾಗಿ ಜೀವನ ಚಿತ್ರಣವನ್ನು ಎಳೆದು ಎಡಕ್ಕೋ ಬಲಕ್ಕೋ ನಿಲ್ಲಿಸುವ ಪ್ರಯತ್ನಗಳೂ ಹೆಚ್ಚು. ಆದರೆ ಜಗತ್ತಿನಲ್ಲಿ ನಡೆಯುತ್ತಿರುವ ಇಂತಹ ಪ್ರಯತ್ನಗಳು ಕಥೆ ಹೇಳುವುದಕ್ಕಿಂತಲೂ ವ್ಯಕ್ತಿಗಳ ಜೀವನದ ಅನುಭವವನ್ನು ಇವತ್ತಿಗೆ ನೀಡೋ ಪ್ರಯತ್ನ ಮಾಡುತ್ತಿವೆ. ಅವುಗಳಲ್ಲಿ ಸಿನಿಮಾದ ಭಾಷೆಯನ್ನು ವಿಸ್ತರಿಸಿವೆ ಎಂದು ಹೇಳಲಾದ ಎರಡು ಪ್ರಮುಖ ಸಿನಿಮಾಗಳ ಪರಿಚಯವನ್ನು ಇಲ್ಲಿ ಮಾಡಲಾಗಿದೆ. ಇವೆರಡೂ ಬರಹಗಾರರ ಕುರಿತ ಸಿನಿಮಾಗಳು. ಸಾಹಿತ್ಯ ಮತ್ತು ಸಿನಿಮಾ ನಡುವಿನ ಅಂತರ ಹೆಚ್ಚಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿರುವ ಇಂದಿನ ದಿನಗಳಲ್ಲಿ ಅದು ಹೇಗಿರ ಬೇಕು ಎನ್ನೋ ಮಾದರಿಯಾಗಿ  ಕೂಡ  ಈ ಎರಡು ಚಿತ್ರಗಳನ್ನು ಪರಿಶೀಲಿಸಬಹುದು.

‘ಆಂಟನ ಚೆಕೋವ್ 1890’ ಹೆಸರೇ ಹೇಳುವಂತೆ ರಷ್ಯನ್ ಬರಹಗಾರ ಚೆಕೋವ್ ಜೀವನ ಚಿತ್ರಣವನ್ನು ಪ್ರಧಾನವಾಗಿರಿಸಿಕೊಂಡ ಫ್ರೆಂಚ್ ಚಿತ್ರ. ರೇನೆ ಫೋರ್ಟ್ ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರು. ಕ್ರಿ.ಶ 1886ರಿಂದ 1896ರ ನಡುವೆ ಚೆಕೋವ್ ಜೀವನದಲ್ಲಿ ನಡೆದ ಘಟನೆಗಳನ್ನು ಚಿತ್ರ ವಸ್ತುವಾಗಿಸಿಕೊಂಡಿದೆ. ಇಲ್ಲಿ ವಿವರಗಳಿಗಿಂತ ಅವನ ಕೃತಿ ಪಡೆದ ಸಾಹಿತ್ಯಿಕ ಪ್ರೇರಣೆಗಳಿಗೇ ಮಹತ್ವ. ವೈದ್ಯನಾದ ಚೆಕೋವ್ ಜೀವನದ ಅಗತ್ಯಕ್ಕಾಗಿ ಬರವಣಿಗೆಯನ್ನೂ ಅವಲಂಬಿಸಿದವನು. ಈ ಅನಿವಾರ್ಯತೆ ಸೃಜನಶೀಲವಾಗಿ ಬದಲಾಗುವ ರೀತಿಯನ್ನು ಸಿನಿಮಾ ಬಹಳ ಸೂಕ್ಷ್ಮವಾಗಿ ಹಿಡಿದಿಡುತ್ತದೆ. ಅವನ ಬರವಣಿಗೆಗೆ ಬೆಂಬಲವಾಗಿ ನಿಲ್ಲುವ ಕುಟುಂಬ ವರ್ಗದ ಚಿತ್ರ ಒಂದು ಕಡೆ ಇದ್ದರೆ ಅನಿರೀಕ್ಷಿತವಾಗಿ ಅವನ ಬದುಕಿನಲ್ಲಿ ಆಗಮಿಸಿ ಅಲ್ಲೋಲ ಕಲ್ಲೋಲ ಎಬ್ಬಿಸುವ ಲಿಕಾಳ ಚಿತ್ರಣ ಇನ್ನೊಂದು ಕಡೆ ಇದೆ. ಈ ಎಲ್ಲಾ ವಿವರಗಳೂ ಚೆಕೋವ್ ಬರವಣಿಗೆಗೆ ಪ್ರವೇಶ ಕಲ್ಪಿಸುತ್ತವೆ ಎನ್ನೋದು ಕುತೂಹಲಕರ ಸಂಗತಿ. ಲಿಕಾಳ ಜೊತೆಗಿನ ಸಂಬಂಧ ಬಹುಬೇಗ ಕುಸಿದು ಬೀಳುತ್ತದೆ ಅದೂ ಕೂಡ ಸೃಜನಶೀಲ ಬರವಣಿಗೆಗೆ ಕಾರಣವಾಗುತ್ತದೆ. ವೈದ್ಯವೃತ್ತಿಯ ಕಡೆ ನಿರ್ಲಕ್ಷ ತೋರಿ ಬರವಣಿಗೆಗೆ ಮಹತ್ವ ನೀಡಿದ್ದು ಮಗುವಿನ ಸಾವಿಗೆ ಕಾರಣವಾಗುವುದರಿಂದ ಪಾಪಪ್ರಜ್ಞೆ ಕಾಡಿ ಬರವಣಿಗೆ ನಿಲ್ಲಿಸಲು ಬೆಗೆಟ್ ಚಿಂತಿಸುತ್ತಾರೆ. ಈ ಹಂತದಲ್ಲಿಯೇ ಜಪಾನಿನ ಸಕಲೀನ್ ನಡುಗಡ್ಡೆಯ ಸೆರೆಮನೆಗೆ ಭೇಟಿ ನೀಡಿ ಅಲ್ಲಿನ ಖೈದಿಗಳ ದಯನೀಯ ಚಿತ್ರಣವನ್ನು ಚೆಕೋವ್ ನೋಡುವುದು ಇನ್ನೊಂದು ತಿರುವು.ಬರವಣಿಗೆ ನಿಲ್ಲಿಸಲು ಸಾವು ಕಾರಣವಾದರೆ ಮುಂದುವರೆಸಲು ನೋವು ಕಾರಣವಾಗುತ್ತೆ.  ಟಿ.ಬಿ.ರೋಗಕ್ಕೆ ಒಳಗಾಗಿ 44ನೇ ವರ್ಷದಲ್ಲಿಯೇ ಸಾವಿಗೀಡಾಗುವ ಚೆಕೋವ್ ಜೀವನದ ಇನ್ನೊಂದು ತಿರುವನ್ನು ಧ್ವನಿಪೂರ್ಣವಾಗಿ ಚಿತ್ರ ಹಿಡಿದಿಡುತ್ತದೆ. ಟಾಲಸ್ಟಾಯ್ ಭೇಟಿ ಚಿತ್ರದ ಅವಿಸ್ಮರಣೀಯ ದೃಶ್ಯಗಳಲ್ಲಿ ಒಂದು. ಇಲ್ಲಿ ಮಾತುಗಿಂತಲೂ ಮೌನವೇ ಗಾಢವಾಗಿ ತಟ್ಟುತ್ತದೆ. ನಿಕೋಲಸ್ ಗ್ರಾಡ್ ಚೆಕೋವ್ ಪಾತ್ರವನ್ನು ಅತ್ಯಂತ ಜೀವಂತವಾಗಿ ಇಟ್ಟಿದ್ದಾರೆ. ಇದೊಂದು ರೀತಿಯಲ್ಲಿ ಕ್ಯಾಮರಾ ಮತ್ತು ಸಂಗೀತದ ಮೂಲಕವೇ ಸಾಗುವ ಚಿತ್ರ. ಸಂಗೀತ ನೀಡಿದ ಮೇರಿ ಜೇನ್ ಮತ್ತು ಛಾಯಾಗ್ರಹಣ ಮಾಡಿದ ಲೂಕಸ್ ಬರ್ನಾಡ್ ಅತ್ಯಂತ ಸಮರ್ಥವಾಗಿ ಈ ಅಗತ್ಯವನ್ನು ಪೂರೈಸಿದ್ದಾರೆ. ಇಲ್ಲಿ ವಿವರಗಳಿಗಿಂತ ಅನುಭವಗಳಿಗೆ ಮಹತ್ವ. ಚೆಕೋವ್ ಅವರ ಯಾವುದೇ ಕೃತಿಗಳನ್ನು ಓದದವರೂ ಕೂಡ ಚಿತ್ರದ ಮೂಲಕ ಅವರ ಬರವಣಿಗೆಯ ನೆಲೆಗಳನ್ನು ಅನುಭವಿಸಬಹುದು. ಚಿತ್ರದ ಅತ್ಯಂತ ಯಶಸ್ವಿ ಸಂಗತಿ ಎಂದರೆ ಇದೇ!

‘ಮೀಟಿಂಗ್ ವಿತ್ ದಿ ಯಂಗ್ ಪೊಯೆಟ್’ ಇದಕ್ಕಿಂತಲೂ ಸಂಕೀರ್ಣವಾದ ಚಿತ್ರ. ಅಬ್ಸರ್ಡ್ ಬರಹಗಳ ಮೂಲಕ ಹೆಸರಾದ, ಜೀವನದಲ್ಲಿಯೂ ವಿಕ್ಷಿಪ್ತ ಎನ್ನಿಸಿಕೊಂಡಂತೆ ಇದ್ದ ಸ್ಯಾಮ್ಯಯಲ್ ಬೆಗೆಟ್ ಅವರ ಜೀವನವನ್ನು ಕುರಿತ ಚಿತ್ರ ಇದು. ಕೆನಡಾ ಭಾಷೆಯ  ಈ ಚಿತ್ರದ ನಿರ್ದೇಶಕರು ರೂಡಿ ಬಾರ್ಚಿಲೋ. ಬೆಗೆಟ್ ಫಸ್ಟ್ ಕ್ಲಾಸ್ ಕ್ರಿಕೆಟ್ ಆಡಿದ ಏಕೈಕ ನೋಬಲ್ ಪ್ರಶಸ್ತಿ ವಿಜೇತರು ಎನ್ನುವ ವಿಶೇಷತೆಯನ್ನು ಪಡೆದವರು. ಚೆಸ್ ಆಟದಲ್ಲಿ ಕೂಡ ನಿಪುಣತೆಯನ್ನು ಹೊಂದಿದವರು. ಎರಡನೇ ಮಹಾಯುದ್ದದಲ್ಲಿ ಜರ್ಮನ್ ವಿರೋಧಿ ಧೋರಣೆಯಿಂದ ಅನೇಕ ತೊಂದರೆಯನ್ನು ಅನುಭವಿಸಿದವರು. ನಾಜಿಗಳ ದಾಳಿಯಿಂದ ಸಾವಿನಂಚನ್ನು ಸವರಿ ಪವಾಡ ಸದೃಶ್ಯವಾಗಿ ಬದುಕಿದವರು. ನೋಬಲ್ ಪ್ರಶಸ್ತಿಯ ಹಣವನ್ನು ಸಂತನಂತೆ ಹಂಚಿದಂತಹ ನಿರ್ಲಪ್ತ. ಇತಿಹಾಸದ  ಈ ಎಳೆಗಳನ್ನು ಚಿತ್ರ ನೇರವಾಗಿ ಹೇಳುವುದಿಲ್ಲ. ಪೌಲ್ ಸಾಸರ್ ಎಂಬ ಹತಾಶ ಯುವ ಕವಿಯೊಂದಿಗೆ ಬಕೆಟ್ ಅವರ ಒಡನಾಟದ ಮೂಲಕ  ಚಿತ್ರಣವನ್ನು ಕಟ್ಟುತ್ತದೆ. ಕವಿ ತನ್ನ ಪ್ರೇಯಸಿ ಕಾರ್ಲೆಳಿಗೆ ಈ ವಿವರಗಳನ್ನು ನೀಡುತ್ತಾನೆ. ಅವಳು ಬ್ಯಾಲೆಯ ರೂಪದಲ್ಲಿ ಕಟ್ಟುತ್ತಾಳೆ. ಈ ಬ್ಯಾಲೆ ಕೂಡ ಬೆಗೆಟ್ ಅವರ ‘ಲಾಸ್ಟ್ ಟೇಪ್’ ವಿವರಗಳನ್ನು ಹೊಂದಿದ್ದರೂ ಅದನ್ನು ಮೂಡಿಸಿದ ಕ್ರಮ ವಿಶಿಷ್ಟವಾಗಿದೆ. ಚಿತ್ರದಲ್ಲಿ ಚೆಸ್ ಬೋರ್ಡ್ ಕೂಡ ಒಂದು ಪ್ರಬಲ ಸಂಕೇತಗಾಗಿ ಬಳಕೆಯಾಗುತ್ತದೆ. ಅದರ ಪಾನ್ಗಳ ಚಲನೆ ಪಾತ್ರಧಾರಿಗಳ ಮನಸ್ಥಿತಿಯನ್ನು ಹಿಡಿದಿಡುತ್ತದೆ. ಸಣ್ಣ ಸಣ್ಣ ವಿವರಗಳ ಮೂಲಕವೇ ಚಿತ್ರವನ್ನು ರೂಪಿಸಿರುವ ಕೌಶಲವೇ ವಿಭಿನ್ನ ಅನುಭವವನ್ನು ನೀಡುತ್ತದೆ. ಬೆಗೆಟ್ ಪಾತ್ರದಲ್ಲಿ ಸ್ಟೀಫನ್ ಮ್ಯಾಕ್ಹೈಟ್, ಸಾಸರ್ ಪಾತ್ರದಲ್ಲಿ ವಿನ್ಸಂಟ್ ಹೌಸ್ ಅವಿಸ್ಮರಣೀಯ ಅಭಿನಯವನ್ನು ನೀಡಿದ್ದಾರೆ. ಬರಹಗಾರರ ಕುರಿತ ಸಿನಿಮಾ ಡಾಕ್ಯೂಮೆಂಟರಿಯಂತೆ ಅವರ ಜೀವನದ ವಿವರಗಳನ್ನು ಹಿಡಿಯಲು ಸೀಮಿತವಾಗುವುದರ ಬದಲು ಕೃತಿಗಳ ಎಳೆಗಳನ್ನು ಬಳಸಿ ಅವರ ಜೀವನದ ವಿವರಗಳ ಮೂಲಕ ಅದನ್ನು ಜೋಡಿಸುವ ಪ್ರಯೋಗ ಮಾಡುವ ಮೂಲಕ  ಈ ಎರಡೂ ಚಿತ್ರಗಳು ಹೊಸ ಅನುಭವವನ್ನೇ ನೀಡಿ ಜಗತ್ತಿನೆಲ್ಲೆಡೆ ಹೊಸ ಚರ್ಚೆಯನ್ನೂ ಹುಟ್ಟಿ ಹಾಕಿವೆ. ಸಿನಿಮಾ ಎಂದರೆ.. ಎಂಬ ಪರಿಭಾಷೆ ಈ ಚಿತ್ರಗಳ ಮೂಲಕ ಇನ್ನಷ್ಟು ಹಿಗ್ಗಿದೆ.

ಕನ್ನಡದಲ್ಲಿಯೂ ಬೇಂದ್ರೆ, ಕುವೆಂಪು, ಕಾರಂತ, ಮಾಸ್ತಿಯವರಿದ್ದಾರೆ.. ಅವರ ಕುರಿತೂ ಇಂತಹ ಚಿತ್ರಗಳು ಬಂದರೆ ಎನ್ನುವ ಆಸೆ ನನ್ನನ್ನು ಈ ಚಿತ್ರಗಳನ್ನು ನೋಡಿದ ದಿನದಿಂದಲೂ ಕಾಡುತ್ತಿದೆ.

1 COMMENT

  1. ಕುವೆಂಪು ಬಗ್ಗೆ ಚಿತ್ರ ಆಗಿದೆ. ಅದಕ್ಕೆ ರಾಷ್ಟ್ರಪ್ರಶಸ್ತಿಯೂ ಸಿಕ್ಕಿದೆ. (ಟಿ ಎನ್ ಸೀತಾರಾಂ ಪ್ರತಿಕ್ರಿಯೆ)

Leave a Reply