‘ಮಾತೃಭೂಮಿ’ ವಿರುದ್ಧ ಪ್ರತಿಭಟಿಸುತ್ತಿರುವವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಪಾಠ ಹೇಳೋಕೆ ಸೆಕ್ಯುಲರ್ ಬುದ್ಧಿಜೀವಿಗಳಿಗಿಲ್ಲವೇ ಪುರಸೊತ್ತು?

ಡಿಜಿಟಲ್ ಕನ್ನಡ ಟೀಮ್

ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾನವಾಗಿದೆಯೇ? ಇಲ್ಲ ಎನ್ನುತ್ತಿದೆ ಕೇರಳದ ಮಾತೃಭೂಮಿ ಪತ್ರಿಕೆ ವಿರುದ್ಧದ ಪ್ರತಿಭಟನೆ..!

ಮಲೆಯಾಳಂನ ಖ್ಯಾತ ಸ್ಥಳೀಯ ಪತ್ರಿಕೆ ಮಾತೃಭೂಮಿ, ಕೆಲ ದಿನಗಳ ಹಿಂದೆ ಇಸ್ಲಾಂ ಪ್ರವಾದಿ ಮೊಹಮದ್ ಅವರ ಬಗೆಗಿನ ಒಂದು ಲೇಖನ ಅಲ್ಲಿನ ಮುಸ್ಲಿಂ ಸಂಘಟನೆಗಳ ಕೋಪಕ್ಕೆ ಕಾರಣವಾಗಿದೆ. ಅವರು ಪತ್ರಿಕೆ ಬಂಡಲ್ ಗೆ ಬೆಂಕಿ ಹಚ್ಚಿದ್ದಾರೆ, ಕಚೇರಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ, ಹಲವೆಡೆ ಮಾತೃಭೂಮಿ ಪತ್ರಿಕೆ ವಿರುದ್ಧ ಪ್ರತಿಭಟನೆಗಳಾಗಿವೆ. ಇವನ್ನೆಲ್ಲ ತಾಳಲಾಗದೇ ಮಾತೃಭೂಮಿ ತನ್ನ ಸಂಚಿಕೆಯಲ್ಲಿ ಕ್ಷಮೆ ಕೇಳಿದ್ದೂ ಆಯ್ತು. ಆದರೂ ಪ್ರತಿಭಟನೆ ನಿಂತಿಲ್ಲ. ಆನ್ ಲೈನ್ ಪ್ರತಿಭಟನೆ ಮುಂದುವರಿದಿದೆ.

ಆದರೆ ಈ ಬಗ್ಗೆ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಹಲ್ಲೆ ಎಂದಾಗಲೀ, ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ಎಂದಾಗಲೀ ಸುದ್ದಿಯಾಗುತ್ತಲೇ ಇಲ್ಲ!

 ಕೃಷ್ಣ ಸ್ತ್ರೀಲೋಲನಾಗಿದ್ದ, ರಾಮ ಸ್ತ್ರೀಶೋಷಕನಾಗಿದ್ದ ಎಂದೆಲ್ಲ ಮಾತನಾಡುವುದು, ಆ ಬಗ್ಗೆ ಪುಸ್ತಕ ಬರೆಯುವುದು ಇವೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯದ ಚೌಕಟ್ಟಲ್ಲಿ ಬಂದುಬಿಡುತ್ತವೆ. ಮಾಧ್ಯಮದ ಪ್ಯಾನಲ್ ಡಿಸ್ಕಷನ್ ಗಳಲ್ಲೂ ಇಂಥ ಪ್ರತಿಪಾದನೆಗಳಿಗೆ ಜಾಗವಿದೆ. ಇಂಥ ಹೇಳಿಕೆಗಳಿಂದ ಹಿಂದು ಸಂಘಟನೆಗಳು ಆಕ್ರೋಶಗೊಂಡು ಹೇಳಿಕೆ ಕೊಟ್ಟ ವ್ಯಕ್ತಿ ಇಲ್ಲವೇ ಸಂಸ್ಥೆಯನ್ನು ಮುತ್ತಿಗೆ ಹಾಕಿದರೆ ಅವರು ಗೂಂಡಾಗಳೆನಿಸಿಕೊಳ್ಳುತ್ತಾರೆ.

ಆದರೆ ಪ್ರವಾದಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದ ಮಾತೃಭೂಮಿ ಪರವಾಗಿ ಯಾವ ಚಿಂತಕರಾದರೂ ಧ್ವನಿ ಎತ್ತಿದ್ದನ್ನು ಕೇಳಿದ್ದೀರಾ? ಪ್ರತಿಭಟನಾ ನಿರತರನ್ನು ಗೂಂಡಾಗಳೆಂದು ಚಿತ್ರಿಸುವ ಮಾತು ಹಾಗಿರಲಿ, ಕ್ಷಮೆಯಾಚಿಸಿದ ನಂತರವಾದರೂ ತಣ್ಣಗಾಗಿ ಅಂತ ಅಭಿವ್ಯಕ್ತಿ ಸ್ವಾತಂತ್ರ್ಯದ ಯಾವ ಪ್ರತಿಪಾದಕನೂ ಕರೆ ಕೊಟ್ಟಿಲ್ಲ. ಈ ಬಗ್ಗೆ ರಾಷ್ಟ್ರೀಯ ವಾಹಿನಿಗಳಲ್ಲಿ ಚಕಾರವಿಲ್ಲ. ವರದಿಯಾದ ಸುದ್ದಿಗಳಲ್ಲೂ ಮಾತೃಭೂಮಿ ವಿರುದ್ಧ ದಾಳಿಗಳಾಗ್ತಿವೆಯಂತೆ ಅನ್ನೋದಷ್ಟೇ ಮಾತು. ಯಾವ ಅಭಿಪ್ರಾಯ ನಿರೂಪಕನೂ ಮುಸ್ಲಿಂ ಸಂಘಟನೆಗಳು ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕುತ್ತಿವೆ ಅಂತ ಅಂಕಣ ಬರೆದಿಲ್ಲ.

94 ವರ್ಷ ಇತಿಹಾಸದ ಮಾತೃಭೂಮಿ ಪತ್ರಿಕೆ ಪ್ರವಾದಿ ಬಗ್ಗೆ ಪತ್ರಿಕೆ ಅಂಥಾದ್ದೇನು ಬರೆಯಿತು? ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಕೆಮಲ್ ಪಾಶಾ ಪ್ರಕರಣವೊಂದನ್ನು ವಿಚಾರಿಸುತ್ತ, ‘ಇಸ್ಲಾಂ ಬಹುಪತ್ನಿತ್ವಕ್ಕೆ ಮಾನ್ಯತೆ ನೀಡುತ್ತದೆ ಎಂದಾದರೆ ಬಹುಪತಿತ್ವಕ್ಕೆ ಏಕಿಲ್ಲ? ಮಹಿಳೆಯರಿಗೆ ಅಂಥ ಅನುಕೂಲವಿಲ್ಲವೇಕೆ’ ಎಂದು ಪ್ರಶ್ನಿಸಿದ್ದರು. ಈ ಬಗ್ಗೆ ಉಲ್ಲೇಖಿಸುತ್ತ ಪ್ರಕಟವಾದ ಮಾತೃಭೂಮಿ ಪತ್ರಿಕೆ ಲೇಖನದಲ್ಲಿ ಪ್ರವಾದಿ ತಮಗಿಂತ ಕಡಿಮೆ ವಯಸ್ಸಿನ ಹುಡುಗಿಯನ್ನು ಮದುವೆಯಾಗಿದ್ದರ ಬಗ್ಗೆ ವಿಶ್ಲೇಷಿಸಿದ್ದೇ ಬೆಂಕಿ ಹೊತ್ತಲು ಕಾರಣವಾಗಿಬಿಟ್ಟಿತು.

ತೀವ್ರ ವಿರೋಧದ ಹಿನ್ನೆಲೆಯಲ್ಲಿ ಪತ್ರಿಕೆ ತನ್ನದೇ ತಪ್ಪು ಎಂದು ಒಪ್ಪಿಕೊಂಡು ಕ್ಷಮೆ ಕೋರಿತು. ಪತ್ರಿಕೆಯ ಮುಖಪುಟದಲ್ಲೇ ಕ್ಷಮೆ ಲೇಖನ ಪ್ರಕಟಿಸಿತು. ಇದಾದರೂ ಪತ್ರಿಕೆ ಮೇಲಿನ ಟೀಕೆ ಹಾಗೂ ಪ್ರತಿಭಟನೆ ಮಾತ್ರ ನಿಂತಿಲ್ಲ. ಪತ್ರಿಕೆಯ ಕಚೇರಿಗೆ ಬೆದರಿಕೆ ಕರೆಗಳು ಬರುತ್ತಿದ್ದು, ಕೆಲವರು ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇನ್ನು ಅಂತರ್ಜಾಲದಲ್ಲಿ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಪತ್ರಿಕೆ ವಿರುದ್ಧ ಇಸ್ಲಾಂ ಸಂಘಟನೆಗಳ ಪ್ರತಿಭಟನೆ ಮುಂದುವರಿದಿದೆ.

ಕಾನೂನು ಕೈಗೆತ್ತಿಕೊಳ್ಳುವವರು ಯಾರೇ ಆದರೂ ಅವರನ್ನು ಗೂಂಡಾಗಳಂತೆ ಕಾಣಲಿ. ಅದರಲ್ಲಿ ತಪ್ಪಿಲ್ಲ. ಆದರೆ ಇದೇ ಪ್ರಕರಣದಲ್ಲಿ ಪ್ರತಿಭಟಿಸುತ್ತಿರುವವರ ಜಾಗದಲ್ಲಿ ಹಿಂದುಗಳೇನಾದರೂ ಇದ್ದಿದ್ದರೆ ಇಷ್ಟರಲ್ಲಾಗಲೇ ಅಸಹಿಷ್ಣುತೆ ಡಿಬೇಟ್ ಶುರುವಾಗಿರುತ್ತಿತ್ತು ಅಲ್ಲವೇ? ಆದರೆ ಈ ಪ್ರಕರಣದಲ್ಲಿ, ‘ಮುಸ್ಲಿಮರ ಧಾರ್ಮಿಕ ಭಾವನೆ ಘಾಸಿಗೊಳಿಸಿದ್ದು ಪತ್ರಿಕೆಯದ್ದೇ ತಪ್ಪು’ ಎಂಬಂತಿದೆ ಸೆಕ್ಯುಲರಿಸ್ಟರ ಮೌನ. ಧಾರ್ಮಿಕ ಭಾವನೆಗೆ ಘಾಸಿಯಾಗುವುದು ಮುಸ್ಲಿಂ ವಿಚಾರಗಳಲ್ಲಿ ಮಾತ್ರವೇ? ಹಿಂದುಗಳಿಗಿರಬಾರದೇ ಭಾವನೆ? ಹಿಂದುಗಳು ಪ್ರತಿಭಟಿಸಿದಾಗ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಬೆದರಿಸಲಾಗುತ್ತಿದೆ ಎಂಬ ಮಾತೇಕೆ? ಈ ಪ್ರಕರಣದಲ್ಲಿ ಮಾತೃಭೂಮಿ ಪತ್ರಿಕೆಗೆ ಎದುರಾಗಿರೋದೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವೇ ತಾನೇ? ಬರ್ಖಾ ದತ್ ಅವರಿಗೆ ಬೆದರಿಕೆ ಕರೆಗಳು ಬರ್ತಿವೆ ಎಂಬುದು ಮಾತ್ರವೇ ಕಾಳಜಿಯ ಸುದ್ದಿಯೋ ಅಥವಾ ಮಾತೃಭೂಮಿ ಪತ್ರಿಕೆಗೆ ಆತಂಕ ಎದುರಾಗಿರುವುದೂ ಪತ್ರಿಕಾ ಸ್ವಾತಂತ್ರ್ಯ- ಕಾಳಜಿಗಳ ವ್ಯಾಖ್ಯಾನದಲ್ಲಿ ಬರುತ್ತದೋ?

1 COMMENT

  1. ರಾಜಕಾರಣಿಗಳು, ಬುದ್ಧಿಜೀವಿಗಳು, ಕಾಂಗಿಗಳು, ಎಡರಂಗದವರು ಮೊದಲು ಅಭಿವ್ಯಕ್ತಿ ಸ್ವಾತಂತ್ರದ ಅರ್ಥವನ್ನು ಸರಿಯಾಗಿ ತಿಳಿದುಕೊಂಡಿದ್ದರೆ ಹೀಗೆಲ್ಲಾ ಆಗುತ್ತಿರುಲಿಲ್ಲ. ಇನ್ನು ಮಾಧ್ಯಮದವರೂ ಸಹ ಇದಕ್ಕೆ ಹೊರತಾಗಿಲ್ಲ ಎನ್ನುವುದೇ ಬೇಸರದ ಸಂಗತಿ.

Leave a Reply