ಸುದ್ದಿಸಂತೆ: ವಿಶ್ವ ಸಂಸ್ಕೃತಿ ಹಬ್ಬ, ಪಾಸಾದ ಆಧಾರ್, ಪಾಕ್ ಆಡಲು ರೆಡಿ…. ನೀವ್ ತಿಳಿಬೇಕಾದ ಸುದ್ದಿಗಳು

ವಿಶ್ವ ಸಂಸ್ಕೃತಿ ಹಬ್ಬ ಪ್ರಾರಂಭ

ಆರ್ಟ್ ಆಫ್ ಲಿವಿಂಗ್ ನ ವಿಶ್ವ ಸಂಸ್ಕೃತಿ ಮೇಳ ಶುಕ್ರವಾರ ಸಂಜೆ ವರುಣನ ಆಗಮನದ ನಡುವೆಯೇ ಉದ್ಘಾಟನೆಗೊಂಡಿತು. ಭದ್ರತೆ ಕುರಿತು ಹಬ್ಬಿದ್ದ ಎಲ್ಲ ಆತಂಕಗಳನ್ನು ಪಕ್ಕಕ್ಕಿಟ್ಟು ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರಿಂದ ಉಳಿದ ಅಡಚಣೆಗಳ್ಯಾವವೂ ಲೆಕ್ಕಕ್ಕೆ ಬಂದಂತಿರಲಿಲ್ಲ.

‘ಇದು ಸಂಸ್ಕೃತಿಯ ಕುಂಭಮೇಳ. ನಮ್ಮನ್ನು ನಾವೇ ಟೀಕಿಸಿಕೊಂಡಿದ್ದರೆ ಜಗತ್ತು ನಮ್ಮನ್ನು ಹೇಗೆ ನೋಡೀತು’ ಅಂತ ಎಚ್ಚರಿಸಿದ ಪ್ರಧಾನಿ ಮೋದಿ, ಆರ್ಟ್ ಆಫ್ ಲಿವಿಂಗ್ ಅನ್ನು ಜಗತ್ತಿನ ನಾನಾ ಭಾಗಗಳಿಗೆ ವಿಸ್ತರಿಸಿರುವುದಕ್ಕೆ ರವಿಶಂಕರ್ ಗುರೂಜಿಯವರನ್ನು ಅಭಿನಂದಿಸಿದರು.

ವಿದೇಶಿ ಅತಿಥಿಗಳು, ವೇದಘೋಷ, ನೃತ್ಯ ಇವೆಲ್ಲ ಶುಕ್ರವಾರ ಸಂಜೆಯ ಆಕರ್ಷಣೆಗಳಾಗಿದ್ದವು.

ಇದಕ್ಕೂ ಮೊದಲು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್ ಜಿ ಟಿ) ದಿಂದ ₹5 ಕೋಟಿ ದಂಡ ಹಾಕಿಸಿಕೊಂಡಿದ್ದ ಆರ್ಟ್ ಆಫ್ ಲೀವಿಂಗ್ (ಎಒಎಲ್) ಶುಕ್ರವಾರ ಈಗ ₹25 ಲಕ್ಷ ಪಾವತಿಸಿ ಉಳಿದ ₹4.75 ಕೋಟಿ ದಂಡ ಪಾವತಿಗೆ 3 ವಾರಗಳ ಕಾಲಾವಕಾಶ ಕೋರಿತು.

ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದ ಬಗ್ಗೆ ಇದುವರೆಗೆ ಮೌನ ತಾಳಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಟ್ವೀಟ್ ಮೂಲಕ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದರು. ದೆಹಲಿ ಜಲಮಂಡಳಿಯ ಅಧ್ಯಕ್ಷ ಕಪಿಲ್ ಮಿಶ್ರಾ ಸಹ ಬೆಂಬಲ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಗುರುವಾರವಷ್ಟೇ ರಾಷ್ಟ್ರೀಯ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿ, ಜೈಲಿಗೆ ಹೋಗಲು ಸಿದ್ಧ ಆದರೆ ದಂಡ ಮಾತ್ರ ಕಟ್ಟುವುದಿಲ್ಲ ಎಂದು ರವಿಶಂಕರ್ ಗುರೂಜಿ ಹೇಳಿದ್ದರು. ಆದರೆ ಇಂದು ನ್ಯಾಯಾಧೀಕರಣಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಎಒಎಲ್ ಎಂಬುದು ದತ್ತಿ ಸಂಸ್ಥೆಯಾಗಿದ್ದು, ಅಲ್ಪ ಅವಧಿಯಲ್ಲಿ ದೊಡ್ಡ ಮೊತ್ತವನ್ನು ಸಂಗ್ರಹ ಮಾಡಲು ಕಷ್ಟವಾದ್ದರಿಂದ 4 ವಾರಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿತು.

ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯ ಮಂಡಳಿ ಬಾಕಿ ಮೊತ್ತವನ್ನು ಪಾವತಿಸಲು 3 ವಾರಗಳ ಅನುಮತಿ ನೀಡಿದೆ. ಆದೇಶದ ಕಾಲಮಿತಿಯೊಳಗೆ ದಂಡ ಪಾವತಿ ಮಾಡದಿದ್ದಲ್ಲಿ ಸಂಸ್ಕೃತಿ ಸಚಿವಾಲಯದ ₹ 2.5 ಕೋಟಿ ಅನುದಾನವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿದೆ. ಎಒಎಲ್ ಮನವಿಯಲ್ಲಿ ಈ ಮೊತ್ತವನ್ನು ದಂಡ ಎಂದು ಪರಿಗಣಿಸದೆ ಜೀವವೈವಿಧ್ಯ ಉದ್ಯಾನವನದ ಪುನರ್ ನಿರ್ಮಾಣ ಶುಲ್ಕವಾಗಿ ನಮೂದಿಸಬೇಕು ಎಂದಿದೆ.

ಶುಕ್ರವಾರ ಸಂಜೆ 5 ಗಂಟೆಯ ಒಳಗೆ ಅಂದರೆ ಕಾರ್ಯಕ್ರಮ ಪ್ರಾರಂಭವಾಗುವುದಕ್ಕೂ ಮುನ್ನ ದಂಡವನ್ನು ಪಾವತಿಸುವಂತೆ ಎನ್ ಜಿ ಟಿ, ಎಒಎಲ್ ಗೆ ಬುಧವಾರ ಆದೇಶಿಸಿತ್ತು. ಮುಂದಿನ ವಿಚಾರಣೆ ಏಪ್ರಿಲ್ 4ಕ್ಕೆ ನಡೆಯಲಿದೆ.

ಲೋಕಸಭೆಯಲ್ಲಿ ಪಾಸಾಯ್ತು ಆಧಾರ್ ಮಸೂದೆ

ಲೋಕಸಭೆಯಲ್ಲಿ ಆಧಾರ್ ವಿಧೇಯಕ ಶುಕ್ರವಾರ ಅನುಮೋದನೆ ಪಡೆದುಕೊಂಡಿದೆ.

ದೇಶದ ಪ್ರತಿ ನಾಗರಿಕನಿಗೆ ಬಯೋಮೆಟ್ರಿಕ್ ಕಾರ್ಡ್ ಎಂಬುದು ಈ ಹಿಂದಿನ ಯುಪಿಎ ಸರ್ಕಾರವೇ ಪ್ರಾರಂಭಿಸಿದ್ದ ಯೋಜನೆ ಆಗಿತ್ತು. ಸಂಸತ್ತಿನ ಅಂಗಿಕಾರವಿಲ್ಲದೇ ಇಂಥ ಯೋಜನೆ ತಂದಿರುವುದಕ್ಕೆ ಈ ಹಿಂದೆ ಪ್ರತಿಪಕ್ಷದಲ್ಲಿದ್ದ ಬಿಜೆಪಿ ಗದ್ದಲವನ್ನೂ ಮಾಡಿತ್ತು. ಆ ಸಂದರ್ಭದಲ್ಲಿ ಆಧಾರ್ ಬಗ್ಗೆ ಎನ್ ಡಿಎ ಪಾಳೆಯದಿಂದ ಅಪಸ್ವರಗಳೂ ಢಾಳಾಗಿಯೇ ಕೇಳಿಬಂದಿದ್ದವು.

ಇದೀಗ ಲೋಕಸಭೆಯ ಅಂಗೀಕಾರದೊಂದಿಗೆ ಕಾನೂನಾಗಿಯೇ ಬರುತ್ತಿರುವ ಆಧಾರ್ ಮಸೂದೆಯಲ್ಲಿ ಇರೋದೇನು? ಇಲ್ಲಿವೆ ಮುಖ್ಯಾಂಶಗಳು.

  • ಆಧಾರ್ ಸಂಖ್ಯೆ ಸರ್ಕಾರದಿಂದ ಲಭಿಸುವ ಸೌಕರ್ಯಗಳು ಮತ್ತು ಸಬ್ಸಿಡಿಗಳನ್ನು ಪಡೆಯಲು ಉತ್ತಮ ಮಾರ್ಗ. ಈ ಕಾಯ್ದೆಯಲ್ಲಿ ಆಧಾರ್ ಹೊಂದಿರುವವರು ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಸಿದೆ. ಈಗ ಸಾಕಷ್ಟು ರಾಜ್ಯಗಳಲ್ಲಿ ಆಸ್ತಿ ನೊಂದಣಿ, ಡ್ರೈವಿಂಗ್ ಲೈಸೆನ್ಸ್, ಮದುವೆ ಪ್ರಮಾಣ ಪತ್ರ ಮತ್ತು ಪಡಿತರ ಚೀಟಿಗೂ ಈ ಆಧಾರ್ ಸಂಖ್ಯೆಯನ್ನು ಬಳಸಲಾಗುತ್ತಿದೆ.
  • ಈ ಮಸೂದೆಯಲ್ಲಿ ಗೌಪ್ಯತೆ ಬಗ್ಗೆ ಸ್ಪಷ್ಟನೆ ಇದೆ. ಈ ಆಧಾರ್ ಸಂಖ್ಯೆ ಪಡೆಯುವಾಗ ವ್ಯಕ್ತಿಯಿಂದ ಮಾಹಿತಿಯನ್ನು ಯಾವ ಕಾರಣಕ್ಕಾಗಿ ಪಡೆಯಲಾಗಿದೆ ಎಂದು ತಿಳಿಸಬೇಕು. ಅಲ್ಲದೆ ವೈಯಕ್ತಿಕ ಮತ್ತು ಬಯೋಮೆಟ್ರಿಕ್ ದಾಖಲೆಗಳನ್ನು ಯಾರೊಂದಿಗೂ ಹಂಚಿಕೊಳ್ಳುವಂತಿಲ್ಲ. ಕೇವಲ ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಮಾತ್ರ ಈ ಗೌಪ್ಯತೆಯನ್ನು ಮುರಿಯಬಹುದಾಗಿದೆ. ಅಲ್ಲದೆ ದಾಖಲೆಗಳ ಕಳವು ಮತ್ತು ದುರುಪಯೋಗ ಮಾಡಿದರೆ, ದಂಡ ಕಟ್ಟಬೇಕೆಂದೂ ಈ ಮಸೂದೆಯಲ್ಲಿ ತಿಳಿಸಲಾಗಿದೆ.

ಪಾಕಿಸ್ತಾನ ತಂಡಕ್ಕೆ ಗ್ರೀನ್ ಸಿಗ್ನಲ್

ಭಾರತದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಪಾಕಿಸ್ತಾನ ಪುರುಷ ಮತ್ತು ಮಹಿಳೆಯರ ತಂಡಕ್ಕೆ ಅಲ್ಲಿನ ಆಂತರಿಕ ಸಚಿವಾಲಯ ಸಮ್ಮತಿ ನೀಡಿದೆ. ಭದ್ರತಾ ದೃಷ್ಟಿಯಿಂದ ಪಾಕಿಸ್ತಾನ ತಂಡವನ್ನು ಟೂರ್ನಿಯಲ್ಲಿ ಭಾಗವಹಿಸಲು ಭಾರತಕ್ಕೆ ಕಳುಹಿಸಲು ಪಾಕಿಸ್ತಾನ ಸರ್ಕಾರ ಹಿಂದೇಟು ಹಾಕಿತ್ತು. ಆದರೆ, ಪಶ್ಚಿಮ ಬಂಗಾಳ ಸರ್ಕಾರ ಮತ್ತು ಕೋಲ್ಕತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಭದ್ರತೆಯ ಜವಾಬ್ದಾರಿ ವಹಿಸಿಕೊಂಡ ನಂತರ ಗ್ರೀನ್ ಸಿಗ್ನಲ್ ನೀಡಿದೆ. ಗುರುವಾರ ಮಧ್ಯಾಹ್ನ ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸೌರವ್ ಗಂಗೂಲಿ, ಸರ್ಕಾರ ಮತ್ತು ಪೊಲೀಸ್ ಆಯುಕ್ತರ ಭದ್ರತೆಯ ಬಗೆಗಿನ ಭರವಸೆ ಪತ್ರವನ್ನು ಐಸಿಸಿಗೆ ಸಲ್ಲಿಸಿದ್ದರು. ಈಗ ಪಾಕಿಸ್ತಾನ ತಂಡ ಭಾರತಕ್ಕೆ ಆಗಮಿಸಲಿದ್ದು, ಮಾ.19ರಂದು ಈಡನ್ ಗಾರ್ಡನ್ ನಲ್ಲಿ ಬಹುನಿರೀಕ್ಷಿತ ಪಂದ್ಯ ನಡೆಯಲಿದೆ.

Leave a Reply