ಬ್ಯಾಂಕ್ ಗಳ ಜಡಮೊತ್ತ ಯುಪಿಎ ಕೊಡುಗೆ ಅನುಮಾನವಿಲ್ಲ, ಆದ್ರೆ ಕ್ವಟ್ರೊಚಿ ಹೆಸರೆತ್ತಿ ತಮ್ಮ ಲೋಪ ಮುಚ್ಚಿಕೊಳ್ಳೋದು ಬಿಜೆಪಿಗೆ ಥರವಲ್ಲ

ಡಿಜಿಟಲ್ ಕನ್ನಡ ಟೀಮ್

ವಿಜಯ್ ಮಲ್ಯ ಇಂಗ್ಲೆಂಡ್ ಗೆ ಪರಾರಿಯಾಗಿರೋದರ ವಿಷಯದಲ್ಲಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳೆಲ್ಲ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯುತ್ತಿವೆ. ಉದ್ಯಮಿಗಳಿಂದ ಬಾಕಿ ಉಳಿದಿರುವ ಹಣವನ್ನು ನಾನ್ ಫರ್ಪಾರ್ಮಿಂಗ್ ಅಸೆಟ್ (ಜಡಮೊತ್ತ) ಅಂತ ತೋರಿಸಿ ದಿನ ದೂಡುತ್ತಿದ್ದ ಬ್ಯಾಂಕುಗಳಿಗೆ ಬಿಗಿ ಬಂದಿದ್ದು ರಾಜನ್- ಜೇಟ್ಲಿ ವಿತ್ತ ನಿಭಾವಣೆ ಶುರು ಮಾಡಿದಾಗ ಎಂಬುದಂತೂ ವಾಸ್ತವ. ಜಡಮೊತ್ತವು ಬೆಟ್ಟದಂತೆ ಬೆಳೆದು ನಿಂತಿರುವುದಕ್ಕೆ ಒಂದೂಮುಕ್ಕಾಲು ವರ್ಷಗಳಿಂದ ಅಧಿಕಾರದಲ್ಲಿರುವ ಮೋದಿ ಸರ್ಕಾರವೇ ಕಾರಣವಾಗುವುದಿಲ್ಲ. ಹೆಚ್ಚಿನ ಸಾಲಗಳೆಲ್ಲ ಮಂಜೂರಿಯಾಗಿದ್ದು ಹಾಗೂ ಬಾಕಿ ಸಮಸ್ಯೆ ಉದ್ಭವಿಸಿದ್ದು ಯುಪಿಎ ಸರ್ಕಾರದ ಎರಡು ಅವಧಿಗಳಲ್ಲೇ ಎಂಬುದನ್ನು ಮರೆಮಾಚುವ ಅಗತ್ಯವಿಲ್ಲ.

ಬ್ಯಾಂಕ್ ಗಳಿಗೆ ಉತ್ತರದಾಯಿ ಆಗಬೇಕಿರುವುದು ವಿಜಯ್ ಮಲ್ಯ ಒಬ್ಬರೇ ಅಲ್ಲ. ಎಲ್ಲಂದಲೋ ಶುರುವಾಗಬೇಕಿದ್ದ ತನಿಖೆ ಮಲ್ಯರಿಂದ ಶುರುವಾಗಿದೆ. ಇನ್ನೂ ಹಲವರನ್ನು ಮುಟ್ಟಬೇಕಿದೆ. ಆದರೆ ₹9000 ಕೋಟಿ ಸಾಲ ತೀರಿಸಬೇಕಿರುವ ಮಲ್ಯ ದೇಶಬಿಟ್ಟು ಹೋಗದಂತೆ ನಿಯಂತ್ರಿಸಬೇಕೆಂಬ ಅಪೇಕ್ಷೆ ಸಹಜ. ಇದನ್ನು ಅನುಷ್ಠಾನಕ್ಕೆ ತರುವುದು ಆಡಳಿತದಲ್ಲಿರುವ ಸರ್ಕಾರಕ್ಕೆ ಖಂಡಿತ ಕಷ್ಟದ ವಿಷಯವೇನಾಗಿರಲಿಲ್ಲ. ಆದರೆ ಕಾಂಗ್ರೆಸ್ ನವರು ಬೋಫೋರ್ಸ್ ಹಗರಣದ ಕ್ವಟ್ರೋಚಿಯನ್ನು ಬಿಟ್ಟಿರಲಿಲ್ಲವೇ ಅಂತ ಬಿಜೆಪಿಗರು ವಾದಕ್ಕಿಳಿದಿರುವುದು ಮಾತ್ರ ಬಾಲಿಶ. ಈ ವಾದ ಕೇಳಲಿಕ್ಕಲ್ಲ ಜನ ಇವರಿಗೆ ಅಧಿಕಾರ ಕೊಟ್ಟಿರುವುದು.

ಅದೇನೇ ಇರಲಿ. ಭಾರತೀಯ ಬ್ಯಾಂಕ್ ಗಳಲ್ಲಿ ಸಿಲುಕಿರುವ ಜಡ ಮೊತ್ತವೆಷ್ಟು ಎಂಬುದನ್ನು ತಿಳಿದರೆ ನಿಮಗೆ ಖಂಡಿತವಾಗಿಯೂ ಅಚ್ಚರಿಯಾಗುತ್ತದೆ. ಬ್ಯಾಂಕ್ ನಿಂದ ನೀಡಿದ ಸಾಲದಿಂದ ಕಂತುಗಳು ಹಾಗೂ ಬಡ್ಡಿ ರೂಪದಲ್ಲಿ ಬರುವ ಮೊತ್ತ ಆದಾಯವಾಗಿರುತ್ತದೆ. ಈ ಕಂತುಗಳು ಹಾಗೂ ಬಡ್ಡಿ ನಿಗದಿತ ದಿನಾಂಕ ಒಳಗಾಗಿ ಬಾರದಿದ್ದರೆ, ಅದು ಜಡ ಮೊತ್ತವಾಗಿ ಪರಿಣಮಿಸುತ್ತದೆ.

ಕಳೆದ ಮೂರು ವರ್ಷಗಳಲ್ಲಿ ಈ ಜಡ ಮೊತ್ತ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿರುವುದು ಆಘಾತಕಾರಿ. ದ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ, 29 ರಾಜ್ಯ ಬ್ಯಾಂಕ್ ಗಳಲ್ಲಿ ಕಳೆದ ಮೂರು ವರ್ಷದಲ್ಲಿ ಈ ಮೊತ್ತ ₹1.14 ಲಕ್ಷ ಕೋಟಿಗೆ ಹೆಚ್ಚಿದೆ. ಕೆಲ ದಿನಗಳ ಹಿಂದೆ ಮಲ್ಯ ತನ್ನನ್ನು ಸಮರ್ಥಿಸಿಕೊಳ್ಳುತ್ತಾ, ಪ್ರಸ್ತುತ ಭಾರತೀಯ ಬ್ಯಾಂಕ್ ಗಳು ₹11 ಲಕ್ಷ ಕೋಟಿ ಜಡ ಮೊತ್ತವನ್ನು ಹೊಂದಿದೆ. ಆ ಪೈಕಿ ನನ್ನ ಮೊತ್ತ ಕಡಿಮೆ ಎಂದಿದ್ದರು. ಕಳೆದ ತಿಂಗಳು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಪ್ರಕಾರ, 2012ರಲ್ಲಿ ₹15,551 ಕೋಟಿ ಕೆಟ್ಟ ಸಾಲದ ಪ್ರಮಾಣ 2015ರ ಮಾರ್ಚ್ ವೇಳೆಗೆ ₹52,542 ಕೋಟಿಗೆ ಹೆಚ್ಚಿತ್ತು. ಅಂದರೆ, ಕೇವಲ ಮೂರು ವರ್ಷಗಳ ಅವಧಿಗೆ ಮೂರು ಪಟ್ಟು ಹೆಚ್ಚಾಗಿದೆ. 2004ರಿಂದ 2012ರವರೆಗೆ ಕೆಟ್ಟ ಸಾಲ ಪ್ರಮಾಣದ ಏರಿಕೆ, ಶೇ.4ರಷ್ಟಿತ್ತು. ಇನ್ನು 2013-15 ರವರೆಗೆ ಶೇ.60 ರಷ್ಟು ಏರಿದೆ. ಇನ್ನು 2014ರಲ್ಲಿ ₹5,594 ಕೋಟಿ ಮೊತ್ತವನ್ನು ವಸೂಲಿ ಮಾಡಲಾಗದ ಮೊತ್ತವೆಂದು ಘೋಷಿಸಲಾಗಿತ್ತು. ಆದರೆ, ಒಂದೇ ವರ್ಷ ನಂತರ 2015ರಲ್ಲಿ ₹21,313 ಕೋಟಿ ಎಂದು ಘೋಷಿಸಿದೆ.

ಹೀಗೆಲ್ಲ ಏರಿಕೆಯಾಗುತ್ತಿರುವುದರ ಅರ್ಥ ಈ ಒಂದೆರಡು ವರ್ಷಗಳಲ್ಲೇ ಬ್ಯಾಂಕ್ ಗಳು ಹೆಚ್ಚು ಸಾಲ ಕೊಟ್ಟವು ಅಂತಲ್ಲ. ಬದಲಿಗೆ ಜಡಮೊತ್ತವನ್ನು ಬ್ಯಾಲೆನ್ಸ್ ಶೀಟ್ ನಲ್ಲಿ ಹೊಂದಾಣಿಕೆ ಮಾಡುವ ಅವಕಾಶವಿರದೇ ಹಾಗೆಂದೇ ಘೋಷಿಸುವ ನಿರ್ಧಾರ ಗಟ್ಟಿಗೊಳಿಸಿದ್ದರಿಂದ ಈ ಬಗೆಯ ಏರಿಕೆ ಕಾಣುತ್ತಿದೆ. 2014ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ ಸುತ್ತೋಲೆ ಪ್ರಕಾರ, ಬ್ಯಾಂಕ್ ಸಾಲ ನೀಡಿದ 90 ದಿನಗಳ ಒಳಗಾಗಿ ಕಂತುಗಳು ಹಾಗೂ ಬಡ್ಡಿ ಬಾರದಿದ್ದರೆ, ಅದನ್ನು ಜಡ ಮೊತ್ತ ಎಂದು ಪರಿಗಣಿಸಲಾಗುವುದು ಎಂದು ಹೇಳಲಾಗಿತ್ತು. ಅಲ್ಲದೆ ಈ ಜಡ ಮೊತ್ತವನ್ನು ನಷ್ಟ ಎಂದು ಪರಿಗಣಿಸಲು ಆರ್ ಬಿಐ ಸೂಚಿಸಿದೆ.

ಇಷ್ಟರಮಟ್ಟಿಗೆ, ನಾನ್ ಫರ್ಫಾರ್ಮಿಂಗ್ ಅಸೆಟ್ ಅರ್ಥಾತ್ ಜಡಮೊತ್ತ ಮರೆಮಾಚದೇ ಇರುವುದಕ್ಕೆ ಕ್ರಮ ಕೈಗೊಂಡ ಬಿಜೆಪಿ ಸರ್ಕಾರದ ನಡೆ ಶ್ಲಾಘನೀಯ. ಆದರೆ, ವಿಜಯ ಮಲ್ಯ ವಿಷಯದಲ್ಲಿ ಅವರನ್ನು ಭಾರತದಲ್ಲೇ ಕಟ್ಟಿಹಾಕುವ ಸಂಬಂಧ ಮೋದಿ ಸರ್ಕಾರ ಇಚ್ಛಾಶಕ್ತಿ ತೋರದೇ ಇರುವುದು ಸ್ಪಷ್ಟವಾಗಿದೆ. ಲಲಿತ್ ಮೋದಿಗೆ ಪಾಸ್ ಪೋರ್ಟ್ ನವೀಕರಿಸಿಕೊಡುವ ಸಂದರ್ಭದಲ್ಲೂ ವಿದೇಶ ಸಚಿವೆ ಸುಷ್ಮಾ ಸ್ವರಾಜ್ ವಹಿಸಿದ್ದ ಆಸ್ಥೆ ಬಹಿರಂಗವಾಗಿತ್ತು. ಆಯಾ ಸರ್ಕಾರಗಳ ‘ಪಂಜರದ ಗಿಣಿ’ ಸಿಬಿಐ, ವಿಜಯ್ ಮಲ್ಯ ವಿಷಯದಲ್ಲಿ ಮೊದಲು ತಾಳಿದ್ದ ನಿಲುವನ್ನು ಬದಲಿಸಿದ್ದರಲ್ಲೇ ಈ ಕುರಿತ ಸೂಚನೆಗಳಿವೆ.

ಕಳೆದ ವರ್ಷ ಅಕ್ಟೋಬರ್ ನಲ್ಲಿ ಸಿಬಿಐ ಒಂದು ಸೂಚನೆ ಹೊರಡಿಸುತ್ತದೆ. ಅದೇನಪ್ಪಾ ಅಂದ್ರೆ, ವಿಜಯ್ ಮಲ್ಯ ಯಾವುದೇ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ತೆರಳುವ ಪ್ರಯತ್ನ ನಡೆಸಿದರೆ, ತಕ್ಷಣವೇ ಆತನನ್ನು ತಡೆಯಬೇಕು ಎಂದು. ಆದರೆ, ಒಂದೇ ತಿಂಗಳಲ್ಲಿ ಸಿಬಿಐ ಈ ನಿರ್ಧಾರವನ್ನು ಸಡಿಲಗೊಳಿಸುತ್ತದೆ. ಆ ಮೂಲಕ ವಿಜಯ್ ಮಲ್ಯರನ್ನು ತಡೆಯುವುದು ಬೇಡ, ಆತನ ಪ್ರಯಾಣದ ಬಗ್ಗೆ ಮಾಹಿತಿ ಕೊಟ್ಟರೆ ಸಾಕು ಎಂದು ಬ್ಯೂರೊ ಆಫ್ ಇಮ್ಮಿಗ್ರೇಷನ್ ಗೆ ತಿಳಿಸುತ್ತದೆ.

ಅಲ್ಲದೆ, ಮಾ.2ರಂದು ಮಲ್ಯ ವಿದೇಶಕ್ಕೆ ತೆರಳುತ್ತಿರುವ ಬಗ್ಗೆ ಬ್ಯೂರೊ ಆಫ್ ಇಮ್ಮಿಗ್ರೇಷನ್, ಸಿಬಿಐಗೆ ಮಾಹಿತಿ ನೀಡುತ್ತದೆ. ಹಾಗಾಗಿ ಸಿಬಿಐ ಈ ರೀತಿಯ ತನ್ನ ನಿರ್ಧಾರವನ್ನು ಒಂದೇ ತಿಂಗಳ ಅಂತರದಲ್ಲಿ ಬದಲಿಸಿದ್ದೇಕೆ ಎಂಬ ಪ್ರಶ್ನೆಗಳು ಕೇಳಿಬರುತ್ತಿದೆ. ಇದಕ್ಕೆ ಸಿಬಿಐ ಸಹ ಸಮರ್ಥನೆಯನ್ನು ಕೊಟ್ಟಿದ್ದು, ಮಲ್ಯ ವಿರುದ್ಧ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಅಲ್ಲದೇ, ಬಂಧನದ ವಾರೆಂಟ್ ಸಹ ಹೊರಡಿಸಿಲ್ಲ. ಪರಿಸ್ಥಿತಿ ಹೀಗಿರುವಾಗ ಅವರನ್ನು ತಡೆಯುವುದಾದರು ಹೇಗೆ ಎಂದು ತಿಳಿಸಿದೆ.

ಅಕ್ಟೋಬರ್ ವಿದೇಶಕ್ಕೆ ತೆರಳಿದ್ದ ವಿಜಯ್ ಮಲ್ಯ ನವೆಂಬರ್ ನಲ್ಲಿ ಮರಳಿದ್ದರು. ನಂತರ ಡಿಸೆಂಬರ್ ಮೊದಲ ಹಾಗೂ ಅಂತಿಮ ವಾರದಲ್ಲಿ ಎರಡು ಬಾರಿ ವಿದೇಶಕ್ಕೆ ಹೋಗಿ ಬಂದಿದ್ದರು ಎಂಬ ಮಾಹಿತಿಯನ್ನು ಸಹ ನೀಡಲಾಗಿತ್ತು.

ಮಲ್ಯ ವಿಚಾರಣೆ ವೇಳೆ ಉತ್ತಮ ರೀತಿಯಲ್ಲಿ ಸಹಕರಿಸುತ್ತಿದ್ದರು. ನಾವು ಕೇಳಿದಾಗಲೆಲ್ಲ ಅಗತ್ಯ ದಾಖಲೆಗಳನ್ನು ಒದಗಿಸಿದ್ದರು. ಹಾಗಾಗಿ ಅವರ ಪಾಸ್ ಪೋರ್ಟ್ ವಶಪಡಿಸಿಕೊಂಡು ವಿದೇಶಕ್ಕೆ ತೆರಳುವುದನ್ನು ತಪ್ಪಿಸಲು ಅವಕಾಶವಿರಲಿಲ್ಲ. ಯಾವುದೇ ವ್ಯಕ್ತಿಯ ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳಬೇಕಾದರೆ, ಆತನ ಮೇಲೆ ಚಾರ್ಚ್ ಶೀಟ್ ಸಲ್ಲಿಕೆಯಾಗಿರಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ಇದೆ ಎಂದು ಸಿಬಿಐ ಹೇಳಿಕೊಂಡಿದೆ.

ಸಾಮಾನ್ಯನೊಬ್ಬ ಸಾಲ ಬಾಕಿ ಉಳಿಸಿಕೊಂಡರೆ ಅವನ ಮನೆ ಎದುರೇ ಕೂತು ಆತ ಎತ್ತ ಹೋಗುವುದಕ್ಕೂ ಅನುವು ಮಾಡಿಕೊಡದ ವ್ಯವಸ್ಥೆ, ಈ ಮೇಲಿನ ‘ತಾಂತ್ರಿಕ’ ಕಾರಣಗಳನ್ನೆಲ್ಲ ಮುಂದುಮಾಡುತ್ತಿರುವುದು ನೆಪಮಾತ್ರಕ್ಕೆ ಅಂತ ಎಂಥವರಿಗೂ ಅರ್ಥವಾಗುತ್ತದೆ.

ತಾನೇನೂ ತಲೆಮರೆಸಿಕೊಂಡಿಲ್ಲ, ಅಗತ್ಯವಿದ್ದಾಗ ಬರ್ತೇನೆ ಅಂತ ವಿಜಯ ಮಲ್ಯ ಟ್ವೀಟ್ ಮಾಡಿ ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದೂ ಆಗಿದೆ. ಆದರೆ ಇವೆಲ್ಲದರ ನಡುವೆ ನಿಜಕ್ಕೂ ಡಿಸ್ಟರ್ಬಿಂಗ್ ಎನಿಸುತ್ತಿರುವುದು ಬಿಜೆಪಿ ಧೋರಣೆ. ಕಾಂಗ್ರೆಸಿಗರು ಕ್ವಟ್ರೋಚಿ ಬಿಟ್ರು, ಆಂಡರ್ಸನ್ ಪಾರಾಗಲು ಬಿಟ್ರು… ಅಂಥವರು ನಮ್ಮನ್ನೇಕೆ ಪ್ರಶ್ನಿಸಬೇಕು ಎನ್ನುವ ಮೂಲಕ ಉದ್ಯಮಿಗಳ ವಿಚಾರದಲ್ಲಿ ತಾನೂ ಕಾಂಗ್ರೆಸ್ಸಿಗಿಂತ ಭಿನ್ನ ಏನಲ್ಲ ಅಂತ ದೇಶಕ್ಕೆ ಸಾರಲು ಹೊರಟಿದೆಯೇ ಬಿಜೆಪಿ?

1 COMMENT

  1. ಉತ್ತಮ ಬರಹ. ಈ ಬ್ಯಾಂಕುಗಳೆಲ್ಲ ಇಷ್ಟೇ, ಬಡವರಿಗೆ ಸಾಲ ಕೊಡಿ ಅಂದ್ರೆ ನೂರೆಂಟು ಕರಾರು, ಅದೇ ಮಲ್ಯ ತರದವರಿಗೆ ನಾ ಮುಂದು, ತಾ ಮುಂದು ಅಂತ ಸಾಲ ಕೊಡ್ತಾರೆ. ಈ ಸರ್ಕಾರದವ್ರು ಬೇರೆ ಕಾರಣ ಕೊಡದೆ ನೀವು ಕಳ್ಳರನ್ನ ಬಿಟ್ಟಿದ್ರಿ ಅದಕ್ಕೇ ನಾವು ಬಿಟ್ವಿ ಅಂತ ನಾಚಿಕೆ ಇಲ್ದೆ ಹೇಳ್ತಾರೆ. ಒಟ್ನಲ್ಲಿ ಈ ಕಾನೂನು, ಕಟ್ಟಳೆ ಎಲ್ಲಾ ತಗ್ಗಿ ಬಗ್ಗಿ ನಡೆಯೋ ಮಧ್ಯಮ ವರ್ಗಕ್ಕೆ ಹಾಗೂ ಅಶಕ್ತ ಬಡವರಿಗೆ. ದೊಡ್ಡೋವ್ರು ಏನು ಮಾಡಿದ್ರು ನಡೆಯುತ್ತೆ.

Leave a Reply